ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನ್ಯೂ ಹೇವನ್

ವಿಕಿಸೋರ್ಸ್ದಿಂದ

ನ್ಯೂ ಹೇವನ್ - ಅಮೆರಿಕ ಸಂಯುಕ್ತ ಸಂಸ್ಥಾನಗಳ ಕನೆಕ್ಟಿಕಟ್ ರಾಜ್ಯದ ನ್ಯೂ ಹೇವನ್ ಕೌಂಟಿಯ ಒಂದು ನಗರ. ಹಾರ್ಟ್‍ಫರ್ಡ್‍ನ ದಕ್ಷಿಣ ನೈಋತ್ಯಕ್ಕೆ 58 ಕಿಮೀ ದೂರದಲ್ಲಿ ಉ.ಅ.41ಲಿ 18' ಮತ್ತು ಪ.ರೇ. 72ಲಿ 56' ನಲ್ಲಿ ಲಾಂಗ್ ಐಲೆಂಡ್ ಜಲಸಂಧಿಯ ಮೇಲೆ ಕ್ವಿನಿಪೀಯರ್ ನದಿಯ ಮುಖದ ಬಳಿ ಇರುವ ಬಂದರು. ಜನಸಂಖ್ಯೆ 1,62,537 (1970). 1638ರಲ್ಲಿ ಕ್ವಿನಿಪೀಯರ್ ಎಂಬ ಹೆಸರಿನ ವಸತಿ ಸ್ಥಾಪಿತವಾಯಿತು. ಜಾನ್ ಡೇವನ್‍ಪೋರ್ಟ್ ಮತ್ತು ತಿಯೊಫಿಲಸ್ ಈಟನ್ನರ ನಾಯಕತ್ವದಲ್ಲಿ ಇಂಗ್ಲಿಷ್ ಪ್ಯೂರಿಟನ್ನರ ತಂಡವೊಂದು ಇಲ್ಲಿ ಮೊದಲು ನೆಲಸಿತು. 1640ರಲ್ಲಿ ಇದಕ್ಕೆ ನ್ಯೂ ಹೇವನ್ ಎಂದು ಹೆಸರಿಡಲಾಯಿತು. 1643ರಲ್ಲಿ ನೆರೆಹೊರೆಯ ಹಲವು ಪಟ್ಟಣಗಳನ್ನು ಕೂಡಿಕೊಂಡು ಇದು ನ್ಯೂ ಹೇವನ್ ಕಾಲೋನಿಯಾಯಿತು. 1658ರ ವರೆಗೂ ಈಟನ್ ಇದರ ಗವರ್ನರ್ ಆಗಿದ್ದ. 1664ರಲ್ಲಿ ಇದು ಕನೆಕ್ಟಿಕಟ್ ಕಾಲೊನಿಯಲ್ಲಿ ಸೇರಿತು. 1701ರಿಂದ 1875ರ ವರೆಗೆ ಹಾರ್ಟ್‍ಫರ್ಡಿನೊಂದಿಗೆ ಇದೂ ಕಾಲೋನಿಯ ಹಾಗೂ ರಾಜ್ಯದ ರಾಜಧಾನಿಯಾಗಿತ್ತು. ಅಮೆರಿಕನ್ ಕ್ರಾಂತಿಯ ಕಾಲದಲ್ಲಿ ದೊರೆಯ ಕಡೆಯವರ ಸೈನ್ಯಗಳು ಇದರ ಮೇಲೆ ದಾಳಿ ಮಾಡಿದುವು. ಅಂತರ್ಯುದ್ಧದ ಕಾಲದಲ್ಲಿ ಇದು ಗುಲಾಮಗಿರಿ ವಿಸರ್ಜನೆಯ ಚಳವಳಿಯ ಕೇಂದ್ರವಾಗಿತ್ತು.

ಕೈಗಾರಿಕಾ ಕ್ಷೇತ್ರದಲ್ಲಿ ನ್ಯೂ ಹೇವನ್ ವಿಶಿಷ್ಟ ಪಾತ್ರವಹಿಸುತ್ತ ಬಂದಿದೆ. ಎಲಿ ಹ್ವಿಟ್ನಿಯ ಭೂರಿ ಉತ್ಪಾದನ ತಂತ್ರ, ಚಾಲ್ರ್ಸ್ ಗುಡ್‍ಇಯರನ ವಲ್ಕನೈಸ್ಡ್ ರಬ್ಬರ್, ಕೋಲ್ಟನ ಸುಧಾರಿತ ರಿವಾಲ್ವರ್, ಫಾರೆಸ್ಟನ ರೇಡಿಯೋ ನಳಿಕೆ, ಗಂಧಕದ ಬೆಂಕಿಕಡ್ಡಿ ಮುಂತಾದ ಉಪಜ್ಞೆಗಳು ಮೊದಲು ಬೆಳಕಿಗೆ ಬಂದದ್ದು ಇಲ್ಲಿ. ಇಂದು ಇಲ್ಲಿ ಹಲವಾರು ಕೈಗಾರಿಕೆಗಳೂ ಹಡಗು ಉದ್ಯಮವೂ ಬೆಳೆದಿದೆ. ಇದೊಂದು ಪ್ರಮುಖ ಶೈಕ್ಷಣಿಕ ಹಾಗೂ ಸಾಂಸ್ಕøತಿಕ ಕೇಂದ್ರ. ಯೇಲ್ ವಿಶ್ವವಿದ್ಯಾಲಯ, ದಕ್ಷಿಣ ಕನೆಕ್ಟಿಕಟ್ ರಾಜ್ಯ ಕಾಲೇಜು, ಆಲ್ಬರ್ಟಸ್ ಮ್ಯಾಗ್ನಸ್ ಕಾಲೇಜು, ದಕ್ಷಿಣ ಮಧ್ಯ ಕನೆಕ್ಟಿಕಟ್ ಸಮುದಾಯ ಫಾರ್ಮೆಸಿ ಕಾಲೇಜು. ಪ್ರಕೃತಿ ವಿಜ್ಞಾನ ವಸ್ತು ಸಂಗ್ರಹಾಲಯ, ವಿಂಚೆಸ್ಟರ್ ಸಾಮಾನ್ಯ ವಸ್ತು ಸಂಗ್ರಹಾಲಯ-ಇವು ಇಲ್ಲಿಯ ಕೆಲವು ಸಂಸ್ಥೆಗಳು. (ಪಿ.ಬಿ.)