ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪತ್ತೆದಾರಿ ಕಾದಂಬರಿ

ವಿಕಿಸೋರ್ಸ್ದಿಂದ

ಪತ್ತೆದಾರಿ ಕಾದಂಬರಿ - ಕೊಲೆ ಸುಲಿಗೆ ಮೊದಲಾದ ಕಾನೂನುಬಾಹಿರ ಕೆಲಸಗಳನ್ನು ಎಸಗಿ ತಲೆ ತಪ್ಪಿಸಿಕೊಂಡವರನ್ನು ಪತ್ತೆ ಹಚ್ಚುವ ಕಥಾವಿಷಯಗಳನ್ನುಳ್ಳ ಕಾದಂಬರಿ ಪ್ರಕಾರ (ಡಿಟೆಕ್ಟೀವ್ ಫಿಕ್ಷನ್).

ಕೊಲೆಗಾರ ಯಾರು ಎಂಬ ಸಮಸ್ಯೆಯನ್ನು ಬಿಡಿಸುವ ಬಗ್ಗೆ ಪತ್ತೆದಾರನ ಚಿಂತನೆ, ತರ್ಕ, ಸಾಹಸ, ಅಪಾಯ, ಸಂದಿಗ್ಧ ಪರಿಸ್ಥಿತಿ-ಇವುಗಳಲ್ಲಿ ವಾಚಕರು ಕುತೂಹಲದಿಂದ ಪಾಲುಗೊಳ್ಳುತ್ತಾರೆ. ವಾಚಕನ ಬುದ್ಧಿವಂತಿಕೆಗೆ ಸವಾಲೊಡ್ಡುವುದರ ಜೊತೆಗೆ ಭಾವೋದ್ರೇಕಗೊಳಿಸವ ತಂತ್ರ ಇಂಥ ಕಥೆಗಳಲ್ಲಿ ಹೇರಳ. ಸಮಸ್ಯೆ ಬಹಿರಂಗವಾಗುವ ವರೆಗೆ ವಾಚಕ ಕಾದಂಬರಿಯನ್ನು ಕೂತೂಹಲದಿಂದ ಓದುತ್ತಾನೆ. ಕೊಲೆಯನ್ನು ಪತ್ತೆ ಹಚ್ಚವುದರಲ್ಲಿ ಕಾದಂಬರಿ ನೀಡುವ ಬೌದ್ಧಿಕ ವ್ಯಾಯಾಮದಿಂದ ವಾಚಕನಿಗೆ ತೃಪ್ತಿಯುಂಟಾಗುತ್ತದೆ.

ಎಲ್ಲ ಜನಪ್ರಿಯ ಕಲೆಗಳಂತೆ ಪತ್ತೆದಾರಿ ಕಾದಂಬರಿಯೂ ಬಲು ಪ್ರಾಚೀನವಾದುದು. ಬೈಬಲಿನ ಹಳೆಯ ಒಡಂಬಡಿಕೆಯ ಕೆಲವು ಕಥೆಗಳಲ್ಲಿ ಆದಿಕಾಲದ ಅಪರಾಧ ಶೋಧನೆಯ ನಿದರ್ಶನಗಳಿವೆ. ಉದಾ : ಸುಸಾನ್ನಳ ವಿರುದ್ಧ ಸುಳ್ಳು ಸಾಕ್ಷ್ಯ ನೀಡಿದ ಹಿರಿಯರಿಗೆ ಡ್ಯಾನಿಯಲ್ ಅಡ್ಡ ಪ್ರಶ್ನೆಗಳನ್ನು ಹಾಕಿ ಅವಳನ್ನು ಬಿಡಿಸುವುದು, ಹಾಗೂ ಡ್ಯಾನಿಯಲ್ ಬೆಲ್ ದೇವತೆಯ ಪುರೋಹಿತರ ಮೋಸವನ್ನು ಕಂಡು ಹಿಡಿಯುವುದು. ಪತ್ತೆದಾರಿ ಕಥೆಗಳಲ್ಲಿ ಒಗ್ಗೂಡಿಸುವ ಆಶ್ರಯಗಳೆಲ್ಲ ಪ್ರಾಚೀನ ಮಾನವನ ಕಲ್ಪನೆಗಳಿಗೆ ಅನುಗುಣವಾಗಿವೆ. ಪತ್ತೆದಾರಿ ಕಥೆಗೂ ಜಾನಪದವೇ ಮೂಲವೆಂದು ವಿದ್ವಾಂಸರ ಅಭಿಪ್ರಾಯ. ಪತ್ತೆದಾರಿ ಕಥೆಯ ಕೊಲೆಯ ಸಮಸ್ಯೆ ಅಥವಾ ಒಗಟಿನ ಆಶಯ ಜನಪದ ಕಥೆಗಳಿಂದ ಬಂದಿದೆ. ದುಷ್ಟರನ್ನು ಪತ್ತೆ ಹಚ್ಚಿ ಶಿಕ್ಷಿಸುವ ಆಶಯ ಪೌರಾಣಿಕ ಹಿನ್ನೆಲೆಯನ್ನು ಹೊಂದಿದೆ. ಭಾರತೀಯ ಸಾಹಿತ್ಯದಲ್ಲಿ ಹೆಸರುಗಳಿಸಿರುವ ಬೃಹತ್ ಕಥೆಯಲ್ಲಿ ಅಂಥ ಉದಾಹರಣೆಗಳು ಹೇರಳವಾಗಿವೆ. ಈ ಆಶಯಗಳೆಲ್ಲ ಸಾಹಿತ್ಯಪೂರ್ವ ಕಾಲದವು. ಆಧುನಿಕ ಪತ್ತೆದಾರಿ ಕಥೆಗೆ ಮೂಲವಸ್ತು ಒದಗಿರುವುದು ಈಸೋಪ್, ಹೀರಡಟಸ್, ಸಿಸಿರೋ, ವರ್ಜಿಲ್ ಮೊದಲಾದ ಪ್ರಾಚೀನ ಲೇಖಕರಿಂದ. ಪಾರಸಿ, ತುರ್ಕಿ ಮತ್ತು ಸಂಸ್ಕøತ ಗ್ರಂಥಗಳಲ್ಲಿ ಪತ್ತೆದಾರಿ ಮಾದರಿಯ ಕಥೆಗಳಿವೆ. ಪತ್ತೆದಾರಿ ಅಂಶಗಳು ಹೆಚ್ಚಾಗಿ ಕಾಣುವುದು ಅರೇಬಿಯನ್ ನೈಟ್ಸ್ ಕಥೆಗಳಲ್ಲಿ. 14ನೆಯ ಶತಮಾನದಲ್ಲಿ ಬೊಕಾಚಿಯೊ ಬರೆದ ಕಥೆಗಳಲ್ಲಿ ಸಹ ಪತ್ತೆದಾರಿ ಅಂಶವಿದೆ. 18ನೆಯ ಶತಮಾನದಲ್ಲಿ ವಾಲ್ಟೇರ್ ಬರೆದ ಜಾಡಿಗ್ ಎಂಬ ಗ್ರ್ರಂಥಧ ಅಧ್ಯಾಯವೊಂದರಲ್ಲಿ ದಾರ್ಶನಿಕ ಕಥಾನಾಯಕ ಕಳೆದು ಹೋದ ಹಾಗೂ ತಾನು ಕಂಡಿಲ್ಲದ ಕುದುರೆ ಮತ್ತು ನಾಯಿಗಳನ್ನು ಶಾಸ್ತ್ರೀಯವಾಗಿ ವರ್ಣಿಸುವ ವಿಧಾನ 19ನೆಯ ಶತಮಾನದ ಪತ್ತೆದಾರಿ ಲೇಖಕರಿಗೆ ಸ್ಫೂರ್ತಿ ನೀಡಿತು.

ಪತ್ತೆದಾರಿ ಕಥೆ ಆಧುನಿಕ ಸಾಹಿತ್ಯ ಪ್ರಕಾರವೆಂದು ಗುರುತಿಸಿಕೊಂಡು ತನ್ನ ಶತಮಾನೋತ್ಸವವನ್ನು 1941ರಲ್ಲಿ ಆಚರಿಸಿತು. ಪತ್ತೆದಾರಿ ವರ್ಗದ ಪ್ರಪ್ರಥಮ ಕಥೆ ಏಪ್ರಿಲ್ 1841ರಲ್ಲಿ ಅಮೆರಿಕದ ಫಿಲಡೆಲ್ಫಿಯ ನಗರದ ಗ್ರಹಾಮ್ಸ್ ಮ್ಯಾಗಜೀನ್ ಎಂಬ ಪತ್ರಕೆಯಲ್ಲಿ ಪ್ರಕಟವಾಯಿತು. ಅದರ ಲೇಖಕ ಎಡ್ಗರ್ ಅಲೆನ್ ಪೋ. ಕಥೆಯ ಹೆಸರು ದಿ ಮರ್ಡರ್ ಇನ್ ದಿ ರೂ ಮೋರ್ಗ್. ಡೊರೊತಿ ಎಲ್ ಸೇಯರಾಳ ಅಭಿಪ್ರಾಯದಲ್ಲಿ ಈ ಕಥೆ ಪತ್ತೆದಾರಿ ಕಾದಂಬರಿಯ ಸಿದ್ಧಾಂತ ಮತ್ತು ರಚನೆಯ ಕೈಪಿಡಿಯಂತಿದೆ. ಅಲೆನ್ ಪೋನ ಇನ್ನೆರಡು ಕಥೆಗಳು ದಿ ಮಿಸ್ಟರಿ ಆಫ್ ಮೇರ ರೋಜೆಟ್ (ಡಿಸೆಂಬರ್ 1842) ಮತ್ತು ದಿ ಪರ್ಲಾಯಿಂಡ್ ಲೆಟರ್.

ಅಮೆರಿಕದಲ್ಲಿ ಅಲೆನ ಪೋ ಪತ್ತೆದಾರಿ ಕಥೆಗಳನ್ನು ಬರೆಯುವುದಕ್ಕೆ ಮುಂಚೆ ಫ್ರಾನ್ಸಿನಲ್ಲಿ ಈ ಮಾದರಿಯ ಕಥೆ ಬರೆದವ ಫ್ರಾಂಕೋಯಿಸ್ ಯೂಜೀನ್ ವಿಡೋಕ್. ಇವರು ಸಭ್ಯವ್ಯಕ್ತಿಯಾಗಿ ಪರವರ್ತನೆಗೊಂಡ ಚೋರ. ಪ್ರಪಂಚದ ಮೊದಲ ಖಾಸಗಿ ಪತ್ತೆದಾರಿ ಕಚೇರಿಯನ್ನು ಈತ ಪ್ಯಾರಿಸ್‍ನಲ್ಲಿ ಸ್ಥಾಪಿಸಿದ (1817). ಇವನ ಚೋರವೃತ್ತಿಯ ನೆನಪುಗಳ ಗ್ರ್ರಂಥ 1828-29 ರ ನಡುವೆ ಪ್ರಕಟವಾಯಿತು. ಇವನಿಂದ ಪ್ರಭಾವಿತನಾಗಿ ಎಡ್ಗರ್ ಅಲೆನ್ ಪೋ ತನ್ನ ಕಥೆಗಳನ್ನು ಬರೆದಿರಬೇಕು. ವಿಡೋಕನ ಈ ಕೃತಿ ಸ್ವಂತ ಅನುಭವಗಳ ಸಂಗ್ರಹವೇ ಹೊರತು ಕಾಲ್ಪನಿಕ ಕಥೆಗಳದ್ದಲ್ಲ. ಏಮೀಲ್ ಗಬೊರ್ಯೋ ಎಮಬ ಮತ್ತೊಬ್ಬ ಫ್ರೆಂಚ್ ಲೇಖಕ ಅಲೆನ್ ಪೋ ಮತ್ತು ವಿಡೋಕ್ ಇವರ ಬರಹಗಳಿಂದ ಪ್ರಭಾವಿತನಾಗಿ ಪತ್ತೆದಾರಿ ನೀಳ್ಗತೆಯನ್ನು ಬರೆದು ಪ್ರಸಿದ್ಧನಾದ (1866). ಇವನ ಕಾದಂಬರಿಗಳನ್ನು ಯೂರೋಪಿನ ಜನ ಓದುತ್ತಿದ್ದಾಗ ಇಂಗ್ಲೆಂಡಿನಲ್ಲಿ ಪತ್ತೆದಾರಿ ಕಥೆಗೆ ಬೆಂಬಲ ದೊರೆತು 1868ರಲ್ಲಿ ವಿಲ್ಕಿ ಕಾಲೆನ್ಸನ ಜಗತ್ಪ್ರಸಿದ್ಧ ದಿ ಮೂನ್ ಸ್ಟೋನ್ ಕಾದಂಬರಿ ಪ್ರಕಟವಾಯಿತು. ಇದು ಇಂಗ್ಲೆಂಡಿನ ಮೊದಲ ಅಭಿಜಾತ ವರ್ಗದ ಪತ್ತೆದಾರಿ ಕಾದಂಬರಿ. ಈ ಕಾದಂಬರಿಯ ಪತ್ತೆದಾರ ಸಾರ್ಜೆಂಟ್ ಕಫ್ ಬುದ್ಧಿವಂತಿಕೆಗಿಂತ ಹೆಚ್ಚಾಗಿ ಸಾಕ್ಷ್ಯಗಳ ಗ್ರಹಿಕೆಯಿಂದ ವಜ್ರದ ಸಮಸ್ಯೆಯನ್ನು ಬಿಡಿಸುತ್ತಾನೆ. ವಿಲ್ಕಿ ಕಾಲೆನ್ಸನ ವಿಧಾನವನ್ನು ಅನುಸರಿಸಿ ಚಾರಲ್ಸ್ ಡಿಕನ್‍ಸ ದಿ ಮಿಸ್ಟರಿ ಆಫ್ ಎಡ್ವಿನ್ ಡ್ರೂಡ್ ಕಾದಂಬರಿಯನ್ನು ಬರೆಯತೊಡಗಿ ಅದು ಮುಗಿಯುವಷ್ಟರಲ್ಲೆ ತೀರಿಕೊಂಡ. 1870ರಲ್ಲಿ ಅದನ್ನು ಇರುವಂತೆಯೇ ಪ್ರಕಟಿಸಲಾಯಿತು, ಇಂದಿಗೂ ಅದು ಅದ್ಭುತ ಪತ್ತೆದಾರಿ ಕಾದಂಬರಿ ಅನಿಸಿಕೊಂಡಿರುವುದಲ್ಲದೆ ಅದರಲ್ಲಿ ರಹಸ್ಯವನ್ನು ಭೇಧಿಸಲು ಯಾರಿಗೂ ಸಾಧ್ಯವಾಗಲಿಲ್ಲ.

ಈ ಮಧ್ಯೆ, 1887ರಲ್ಲಿ ಪತ್ತೆದಾರಿ ಕಾದಂಬರಿಯ ಇತಿಹಾಸದಲ್ಲಿ ಎರಡು ಪ್ರಮುಖ ಘಟನೆಗಳು ಸಂಭವಿಸಿದುವು : ಆ ವರ್ಷ ಫರ್ಗಸ್ ಹ್ಯೂಮ್ ಬರೆದ ದಿ ಮಿಸ್ಟರಿ ಆಫ್ ಎ ಹ್ಯಾನ್ಸಮ್ ಕ್ಯಾಬ್ ಎಂಬ ಭಯೋತ್ಪಾದಕ ಹಾಗೂ ಪ್ರತೀಕ್ಷಾಜನ್ಯ ಕಾದಂಬರಿ ಆಸ್ಟ್ರೇಲಿಯಾದಲ್ಲಿ ಪ್ರಕಟವಾಗಿ ಜನರನ್ನು ಆಕರ್ಷಿಸಿತು. 1926ರ ಹೊತ್ತಿಗೆ ಈ ಕಾದಂಬರಿಯ ಅರ್ಧ ಮಿಲಿಯನ್ ಪ್ರತಿಗಳು ಮಾರಾಟವಾದವು. ಎರಡನೆಯದಾಗಿ ಆರ್ತರ್ ಕಾನನ್ ಡಾಯಲ್ಲ (1859-1930) ತನ್ನ ಸಾಹಿತ್ಯಕ ಪತ್ತೆದಾರಿ ಷರ್‍ಲಾಕ್ ಹೋಂಸ್‍ನನ್ನು ಸೃಷ್ಟಿಸಿ ವಿಖ್ಯಾತ ಪತ್ತೆದಾರಿ ಕಾದಂಬರಿಗಳನ್ನು ಬರೆಯ ತೊಡಗಿದ. ಅವನ ಎ ಸ್ಟಡಿ ಇನ್ ಸ್ಕಾರ್ಲೆಟ್ ಕಥೆಗೆ (1887) ಕೇವಲ 25 ಪೌಂಡ್ ಗೌರವಧನ ದೊರಕಿತು. ಅದಕ್ಕೆ ಸಮಾನವಾದ ಪತ್ತೆದಾರಿ ಕಥೆ 1890ರವರೆಗೆ ಬರಲಿಲ್ಲ. ಆ ವರ್ಷ ಅವನು ದಿ ಸೈನ್ ಆಫ್ ದಿ ಫೋರ್ ಕಾದಂಬರಿಯನ್ನು ಅಮೆರಿಕದ ಪತ್ರಿಕೆಯೊಂದಕ್ಕೆ ಬರೆದುಕೊಟ್ಟ. ಅಂತರರಾಷ್ಟ್ರೀಯ ಹಕ್ಕು ಕಾದಿರಿಸುವಿಕೆ ಕಾಯಿದೆ ಇಲ್ಲದಿದ್ದ ಆ ಕಾಲದಲ್ಲಿ ಅವನ ಈ ಎರಡೂ ಕೃತಿಗಳನ್ನು ಅಮೆರಿಕ ಉಪಯೋಗಿಸಿಕೊಂಡಿತು. ಇಂಗ್ಲೆಂಡಿನಲ್ಲಿ ಕಾನನ್ ಡಾಯಲ್‍ನ ಪತ್ತೆದಾರಿ ಕಥೆಗಳನ್ನು ಸ್ಟ್ರ್ಯಾಂಡ್ ಮ್ಯಾಗಜೀನ್ ಪತ್ರಿಕೆ ಧಾರಾವಾಹಿಯಾಗಿ ಪ್ರಕಟಿಸಿತು. ಎರಡು ವರ್ಷಗಳಲ್ಲಿ ಡಾಯಲನ 22 ಕಥೆಗಳು ಪ್ರಕಟವಾದವು. ಅವುಗಳಲ್ಲಿ ಪ್ರಸಿದ್ಧವಾದುವ ದಿ ಹೌಂಡ್ ಆಫ್ ಬಾಸ್ಕರ್ ವೆಲಿಸ್ (1902), ದಿ ವ್ಯಾಲಿ ಆಫ್ ಫಿಯರ್ (1915), ದಿ ರಿಟರ್ನ್ ಆಫ್ ಷರ್‍ಲಾಕ್ ಹೋಂಸ್ (1917), ದಿ ಕೇಸ್ ಬುಕ್ ಆಫ್ ಲಾಕ್ ಹೋಂಸ್ (1927). ಕಾನನ್ ಡಾಯಲನಿಗೆ ಇಂಗ್ಲೆಂಡಿನ ದೊರೆ ಸರ್ ಪದವಿಯನ್ನು ನೀಡಿ ಗೌರವಿಸಿದ. ಇಂಗ್ಲೆಂಡಿನಲ್ಲಿ ಡಾಯಲ್ ಕಾದಂಬರಿಗಳನ್ನು ಬರೆಯುತ್ತಿದ್ದಾಗ 20ನೆಯ ಶತಮಾನದ ಪ್ರಾರಂಭದಲ್ಲಿ, ಕೆಲವು ಲೇಖಕರು ಈ ಬಗೆಯ ಕಾದಂಬರಿ ರಚನೆಗೆ ಕೈಹಾಕಿ ಅವನನ್ನು ಅನುಕರಿಸಿದರು. ಆ ಕಾಲದ ಪ್ರಸಿದ್ಧ ಕಾದಂಬರಿ ಪತ್ತೆದಾರರು : ಆರ್ತರ್ ಮಾರಿಸನ್ನನ ಮಾರ್ಟಿನ್ ಹೇವಿಟ್, ಇನ್‍ವೆಸ್ಟಿಗೇಟರ್ ಕಾದಂಬರಿಯ (1894) ಪತ್ತೆದಾರ ಮಾರ್ಟಿನ್ ಹೇವಿಟ್, ಎಲ್.ಟಿ. ಮೀಡ್ ವಿರಚಿತ ಸ್ಟೋರಿಸ್ ಫ್ರಂದಿ ಡಯರಿ ಆಫ್ ಎ ಡಾಕ್ಟರ್ ಕಾದಂಬರಿಯ (1894) ಡಾಕ್ಟರ್ ಎಂಬ ಪತ್ತೆದಾರ, ಆರ್. ಆಸ್ಟಿನ್ ಫ್ರೀಮನ್ ಬರೆದ ದಿ ರೆಡ್ ತಂಬ್ ಮಾರ್ಕ್ ಕಾದಂಬರಿಯ (1907) ಡಾ. ಜಾನ್ ತಾರನ್‍ಡೈಕ್ ಪತ್ತೆದಾರ, ಎ. ಇ. ಡಬ್ಲ್ಯು. ಮೇಸನ್ನನ ದಿ ವಿಲ್ ಕಾದಂಬರಿಯ (1910) ಪತ್ತೆದಾರ ಹನೌಡ್, ಜಿ. ಕೆ. ಚೆಸ್ಟರ್‍ಟನ್ ಬರೆದ ದಿ ಇನೊಸೆನ್ಸ್ ಆಫ್ ಫಾದರ್ ಬ್ರೌನ್ ಕಾದಂಬರಿಯ (1911) ಪತ್ತೆದಾರ ಫಾದರ್ ಬ್ರೌನ್, ಇ. ಸಿ. ಬೆಂಟ್ಲಿ ಬರೆದ ಟ್ರೆಂಟ್ಸ್ ಲಾಸ್ಟ್ ಕೇಸ್ ಕಾದಂಬರಿಯ (1913) ಪತ್ತೆದಾರ ಟ್ರೆಂಟ್. ಬೆಂಟ್ಲಿಯ ಕಾದಂಬರಿ ಪತ್ತೆದಾರಿ ಕಾದಂಬರಿ ವರ್ಗದಲ್ಲೆ ಶ್ರೇಷ್ಠವೆಂಬುದು ವಿಮರ್ಶಕರ ಅಭಿಪ್ರಾಯ. ಅರ್ನೆಸ್ಟ್ ಬ್ರಾಮಾ ಎಂಬುವನ ಮ್ಯಾಕ್ಸ್ ಕಾರಡೋಸ್ (1914) ಕಾದಂಬರಿಯೊಂದಿಗೆ ಷರ್‍ಲಾಕ್ ಹೋಂಸ್ ಮಾದರಿಯ ಪತ್ತೆದಾರರ ಕಾಲ ಮುಕ್ತಾಯವಾಯಿತೆಂದು ತೋರುತ್ತದೆ. ಆ ತರುವಾಯ ಪತ್ತೆದಾರಿ ಸಾಹಿತ್ಯದಲ್ಲಿ ಹೊಸ ತಂತ್ರಗಳು ಬಳಕೆಯಾಗಿ ಕಾದಂಬರಿಯಲ್ಲಿಯ ಪತ್ತೆದಾರರ ತನಿಖೆಯ ವಿಧಾನ ಮಾರ್ಪಟ್ಟಿತು. ಅಮೆರಿಕದಲ್ಲಿ ಅಸಂಖ್ಯಾತ ಪತ್ತೆದಾರಿ ಕಾದಂಬರಿಗಳು 20ನೆಯ ಶತಮಾನದ ಪ್ರಾರಂಭದಲ್ಲಿ ಪ್ರಕಟವಾದವು. ಅವುಗಳಲ್ಲಿ ಕೆಲವು ಮಾತ್ರ ಪ್ರಸಿದ್ಧವಾಗಿ ಈಗಲೂ ವಾಚಕರನ್ನು ಆಕರ್ಷಿಸುತ್ತಿವೆ. ಅವುಗಳಲ್ಲಿ ಕೆಲವು : ರಿಚರ್ಡ್ ಹಾರ್ಡಿಂಗ್ ಡೇವಿಸನ ಇನ್ ದಿ ಫಾಗ್ (1901), ಮೇರಿ ರಾಬಟ್ರ್ಸ್ ರೇನ್‍ಹಾರ್ಟ್ ಎಂಬಾಕೆಯ ದಿ ಸಕ್ರ್ಯುಲರ್ ಸ್ಟೇರ್‍ಕೇಸ್ (1908), ಕ್ಲೀವ್‍ಲೆಂಡ್ ಮಾಘೆಟ್‍ನ ತ್ರೂ ದಿ ವಾಲ್ (1909), ಆರ್ತರ್ ಬಿ. ರೀವ್ ಬರೆದ ದಿ ಸೈಲೆಂಟ್ ಬುಲೆಟ್ (1912), ಎಡ್ಗರ್ ಅಲೆನ್ ಪೋನ ಮಾದರಿಯಲ್ಲಿ ಮೆಲ್ವಿಲ್ ಡೇವಿಸನ್ ಪೋಸ್ಟ್ ಬರೆದ ಅಂಕಲ್ ಆಬ್ನರ್ : ಮಾಸ್ಟರ್ ಆಫ್ ಮಿಸ್ಟರಿ (1910), ಫ್ರೆಡಿರಿಕ್ ಇರ್ವಿಂಗ್ ಆಂಡರ್‍ಸನ್ ಸಹ ಉತ್ತಮ ಬರಹಗಾರನಾಗಿದ್ದು 1914-30ರ ನಡುವೆ ಅನೇಕ ಕಾದಂಬರಿಗಳನ್ನು ಬರೆದ. ಅವುಗಳಲ್ಲಿ ದಿ ಬುಕ್ ಆಫ್ ಮರ್ಡರ್ (1930) ಖ್ಯಾತಿ ಪಡೆಯಿತು.

ಮೊದಲನೆಯ ಮತ್ತು ಎರಡನೆಯ ಮಹಾಯುದ್ಧಗಳ ನಡುವೆ (1918-39) ಪ್ರಕಟವಾದ ಪತ್ತೆದಾರಿ ಕಾದಂಬರಿಗಳು ಅಧಿಕ. ಆ ಕಾಲದ ಲೇಖಕರಲ್ಲಿ ಕೆಲವರನ್ನು ಹೆಸರಿಸಬಹುದು : ಜೆ. ಎಚ್. ಫ್ಲೆಚರ್, ಫ್ರೀಮನ್ ವಿಲ್ಸ್ ಕ್ರಾಫ್ಟ್, ಅಗತ ಕ್ರಿಸ್ಟಿ, ಡೊರೊತಿ ಎಲ್. ಸೇಯರ್, ಫಿಲಿಫ್ ಮ್ಯಾಕ್‍ಡೊನಾಲ್ಡ್, ಜಾನ್‍ರೋಡ್, ಫಿಲಿಫ್ ಓಪೆನ್ ಹೀಂ, ಆಂಟೊನಿ ಬರ್ಕ್‍ಲೆ, ಎಡ್ಗರ್ ವ್ಯಾಲೆಸ್, ಎಲಿರಿ ಕ್ವೀನ್, ಡೆಷಿಲ್ ಹ್ಯಾಮೆಟ್, ಅರ್ಲ್ ಸ್ಟ್ಯಾನ್‍ಲಿ ಗಾರ್ಡ್‍ನರ್, ರೆಕ್ಸ್ ಸ್ಟೌಟ್, ರೆಮಂಡ್ ಚಾಂಡ್ಲರ್, ಇವರೆಲ್ಲ ಈಗಿನ ಪತ್ತೆದಾರಿ ವಾಚಕರಿಗೆ ಚಿರಪರಿಚಿತರು. ಇವರಲ್ಲಿ ವಿಲ್ಸ್ ಕ್ರಾಫ್ಟ್ಸ್‍ನದಿ ಕ್ಯಾಸ್ಕ್ ಕಾದಂಬರಿ ಆಧುನಿಕ ಪತ್ತೆದಾರಿ ಸಾಹಿತ್ಯದ ಮೇಲೆ ಹೆಚ್ಚು ಪ್ರಭಾವ ಬೀರಿದೆ. ಜಾನ್‍ರೋಡನ ದಿ ಪ್ಯಾಡಿಂಗ್‍ಟನ್ ಮಿಸ್ಟರಿ (1925), ಎಡ್ಗರ್ ವ್ಯಾಲಸನ ದಿ ಮೈಂಡ್ ಆಫ್ ಜೆ. ಜಿ. ರೀಡರ್ (1926), ಎಲೆರಿ ಕ್ವೀನ್ ನದಿ ರೋಮನ್ ಹ್ಯಾಟ್ ಮಿಸ್ಟರಿ (2929), ಹ್ಯಾಮೆಟ್ಟನ ದಿ ತಿನ್ ಮ್ಯಾನ್ (1934) ಇವು ಆಕರ್ಷಕ ಕಾದಂಬರಿಗಳು.

ಪತ್ತೆದಾರಿ ಕಾದಂಬರಿ ಪ್ರಾರಂಭವಾದ ವರ್ಷ 1841 ರಿಂದ 1920 ರವರೆಗೆ 1,300 ಹಾಗೂ 1921-1940 ರ ನಡುವೆ 8,000 ಪತ್ತೆದಾರಿ ಕಾದಂಬರಿಗಳು ಪ್ರಕಟವಾದವು.1921-1940ರ ನಡುವೆ ಬಂದ ಹೊಸ ಪತ್ತೆದಾರಿ ಕಾದಂಬರಿಕಾರರ ಸಂಖ್ಯೆ 1,700. ಎರಡನೆಯ ಮಹಾಯುದ್ಧದ ತರುವಾಯ ಪತ್ತೆದಾರಿ ಕಾದಂಬರಿಗಳ ಪ್ರಕಟಣೆ ಬೃಹದಾಕಾರವಾಗಿ ಹೆಚ್ಚಿದವಾಗಿ ಅವುಗಳ ಬಗ್ಗೆ ಅಂಕಿ ಅಂಶಗಳನ್ನು ನೀಡುವುದು ಕಷ್ಟ. ದ್ವಿತೀಯ ಯುದ್ಧಾನಂತರ (1945) ಪೇಪರ್ ಬ್ಯಾಕ್ ಪುಸ್ತಕಗಳ ಪ್ರಕಟಣೆ ಮತ್ತು ಗ್ರಂಥ ಪ್ರಕಟಣೆಯ ಬುಕ್ ಕ್ಲಬ್ ಸಂಘಗಳ ಬೆಳವಣಿಗೆ-ಇವುಗಳಿಂದ ಪತ್ತೆದಾರಿ ಕಾದಂಬರಿಗಳಿಗೆ ಹೆಚ್ಚು ಉತ್ತೇಜನ ದೊರಕಿತು. ಯುದ್ಧಪೂರ್ವ ಪತ್ತೆದಾರಿ ಲೇಖಕರನ್ನು ಎಣಿಸಬಹುದಾಗಿತ್ತು ; ಈಗ ಅವರ ಸಂಖ್ಯೆ ಲಕ್ಷಾಂತರಕ್ಕೆ ಏರಿದೆ. ವಾಚಕರು ಹೆಚ್ಚಿದ ಮೇಲೆ ಪತ್ತೆದಾರಿ, ಗೂಢಚಾರ, ಪಾತಕ (ಕ್ರೈಂ) ಹಾಗೂ ಇತರ ಮನೋರಂಜಕ ಕಾದಂಬರಿಗಳ ನಡುವಣ ವ್ಯತ್ಯಾಸಗಳು ದೂರವಾದುವು. ಈ ಕಾದಂಬರಿಗಳೆಲ್ಲವನ್ನೂ ಪ್ರಕಟಣೆಯ ದೃಷ್ಟಿಯಿಂದ ಒಂದೇ ವರ್ಗದ ಕಾದಂಬರಿಗಳೆಂದು ಪರಿಗಣಿಸಲಾಯಿತು. 1950ರ ಹೊತ್ತಿಗೆ ಪ್ರಸಿದ್ಧ ಲೇಖಕರು ಮನೋವೈಜ್ಞಾನಿಕ ಪ್ರತೀಕ್ಷಾ ಜನ್ಯ ಕಾದಂಬರಿಗಳನ್ನು ಬರೆಯಲು ಪ್ರಾರಂಭಿಸಿದರು. ಅವರು ಹಿಂದಿನ ಸಾಂಪ್ರದಾಯಿಕ ಕಥೆಗಳಲ್ಲಿನ ಕೊಲೆಗಾರ ಯಾರು, ಕೊಲೆ ಹೇಗಾಯಿತು ಎಂಬ ವಿಷಯಗಳಿಗೆ ಪ್ರಾಧಾನ್ಯ ನೀಡದೆ ಮನೋವ್ಶೆಜ್ಞಾನಿಕವಾಗಿ ಕೊಲೆ ಏಕಾಯಿತು ಎಂಬುದಕ್ಕೆ ಪ್ರಾಮುಖ್ಯ ನೀಡಿದರು. ಹಿಂದಿನಂತೆ ಪತ್ತೆದಾರಿ ಕಾದಂಬರಿಯಲ್ಲಿನ ಸಮಸ್ಯೆಯನ್ನು ಒಗಟಿನಂತೆ ಪರಿಗಣಿಸದೆ, ಪತ್ತೆದಾರಿ ಆಶಯದೊಡನೆ ವ್ಯಕ್ತಿ ಚಿತ್ರಣದ ಕಾದಂಬರಿಗಳನ್ನು ಬರೆಯತೊಡಗಿದರು. ಇತ್ತೀಚಿನ ದಿ ಒಡೆಸ ಫೈಲ್, ದಿ ಡೇ ಆಫ್ ದಿ ಜಕಾಲ್, ಅಯಾನ್ ಪ್ಲಮಿಂಗನ ಜೇಮ್ಸ್ ಬಾಂಡ್ ಕಾದಂಬರಿಗಳು, ಜೇಮ್ಸ್ ಹ್ಯಾಡ್ಲಿ ಚೇಸನ ಕಥೆಗಳು ಈ ಮಾದರಿಯವು. ಯುದ್ಧಾನಂತರದ ಕಾದಂಬರಿಕಾರರಲ್ಲಿ ಪ್ರಸಿದ್ಧರಾದ ಕೆಲವರು-ಇಂಗ್ಲೆಂಡಿನಲ್ಲಿ ಜೊಸೆಫೈನ್ ಟೇ (ದಿ ಫ್ರಂಚ್ ಅಫೇರ್ಸ್) , ರೇಮಾಂಡ್ ಪೋಸ್ಟೇಜ್ (ವರ್ಡಿಕ್ಟ್ ಆಫ್ ಟ್ವೆಲ್ವ್). ಗೂಢಚಾರ ಕಾದಂಬರಿಕಾರರು ಎರಿಕ್‍ಆಂಬ್ಲರ್ ಮತ್ತು ಮ್ಯಾನಿಂಗ್ ಕೋಲ್ಸ್. ಅಮೆರಿಕದಲ್ಲಿ ಪ್ರತೀಕ್ಷೆಯ (ಸಸ್ಪೆನ್ಸ್) ಕಥಾ ರಚನೆಯಲ್ಲಿ ಪ್ರಸಿದ್ಧರು ಡೊರೊತಿ ಬಿ. ಹ್ಯೂಗ್ಸ್ ಮತ್ತು ಕಾರ್ನೆಲ್ ವೂಲ್‍ರಿಚ್. ಎಲೆರಿಕ್ವೀನ್ 1941ರಲ್ಲಿ ಸ್ಥಾಪಿಸಿದ ಮಿಸ್ಟರಿ ಮ್ಯಾಗೀನ ಪತ್ತೆದಾರಿ ಹಾಗೂ ಗೂಢಚಾರ ಕಾದಂಬರಿಗಳ ರಚನೆಗೆ ಉತ್ತೇಜನ ನೀಡಿತು. ಎರಡನೆಯ ಮಹಾಯುದ್ಧದ ತರುವಾಯ ಈ ಪತ್ರಿಕೆ ಫ್ರಾನ್ಸ್, ಇಂಗ್ಲೆಂಡ್, ಬ್ರಜಿಲ್, ಆಸ್ಟ್ರೇಲಿಂiÀi, ಜಪಾನ್, ಮೆಕ್ಸಿಕೊ ದೇಶಗಳಲ್ಲಿ ಸಹ ಪ್ರಕಟವಾಗತೊಡಗಿತು. ಇದರೊಂದಿಗೆ 1945ರಲ್ಲಿ ಅಮೆರಿಕದ ಪತ್ತೆದಾರಿ ಕಾದಂಬರಿಕಾರರ ವೃತ್ತಿಸಂಘ ಸ್ಥಾಪಿತವಾಗಿ ಕಾದಂಬರಿಯ ಮಟ್ಟ ಹಾಗೂ ಲೇಖಕರ ಸ್ಥಾನಮಾನಗಳನ್ನು ಹೆಚ್ಚಿಸಿತು. ಈ ಸಂಘ ಎಡ್ಗರ್ ಅಲೆನ್ ಪೋನ ಹೆಸರಿನಲ್ಲಿ ಸ್ಥಾಪಿಸಿದ ಎಡ್ಗರ್ ವಾರ್ಷಿಕ ಪಾರಿತೋಷಕವನ್ನು ಪಡೆಯುವುದು ಎಲ್ಲ ಕಾದಂಬರಿಕಾರರ ಆಕಾಂಕ್ಷೆ. ಈಗ ಪತ್ತೆದಾರಿ ಸಾಹಿತ್ಯವನ್ನು ತುಚ್ಛವೆಂದು ಭಾವಿಸದೆ ವಿದ್ವಾಂಸರು ಸಹ ಬರೆಯತೊಡಗಿದ್ದಾರೆ. ಆಕ್ಸ್‍ಫರ್ಡ್ ವಿಶ್ವವಿದ್ಯಾನಿಲಯದ ಸಾಹಿತ್ಯ ಪ್ರಾಧ್ಯಾಪಕ ಸೆಸಿಲ್ ಡೇ ಲೂಯಿ ಎಂಬುವರು ನಿಕಲಸ್ ಬ್ಲೇಕ್ ಎಂಬ ಕಾವ್ಯ ನಾಮದಲ್ಲಿ ಪತ್ತೆದಾರಿ ಕಾದಂಬರಿಗಳನ್ನು ರಚಿಸುತ್ತಿದ್ದಾರೆಂಬುದು ಇದಕ್ಕೊಂದು ನಿದರ್ಶನ.

ಭಾರತೀಯರಲ್ಲಿ ಬೃಹತ್ಕಥಾಕೋಶ, ಕಥಾಸರಿತ್ಸಾಗರ ಮೊದಲಾದ ಸಂಸ್ಕøತ ಗ್ರಂಥಗಳಿಂದ ಅಳವಡಿಸಿಕೊಂಡ ಪತ್ತೆದಾರಿ ಅಂಶದ ಕೆಲವು ಕಥೆಗಳು ಹಾಗೂ ಚೋರ ನಾಯಕರ ಸಾಹಸಗಳು 20ನೆಯ ಶತಮಾನದ ಪ್ರಾರಂಭದವರೆಗೆ ಮನರಂಜನೆನೀಡುತ್ತಿದ್ದವು. ಪಾಶ್ಚಾತ್ಯ ಮಾದರಿಯ ಪತ್ತೆದಾರಿ ಕಾದಂಬರಿಗಳ ರಚನೆವಿಲ್ಕಿ ಕಾಲಿನ್ಸ್, ಕಾನನ್‍ಡಾಯಲ್ ಮೊದಲಾದವರ ಪ್ರಭಾವದಿಂದ, ಭಾರತದಲ್ಲಿ ಹೆಚ್ಚಾಗಿ ಪ್ರಕಟವಾಗುತ್ತಿರುವುದು ದ್ವಿತೀಯ ಮಹಾಯುದ್ಧದ ತರುವಾಯ. ಪ್ರಕಾಶಕರು ಸಾಮಾಜಿಕ ಕಾದಂಬರಿಗಳಿಗೆ ಹೆಚ್ಚು ಗಮನ ನೀಡುತ್ತಿರುವಲ್ಲಿ, ಅಗ್ಗದ ಕಾಗದದಲ್ಲಿ ಪತ್ತೆದಾರಿ ಕಾದಂಬರಿಗಳನ್ನು ಪ್ರಕಟಿಸುವ ಪ್ರಕಾಶನ ಸಂಸ್ಥೆಗಳು ಇಡೀ ಭಾರತದಲ್ಲಿ ಹುಟ್ಟಿಕೊಂಡಿವೆ. ತಮಿಳು, ಮಲೆಯಾಳಂ ಮತ್ತು ತೆಲುಗು ಭಾಷೆಗಳಲ್ಲಿ ಇವು ಹೇರಳ. ತಮಿಳಿನ ಕಲ್ಕಿ, ಆನಂದ ವಿಗಡನ್, ಕಲ್ಕಂಡು, ದಿನಮಣಿ ಕದಿರ್ , ಪತ್ರಿಕೆಗಳಲ್ಲಿ ಸಹ ಪತ್ತೆದಾರಿ ಕಥೆಗಳು ಪ್ರಕಟವಾಗುತ್ತಿವೆ. ತೆಲುಗು ಭಾಷೆಯಲ್ಲಿ ಭಾಷಾಂತರಿತ ಪತ್ತೆದಾರಿ ಕಾದಂಬರಿಗಳು ಹೆಚ್ಚು. ಪೂರ್ವ ಘಟ್ಟದ ಪರ್ವತವಾಸಿಗಳು ಹಾಗೂ ಕಳ್ಳರು ಅನೇಕ ಸ್ವತಂತ್ರ ಪತ್ತೆದಾರಿ ಕಾದಂಬರಿಗಳ ನಾಯಕರು. ರೋಮಾಂಚಕ ಪತ್ತೆದಾರಿ ಕಾದಂಬರಿಗಳು ಅಸ್ಸಾಮಿ ಭಾಷೆಯಲ್ಲಿ ಅಧಿಕ. ಹಿಂದಿಯಲ್ಲಿ ಗೋಮಲ್ ರಾಂ ಗಹಮಾರಿ ಅನೇಕ ಪತ್ತೆದಾರಿ ಕಾದಂಬರಿಗಳನ್ನು ರಚಿಸಿದರು. ಬಂಗಾಳಿಯಲ್ಲಿ ಉತ್ತಮ ಕಾದಂಬರಿಗಳು ಪ್ರಕಟವಾಗಿವೆ.

ಕನ್ನಡದಲ್ಲಿ ಪತ್ತೆದಾರಿ ಕಾದಂಬರಿಗಳು 20ನೆಯ ಶತಮಾನದ ಎರಡನೆಯ ದಶಕದಿಂದ ಪ್ರಕಟವಾಗಹತ್ತಿದವು. ಪಾಂಚಕೋಡಿ ಡೇ ಅವರ ಹತ್ಯಾಕಾರಿ ಎಂಬ ಬಂಗಾಳಿ ಕಾದಂಬರಿಯ ಕಥೆಯನ್ನು ಅವಲಂಬಿಸಿ ಕುಮುದಿನಿ 1911ರಲ್ಲಿ ರಚಿತವಾಯಿತು. ಬಾಲಸರಸ್ವತಿ ಅವರು ನರಬಲಿ, ಗುರುತು ಕಂಡ ಕಳ್ಳ, ಚಿತ್ರಗುಪ್ತನ ಧಪ್ತರಗಳು ಮೊದಲಾದವನ್ನು ಬರೆದರು. ಬಿ. ವೆಂಕಟಾಚಾರ್ಯರ ಪರಿಮಳಾ ಕನ್ನಡ ಪತ್ತೆದಾರಿ ಕಾದಂಬರಿ ಕ್ಷೇತ್ರದಲ್ಲಿ ಒಂದು ಹೊಸ ಮೈಲಿಗಲ್ಲು. ಅದರಲ್ಲಿ ಪತ್ತೆದಾರ ಸಂಜೀವಬಾಬು ತನ್ನ ಸಾಹಸಗಳಿಂದ ವಾಚಕರನ್ನು ಆಕರ್ಷಿಸುತ್ತಾನೆ. ಈಗಿನ ಪ್ರತೀಕ್ಷಾಜನ್ಯ ಕಾದಂಬರಿಯ ಲಕ್ಷಣಗಳನ್ನು ಈ ಕಾದಂಬರಿ ಹೊಂದಿದೆ. ಶಿವರಾಮ ಕಾರಂತರು ವಿಚಿತ್ರ ಕೂಟ, ದೇವುಡು ನರಸಿಂಹಶಾಸ್ತ್ರಿಗಳು ಕಳ್ಳರ ಕೂಟ ಎಂಬ ಕಾದಂಬರಿಗಳನ್ನು ಬರೆದರು. ವೆಂಕಟಾದ್ರಿ ಶಾಸ್ತ್ರಿಗಳು ಮಾಯಾವಿ, ಮನೋರಮ ಕಾದಂಬರಿಗಳನ್ನು ರಚಿಸಿದರು. ದಾಸುರಾವ್ ಅವರು ಧನ್ವಂತ ಎಂಬ ಲೇಖನಾಮದಲ್ಲಿ ಎಡ್ಗರ್ ಅಲೆನ ಪೋನ ದಿ ಮರ್ಡರ್ ಇನ್ ದಿ ರೂ ಮೋರ್ಗ್ ಕಥೆಯನ್ನು ಕನ್ನಡಕ್ಕೆ ರೂಪಾಂತರಿಸಿ ಅದನ್ನು ಸಾವಿಗೆ ಮುಂಚೆ ಸಮಾಧಿ ಎಂಬ ಹೆಸರಿನಲ್ಲಿ ಪ್ರಕಟಿಸಿದರು. ನಗುವನಂದ ಮಾಸಪತ್ರಿಕೆ ಫೆಬ್ರವರಿ 1934ರಿಂದ ಫೆಬ್ರವರಿ 1935ರವರೆಗೆ ರಘುಪತಿ ಅವರ ಕಲವಾಣಿ ಎಂಬ ಪತ್ತೆದಾರಿ ಕಾದಂಬರಿಯನ್ನು ಧಾರಾವಾಹಿಯಾಗಿ ಪ್ರಕಟಿಸಿತು. ಇದೇ ಮಾಸಪತ್ರಿಕೆಯಲ್ಲಿ ವಿ. ಜಿ. ಕೃಷ್ಣಮೂರ್ತಿ ಅವರ ಸಣ್ಣ ಪತ್ತೆದಾರಿ ಕಥೆ ಹನುಮಂತರಾವ್, ಸಿ.ಐ.ಡಿ. ಅಚ್ಚಾಯಿತು. (1935). ಎಚ್ಚೆಸ್ಕೆ ಅವರ ಅರಿಂದಮನ ಸಾಹಸ ಎಂಬ ಪತ್ತೆದಾರಿ ಕಾದಂಬರಿ 1938ರಲ್ಲಿ ಪ್ರಕಟವಾಯಿತು. 2ನೆಯ ಮಹಾಯುದ್ಧದ ತರುವಾಯ ಇಂಗ್ಲಿಷ್ ಪತ್ತೆದಾರಿ ಪುಸ್ತಕಗಳ ಹಾಗೂ ಸಿನಿಮಾಗಳ ಪ್ರಭಾವದಿಂದ ಕನ್ನಡದಲ್ಲಿ ಪತ್ತೆದಾರಿ ಕಾದಂಬರಿಗಳ ಪ್ರಕಟಣೆ ಹೆಚ್ಚಿತು. 1945-60ರ ನಡುವೆ ಇಂಥ ಕಾದಂಬರಿಗಳನ್ನು ಬರೆಯಲು ಪ್ರಾರಂಭಿಸಿದವರಲ್ಲಿ ಭಿ. ಪ. ಕಾಳೆ, ಎಂ. ರಾಮಮೂರ್ತಿ, ವಿ.ಜಿ. ಕೃಷ್ಣಮುರ್ತಿ, ಎನ್. ನರಸಿಂಹಯ್ಯ, ಗುರುರಾಜಾಚಾರ್ಯ, ಗುಂಡಾಶಾಸ್ತ್ರಿ, ನಾಗೇಶ, ಬಿ. ಕೆ. ಸುಂದರರಾವ್, ಮಾ. ಭಿ. ಶೇ., ಎಂ. ಶಿವಾಜಿರಾವ್ ಮೊದಲಾದವರು-ಪ್ರಮುಖರು. ಭಿ. ಪ. ಕಾಳೆ ತಮ್ಮ ಧಾರವಾಡದ ಶೇಷಾಚಲ ಗ್ರ್ರಂಥಮಾಲೆಯ ಮೂಲಕ 1946-61ರ ನಡುವೆ ಪತ್ತೆದಾರಿ ಕಾದಂಬರಿಗಳನ್ನು ಬರೆದು ಪ್ರಕಟಿಸಿದರು. ಅವುಗಳಲ್ಲಿ ಕೆಲವು : ಕಾಲಸರ್ಪ (1946), ಘಾತುಕ ಶಿತಿಕಂಠ (1946), ಭಗವಾನ್ ದಾಸ (1946), ಕಂಕಣ ಚೋರ (1950), ನನ್ನ ಗತಿ (1951), ಅಂಬಿಕೆ (1961), ನಾಲ್ವರು ಸಾಕ್ಷಿಗಳು (1961), ನಾಗೇಶ ಅವರ ಮಾಯವಿನಿ ಕಾದಂಬರಿ ಭಿ. ಪ. ಕಾಳೆಯವರು ಶೇಷಾಚಲ ಗ್ರ್ರಂಥಮಾಲೆಯಲ್ಲಿಯೇ ಪ್ರಕಟವಾಯಿತು. (1950).

ಎಂ. ರಾಮಮೂರ್ತಿ 1940ರ ದಶಕದಲ್ಲಿ ಪತ್ತೆದಾರಿ ಕಾದಂಬರಿ ರಚನೆಗೆ ಕೈ ಹಾಕಿ ತಮ್ಮ ಗ್ರಂಥಗಳಲ್ಲಿ ಅನೇಕವನ್ನು ತಮ್ಮ ವಿನೋದಿನ ಪ್ರಕಟನಾಲಯದಿಂದ ಪ್ರಕಟಿಸಿದರು. ಅವರು ಅಗತ ಕ್ರಿಸ್ಟಿ, ಫೀಟರ್ ಚೀನಿ ಮೊದಲಾದವರ ಕಾದಂಬರಿಗಳಿಂದ ಸ್ಫೂರ್ತಿಗೊಂಡು ಕೆಲವು ಕಾದಂಬರಿಗಳನ್ನು ಬರೆದರು. ಪಾಕಿಸ್ತಾನ ಗುಪ್ತಚಾರ, ಕಾಲುವೆ ಮನೆ, ವೈಯ್ಯಾಲಿ ಕಾವಲ್, ನೀಲಕಮಲ, ಮೆಟ್ಟಿಲ ಕೆಳಗೆ, ಪತ್ತೆ ಮಾಡಬೇಡಿ, ಇಬ್ಬರು ಗೆಳೆಯರು (1956), ಜುಲೇಖಾ (1958), ಕಡೆಯ ಮೀನು (1960), ತಪ್ಪಿಸಿಕೊಂಡ ಗಂಡು (1960), ಚೂರಿ ಹಿಡಿದ ದಸ್ಯುಕನ್ಯೆ (1960), ಪುನ್ಯ ಜುಲೇಖಾ (1960), ವಜ್ರದ ಹರಳು (1960), ಒಂಟಿಯಾಗಿದ್ದ ಹೆಂಗಸು (1962), ಅವಳೇನಾದಳು (1962), ಕಣ್ಮರೆಯಾದ ಪ್ರೇಯಸಿ (1962), ಕೈಕೊಟ್ಟ ಪ್ರೇಮಪತ್ರ (1962), ವ್ಯಭಿಚಾರಿಣಿಯ ಮಗಳು (1962), ಪಾಪಿಯ ಮಗ (1963), ನೆನೆಸಿದ್ದೇ ಬೇರೆ (1964), ಬಯಕೆ ಈಡೇರಲಿಲ್ಲ (1968), ಮುತ್ತಿನ ಬಳೆಯವಳು (1968), ಎರಡು ಚೂರಿಗಳು (1972) ಇವು ಅವರ ಕೆಲವು ಜನಪ್ರಿಯ ರಚನೆಗಳು.

1948-54ರ ನಡುವೆ ಕಥಾವಳಿ ಮಾಸಪತ್ರಿಕೆ ಸಂಶೋಧನ ಸಮಸ್ಯೆ ಎಂಬ ಅಂಕಣದಲ್ಲಿ ಪ್ರಕಟಿಸುತ್ತಿದ್ದ ವಿ. ಜಿ. ಕೃಷ್ಣಮೂತಿಯವರ ಪತ್ತೆದಾರಿ ಸಣ್ಣಕಥೆಗಳು ಜನಪ್ರಿಯವಾಗಿದ್ದವು. ಈ ಕಥೆಗಳಲ್ಲಿ ಕೆಲವು : ವಾಲ್ಟರ್ ಮೊಕದ್ದಮೆ (1948), ಜಪಮಾಲೆ ಮೊಕದ್ದಮೆ ರಹಸ್ಯ (1949), ಕತ್ತರಿಸಿದ ಬೆರಳು (1949), ವಾಷಿಂಗ್‍ಟನ್ ವಜ್ರದಾಭರಣ (1949), ಸಂಶಯದ ಸಮಸ್ಯೆ (49), ಮಂಜಿನಲ್ಲಿ ಮೃತ್ಯು (49), ಅಪರಾಧಿ ಯಾರು ? (1950), ಪ್ರಾಂಕ್ ಜೆನಿಯ ಕೊಲೆ (50), ಕಣಿವೆಯಲ್ಲಿ ಕಂಬನಿ (50), ಟ್ಯಾಕ್ಸಿಯವರ ಸಮಸ್ಯೆ (50), ಒಡೆಯದ ಕಾಗದ (50), ರಕ್ತ ಸರೋವರ (50), ವಿಷದ ಸೀಸೆ (50), ರತ್ನದಲ್ಲಿ ರಕ್ತ (50), ಹಿಮದಲ್ಲಿ ಶವ (60), ನಿದ್ರ ಸಂಚಾರಿ (50), ಕ್ರೂರ ರಾತ್ರಿ (50), ಬಂಗಲೆಯಲ್ಲಿ ಭೀಕರ ಕೊಲೆ (1951). ಇದೇ ಲೇಖಕರ ಸೇಡಿನ ಸಂಘ ಎಂಬ ಪತ್ತೆದಾರಿ ಕಾದಂಬರಿಯನ್ನು ಕಥಾವಳಿ 1954ರಲ್ಲಿ ಧಾರಾವಾಹಿಯಾಗಿ ಪ್ರಕಟಿಸಿತು. 1955ರಲ್ಲಿ ಪ್ರಕಟವಾದ ಇವರ ಗೈಟಾಯಾಮಿನಿ ಕಾದಂಬರಿಯಲ್ಲಿ ಹೊಸ ತಂತ್ರವಿದೆ. ಇವರ ಸಮಾಧಿಯ ಸುರಂಗ (1960) ಕಾದಂಬರಿ ಬಲು ಜನಪ್ರಿಯವಾಯಿತು. ಇವರ ಇತರ ಪತ್ತೆದಾರಿ ಕಾದಂಬರಿಗಳು : ರಕ್ಕಸಿಯ ರಹಸ್ಯ (1955), ನಾಗರ ನಂಜು (1961), ನೀಲ ನಕಾಸೆ (1967), ಚೋರನಾವೆ (1968), ದರೋಡೆ (1972), ಕಣಿವೆಯ ಮನೆ (1973), ಬಂಧನದಿಂದ ಬಯಲಿಗೆ. ಎನ್. ನರಸಿಂಹಯ್ಯ ನವರು 1952ರಲ್ಲಿ ಬರೆಯಲು ಪ್ರಾರಂಭಿಸಿ ಅಕ್ಟೋಬರ್ 1978ರ ಹೊತ್ತಿಗೆ 35 ಪತ್ತೆದಾರಿ ಕಾದಂಬರಿಗಳನ್ನು ಬರೆದರು. ಕನ್ನಡ ಪತ್ತೆದಾರಿ ಕಾದಂಬರಿಕಾರರಾಗಿ ಖ್ಯಾತಿ ಪಡೆದವರಲ್ಲಿ ಇವರೂ ಒಬ್ಬರು. ಪ್ರೈಮರಿ ಶಾಲೆಯ ಶಿಕ್ಷಣ ಮುಗಿದು ದರ್ಜಿ, ಬಸ್ ಕ್ಲೀನರ್ ಮತ್ತು ಕಂಡಕ್ಟರ್ ಕೆಲಸಗಳಲ್ಲಿ ಸ್ವಲ್ಪ ಕಾಲವಿದ್ದು ಕಾದಂಬರಿ ರಚನೆಗೆ ಇಳಿದರು. 1952-62ರ ನಡುವೆ ಇವರ ಬರವಣಿಗೆ ತೀವ್ರವಾಯಿತು. ಅನೇಕ ಕಾದಂಬರಿಗಳು ಒಳ್ಳೆಯ ಹೆಸರು ಮಾಡಿದವು. ಸಮಕಾಲೀನ ಸ್ಥಿತಿಕೂಡ ಇವರ ಕೃತಿರಚನೆಗೆ ಸಹಾಯ ಒದಗಿಸಿತು. ನರಸಿಂಹಯ್ಯ ಅವರಿಗೆ ಸ್ಫೂರ್ತಿ ಒದಗಿದ್ದು ಸಮಕಾಲೀನ ಕಾದಂಬರಿಕಾರರಿಂದ. ಪತ್ತೆದಾರಿ ವಸ್ತುವನ್ನು ಸಂಗ್ರಹಿಸಲು ಇವರು ಕ್ರಿಮಿನಲ್ ಕೋರ್ಟುಗಳಿಗೆ ಭೇಟಿ ಕೊಡುತ್ತಿದ್ದರು. ಇವರ ಕಾದಂಬರಿಗಳಲ್ಲಿ ಜನಪ್ರಿಯವಾದವು ಈ ಕೆಲವು : ಪತ್ತೆದಾರಿ ಪುರುಷೋತ್ತಮ (1952), ವಿಚಿತ್ರ ಕೊಲೆಗಾರ (1954), ಭಯಂಕರ ಭೈರಾಗಿ (1955), ಅರಮನೆಯ ಚೋರ (1956), ಕೆರಳಿದ ಕೇಸರಿ (1958), ಮಾಟಗಾತಿಯ ಮಗಳು (1961), ಅಡವಿಯ ರಾಜ (1969), ಪಂಜರದ ಪಿಶಾಚಿ (1971), ಎರಡು ದೆವ್ವಗಳು (1972), ಪತ್ತೆದಾರಿ ಕಥೆಗಳು (1978).

ಎಸ್.ಎನ್. ಗುರುರಾಜಾಚಾರ್ಯರ ಕಾದಂಬರಿಗಳು ಸಹ ಉತ್ತಮ ವಾಚನವನ್ನು ನೀಡಿವೆ. ಅವರು ಬರೆದ ಕಾದಂಬರಿಗಳಲ್ಲಿ ಕೆಲವು : ಉಮಾಕಾಂತನ ಉಯಿಲು, ಮಾಲತಿ, ತಾರಾಮೋಹಿನಿ (1954), ವಂಚಕಿಯಾದ ವಿಮಲೆ (1954), ಸೌಭಾಗ್ಯ ಸುಂದರಿ. ಎನ್. ಗುಂಡಾಶಾಸ್ತ್ರಿ ಇವರ ಕಾದಂಬರಿಗಳು : ಪಂಜಿನ ಕಳ್ಳರು (1958), ಕಡಲ್ಗಳ್ಳರು (1957), ಅಳುವ ನಾಯಿ (1962), ಇನ್ವೆಸ್ಟಿಗೇಷನ್ (1964). ಎಂ. ಶಿವಾಜಿರಾವ್ ಅವರ ಅಂಡಮಾನಿನಲ್ಲಿ ಖೈದಿ (1976), ಮಾ. ಭೀ. ಶೇ. ಅವರ ರಹಸ್ಯ ಪತ್ರ ; ಬಿ.ಕೆ. ಸುಂದರರಾವ್ ಅವರ ಅಪರಾಧಿಯ ಹಂಬಲ ಮೊದಲಾದವು ವಾಚಕರನ್ನು ಆಕರ್ಷಿಸಿವೆ. ಜಿಂದೆ ನಂಜುಂಡಸ್ವಾಮಿ ನಾನೇ ಕೊಲೆಗಾರ ಮೊದಲಾದ ಕಾದಂಬರಿಗಳನ್ನು ಬರೆದುದಲ್ಲದೆ 1972-74 ರ ನಡುವೆ ಮದರಾಸಿನಿಂದ ರಹಸ್ಯಚಾರ ಎಂಬ ಪತ್ತೆದಾರಿ ಹಾಗೂ ಗೂಢಚಾರ ಕಥೆಗಳಿಗೆ ಮೀಸಲಾದ ಮಾಸಪತ್ರಿಕೆಯನ್ನು ಪ್ರಕಟಿಸಿದರು. ಈ ಪತ್ರಿಕೆ 12 ಸಂಚಿಕೆಗಳ ಅನಂತರ ನಿಂತು ಹೋಯಿತು. 1960ರ ತರುವಾಯ ಬರೆಯುತ್ತಿರುವವರಲ್ಲಿ ಟಿ.ಕೆ. ರಾಮರಾವ್ ಪ್ರಸಿದ್ಧರು. ಕಪ್ಪುನಾಯಿ, ಶಕುನ ಪಕ್ಷಿ (1974), ತೋರು ಬೆರಳು (1973), ಮುಂತಾದ ಕಾದಂಬರಿಗಳನ್ನು ಬರೆದು ಉತ್ತಮ ಲೇಖಕರೆನಿಸಿಕೊಂಡಿದ್ದಾರೆ. ಈ ಕಾಲಕ ಇತರ ಲೇಖಕರಲ್ಲಿ ಕೆಲವರು : ಎಸ್. ರಾಜರತ್ನಂ (ನಾನು ನಿನ್ನ ಹಿಂದೆ ಬರಲಾರೆ), ಎಂ. ವಾಮನ ಮಲ್ಯ (ಮುಯ್ಯಕ್ಕೆ ಮುಯ್ಯ), ಯಂ. ಶೇಷ್ಪಪ್ಪ ಶೆಟ್ಟಿ (ನಿಗೂಢ ಕೊಲೆ-1976), ಬಿ.ಎಸ್. ಸಂಜೀವಮೂರ್ತಿ (ಪ್ರಳಯ ಮೋಹಿನಿ), ಎಚ್. ವೆಂಕಟೇಶ್ (ರೈಲಿನ ರೂಪಸಿ 1972), ಗಸ್ಪರನುಜ (ಬೇಹುಗಾರ ಮುದ್ದಣ), ವಸಂತ (ಸೇಡಿನ ಸರ್ಪ), ಎಲ್. ಎಸ್. ಇನಾಂದಾರ (ಮೃತ್ಯುವಿನ ಮಡಿಲಲ್ಲಿ), ಕುಂದಾನಿ ಸತ್ಯನ್ (ಹಗೆ ತೀರಿತು), ನವಗಿರಿನಿಂದ (ಹಂತಕನು ಯಾರು ? ಕಾಲಾಬಜಾರ್), ವಿಜಯಲತ (ಗುರಿಯಿಲ್ಲದ ಪಯಣ), ವೈ. ಎನ್. ನಾಗೇಶ್ (ಚತುರ ಚೋರ), ರವೀಂದ್ರ (ನೀಲಿ ತೋಳ), ಎಸ್. ಶಿವಕುಮಾರ್ (ಬಂಗಾರದ ರಹಸ್ಯ), ಮಾ. ಬಾ. ಕುಲಕರ್ಣಿ (ಗುಪ್ತ ಪೋಲೀಸರ ಗಂಡ), ಭಟ್ಟ ಸದಾಶಿವ ಶರ್ಮ (ಭಯಂಕರ ಸೇಡು), ಜಿ. ಎಸ್. ಪ್ರಭಾಕರ (ನಾನು ಕೊಲೆಗಾರನೆ ?), ವಿಜಯಾ ಸುಧಾಕರ್ (ಮಾಯವಾದ ಹೆಣ್ಣು, ಕಾಡು ಬೆಕ್ಕು, ನಕಲಿ ನೆಕ್ಲೇಸ್), ಟಿ.ಎಲ್. ಸತ್ಯಮೂರ್ತಿ (ಪಾಷಾಣ ಕನ್ಯೆ, ಅದ್ಭುತ ಕೊಲೆಗಾರ), ಜಿ. ಕೆ. ಮೂರ್ತಿ (ಬೆದರಿಕೆ ಪತ್ರ, ಪತ್ತೆದಾರ ರಮೇಶ್), ಜಿ. ಮಲ್ಲಾರಿ ಭಟ್ (ಭೀಕರ ಕೊಲೆ), ಬಿ. ಎಚ್. ಸಂಜೀವ ಭಟ್ (ಅವಳು ಯಾರು ?) ಬೇಲೂರು ಸ. ಶ್ರೀನಿವಾಸನ್ (ಪಾತಾಳ ಬೈರಾಗಿ, ಕೆರಳಿದ ಸುಂದರಿ), ಟೆಂಪೊರಾವ್ (ಗಗನಸಖಿ ಭಾಗ 1, 2), ವಿ. ಸುಬ್ರಹ್ಮಣ್ಯಂ (ರಹಸ್ಯ ಕೊಲೆಗಾರ), ಕೆ. ಶಿವರಾಜ (ಸಿ.ಐ.ಡಿ.) ಆರ್. ಜಿ. ಕುಮಟಾ (ಕಪಟ ವ್ಯೂಹ), ನಾರಾಯಣ ಶಿಡೆನೋರ (ದರೋಡೆಕಾರ ಗರ್ಬಾಲ್ ಸಿಂಗ್), ಪಿ. ರಾಜು (ಸಕ್ಕರೆ ಗೊಂಬೆ, ಮೃತ್ಯುವಿಗೆ ಮೆಟ್ಟಲೆಷ್ಟು ?), ರಮೇಶ (ಬ್ಲ್ಯಾಕ್ ಕ್ಯಾಟ್ ; ಕೊಂದವರು ಯಾರು ?), ಶಾಮೂ (ಬಲಿಗುಡಿ), ಕಾಕೋಳು ರಾಮಯ್ಯ (ರಕ್ಕಸರ ಮರ್ಮ), ಮಾಯಾರಾಜ್ (ಸುರಂಗದಲ್ಲಿ ಸಮಾದಿ), ಜಿ. ಎಸ್. ಮಾಧವ (ಸ್ಮಗ್ಲರ್), ಆರ್, ಸೂರ್ಯನಾರಾಯಣಮೂರ್ತಿ (ಕ್ಷಣಕ್ಕೊಂದು ಕೊಲೆ), ಬಿ. ಆರ್. ಶಂಕರ (ಕೊಲೆಯ ರಹಸ್ಯ), ಚಂದ್ರಕಾಂತ ಕುಸನೂರು (ಚರ್ಚ್ ಗೇಟ್), ಎಚ್. ಕೆ. ಅನಂತರಾವ್ (ಅಂತ), ಮನು (ಚಕ್ರವ್ಯೂಹ) ಪತ್ತೆದಾರಿ ಕಥೆ ಕಾದಂಬರಿಗಳಿಗೆ ಈಗ ಇತರ ಬಗೆಯ ಕಥೆ ಕಾದಂಬರಿಗಳ ಸ್ಥಾನಮಾನ ದೊರಕಿದೆ. ಎಲ್ಲ ಸಾಹಿತ್ಯ ಪ್ರಕಾರಗಳಿಗಿಂತ ಈ ಪ್ರಕಾರಕ್ಕೆ ಹೆಚ್ಚು ಜನಪ್ರಿಯತೆ ಇರುವುದರಿಂದ ಈ ಮಾಧ್ಯಮವನ್ನು ಜನತೆಯಲ್ಲಿ ಓದುವ ಹವ್ಯಾಸವನ್ನು ಬೆಳೆಸಲು, ಕೊಲೆ ಸುಲಿಗೆ ಅತ್ಯಾಚಾರಗಳಿಂದ ಎನೂ ಲಾಭವಿಲ್ಲ ಎಂಬ ನೀತಿಯನ್ನು ಹರಡಲು ಬಳಸಿಕೊಳ್ಳಬಹುದು. ಒಳ್ಳೆಯ ಪತ್ತೆದಾರಿ ಕಥೆಯಲ್ಲಿ ಮನ ಒಪ್ಪುವ ಕಾನೂನು ಒಪ್ಪುವ ತರ್ಕವಿರಬೇಕು. ಕಥೆಯ ವಸ್ತು ಜನ ಜೀವನಕ್ಕೆ ಹತ್ತಿರವಾದುದೂ ಸಹಜವಾದದೂ ಆಗಿರಬೇಕು. ಕಥೆಯಲ್ಲಿನ ವರ್ಣನೆ ಅಸಹಜವಾಗಬಾರದು. ಸಂಭಾಷಣೆಯಲ್ಲಿ ಚತುರತೆ ಇರಬೇಕು. ಇಡೀ ಬರವಣಿಗೆ ಕಳ್ಳನಾರು ಎಂಬ ಕುತೂಹಲವನ್ನು ಬೆಳೆಸುವಂತಿರಬೇಕು. ಕಥೆಯಲ್ಲಿ ತನಿಖೆಯ ವ್ಯವಹಾರಗಳು ಕ್ರಿಮಿನಲ್ ಕೋರ್ಟಿನ ವ್ಯವಹಾರಗಳಷ್ಟೆ ನೈಜವಾಗಿರಬೇಕು. ಕಥೆಯಲ್ಲಿ ಸಾಮಾಜಿಕ ರಾಜಕೀಯ ಸಾಂಸಾರಿಕ ಜೀವನ ಚಿತ್ರಣಗಳಲ್ಲಿ ಒಂದೊ ಎರಡೊ ಬಂದರೆ ಇನ್ನೂ ಮೇಲು. ಕನ್ನಡದಲ್ಲಿ ಇಷ್ಟೆಲ್ಲ ಒಳ್ಳೆ ಗುಣಗಳನ್ನು ಪಡೆದ ಪತ್ತೆದಾರಿ ಕಾದಂಬರಿಗಳು ವಿರಳವೆಂದೇ ಹೇಳಬೇಕು. (ವಿ.ಜಿ.ಕೆ.)