ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪೊಟ್ಯಾಶ್

ವಿಕಿಸೋರ್ಸ್ದಿಂದ

ಪೊಟ್ಯಾಶ್ - ಪೊಟ್ಯಾಸಿಯಮ್ ಕಾರ್ಬೊನೇಟ್ K2CO3. ಮುತ್ತಿನ ಭಸ್ಮ. ಹುಳಿಯ ಲವಣ ಎಂಬ ಹೆಸರುಗಳೂ ಇವೆ. ಸಸ್ಯಗಳು ತಮ್ಮ ಬೆಳೆವಣಿಗೆಗೆ ಅವಶ್ಯವಿರುವ ಪೊಟ್ಯಾಸಿಯಮ್ ಲವಣಗಳನ್ನು ಭೂಮಿಯಿಂದ ಹೀರಿಕೊಳ್ಳುತ್ತವೆ. ಎಂದೇ ಸಸ್ಯಗಳ ಜ್ವಲನಾನಂತರ ಉಳಿಯುವ ಭಸ್ಮದಲ್ಲಿ ಶೇಕಡಾ 15 ರಷ್ಟು ಪೊಟ್ಯಾಶ್ ಇರುತ್ತದೆ. ಪೊಟ್ಯಾಸಿಯಮ್ ಕ್ಲೋರೈಡ್ (KCl) ಎಂಬ ಲವಣದ ದಟ್ಟ ದ್ರಾವಣವನ್ನು ವಿದ್ಯುದ್ವಿಶ್ಲೇಷಣೆಗೆ ಒಳಪಡಿಸುವುದರಿಂದ ಪೊಟ್ಯಾಸಿಯಮ್ ಹೈಡ್ರಾಕ್ಸೈಡ್ (KOH) ಎಂಬ ಪ್ರತ್ಯಾಮ್ಲದ ದ್ರಾವಣ ದೊರೆಯುತ್ತದೆ. ಇದರ ಮೂಲಕ ವಿಶೇಷ ಗಾತ್ರದಲ್ಲಿ ಕಾರ್ಬನ್ ಡೈಆಕ್ಸೈಡನ್ನು ಹಾಯಿಸಿದಾಗ ಪೊಟ್ಯಾಸಿಯಮ್ ಬೈಕಾರ್ಬೊನೇಟ್ (KHCO3) ಎಂಬ ದ್ರಾವಣ ಸಿದ್ಧವಾಗುತ್ತದೆ. ಇದನ್ನು ಬಾಷ್ಪೀಭವನ ಕ್ರಿಯೆಗೆ ಒಳಪಡಿಸಿದ ಬಳಿಕ ದೊರೆಯುವ ಪುಡಿಯನ್ನು ವಿಶೇಷವಾಗಿ ಕಾಸಿದಾಗ ಪೊಟ್ಯಾಶ್ ತಯಾರಾಗುತ್ತದೆ.

ಗುಣಧರ್ಮಗಳು: ಪೊಟ್ಯಾಶ್ ಬಿಳಿಪುಡಿ ನೀರಿಗಿಂತ 2.29 ಪಟ್ಟು ಭಾರವಾಗಿದೆ. ವಾಯುವಿನಲ್ಲಿಯ ಆದ್ರ್ರತೆಯನ್ನು ಹೀರಿಕೊಳ್ಳಬಲ್ಲದು. ಇದರ ದ್ರವನ ಬಿಂದು 8910 ಸೆ. ನೀರಿನಲ್ಲಿ ಸುಲಭವಾಗಿ ವಿಲೀನವಾಗುತ್ತದೆ. ಶುದ್ಧ ಮದ್ಯಾರ್ಕದಲ್ಲಿ ಮಾತ್ರ ವಿಲೀನವಾಗದು. ಇದರ ದ್ರಾವಣವನ್ನು ಸ್ಫಟಿಕಭವನ ಕ್ರಿಯೆಗೆ ಗುರಿಪಡಿಸಿದರೆ ಜಲಾಂಶಯುಕ್ತ ಸ್ಫಟಿಕಗಳು ದೊರೆಯುತ್ತವೆ. ಇವುಗಳಲ್ಲಿರುವ ಜಲಾಂಶ ಪ್ರಮಾಣ ವಿಭಿನ್ನ ಉಷ್ಣತೆಗಳಲ್ಲಿ ವಿಭಿನ್ನವಾಗಿರುತ್ತದೆ. ಪೊಟ್ಯಾಶಿನ ದ್ರಾವಣಕ್ಕೆ ಪ್ರತ್ಯಾಮ್ಲೀಯ ಗುಣವಿದೆ. ಆಮ್ಲಗಳೊಂದಿಗೆ ವರ್ತಿಸಿ ಆಯಾ ಲವಣಗಳನ್ನೂ ಜೊತೆಗೆ ಕಾರ್ಬನ್ ಡೈಆಕ್ಸೈಡನ್ನೂ ಕೊಡುತ್ತದೆ. ಉಪಯೋಗಗಳು: ಕಾರ್ಬನಿಕ ವರ್ಗಕ್ಕೆ ಸೇರಿದ ಕೆಲವು ಸಂಯುಕ್ತಗಳನ್ನು ಜಲರಹಿತವಾಗಿ ಮಾಡಲು, ಮೃದು ಸಾಬೂನು ಹಾಗೂ ಕಠಿಣ ಗಾಜುಗಳನ್ನು ನಿರ್ಮಿಸಲು ಮತ್ತು ಪೊಟ್ಯಾಸಿಯಮ್ಮಿನ ಇತರ ಲವಣಗಳನ್ನು ತಯಾರಿಸಲು ಪೊಟ್ಯಾಶನ್ನು ವಿಶೇಷ ಪ್ರಮಾಣದಲ್ಲಿ ಉಪಯೋಗಿಸುತ್ತಾರೆ. ಅಲ್ಲದೆ, ಬಟ್ಟೆಗಳಿಗೆ ಬಣ್ಣ ಹಾಕುವ ಮದ್ಯಾರ್ಕ ತಯಾರಿಸುವ ಹಾಗೂ ತೊಗಲು ಹದಗೊಳಿಸುವ ಉದ್ಯೋಗಗಳಲ್ಲಿಯೂ ಇದರ ಬಳಕೆ ಉಂಟು. (ಎಂ.ಆರ್.ಜಿ.ಎ.)