ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪ್ರತಿಫಲ

ವಿಕಿಸೋರ್ಸ್ದಿಂದ

ಪ್ರತಿಫಲ - ಯಾವುದೇ ಒಪ್ಪಂದವಾಗಲು ಇಬ್ಬರು ಕಕ್ಷಿಗಳಿರುತ್ತಾರೆ. ಒಬ್ಬ ಕಕ್ಷಿ ಇನ್ನೊಬ್ಬನಿಗೆ ನೀಡಿದ ಇಚ್ಛೆಯಂತೆ ವಚನಕ್ಕೆ ಪ್ರತಿಯಾಗಿ ಆ ಇನ್ನೊಬ್ಬ ಕಕ್ಷಿ ಮೊದಲನೆಯ ಕಕ್ಷಿಯ (ಅಥವಾ ವಚನದಾತ) ಇಚ್ಛೆಗೆ ಅನುಗುಣವಾಗಿ ಏನಾದರೂ ಮಾಡಲು ಅಥವಾ ಮಾಡದಿರಲು ಒಪ್ಪುತ್ತಾನೆ. ಅವನ ಈ ಒಪ್ಪಿಗೆಯೇ ಮೊದಲನೆಯವನಿಗೆ- ಎಂದರೆ ವಚನದಾತನ ವಚನಕ್ಕೆ ಪ್ರತಿಫಲವೆನಿಸುತ್ತದೆ. (ಕನ್ಸಿಡರೇಷನ್). ಕಾನೂನು ರೀತಿಯಾಗಿ ಇಬ್ಬರೊಳಗೆ ಅಥವಾ ಹೆಚ್ಚು ಜನರೊಳಗೆ ಒಪ್ಪಂದ ಅಸ್ತಿತ್ವಕ್ಕೆ ಬಂದಾಗ ಅದರಲ್ಲಿ ಪ್ರತಿಫಲ ಬಹಳ ಮುಖ್ಯವಾದ ಪಾತ್ರವಹಿಸುತ್ತದೆ. ಎ ಎಂಬುವನು ಬಿ ಎಂಬವನಿಗೆ ಏನಾದರೂ ಒಂದು ಕೆಲಸವನ್ನು ಮಾಡಲು ಒಪ್ಪಿದರೆ ಎಯು ಬಿಯಿಂದ ಪ್ರತಿಯಾಗಿ ಏನನ್ನಾದರೂ ಬಯಸುವುದು ವಾಡಿಕೆ. ಅದರಿಂದ ಅವನಿಗೆ ಯಾವುದೊಂದು ಲಾಭ ಸಿಗದಿದ್ದರೆ ಅವನು ಒಪ್ಪಂದಕ್ಕೆ ಒಡಂಬಡಲಾರ. ಪ್ರತಿಯಾಗಿ ಎ ಬಯಸುವಂಥದನ್ನು ಪ್ರತಿಫಲ ಎಂದು ಕರೆಯಲಾಗುತ್ತದೆ. ವಚನವನ್ನು ಖರೀದಿಸುವಾಗ ಅಥವಾ ಕೊಳ್ಳುವಾಗ ಅದಕ್ಕೆ ಕೊಡುವ ಬೆಲೆಯೇ ಪ್ರತಿಫಲ. ಎ ಎಂಬುವನು ತನ್ನ ಕಾರನ್ನು ಬಿ ಎಂಬುವನಿಗೆ ಒಂದು ಸಾವಿರ ರೂಪಾಯಿಗಳಿಗೆ ಮಾರುತ್ತಾನೆ. ಇಲ್ಲಿ ಕಾರು ಮಾರಲು ಎ ನೀಡುವ ವಚನಕ್ಕೆ ಪ್ರತಿಯಾಗಿ ಬಿ ಕೊಡುವ ಹಣವೇ ಪ್ರತಿಫಲ.

ಪ್ರತಿಫಲ ಹಣದ ರೂಪದಲ್ಲೇ ಇರಬೇಕೆಂಬುದಿಲ್ಲ. ಅದು ಯಾವುದಾದರೂ ಹಕ್ಕು, ಹಿತಾಸಕ್ತಿ ಅಥವಾ ಲಾಭದ ರೂಪದಲ್ಲಿರಬಹುದು. ಅಥವಾ ಏನನ್ನಾದರೂ ಮಾಡದಿರುವುದು, ಮಾಡಿಕೊಳ್ಳುವುದು ಮುಂತಾದ ರೂಪದಲ್ಲೂ ಇರಬಹುದು. ಎ ಎಂಬುವನು ತನಗೆ ನೂರು ರೂಪಾಯಿ ಕೊಟ್ಟೆರೆ ಬಿ ಯ ಮೇಲೆ ವ್ಯಾಜ್ಯ ದಾಖಲು ಮಾಡುವುದಿಲ್ಲವೆಂದು ಒಪ್ಪುವುದಿದ್ದರೆ ಅಲ್ಲಿ ಅವನ ಮಾಡದಿರುವಿಕೆ ಅಥವಾ ವಿಮುಖತೆಯೇ ಪ್ರತಿಫಲವೆನಿಸುತ್ತದೆ.

ಪ್ರತಿಫಲವಿಲ್ಲದ ಒಪ್ಪಂದ ನಿರರ್ಥಕವಾಗುತ್ತದೆ. ಶೂನ್ಯವಾಗುತ್ತದೆ. ಆದ್ದರಿಂದ ಪ್ರತಿಯೊಂದು ಒಪ್ಪಂದಕ್ಕೂ ಪ್ರತಿಫಲವಿರಲೇಬೇಕು. ಪ್ರತಿಫಲವಿಲ್ಲದ ಒಪ್ಪಂದ ಕರಾರು ಆಗಲಾರದು. ಪ್ರತಿಫಲ ಭೂತಕಾಲದ್ದಿರಬಹುದು; ವರ್ತಮಾನ ಅಥವಾ ಭವಿಷ್ಯತ್‍ಕಾಲದ್ದೂ ಆಗಿರಬಹುದು. ಪ್ರತಿಫಲವನ್ನು ಒಪ್ಪಂದದ ಅಸ್ತಿತ್ವಕ್ಕೆ ಮೊದಲೇ ಪ್ರತಿಫಲವನ್ನು ಕೊಟ್ಟಿದ್ದಲ್ಲಿ ಅದು ಭೂತಕಾಲದ ಪ್ರತಿಫಲ. ಉದಾಹರಣಗೆ ಎ ಎಂಬವನು ಬಿ ಎಂಬುವನಲ್ಲಿ ಕೆಲಸ ಮಾಡಿರುತ್ತಾನೆ. ಎ ಮಾಡಿದ ಕೆಲಸಕ್ಕೆ ಸ್ವಲ್ಪ ಕಾಲದ ಅನಂತರ ಪರಿಹಾರ ಕೊಡಲು ಬಿ ಒಪ್ಪುತ್ತಾನೆ. ಇಲ್ಲಿ ಎ ಮಾಡಿದ ಸೇವೆ ಭೂತಕಾಲದ್ದು. ಒಪ್ಪಂದ ಅಸ್ತಿತ್ವಕ್ಕೆ ಬರುವಾಗಲೇ ಪ್ರತಿಫಲಕೊಟ್ಟರೆ ಆ ಪ್ರತಿಫಲವರ್ತಮಾನಕಾಲದ್ದಾಗುತ್ತದೆ. ಯಾವುದಾದರೂ ಸರಕನ್ನು ಖರೀದಿಸುವ ಸಮಯದಲ್ಲೇ ಬೆಲೆಯನ್ನು ಕೊಟ್ಟರೆ ಅದು ವರ್ತಮಾನಕಾಲದ ಪ್ರತಿಫಲ. ಎ ಎಂಬುವನು ತನ್ನ ಸರಕನ್ನು ಒಂದು ತಿಂಗಳ ಅನಂತರ ಬಿಗೆ ಸರಬರಾಜು ಮಾಡಲು ಒಪ್ಪುತ್ತಾನೆ. ಅದಕ್ಕಾಗಿ ಅಂದಿನಿಂದ ಎರಡು ತಿಂಗಳ ಅನಂತರ ಎಗೆ ಹಣ ಕೊಡುವುದಾಗಿ ಬಿ ಒಪ್ಪುತ್ತಾನೆ. ಇಲ್ಲಿ ಪ್ರತಿಫಲ ಭವಿಷ್ಯತ್ ಕಾಲದಲ್ಲಿ ಸ್ಪಷ್ಟರೂಪವನ್ನು ಪಡೆಯುತ್ತದಾದ್ದರಿಂದ ಅದು ಭವಿಷ್ಯತ್‍ಕಾಲದ ಪ್ರತಿಫಲ.

ಒಂದು ವಚನಕ್ಕೆ ಪ್ರತಿಫಲ ಯಥಾಯೋಗ್ಯವಾದ್ದಾಗಿರಲೇಬೇಕೆಂಬ ನಿಯಮವೇನೂ ಇಲ್ಲ. ಒಪ್ಪಂದಕ್ಕೆ ಪ್ರತಿಫಲವಿರಲೇಬೇಕೆಂಬ ಕಡ್ಡಾಯವುಂಟು ಅಷ್ಟೆ. ಉದಾಹರಣೆಗೆ ಒಂದು ಸಾವಿರ ರೂಪಾಯಿ ಬೆಲೆಯ ಒಂದು ಕುದುರೆಯನ್ನು ಎ ಎಂಬುವನು ಬಿ ಎಂಬುವನಿಗೆ ಒಂದುನೂರು ರೂಪಾಯಿಗಳಿಗೆ ಬಿಕರಿ ಮಾಡಲು ಒಪ್ಪುತ್ತಾನೆ. ಇದರಲ್ಲಿ ಪ್ರತಿಫಲ ಕುದುರೆಯ ನಿಜವಾದ ಬೆಲೆಯಷ್ಟಲ್ಲವಾದರೂ ಅದರಿಂದಲೇ ಆ ಒಪ್ಪಂದ ಕಾನೂನಿನ ದೃಷ್ಟಿಯಿಂದ ಶೂನ್ಯವಾಗದು.

ಪ್ರತಿಫಲ ಯಥಾಯೋಗ್ಯವಾಗಿಲ್ಲದಿರಬಹುದು. ಆದರೆ ಅದು ಅಸಾಧ್ಯವಾದದ್ದಾಗಿರಬಾರದು. ಎ ಎಂಬವನಿಗೆ ಬಿ ಎಂಬುವನು ಸಾವಿರ ರೂಪಾಯಿ ಕೊಟ್ಟರೆ ಬಿಯ ತಾಯಿಯ ಮೃತದೇಹಕ್ಕೆ ಜೀವ ತರಿಸಿಕೊಡುವುದಾಗಿ ಎ ಒಪ್ಪುತ್ತಾನೆ. ಇದರಲ್ಲಿ ಎ ಮಾಡಿದ ವಾಗ್ದಾನ ಅಸಾಧ್ಯ. ಅಂಥ ಪ್ರತಿಫಲವಿರುವ ಒಪ್ಪಂದ ಅಸಿಂಧುವಾಗುತ್ತದೆ, ಶೂನ್ಯವಾಗುತ್ತದೆ.

ಪ್ರತಿಫಲ ಸ್ಪಷ್ಟರೂಪದ್ದಿರಬೇಕು. ಅದು ಅನಿರ್ದಿಷ್ಟವಾಗಿರಬಾರದು. ಅನಿಶ್ಚಿತವಾಗಿರಬಾರದು. ಎ ಎಂಬುವನು ಬಿ ಎಂಬುವನನ್ನು ಒಂದು ಕೆಲಸಕ್ಕೆ ಹಚ್ಚುತ್ತಾನೆ. ಅದಕ್ಕಾಗಿ ಬಿಗೆ ಪ್ರತಿಫಲವಾಗಿ ಯೋಗ್ಯರೀತಿಯ ಸಂಭಾವನೆ ಕೊಡುವುದಾಗಿ ಎ ಒಪ್ಪುತ್ತಾನೆ. ಇದು ಕಾನೂನುರೀತ್ಯ ಸರಿಯಲ್ಲ. ಏಕೆಂದರೆ ಎ ಕೊಡಲೊಪ್ಪಿದ ಯೋಗ್ಯರೀತಿಯ ಸಂಭಾವನೆ ಯಾವುದು ಮತ್ತು ಎಷ್ಟು ಎಂಬುದರ ಬಗ್ಗೆ ನಿಶ್ಚಿತತೆಯಿಲ್ಲ. ಆದ್ದರಿಂದ ಅಂಥ ಒಪ್ಪಂದ ತಿರಸ್ಕಾರಯೋಗ್ಯವಾದ್ದಾಗಿರುತ್ತದೆ.

ನ್ಯಾಯಾಲಯಕ್ಕೆ ಹಾಜರಾಗಿರಬೇಕೆಂದು ಒಬ್ಬನಿಗೆ ನ್ಯಾಯಾಲಯದ ಆದೇಶ ಬಂದಿರುತ್ತದೆ. ಅವನು ಹಾಜರಾದರೆ ತಾನು ನೂರು ರೂಪಾಯಿಗಳನ್ನು ಕೊಡುವುದಾಗಿ ಮತ್ತೊಬ್ಬ ಒಪ್ಪುತ್ತಾನೆ. ಇದು ಯೋಗ್ಯ ಪ್ರತಿಫಲವೆನಿಸದು. ಏಕೆಂದರೆ ನ್ಯಾಯಾಲಯದ ಆದೇಶದಂತೆ ಅವನು ಹಾಜರಾಗುವುದು ಅವನ ಕರ್ತವ್ಯ. ಅದಕ್ಕೆ ಮತ್ತೊಬ್ಬ ಪ್ರತಿಫಲ ಕೊಡುವ ಅಗತ್ಯವಿಲ್ಲದಿದ್ದರೂ ಅದನ್ನು ಮಾಡಲೊಪ್ಪಿದರೆ ಆಗ ಮಾತ್ರ ಆ ಪ್ರತಿಫಲ ಯೊಗ್ಯವಾದ್ದೆನಿಸುತ್ತದೆ.

ಪ್ರತಿಫಲ ಪ್ರಚಲಿತವಿರುವ ಕಾನೂನಿಗೆ ವಿರೋಧಾತ್ಮಕವಾಗಿಬಾರದು. ಅದು ಮತ್ತೊಬ್ಬರ ಆಸ್ತಿಪಾಸ್ತಿಗಳಿಗೆ ಧಕ್ಕೆ ಬರುವಂಥದಾಗಬಾರದು. ಅದು ಅವ್ಯವಹಾರಿಕ ವಿಷಯಗಳ ಬಗ್ಗೆಯೂ ಆಗಿರಬಾರದು. ಅದು ಸರ್ಕಾರದ ಉದ್ದೇಶಿತ ಧ್ಯೇಯಗಳಿಗೆ ಪ್ರತಿಕೂಲವಾದ್ದಾಗಿರಕೂಡದು.

ಪ್ರತಿಫಲವಿಲ್ಲದ ಒಪ್ಪಂದ ಶೂನ್ಯ ಒಪ್ಪಂದವಾಗುತ್ತದೆಂಬುದಕ್ಕೆ ಒಂದೇ ಒಂದು ಅಪವಾದವಿದೆ. ಒಬ್ಬ ತನ್ನನ್ನು ಪ್ರೀತಿಯಿಂದ ನೋಡಿಕೊಂಡರೆ ಒಂದು ಸಾವಿರ ರೂಪಾಯಿಗಳನ್ನು ತೆರುವುದಾಗಿ ಒಪ್ಪುತ್ತಾನೆ. ಅಂಥ ಒಂದು ಒಪ್ಪಂದ ಬರಹದಲ್ಲಿದ್ದು ನೋಂದಣಿಯಾಗಿದ್ದರೆ ಅದು ಸರಿಯಾದ ಪ್ರತಿಫಲವಿರುವ ಒಪ್ಪಂದವೆನಿಸುತ್ತದೆ. (ಎಸ್.ಎನ್.ಎಂ.ಯು.)