ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪೊಯ್ಗೈ ಆಳ್ವಾರ್

ವಿಕಿಸೋರ್ಸ್ ಇಂದ
Jump to navigation Jump to search

ಆಳ್ವಾರುಗಳಲ್ಲಿ ಮೊಟ್ಟಮೊದಲಿಗರು. ಇವರ ಜನ್ಮಸ್ಥಳ ಕಾಂಚೀನಗರ. ಇವರ ಜನ್ಮದಿನೋತ್ಸವ ತುಲಾಮಾಸದ ಶ್ರವಣ ನಕ್ಷತ್ರದ ದಿವಸದಲ್ಲಿ ಜರುಗುತ್ತದೆ. ಆಳ್ವಾರುಗಳ ಚರಿತ್ರೆಯನ್ನು ಸಂಶೋಧಿಸಲು ಹೊರಟ ವಿದ್ವಾಂಸರಲ್ಲಿ ಕೆಲವರು ಇವರ ಕಾಲ ನಾಲ್ಕನೆಯ ಶತಮಾನದ ಆದಿಭಾಗವೆಂದೂ ಮತ್ತೆ ಕೆಲವರು ಏಳನೆಯ ಶತಮಾನದ ಆದಿಭಾಗವೆಂದೂ ಅಭಿಪ್ರಾಯಪಡುತ್ತಾರೆ. ಇವರ ಕುಲಗೋತ್ರಗಳು ಗೊತ್ತಿಲ್ಲ. ಪೊಯ್ ಎಂಬೊಂದು ಕೊಳದ ತಾವರೆ ಹೂವಿನಲ್ಲಿ ಈ ಮಗು ಇದ್ದುದನ್ನು ಸಾಕಿದವರು ಕಂಡದ್ದರಿಂದ ಈ ಆಳ್ವಾರರಿಗೆ ಪೊಯ್ಗೈ ಆಳ್ವಾರ್ ಅಥವಾ ಸರೋಯೋಗಿ ಎಂದೇ ಹೆಸರಾಯಿತೆಂಬ ಅಂಶ ಗುರುಪರಂಪರಾ ಪ್ರಭಾವ ಎಂಬ ಗ್ರಂಥದಿಂದ ತಿಳಿದುಬರುತ್ತದೆ. ಇವರಿಂದ ನಮಗೆ ಲಭ್ಯವಾಗಿರುವ ಪ್ರಬಂಧಕ್ಕೆ ಮೊದಲನೆಯ ತಿರುವಂದಾದಿ ಎಂದು ಹೆಸರು. ಇದರಲ್ಲಿ ನೂರು ಪಾಶುರಗಳು, ಎಂದರೆ ಬಿಡಿ ಪದ್ಯಗಳಿವೆ. ಅಂದಾದಿ ಎಂದರೆ ಒಂದು ಪದ್ಯದ ಕೊನೆಯ ಮಾತು ಮುಂದಿನ ಪದ್ಯದ ಮೊದಲ ಮಾತಾಗಿ ಇಡೀ ಪ್ರಬಂಧವೇ ಪೋಣಿಕೆಗೊಂಡಿರುವ ಪ್ರಬಂಧ. ಈ ನೂರು ಪದ್ಯಗಳೂ ತುಂಬ ಶ್ರಾವ್ಯವೂ ಭಾವಗರ್ಭಿತವೂ ಪ್ರತಿಭಾಪ್ರಚೋದಿತವೂ ಆಗಿವೆ. ಈ ಆಳ್ವಾರರು ಶ್ರೀಮನ್ಮಹಾವಿಷ್ಣುವಿನ ಪಾಂಚಜನ್ಯಾಂಶವೆಂದು ಪರಿಭಾವಿತರಾಗಿದ್ದಾರೆ.