ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪುಂಸವನ

ವಿಕಿಸೋರ್ಸ್ದಿಂದ

ಪುಂಸವನ - ಈ ಪದ ಅಥರ್ವವೇದದಲ್ಲಿ ಸಿಕ್ಕುತ್ತದೆ. ಇದಕ್ಕೆ ಅರ್ಥ ಗಂಡುಶಿಶುವನ್ನು ಪಡೆಯುವುದು ಎಂದಾಗುತ್ತದೆ. ಶಮೀ ವೃಕ್ಷದ ಮೇಲೆ ಅಶ್ವತ್ಥ ವೃಕ್ಷವಿದೆ. ಅದರಲ್ಲಿ ಪುತ್ರ ಜನಿಸುತ್ತಾನೆ ಎಂಬ ವಾಕ್ಯ ಇದೆ. ಅಶ್ವಲಾಯನ (ನೋಡಿ- ಆಶ್ವಲಾಯನ) ಗೃಹ್ಯಸೂತ್ರದಲ್ಲಿ ಪುಂಸವನ ಸಂಸ್ಕಾರವನ್ನು ವರ್ಣಿಸಲಾಗಿದೆ. ಪತ್ನಿ ಪುನರ್ವಸು ನಕ್ಷತ್ರದಲ್ಲಿ ಉಪವಾಸ ವೃತವನ್ನು ಆಚರಿಸಿದ. ಅನಂತರ ಗರ್ಭದ ಮೂರನೆಯ ಮಾಸದಲ್ಲಿ, ಪುಷ್ಯ ನಕ್ಷತ್ರದಲ್ಲಿ, ತನ್ನದೇ ವರ್ಣದ ಕರುವನ್ನು ಹೊಂದಿರುವ ಹಸುವಿನ ಮೂರು ಬೊಗಸೆ ಮೊಸರನ್ನು ಕುಡಿಯಬೇಕು. ಒಂದೊಂದು ಬೊಗಸೆಯಲ್ಲೂ ಎರಡೆರಡು ಹುರಳಿಕಾಳು, ಒಂದೊಂದು ಬಾರ್ಲಿ ಕಾಳು ಹಾಕಿರಬೇಕು. ಒಂದೊಂದು ಸಲ ಕುಡಿಯುವಾಗಲೂ ಏನು ಕುಡಿಯುತ್ತೀ? ಎಂದು ಪತಿ ಪ್ರಶ್ನಿಸಬೇಕು. ಪತ್ನಿ ಪುಂಸವನವನ್ನು ಕುಡಿಯುತ್ತೇನೆ ಎಂದು ಉತ್ತರಿಸಬೇಕು. ಕೆಲವು ಗೃಹ್ಯಸೂತ್ರಗಳು ಸೀಮಂತವಾದ ಅನಂತರ ಪುಂಸವನ ಮಾಡಬೇಕೆಂದು ಹೇಳಿವೆ. ಮಾಸ ನಕ್ಷತ್ರಗಳ ವಿಷಯದಲ್ಲಿಯೂ ಭಿನ್ನಾಭಿಪ್ರಾಯಗಳಿವೆ. ಎರಡನೆಯ ಮೂರನೆಯ ಏಳು ಎಂಟನೆಯ ಮಾಸಗಳನ್ನು ಸೂಚಿಸಿರುವುದೂ ಉಂಟು. ಎಲ್ಲ ಗೃಹ್ಯಸೂತ್ರಗಳಲ್ಲಿಯೂ ಮುಖ್ಯಾಂಶ ಒಂದೇ ರೀತಿ ಇದೆ. ಒಬ್ಬ ಕನ್ಯೆ ಕಲ್ಲಿನಲ್ಲಿ ಅರೆದು ತೆಗೆದ ನ್ಯಗ್ರೋಧವೃಕ್ಷದ ಚಿಗುರಿನ ಮತ್ತು ಹಣ್ಣಿನ ರಸವನ್ನು ಗರ್ಭಿಣಿಯ ಬಲ ನಾಸಿಕ ರಂಧ್ರದಲ್ಲಿ ಪತಿಯಾದವ ಮಂತ್ರೋಚ್ಚಾರಣೆ ಸಹಿತ ಹಾಕಬೇಕೆಂದೂ ಹೇಳಿದೆ. ಪುಂಸವನದಲ್ಲಿ ಗಂಡುಶಿಶುವಿನ ಜನನದ ಅಂಶವಷ್ಟೇ ಅಲ್ಲದೆ ವೈದ್ಯ ಶಾಸ್ತ್ರಕ್ಕೆ ಸಂಬಂಧಿಸಿದ ಅಂಶವೂ ಮತಧರ್ಮಕ್ಕೆ ಸಂಬಂಧಪಟ್ಟ ಹೋಮದ ಅಂಶವೂ ಸೇರಿಕೊಂಡಿವೆ.

ಮಗುವು ಜನಿಸುವುದಕ್ಕೆ ಹಿಂದೆಯೂ ಅಂದರೆ ಅದು ತಾಯಿಯ ಗರ್ಭವನ್ನು ಪ್ರವೇಶಿಸಿದ ಕ್ಷಣದಿಂದ ಅದರ ಗುಣಸ್ವಭಾವಗಳು ವಿಕಾಸ ಹೊಂದುತ್ತ ಇರುತ್ತವೆ ಎಂಬ ಅಭಿಪ್ರಾಯವಿದೆ. ಗರ್ಭದಾನ ಸಂಸ್ಕಾರಕ್ಕೂ ಪುಂಸವನ, ಸೀಮಂತ ಸಂಸ್ಕಾರಗಳಿಗೂ ಪ್ರಾಮುಖ್ಯ ಬಂದಿರುವುದು ಈ ದೃಷ್ಟಿಯಿಂದ. ಶಿಶುವಿನ ಶಾರೀರಕ ವಿಕಾಸದೊಂದಿಗೇ ಮಾನಸಿಕ ವಿಕಾಸವೂ ಆಗುತ್ತದೆ. ಮಗುವಿನ ಆತ್ಮೋನ್ನತಿಯೂ ಅಷ್ಟೇ ಮುಖ್ಯವೆಂದು ಸಂಸ್ಕಾರಗಳು ಸೂಚಿಸುತ್ತವೆ. (ಎಸ್.ಎಸ್.ಆರ್.)