ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪಿರಿಯಾಪಟ್ಟಣದ ಕಾಳಗ

ವಿಕಿಸೋರ್ಸ್ ಇಂದ
Jump to navigation Jump to search

ಪಿರಿಯಾಪಟ್ಟಣದ ಕಾಳಗ - ಹಿಂದೆ ಒಂದು ಕಾಲದಲ್ಲಿ ಸ್ವತಂತ್ರ ಪಾಳೆಯ ಪಟ್ಟಾಗಿ ಮೆರೆದ ಪಿರಿಯಾಪಟ್ಟಣ ಮೈಸೂರು ಅರಸ ಕಂಠೀರವ ನರಸರಾಜರ ಕಾಲದಲ್ಲಿ ಮೈಸೂರು ಆಳ್ವಿಕೆಗೆ ಸೇರಿದ ಸಂದರ್ಭವನ್ನು ವರ್ಣಿಸುವ ಜನಪದ ಕಥನಕಾವ್ಯ. ಈ ಕಾವ್ಯದ ದಾಖಲೆಗಳಿಗೂ ಐತಿಹಾಸಿಕ ದಾಖಲೆಗಳಿಗೂ ಹೊಂದಾಣಿಕೆ ಇಲ್ಲ. ಪಿರಿಯಾಪಟ್ಟಣದ ಕಾಳಗ ಎನ್ನುವ ಜನಪದ ಕಾವ್ಯದ ಪ್ರಕಾರ ಪಿರಿಯಾಪಟ್ಟಣಕ್ಕೆ ದಂಡೆತ್ತಿ ಹೋದ ವೀರ ಒಬ್ಬ ದಳವಾಯಿ. ಅಲ್ಲಿ ಅಂದು ರಾಜನಾಗಿದ್ದವ ವೀರರಾಜ. ರೈಸ್ ಮತ್ತು ಸಿ. ಹಯವದನರಾಯರ ಗೆಜೆಟಿಯರ್ ಪ್ರಕಾರವೂ ರಾಜ ವೀರರಾಜನೇ. ಕಂಠೀರವ ನರಸರಾಜೇಂದ್ರ ವಿಜಯದ ಪ್ರಕಾರ ಈ ದಳಪತಿ ನಂಜರಾಜ ; ಪಿರಿಯಾಪಟ್ಟಣದ ರಾಜ ನಂಜುಂಡರಾಜ. ಕಾವ್ಯದ ಕಥೆಯ ಒಟ್ಟು ಅಧ್ಯಯನದಿಂದ ಇಲ್ಲಿ ಬರುವ ದಳವಾಯಿ ಕಂಠೀರವ ನರಸರಾಜರಿಗೆ ಒಂದು ರೀತಿಯಲ್ಲಿ ಸಂಬಂಧಿಯಾಗಿರಬೇಕೆಂದೂ ವೀರರಾಜನಿಗೆ ನೇರ ಸಂಬಂಧಿಯಾಗಿದ್ದಾನೆಂದೂ ತಿಳಿಯುತ್ತದೆ. ಅಂತೂ ಐತಿಹಾಸಿಕ ದಾಖಲೆಯನ್ನು ನಿರ್ದಿಷ್ಟವಾಗಿ ಗುರುತಿಸುವುದು ಅಷ್ಟು ಸುಲಭವೆನಿಸದು.

ಕಾಳಗ ಕಥೆಯನ್ನು ಹಲವು ವೃತ್ತಿ ಗಾಯಕರು ಹಾಡುತ್ತಾರೆ. ಅವರಲ್ಲಿ ಮುಖ್ಯರೆಂದರೆ ನೀಲಗಾರರು ಮತ್ತು ಕಂಸಾಳೆಯವರು. ಇವರು ಹೆಚ್ಚಾಗಿ ಮೈಸೂರು ಜಿಲ್ಲೆಯಲ್ಲಿ ಕಂಡುಬರುತ್ತಾರೆ. ಅದರಂತೆಯೇ ಈ ಕಾವ್ಯವೂ ಹೆಚ್ಚು ಕಡಿಮೆ ಮೈಸೂರು ಜಿಲ್ಲೆಗೆ ಸೀಮಿತವಾಗಿದೆ. ಹಾಡುಗಾರರೂ ಕಥೆಯಲ್ಲಿ ರಾಜಮನೆತನದ ಬಗ್ಗೆ ಹೆಚ್ಚಿನ ಒಲವನ್ನು ತೋರಿಸಿರುವಂತಿದೆ. ಮೈಸೂರು ಜಿಲ್ಲೆಯಲ್ಲಿ ವಿರಳವಾಗಿ ಕಾಣುವ ಕಲ್ಗಿ-ತುರಾಯಿ ಸಂಪ್ರದಾಯದ ಜನರೂ ಈ ಕಥೆಯನ್ನು ಹಾಡುವುದುಂಟು. ಅವರು ಹಾಡುವ ಕಥೆ ಮೂಲಕಥೆಯ ಸವಕಲು ರೂಪ. ನೀಲಗಾರರ ಹಾಡಿಕೆಗೆ ತಂಬೂರಿ ಶುೃತಿ ಇರುತ್ತದೆ. ಇದರಿಂದಾಗಿ ತಂಬೂರಿಯ ಶ್ರುತಿಯಲ್ಲಿ ಕಥೆಗೆ ಒಂದು ಜ್ವಲಂತ ರಮ್ಯ ವಾತಾವರಣ ಏರ್ಪಡುತ್ತದೆ.

ಕರಾಕೃ, ಸ.ಚ.ಮಹದೇವನಾಯಕ, ಡಿ. ಲಿಂಗಯ್ಯ ಮುಂತಾದ ಅನೇಕರು ಈ ಕಥನ ಕಾವ್ಯವನ್ನು ಸಂಗ್ರಹಿಸಿದ್ದಾರೆ. ಇವುಗಳಲ್ಲಿ ಡಾ. ಜೀ.ಶಂ.ಪ. ಅವರು ಸಂಗ್ರಹಿಸಿರುವ ಕೃತಿ ಪೂರ್ಣ ಸ್ವರೂಪದ್ದು. ಇಲ್ಲಿಯ ನಾಯಕ ದಳವಾಯಿ, ಪಿರಿಯಾಪಟ್ಟಣದ ವೀರರಾಜನ ಹಿರಿಯ ರಾಣಿಯ ಸೋದರ. ತನ್ನ ಅಕ್ಕನ ಮಗಳು ಅರ್ಥಾತ್ ವೀರರಾಜನ ಹಿರಿಯ ಹೆಂಡತಿಯ ಮಗಳನ್ನು ವೀರರಾಜ ಮೋಹಿಸುತ್ತಾನೆ. ರಾಜ ತನ್ನ ಸ್ವಂತ ಮಗಳನ್ನೇ ಪ್ರೀತಿಸಿದ್ದಕ್ಕಾಗಿ ಕುಪಿತಗೊಂಡ ದಳವಾಯಿ ಪಿರಿಯಾಪಟ್ಟಣದ ಮೇಲೆ ಎರಗುತ್ತಾನೆ. ಹಲವು ತಿಂಗಳು ಅತಿ ಪರಾಕ್ರಮದಿಂದ ಯುದ್ಧ ಮಾಡುತ್ತಾನೆ. ವೀರರಾಜನ ಸಾವಿನ ಅನಂತರ ಅವನ ರಾಣಿಯರಲ್ಲಿ ಒಬ್ಬಳಿಗೆ ಪಟ್ಟ ಕಟ್ಟಲು ಪ್ರಯತ್ನಿಸುತ್ತಾನೆ. ಆದರೆ ವೀರರಾಜ ತಾನು ಸಾಯುವ ಮೊದಲು ತನ್ನ ಹೆಂಡತಿಯರನ್ನೆಲ್ಲ ಕೊಂದು ಸತ್ತಿರುತ್ತಾನೆ. ಈ ಕಥೆ ನೈಜವಾದ ಯುದ್ಧದ ವೈಖರಿಯನ್ನು ವೀರ್ಯವತ್ತಾಗಿ ವರ್ಣಿಸುತ್ತದೆ. ನಾಯಕನಿಗಿಂತ ಹೆಚ್ಚಾಗಿ ಪ್ರತಿನಾಯಕನ ಶೌರ್ಯ ಪ್ರದರ್ಶನಕ್ಕೆ ಹೆಚ್ಚಿನ ಅವಕಾóಶವನ್ನು ಕೊಡಲಾಗಿದೆ. ಹೀಗೆ ವಾಸ್ತವಾಂಶಗಳಿಗೆ ಕಾವ್ಯಾತ್ಮಕ ವೈಭವ ಪ್ರಾಪ್ತವಾಗಿರುವುದರಿಂದಲೂ ಜನಪದ ಕಥನಕಾವ್ಯದ ಸಾಂಪ್ರದಾಯಿಕ ಚೌಕಟ್ಟು ಸ್ವಲ್ಪ ಮಟ್ಟಿಗೆ ಸಡಿಲಗೊಂಡು ಕಥೆ ಅದರ ನೈಜ ಪರಿಸರದಲ್ಲಿ ಬೆಳೆಯುವುದಕ್ಕೆ ಅವಕಾಶ ದೊರೆತಿರುವುದರಿಂದಲೂ ಇದೊಂದು ಒಳ್ಳೆಯ ಕಾವ್ಯವಾಗಿ ರೂಪುಗೊಳ್ಳಲು ಸಾಧ್ಯವಾಗಿದೆ. (ಎಚ್.ಎಸ್.ಆರ್.ಜೆ.)