ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪೋ, ಎಡ್ಗರ್ ಅಲನ್

ವಿಕಿಸೋರ್ಸ್ದಿಂದ
ಎಡ್ಗರ್ ಅಲನ್ ಪೋ : -

1809-1849. ಅಮೆರಿಕದ ಕವಿ. ಮತ್ತು ಕತೆಗಾರ. ಹುಟ್ಟಿದ್ದು ಬಾಸ್ಟನ್ನಿನಲ್ಲಿ. ಚಿಕ್ಕಂದಿನಲ್ಲೇ ತಾಯಿಯನ್ನು ಕಳೆದುಕೊಂಡು ಅನಾಥನಾದ ಈತನನ್ನು ಸ್ಕಾರ್ಟಿಷ್ ಮನೆತನದ ರಿಚ್ಮಂಡಿನ ಜಾನ್ ಅಲನ್ ದಂಪತಿಗಳು ಪ್ರೀತಿಯಿಂದ ಸಾಕಿ ಬೆಳೆಸಿದರು. 1815ರಲ್ಲಿ ಈ ದಂಪತಿಗಳು ಇಂಗ್ಲೆಂಡಿನಲ್ಲಿ ಐದು ವರ್ಷಗಳ ಕಾಲ ಇರಬೇಕಾಗಿ ಬಂದಾಗ ಪೋ ಅವರೊಟ್ಟಿಗೆ ಹೋದ. ಅಲ್ಲಿ ಈತನಿಗೆ ಒಳ್ಳೆಯ ವಿದ್ಯಾಭ್ಯಾಸ ದೊರಕಿತು. ಅನಂತರ ಈ ದಂಪತಿಗಳು ಅಮೆರಿಕೆಗೆ ಬಂದಾಗ ಈತ ವರ್ಜೀನಿಯ ವಿಶ್ವವಿದ್ಯಾನಿಲಯ ಸೇರಿ ವಿದ್ಯಾಭ್ಯಾಸ ಮುಂದುವರಿಸಿದ. ಅಲ್ಲಿ ಬುದ್ಧಿವಂತ ವಿದ್ಯಾರ್ಥಿ ಎನಿಸಿಕೊಂಡ. ಆದರೆ ಕೆಲವು ದುವ್ರ್ಯಸನಗಳಿಗೆ ಬಿದ್ದು ಈತ ವಿಪರೀತ ಸಾಲಸೋಲಗಳಿಗೆ ಸಿಲುಕಿ ಎಲ್ಲರಿಂದ ಅವಹೇಳನಕ್ಕೆ ಗುರಿಯಾದ. ಕೊನೆಗೊಂದು ದಿನ ವಿಶ್ವವಿದ್ಯಾಲಯದಿಂದಲೂ ಹೊರಗಟ್ಟಲ್ಪಟ್ಟ. ಇದೇ ಸಮಯದಲ್ಲಿ ತನ್ನ ಸಾಕು ತಂದೆಯೊಂದಿಗೆ ಜಗಳವಾಡಿಕೊಂಡು ಮನೆಯಿಂದಲೂ ಹೊರಗೆ ಬಂದ.

1927ರಲ್ಲಿ ಟಾಮರ್‍ಲೇನ್ ಆಂಡ್ ಅದರ್ ಪೊಯಮ್ಸ್ ಎಂಬ ಕವನ ಸಂಕಲನವನ್ನು ಪ್ರಕಟಿಸಿದ. ಜೀವನ ದುರ್ಭರವಾಗಿ ಅಮೆರಿಕೆಯ ಸೈನಿಕ ಖಾತೆಯಲ್ಲಿ ಸೇರಬೇಕೆಂದು ಬಯಸಿ ವೆಸ್ಟ್ ಪಾಯಿಂಟಿನ ಸೈನಿಕ ಶಾಲೆಗೆ ಸೇರಿಕೊಂಡ. 1927ರಲ್ಲಿ ಅಲ್ ಅರಾಫ್, ಟಾಮರ್‍ಲೇನ್ ಆಂಡ್ ಮೈನರ್ ಪೊಯಮ್ಸ್ ಎಂಬ ಕೃತಿಗಳನ್ನು ಪ್ರಕಟಿಸಿದ. ಕುಡಿತ ಹಾಗೂ ದುರ್ನಡತೆಗೆ ಬಿದ್ದು ಈತ ಸೈನಿಕ ಶಾಲೆಯ ಶಿಸ್ತನ್ನು ಪಾಲಿಸದೆ ಹೋದ ಪರಿಣಾಮವಾಗಿ ಶಾಲೆಯಿಂದ ಉಚ್ಚಾಟನೆಗೊಂಡ. ಮತ್ತೆ ಸಾಕು ತಂದೆಯ ಮನೆ ಸೇರಿದ ಈತ ತನ್ನ ಹದಗೆಟ್ಟ ಜೀವನದಿಂದಾಗಿ ಎಲ್ಲರಿಗೂ ಕಿರುಕುಳ ಕೊಟ್ಟ. ಆದರೆ 1833ರಲ್ಲಿ ಬರೆದ ಈತನ ಎಂ.ಎಸ್.ಫೌಂಡ್ ಇನ್ ಎ ಬಾಟಲ್ ಎಂಬ ಸಣ್ಣ ಕಥೆ ಕಥಾಸ್ಪರ್ಧೆಯಲ್ಲಿ ಬಹುಮಾನ ಪಡೆದು ಎಲ್ಲರ ಮೆಚ್ಚುಗೆಯನ್ನು ಗಳಿಸಿತು.

1836ರಲ್ಲಿ ವರ್ಜೀನಿಯ ಕ್ಲೆಮ್ ಎಂಬಾಕೆಯನ್ನು ಮದುವೆಯಾದ. ಈತನ ದುರ್ಗುಣಗಳು ಏನೇ ಇದ್ದರೂ ಆಕೆ ಸಾಯುವತನಕವೂ ಈತನನ್ನು ಗಾಢವಾಗಿ ಪ್ರೀತಿಸಿದಳು. ಆಕೆ ಸತ್ತ ಮೇಲೆ (1847) ದುಃಖಿತನಾದ ಈತ ಅತಿಯಾಗಿ ಕುಡಿಯುವ ಅಭ್ಯಾಸ ಮಾಡಿಕೊಂಡು ತನ್ನ ಸಾವನ್ನು ತಾನೇ ತಂದುಕೊಂಡ. 1839-40ರ ಅವಧಿಯಲ್ಲಿ ಪೋ ದಿ ಜಂಟಲ್ ಮನ್ಸ್ ಮ್ಯಾಗಜೀನ್‍ನ ಸಂಪಾದಕನಾದ. ಈತನ ಹಲವಾರು ಉತ್ತಮ ಸಣ್ಣ ಕಥೆಗಳು ಪ್ರಕಟಗೊಂಡುವು. ಪ್ರತಿಭಾಶಾಲಿಯಾದ ಈತ ಬರೆದದ್ದು ಸ್ವಲ್ಪವೇ ಆದರೂ ಸೃಜನಾತ್ಮಕ ಗುಣಗಳಿಂದ ಕೂಡಿದ ಈತನ ಬರಹ ಗುಣಗ್ರಾಹಿಯಾಗಿದ್ದು ಎಲ್ಲರ ಮೆಚ್ಚುಗೆಯನ್ನು ಗಳಿಸಿತು. ಹುಟ್ಟು ಕವಿ ಮತ್ತು ಕತೆಗಾರನಾದ ಈತನ ಬರಹಗಳಿಗೆ ಸರಿಸಮಾನವಾದುದು ಆ ದಿನಗಳಲ್ಲಿ ಮತ್ತೊಂದಿಲ್ಲ ಎನಿಸಿತು. ಸಂಗೀತದ ಲಯ ಬೆರೆತ ಮಧುರವಾದ ಈತನ ಕವನಗಳು ಓದುಗರಿಗೆ ಮೋಡಿ ಹಾಕುವಂಥವು. ಟೇಲ್ಸ್ ಆಫ್ ದಿ ಗ್ರೋಟೆಸ್ಕ್ ಮತ್ತು ಅರಬಿಸ್ಕ್ (1840) ನಲ್ಲಿರುವ ಈತನ ಸಣ್ಣ ಕಥೆಗಳು ಪ್ರತಿಭಾಪೂರ್ಣವಾಗಿವೆ. ತಂತ್ರ, ವಸ್ತು, ಕಥಾಸಂವಿಧಾನ, ಶೈಲಿ ಮುಂತಾದುವುಗಳಲ್ಲಿ ಆ ಕಥೆಗಳು ಪರಿಪೂರ್ಣ ಎನಿಸಿವೆ. ದಿ ಗೋಲ್ಡ್ ಬಗ್ ಎಂಬ ಕಥೆ ಸಂಕೇತಾಕ್ಷರಗಳನ್ನು ಬಳಸಿ ಬರೆದ ಕಥೆಗಳಲ್ಲಿ ಮೊದಲನೆಯದೆನಿಸಿದೆ. ದಿ ಪರ್‍ಲೊಯಿನ್ಡ್ ಲೆಟರ್, ದಿ ಮಿಸ್ಟರಿ ಆಫ್ ಮೇರಿ ರೊಜೆಟ್, ದಿ ಮರ್ಡರ್ಸ್ ಇನ್ ದಿ ರೊ ಮೊರ್ಗ್ - ಇವು ಈತ ಬರೆದ ರಹಸ್ಯ ಕಥೆಗಳಲ್ಲಿ ಪ್ರಸಿದ್ಧವಾದವು. ಈತನನ್ನು ಆಧುನಿಕ ಪತ್ತೆದಾರಿ ಕಥೆಗಳ ಪ್ರವರ್ತಕ ಎಂದೂ ಕರೆಯಲಾಗಿದೆ.