ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪೊಟ್ಟೆಕ್ಕಾಟ್, ಎಸ್ ಕೆ

ವಿಕಿಸೋರ್ಸ್ದಿಂದ

ಪೊಟ್ಟೆಕ್ಕಾಟ್, ಎಸ್ ಕೆ 1913-1982. ಮಲೆಯಾಳಂ ಕಾದಂಬರಿಕಾರ. ಪ್ರವಾಸ ಸಾಹಿತಿ, ಕವಿ, ಕಥೆಗಾರ. ಜ್ಞಾನಪೀಠ ಪ್ರಶಸ್ತಿ ವಿಜೇತ. ಇವರ ಪೂರ್ಣ ಹೆಸರು ಶಂಕರನ್‍ಕುಟ್ಟಿ ಪೊಟ್ಟೆಕಾಟ್. ತಂದೆ ತಾಯಿ ಕುಂಞÂರಾಮನ್ ಮತ್ತು ಕುಟ್ಟೂಲಿ, ಹುಟ್ಟಿದ್ದು ಕಲ್ಲಿಕೋಟೆಯಲ್ಲಿ. ವಿದ್ಯಾಭ್ಯಾಸ ಅಲ್ಲಿನ ಸಾಮೂದರಿ ಕಾಲೇಜಿನಲ್ಲಿ. ಗುಜರಾತಿ ಶಾಲೆಯಲ್ಲಿ ಕೆಲಕಾಲ ಅಧ್ಯಾಪಕರಾಗಿದ್ದರು. ಬಳಿಕ ಮುಂಬಯಿ ಸೇರಿ ಹಲವು ಉದ್ಯೋಗಗಳಲ್ಲಿ ನಿರತರಾದರು. ಉತ್ತರ ಭಾರತ ಕಾಶ್ಮೀರಗಳ ಪ್ರವಾಸ ಮಾಡಿಬಂದರು. 1945 ರಿಂದ ಸಾಹಿತ್ಯವೇ ಇವರ ಮುಖ್ಯ ವೃತ್ತಿ ಆಯಿತು. ಆಗಲೇ ಒಂದೂವರೆ ವರ್ಷಗಳ ಕಾಲ ಆಫ್ರಿಕ, ಇಟಲಿ, ಜರ್ಮನಿ, ಫ್ರಾನ್ಸ್, ಇಂಗ್ಲೆಂಡುಗಳಲ್ಲಿ ಪ್ರವಾಸ ಮಾಡಿ ಆ ದೇಶಗಳ ಜನಜೀವನವನ್ನು ಕುರಿತಂತೆ ಪ್ರವಾಸ ವಿವರಣೆಗಳನ್ನು ಬರೆದರು.

1952ರಲ್ಲಿ ಜಯವಲ್ಲಿಯೊಡನೆ ವಿವಾಹ ನೆರವೇರಿತು. ಫಿನ್‍ಲೆಂಡ್, ಸೋವಿಯತ್ ದೇಶ, ಜೆಕೋಸ್ಲಾವಾಕಿಯಾಗಳಲ್ಲಿ ಪ್ರವಾಸ ಮಾಡಿದರು. 1955ರಲ್ಲಿ ಪತ್ನಿ ಸಮೇತ ಮಲಯ, ಶ್ರೀಲಂಕಾ, ಸಿಂಗಾಪುರ, ಇಂಡೋನೇಷ್ಯಗಳಿಗೆ ಭೇಟಿ ನೀಡಿದರು. 1957ರಲ್ಲಿ ತಲಚೇರಿಯಿಂದ ಲೋಕಸಭೆಗೆ ಸ್ವತಂತ್ರ ಉಮೇದುವಾರನಾಗಿ ಸ್ಪರ್ಧಿಸಿ ಸೋತರು. 1962ರಲ್ಲಿ ಅಲ್ಲೇ ಮತ್ತೆ ಸ್ಪರ್ಧಿಸಿ ಗೆದ್ದರು. ಐದು ವರ್ಷ ಲೋಕಸಭಾಧ್ಯಕ್ಷರಾಗಿದ್ದರು.

ಇವರ ಪ್ರಥಮ ಕಾದಂಬರಿ ನಾಡನ್ ಪ್ರೇಮಂ ಪ್ರಕಟವಾದದ್ದು 1939ರಲ್ಲಿ ಇವರು ತಮ್ಮ ಬರವಣಿಗೆಯಲ್ಲಿ ಪುರೋಗಾಮಿ ದೃಷ್ಟಿ ಮೂಡಿಸಿದರು. ಅದುವರೆಗೂ ಉಪೇಕ್ಷೆಗೊಂಡಿದ್ದ ಶ್ರೀಸಾಮಾನ್ಯನ ಬದುಕು ಬವಣೆಗೆ ವಿಶೇಷ ಮಹತ್ತ್ವ ನೀಡಿದರು. ಇವರು ಸುಮಾರು 300 ಕಥೆಗಳನ್ನು ಏಳು ಕಾದಂಬರಿಗಳನ್ನು ಹಾಗೂ ಹದಿನೈದು ಪ್ರವಾಸ ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ. ಪ್ರವಾಸ ಸಾಹಿತ್ಯಕ್ಕೆ ಇವರ ಕಾಣಿಕೆ ಅಪಾರವಾದದ್ದು.

ಕೇರಳ ರಾಜ್ಯ ಸಾಹಿತ್ಯ ಅಕಾಡೆಮಿಯ ಕಾರ್ಯಸಮಿತಿ ಸದಸ್ಯರಾಗಿ ಕಲಾ-ಸಾಂಸ್ಕøತಿಕ ರಂಗಗಳಲ್ಲಿ ಸಕ್ರಿಯ ಪಾತ್ರ ವಹಿಸಿದರು. ಅಸಂಖ್ಯ ಕಥೆ, ಕಾದಂಬರಿಗಳನ್ನು ಬರೆದರು. ಬಾಲಿದ್ವೀಪಂ, ಕಾಪ್ಪಿರಿಗಳುಡೆ ನಾಟ್ಟೆಲ್, ಕಾಶ್ಮೀರ್, ನೈಲ್ ಡೈರಿ-ಎಂದೇ ಪ್ರವಾಸ ವಿವರಣೆಗಳು, ರಾಜಮಲ್ಲಿ, ಏಳಿಂಪಾಲ, ಪುಳ್ಳಿಮಾನ್, ಚಂದ್ರಕಾಂತಂ ಎಂಬೀ ಕಥಾಸಂಕಲನಗಳು, ವಿಷಕನ್ಯಕ, ತೆರುವಿಂಡೆ ಕಥೆ, ಮೂಡು ಪಡಂ, ನಾಡನ್‍ಪ್ರೇವಮಂ, ಕರಾಂಬು ಮೊದಲಾದ ಕಾದಂಬರಿಗಳು, ಸಂಚಾರಿಯುಡೆ ಗೀತಙಳ್, ಪ್ರೇಮಶಿಲ್ಪಿ ಎಂಬೀ ಕವಿತಾ ಸಂಗ್ರಹಗಳು-ಇವರ ಕೃತಿಗಳಲ್ಲಿ ಕೆಲವು ಮುಖ್ಯವಾದವು. 1980ರ ಜ್ಞಾನಪೀಠ ಪ್ರಶಸ್ತಿ ಇವರ ಒರು ದೇಶತ್ತಿಂಡೆ ಕಥಾ (ಒಂದು ಊರಿನ ಕಥೆ) ಎಂಬ ಕಾದಂಬರಿಗೆ ಲಭಿಸಿದೆ. ಇದು ಬಹುತೇಕ ವೊಟ್ಟೆಕ್ಕಾಟರ ಆತ್ಮವೃತ್ತ, ಎನ್ನಲಾಗಿದೆ. ಇದೇ ಕೃತಿ 1972ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನು ಗಳಿಸಿತು. 1982 ಆಗಸ್ಟ್ 6 ರಂದು ನಿಧನರಾದರು. (ಬಿ.ಕೆ.ಟಿ.) ಪರಿಷ್ಕರಣೆ: ಶ್ರೀ ಫಕೀರ್ ಮಹಮ್ಮದ್ ಕಟ್ಪಾಡಿ