ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪಟ್ಟಾಭಿರಾಮರೆಡ್ಡಿ, ಟಿ

ವಿಕಿಸೋರ್ಸ್ದಿಂದ

ಪಟ್ಟಾಭಿರಾಮರೆಡ್ಡಿ, ಟಿ (1919- ). ಕನ್ನಡದಲ್ಲಿ ಹೊಸ ಅಲೆಯ ಚಿತ್ರಕ್ಕೆ ನಾಂದಿ ಹಾಡಿದ, ಕನ್ನಡ ಚಿತ್ರರಂಗಕ್ಕೆ ಭಾರತೀಯ ಚಿತ್ರೋದ್ಯಮದ ಅತ್ಯುನ್ನತ ಪ್ರಶಸ್ತಿ-ರಾಷ್ಟ್ರಪತಿ ಚಿನ್ನದಪದಕ ದೊರಕಿಸಿ ಕೊಟ್ಟ ಸಂಸ್ಕಾರ (1970) ಚಿತ್ರದ ನಿರ್ಮಾಪಕ-ನಿರ್ದೇಶಕ, ರಂಗ ರಂಗನಿರ್ದೇಶಕ. ಹುಟ್ಟಿದ್ದು ಫೆಬ್ರುವರಿ 2, 1919 ರಂದು, ಆಂಧ್ರಪ್ರದೇಶದ ನೆಲ್ಲೂರಿನಲ್ಲಿ ರವೀಂದ್ರನಾಥರ ಶಾಂತಿನಿಕೇತನದಲ್ಲಿ ಓದಿ, ಕೊಲ್ಕತ್ತಾ ವಿಶ್ವವಿದ್ಯಾಲಯದಿಂದ ಪದವಿ ಪಡೆದರು. ಗಣಿತ, ಕವಿತೆಯಲ್ಲಿ ಅಪಾರ ಆಸಕ್ತಿ, ಸ್ನಾತಕೋತ್ತರ ಪದವಿ ಪಡೆಯಲು ಅಮೇರಿಕಕ್ಕೆ ಪ್ರಯಾಣ. ರವೀಂದ್ರನಾಥ ಠಾಕೂರರ ಪರಿಚಯವಿದ್ದ ಕಾರಣ ನ್ಯೂಯಾರ್ಕಿನ ಕೊಲಂಬಿಯಾ ವಿಶ್ವವಿದ್ಯಾನಿಲಯದಲ್ಲಿ ಸುಗಮ ಪ್ರವೇಶ. ಕುಟುಂಬದ ಅಭ್ರಕ ರಫ್ತುವ್ಯಾಪಾರ ನಡೆಸುವುದರಲ್ಲಿ ಸಫಲವಾಗಲಿಲ್ಲ. ಮದರಾಸಿಗೆ ಬಂದು ಆರಂಭಿಸಿದ ಉದ್ಯಮಗಳಿಗೆ ಮನೆಯವರ ಬೆಂಬಲ ಸಿಗಲಿಲ್ಲ. ಅನ್ಯಜಾತಿಯ, ಆಂಧ್ರೇತರ ಹೆಣ್ಣನ್ನು ಮದುವೆಯಾದದ್ದೆ ಕಾರಣ. ಆದರೆ ಪಟ್ಟಾಭಿ ಧೃತಿಗೆಡಲಿಲ್ಲ. ಪತ್ನಿ ಸ್ನೇಹಲತಾ ಅವರ ಸಾಂಸ್ಕøತಿಕ ಚಟುವಟಿಕೆಗಳಿಗೆ ಒತ್ತಾಸೆಯಾಗಿ ನಿಂತರು. ಹಾಗೆ ಆರಂಭವಾದ ಹವ್ಯಾಸಿ ಸಂಸ್ಥೆ ಮದರಾಸ್ ಪ್ಲೇಯರ್ಸ್ ಹಲವು ನಾಟಕಗಳ ನಿರ್ಮಾಣ-ನಿರ್ದೇಶನ. ರಂಗಭೂಮಿಯಿಂದ ಚಿತ್ರರಂಗದ ನಂಟು. ಖ್ಯಾತನಿರ್ದೇಶಕರು ಕೆ.ವಿ.ರೆಡ್ಡಿ ಮತ್ತು ಪಿ.ಎನ್.ರೆಡ್ಡಿ ಸಹಯೋಗದಲ್ಲಿ ಜಯಂತಿ ಪಿಕ್ಚರ್ಸ್ ಲಾಂಛನದಲ್ಲಿ ಪೆಳ್ಳಿನಾಟ ಪ್ರಮನಾಲು ಚಿತ್ರದ ನಿರ್ಮಾಣ. ಆ ಸ್ಟುಡಿಯೋದಲ್ಲಿ ಎಲ್ಲ ಭಾಷೆಗಳ ಚಿತ್ರಗಳಿಗೆ ಸ್ವರದಾನ ಮಾಡುವ ಸೌಕರ್ಯ.

ಬೆಂಗಳೂರಿಗೆ ವಲಸೆ ಬಂದ ಪಟ್ಟಾಭಿರಾಮ ರೆಡ್ಡಿ ಕನ್ನಡ ಚಿತ್ರರಂಗಕ್ಕೆ ಸಲ್ಲಿಸಿದ ಸೇವೆ ಮಿತವಾದರೂ ಅದು ಅಮೂಲ್ಯ. ರಾಮಮನೋಹರ ಚಿತ್ರ ಲಾಂಛನದಲ್ಲಿ ನಿರ್ಮಿಸಿದ ಯು.ಆರ್.ಅನಂತಮೂರ್ತಿ ಕಾದಂಬರಿ ಆಧರಿಸಿ, ತಯಾರಿಸಿದ ಸಂಸ್ಕಾರ ಕನ್ನಡದಲ್ಲಿ ಹೊಸ ಅಲೆಯ ಚಟುವಟಿಕೆಗಳಿಗೆ ಹೊಸ ಆಯಾಮ ನೀಡಿದ ಚಿತ್ರವಾಯಿತು. ಅನೇಕ ವಿವಾದಗಳನ್ನು ಹುಟ್ಟುಹಾಕಿತು. ಬಹಿಷ್ಕಾರದ ಬೆದರಿಕೆಯೂ ಸುಳಿದಾಡಿತು. ಸೆನ್ಸಾರ್ ಸಮಸ್ಯೆಯು ಕಾಡಿತು. ವಿವಾದ ಪ್ರತಿಭಟನೆಗಳ ಜೊತೆಯಲ್ಲೇ ಪ್ರದಾರ್ಶನಾರಂಭವಾದ ಚಿತ್ರ, ರಾಷ್ಟ್ರಪತಿಗಳ ಚಿನ್ನದ ಪದಕ ಪಡೆಯಿತು. ಮ್ಯಾನ್ ಹೀಮ್ ಪ್ರಾಟೆಸ್ಟೆಂಟ್ ಜೋನ್ ಅವಾರ್ಡ್ (1972) ಮತ್ತಿತರ ಹದಿಮೂರು ಪ್ರಶಸ್ತಿಗಳನ್ನು ಪಡೆಯಿತು. ಗೀರಿಶ್ ಕಾರ್ನಾಡ್, ಲಂಕೇಶ್, ಸಿ.ಆರ್.ಸಿಂಹ, ಸ್ನೇಹಲತಾರೆಡ್ಡಿ, ದಾಶರಥಿ ದೀಕ್ಷಿತ್ ಮೊದಲಾದ ಸಾಹಿತಿಗಳು ರಾಜೀವ್ ತಾರಾನಾಥ್, ಎಸ್.ಜಿ.ವಾಸುದೇವ ಮೊದಲಾದ ಕಲಾವಿದರು ಪಾಲ್ಗೊಂಡಿದ್ದ ಚಿತ್ರ. ಕೇಂದ್ರದಲ್ಲಿ ಸ್ವರ್ಣಪದಕ ಪಡೆದ ಚಿತ್ರಕ್ಕೆ ಕರ್ನಾಟಕದಲ್ಲಿ ದೊರೆತದ್ದು ಎರಡನೆಯ ಅತ್ಯುತ್ತಮ ಚಿತ್ರ ಪ್ರಶಸ್ತಿ. ಪಟ್ಟಾಭಿಯವರಿಗೆ, ಮದರಾಸಿನಲ್ಲಿದ್ದ ಕ್ರಾಂತಿಕಾರಿಗಳಾದ ಶ್ರೀಶ್ರೀ ಮತ್ತು ಮಲ್ಲಿವರಪ್ಪು. ವಿಶ್ವೇಶ್ವರರಾವು ಅವರ ಸಂಪರ್ಕವಿತ್ತು ಅವರಿಂದ ಪ್ರಭಾವಿತರಾಗಿದ್ದರೂ ಕೂಡ, ಓದುತ್ತಿರುವಾಗ, ಕಲ್ಕತ್ತಾನಗರದಲ್ಲಿ ಕಂಡ ಯಾಂತ್ರಿಕ ಜೀವನ, ದೀನದಲಿತರ ಶೋಷಣೆ, ದಾರಿದ್ರ್ಯ, ಯಂತ್ರ ಜಗತ್ತಿನಿಂದ ನಾಶವಾಗುತ್ತಿರುವ ಪರಿಸರ, ಇವೆಲ್ಲದರ ವಿರುದ್ಧ ಸಿಡಿದೆದ್ದ ಕವಿ ಹೃದಯದಿಂದ ಹೊಂದಿದ ಕವಿತೆಗಳು ಅನೇಕ. ಸಾಹಿತ್ಯ ಜಗತ್ತಿನಲ್ಲಿ ಚರ್ಚೆಗೆ ಕಾರಣವಾದ 'ರಾಗಾಲ ಡೊಜೆನ್ ಪಟ್ಟಾಭಿಯವರ ಒಂದು ಪ್ರಮುಖ ಕವಿತಾ ಸಂಕಲನ.

ಪಟ್ಟಾಭಿರಾಮ ರೆಡ್ಡಿಯವರು ನಿರ್ಮಿಸಿದ `ಚಂಡಮಾರುತ (1977) ತುರ್ತು ಪರಿಸ್ಥಿತಿ ವಿರುದ್ಧ ದನಿ ಎತ್ತಿದ ಚಿತ್ರ. ಸಂಸ್ಕಾರದಂತೆ ಸೆನ್ಸಾರ್ ಸಮಸ್ಯೆಗಳಿಗೆ ವಿವಾದಗಳ ಸುಳಿಗೆ ಸಿಕ್ಕಿತು. ಪ್ರಕೃತಿಯ ಬದಲಾವಣೆಯೊಂದಿಗೆ, ಮಾನವನ ಮನೋವ್ಯಾಪಾರವೂ ಹಾಸುಹೊಕ್ಕಾಗಿದೆಯೆಂಬುದನ್ನು ನಿರೂಪಿಸುವ `ಶೃಂಗಾರ ಮಾಸ (1981) ಪರಿಸರ ಸಮಸ್ಯೆಯನ್ನು ವಿಶ್ಲೇಷಿಸುವ 'ದೇವರ ಕಾಡು (1990) ಪಟ್ಟಾಭಿರಾಮ ರೆಡ್ಡಿ ಅವರ ನಿರ್ಮಾಣದ ಕನ್ನಡ ಕಲಾಕೃತಿಗಳು.

ತುರ್ತುಪರಿಸ್ಥಿತಿ ಕಾಲದಲ್ಲಿ (1976) ಪಟ್ಟಾಭಿರಾಮ ರೆಡ್ಡಿಯವರ ಇಡೀ ಕುಟುಂಬ ಬಂಧನಕ್ಕೆ ಒಳಗಾಗಿತ್ತು. ಜೈಲಿನಲ್ಲಿ ಇದ್ದಾಗ ಸರಿಯಾದ ವೈದ್ಯಕೀಯ ನೆರವು ಸಿಗದೆ, ಅವರ ಪತ್ನಿ ಸ್ನೇಹಲತಾ ರೆಡ್ಡಿ ಅವರ ರೋಗ ಉಲ್ಬಣಿಸಿ ಅವರ ಸಾವಿಗೆ ಕಾರಣವಾಯಿತು. ಪಟ್ಟಾಭಿ - ಸ್ನೇಹಲತಾ ರೆಡ್ಡಿಯವರಿಗೆ ಇಬ್ಬರು ಮಕ್ಕಳು. ಮಗಳು ನಂದನಾ ಕಾರ್ಮಿಕ ಚಳವಳಿ, ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಮಗ ಕೊನಾರ್ಕ ಗಿಟಾರ್ ವಾದನ ಪ್ರವೀಣ. ಕವಿತಾ ರಚನೆಗೆ ಅವರಿಗೆ ವೃದ್ಧಾಪ್ಯ ಅಡ್ಡಿಯಾಗಿಲ್ಲ. ಚಿತ್ರರಂಗಕ್ಕೆ ಟಿ.ಪಟ್ಟಾಭಿರಾಮರೆಡ್ಡಿಯವರು ಸಲ್ಲಿಸಿದ ಅನುಪಮ ಸೇವೆಗಾಗಿ ಕರ್ನಾಟಕ ಸರ್ಕಾರ ಅವರಿಗೆ, 2003-04ರ ಸಾಲಿನ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ ನೀಡಿ ಗೌರವಿಸಿದೆ. (ಎಂ.ಬಿ.ಸಿಂಗ್)