ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪ್ರಗತಿಶೀಲ ಶಿಕ್ಷಣ

ವಿಕಿಸೋರ್ಸ್ದಿಂದ

ಪ್ರಗತಿಶೀಲ ಶಿಕ್ಷಣ - ಹತ್ತೊಂಬತ್ತನೆಯ ಶತಮಾನದ ಕೊನೆಯ ಪಾದದಲ್ಲಿ ಪ್ರಚಾರಕ್ಕೆ ಬಂದು ಈ ಶತಮಾನದ ಮೊದಲ ಪಾದದಲ್ಲೂ ಅಸ್ತಿತ್ವದಲ್ಲಿದ್ದು ಶಿಕ್ಷಣವನ್ನು ಹಲವು ಮುಖಗಳಲ್ಲಿ ಪ್ರಚೋದಿಸಿದ ಒಂದು ಚಳವಳಿ (ಪ್ರೊಗ್ರೆಸಿವ್ ಎಜುಕೇಷನ್), ಪ್ರಥಮತಃ ಇದು ಶಿಕ್ಷಣದಲ್ಲಿ ಹಿಂದಿನಿಂದಲೂ ಪ್ರಚಾರದಲ್ಲಿದ್ದ ಸಂಪ್ರದಾಯಬದ್ಧತೆಯನ್ನು ವಿರೋಧಿಸುತ್ತಿತ್ತು. ಯೂರೋಪಿನಲ್ಲಿ ಮೊದಲು ಆರಂಭವಾದ ಈ ಚಳುವಳಿ ಕ್ರಮಕ್ರಮವಾಗಿ ಅಮೆರಿಕಕ್ಕೂ ಹರಡಿತು. ಅಲ್ಲಿ ಪ್ರಚಾರದಲ್ಲಿದ್ದ ಜಾನ್ ಡ್ಯೂಯಿಯವರ ತತ್ವದೃಷ್ಟಿಯನ್ನು ತನ್ನಲ್ಲಿ ಸಮಾವೇಶ ಮಾಡಿಕೊಂಡು ಶಿಕ್ಷಣದಲ್ಲಿ ಲೋಕಸತ್ತಾದೃಷ್ಟಿ, ರಚನಾತ್ಮಕ ಚಟುವಟಿಕೆ ಉದ್ದೇಶಾರ್ಥ ಕಾರ್ಯಕ್ರಮ, ವಿದ್ಯಾರ್ಥಿಗಳ ನೈಜ ಜೀವನದ ಅವಶ್ಯಕತೆಗಳ ಪರಿಚಯ ಮತ್ತು ಪಾಠಶಾಲೆಗೂ ಅದು ಸ್ಥಾಪನೆಯಾಗಿರುವ ಸಮಾಜಕ್ಕೂ ನಿಕಟ ಸಂಪರ್ಕದ ಅಗತ್ಯ-ಇವೇ ಮುಂತಾದ ಅಂಶಗಳನ್ನು ಎತ್ತಿ ಹಿಡಿಯಿತು. ಈ ಶತಮಾನದ ಎರಡನೆಯ ದಶಕದ ಕೊನೆಯಲ್ಲಿ ಅಮೆರಿಕದಲ್ಲಿ ಪ್ರೊಗ್ರೆಸಿವ್ ಎಜುಕೇಷನ್ ಅಸೋಸಿಯೇಷನ್ ಎಂಬ ಸಂಸ್ಥೆಯೂ ಸ್ಥಾಪನೆಯಾಯಿತು. ಇದರ ಕಾರ್ಯಚಟುವಟಿಕೆಗಳು ಜನತೆಯ ಮೇಲೆ ಪ್ರಭಾವ ಬೀರಿದ್ದು ಕೊಂಚ ಕಾಲ ಮಾತ್ರ.

ಯಾವ ನೂತನ ಶಿಕ್ಷಣ ಪದ್ಧತಿಯೇ ಆಗಲಿ ಅದು ಆರಂಭದಲ್ಲಿ ಆಕರ್ಷಕವಾಗಿ ತೋರಿದರೂ ಅದು ಎಂದೆಂದಿಗೂ ಅದೇ ರೂಪದಲ್ಲಿ ಉಳಿಯಲಾರದು. ಅದರಲ್ಲಿರಬಹುದಾದ ನೂತನಾಂಶಗಳನ್ನು ಸಾಂಪ್ರದಾಯಿಕ ಶಿಕ್ಷಣ ಪದ್ಧತಿ ಅಳವಡಿಸಿಕೊಂಡು ಬಿಟ್ಟು ನೂತನ ಪದ್ಧತಿಯನ್ನು ಹಿಂಬದಿಗೆ ತಳ್ಳುತ್ತದೆ. ಜೊತೆಗೆ ಆ ನೂತನ ಅಂಶಗಳನ್ನು ಹೆಚ್ಚು ಯಶಸ್ವಿಯಾಗಿ ಬಳಸಿಕೊಂಡು ಹೆಚ್ಚು ಆಕರ್ಷಣೀಯವಾಗಿ ತೋರಬಲ್ಲ ಇತರ ಶಿಕ್ಷಣ ಪದ್ಧತಿಗಳೂ ಹುಟ್ಟಿಕೊಳ್ಳುತ್ತವೆ. ಈ ಶತಮಾನದ ಎರಡನೆಯ ಪಾದದಲ್ಲಿ ಪ್ರೊಗ್ರೆಸಿವ್ ಎಜುಕೇಷನ್ ಚಳವಳಿ ಹಿಂದೆ ಬಿದ್ದುದಕ್ಕೆ ಇದೇ ಕಾರಣ. (ಎನ್.ಎಸ್.ವಿ.)