ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪ್ರತ್ಯುಪಾಪಚಯಕಗಳು

ವಿಕಿಸೋರ್ಸ್ದಿಂದ

ಪ್ರತ್ಯುಪಾಪಚಯಕಗಳು - ದೇಹದಲ್ಲಿ ನಿರಂತರವೂ ಜರುಗುವ ರಾಸಾಯನಿಕ ಕ್ರಿಯೆಗಳಲ್ಲಿ (ಉಪಾಪಚಯಕ್ರಿಯೆ -ಮೆಟಬಾಲಿಸಮ್) ನೈಸರ್ಗಿಕವಾಗಿ ಭಾಗವಹಿಸುವ ರಾಸಾಯನಿಕಗಳ (ಉಪಾಪಚಯಕಗಳು-ಮೆಟಬೊಲೈಟ್ಸ್) ಬದಲು ಇಲ್ಲವೆ ಅವಕ್ಕೆ ಪ್ರತಿಸ್ಪರ್ಧಿಗಳಾಗಿ ಭಾಗವಹಿಸಿ ಸಹಜರಾಸಾಯನಿಕ ಕ್ರಿಯೆಗಳನ್ನು ತಡೆಗಟ್ಟುವ ಪ್ರತಿವಸ್ತುಗಳು (ಆಂಟಿಮೆಟಬೊಲೈಟ್ಸ್). ಒಂದು ಉಪಾಪಚಯಕಕ್ಕೂ ಅದರ ಪ್ರತಿವಸ್ತುವಿಗೂ ಅವುಗಳ ಬೃಹದಣುರಚನೆಯಲ್ಲಿ ಪರಸ್ಪರ ಹೋಲಿಕೆ ಇರುವುದರಿಂದ ಸ್ವಾಭಾವಿಕ ವಸ್ತುವಿನ ಬದಲು ಅದರ ಪ್ರತಿವಸ್ತು ಸಂಬಂಧಪಟ್ಟ ದೈಹಿಕ ರಾಸಾಯನಿಕ ಕ್ರಿಯೆಯ ನಿರ್ದಿಷ್ಟ ಘಟ್ಟದಲ್ಲಿ ಭಾಗವಹಿಸಬಹುದಾಗಿದೆ. ಆದರೆ ಇದರಿಂದ ಉಪಾಪಚಯಕ್ರಿಯೆಗಳ ನೈಸರ್ಗಿಕ ಸರಪಣಿ ಮುಂದುವರೆಯಲಾಗದೆ ಅಂತಿಮ ಪರಿಣಾಮಕ್ಕೆ ಧಕ್ಕೆ ತಟ್ಟುತ್ತದೆ. ಕೆಲವು ವಿಟಮಿನ್ನುಗಳ ಪ್ರತಿವಸ್ತುಗಳು ಕೆಲವು ಅಮೈನೋ ಆಮ್ಲಗಳ ಹಾಗೂ ಪ್ಯೂರಿನ್ ಮತ್ತು ಪಿರಮಿಡಿನ್ನುಗಳ ಪ್ರತಿವಸ್ತುಗಳು, ಆಸಿಟೈಲ್ ಕೋಲಿನ್ನಿನ ಪ್ರತಿವಸ್ತುಗಳು-ಇವು ಕೆಲವು ಪ್ರಮುಖ ಪ್ರತ್ಯುಪಾಪಚಯಕಗಳು. ಇವುಗಳ ವರ್ತನೆಯ ಅನುಕೂಲತೆಗಳನ್ನು ಪಡೆದು ಇವನ್ನು ಔಷಧಗಳಾಗಿ ಕೀಟಗಳು ಹಾಗೂ ಉಪದ್ರವಕಾರಿ ಪ್ರಾಣಿಗಳ ನಾಶಕಗಳಾಗಿ (ಕೀಟನಾಶಕಗಳು) ಕದನರಂಗದ ವಿಷಾನಿಲಗಳಾಗಿ, ಪ್ರಾಯೋಗಿಕ ವ್ಯಾಸಂಗರಾಸಾಯನಿಕಗಳಾಗಿ, ಇತ್ಯಾದಿ, ಬಳಸುವುದಿದೆ. ಕೆಲವು ಉದಾಹರಣೆಗಳು:

1 ಸಲ್ಫೊನೆಮೈಡುಗಳು: ಇವು ಪ್ಯಾರಾಅಮೈನೊಬೆನ್‍ಜೊóೀಯಿಕ್ ಆಮ್ಲ (ಪಿಎಬಿಎ) ಎಂಬ ಸ್ವಾಭಾವಿಕ ಜೈವಿಕವಸ್ತುವಿನ ಅಣುರಚನೆಯನ್ನು ಹೋಲುತ್ತವೆ. ಪಾರಾ ಅಮೈನೊ ಬೆಂಜೋಯಿಕ್ ಆಮ್ಲ (ಪಾಬಾ) ರೋಗಕಾರಕಗಳಾದ ಅನೇಕ ಏಕಾಣುಗಳ ಉಪಾಪಚಯ ಕ್ರಿಯೆಯಲ್ಲಿ ಅಗತ್ಯ ಭಾಗವಹಿಸುತ್ತಿವೆ. ಏಕಾಣುಗಳು ಇವನ್ನು ಸಂಯೋಗಿಸಲಾರವಾದ್ದರಿಂದ ಇವು ಅವುಗಳಿಗೆ ಜೀವಸತ್ತ್ವವಾಗಿ ಒದಗಿಸಬೇಕಾಗಿದೆ. ಏಕಾಣುಗಳು ಉಪಸ್ಥಿತವಿರುವ ಆವರಣದಲ್ಲಿ ಸಲ್ಫೊನಮೈಡುಗಳು ಇದ್ದರೆ ಏಕಾಣುಗಳು ಪಾಬಾಗೆ ಬದಲಾಗಿ ಸಲ್ಪೊನೆಮೈಡುಗಳನ್ನೇ ಬಳಸಿಕೊಳ್ಳುತ್ತವೆ. ಆದರೆ ಇದರಿಂದ ಅವುಗಳ ಉಪಾಪಚಯ ಕ್ರಿಯೆಯಮುಂದಿನ ಘಟ್ಟಗಳು ಜರಗಲಾರದೆ ಪರಿಸ್ಥಿತಿ ಏಕಾಣುಗಳಿಗೆ ಮಾರಕವಾಗಿ ಇಲ್ಲವೆ ಅವುಗಳ ಸಂಖ್ಯಾಭಿವೃದ್ಧಿಗೆ ತಡೆಯಾಗಿ ಪರಿಣಮಿಸುತ್ತದೆ. ಸಲ್ಫೊನೆಮೈಡುಗಳ ಈ ಗುಣ ಏಕಾಣುಕೃತರೋಗಗಳ ಚಿಕಿತ್ಸೆಯಲ್ಲಿ ಉಪಯುಕ್ತವಾಗಿದೆ. ಇಲ್ಲಿ ಗಮನಿಸಬೇಕಾದ ವಿಷಯ ಪಾಬಾ ಮಾನವನಿಗೆ ವಿಟಮಿನ್ನಾಗಿಲ್ಲದಿರುವುದು. ಆದ್ದರಿಂದ ಸಲ್ಫೊನೆಮೈಡುಗಳ ಬಳಕೆಯಿಂದ ಏಕಾಣುವಿನಲ್ಲಿ ಉಂಟಾಗುವ ತೊಂದರೆ ಮಾನವರಲ್ಲಿ ಉದ್ಭವಿಸುವುದಿಲ್ಲ.

2 ಇಥೈಯೊನಿನ್: ಇದು ಮಿಥೈಯೊನಿನ್ ಎಂಬ ನೈಸರ್ಗಿಕ ಅಮೈನೋ ಆಮ್ಲದ ಪ್ರತಿವಸ್ತು. ಮಿಥೈಯೊನಿನ್ನಿನ ಬೃಹದಣು ರಚನೆಯನ್ನು ಹೋಲುತ್ತದೆ. ಆದರೆ ಇದರಲ್ಲಿ ಮಿಥೈಯೊನಿನ್ನಿನ ಮಿಥೈಲ್ ಗುಂಪುಗಳ ಬದಲು ಇಥೈಲ್ ಗುಂಪುಗಳು ಇರುತ್ತವೆ. ಪ್ರಾಯೋಗಿಕ ಪ್ರಾಣಿಗೆ ಇಥೈಯೊನಿನ್ನನ್ನು ಊಡಿದಾಗ ಯಕೃತ್ತಿನ ಸಹಜಕ್ರಿಯೆಗಳಿಗೆ ಅಡ್ಡಿಯಾಗುವಷ್ಟು ಮಟ್ಟಿಗೆ ವಿಪರೀತವಾಗಿ ಅದರಲ್ಲಿ ಮೇದಸ್ಸು ಶೇಖರಣೆ ಆಗುವುದು ತಿಳಿದಿದೆ. ಸಮೃದ್ಧಿಯಾಗಿ ಮಿಥೈಯೊನಿನ್ ದೊರೆತಾಗ ಯಕೃತ್ತಿನಲ್ಲಿ ಮೇದಸ್ಸಿನ ಶೇಖರಣೆ ಕಡಿಮೆ ಆಗುತ್ತದೆ. ಅಂದರೆ ಪ್ರಾಯೋಗಿಕವಾಗಿ ಇಥೈಯೊನಿನ್ನನ್ನು ಬಳಸಿದಾಗ ಮೇದಸ್ಸು ಪಾಲುಗೊಳ್ಳುವ ಜೈವಿಕಕ್ರಿಯೆಯಲ್ಲಿ ಮಿಥೈಯೊನಿನ್ನಿನ ಬದಲು ಇದೇ ಭಾಗವಹಿಸಿ ಮೇದಸ್ಸು ಯಕೃತ್ತಿನಲ್ಲಿ ಶೇಖರವಾಗುವಂತಾಗುವ ವಿಷಯ ವಿಶದವಾಗುತ್ತದೆ. ಇದರಿಂದ ಮೇದಸ್ಸಿನ ಉಪಾಪಚಯ ಕ್ರಿಯೆಯಲ್ಲಿ ಮಿಥೈಯೊನಿನ್ನಿನ ಪಾತ್ರ ಯಕೃತ್ತಿನಲ್ಲಿ ಮೇದಸ್ಸಿನ ಶೇಖರಣೆ ಆಗುವುದನ್ನು ತಪ್ಪಿಸುವುದೆಂಬ ಸಂಗತಿ ಸ್ಪಷ್ಟವಾಗುತ್ತದೆ.

ಏಜಾóಸೀರಿನ್ ಎಂಬುದು ಸೀರಿನ್ ಎಂಬ ಇನ್ನೊಂದು ನೈಸರ್ಗಿಕ ಅಮೈನೋ ಆಮ್ಲದ ಪ್ರತಿವಸ್ತು. ಇದು ಉಪಾಪಚಯ ಕ್ರಿಯೆಯಲ್ಲಿ ಸೀರಿನ್ನಿನ ಬದಲು ಭಾಗವಹಿಸಿ ಮುಂದಿನ ಉಪಪಚಯ ಕ್ರಿಯೆಗಳನ್ನು ಆಗಗೊಡದೆ ಅಂತಿಮವಾಗಿ ರಕ್ತದ ವರ್ಣರಹಿತ ಕಣಗಳ ಕ್ಷಯವನ್ನು ಉಂಟುಮಾಡುತ್ತದೆ. ಆದ್ದರಿಂದ ಈ ಕಣಗಳ ಅರ್ಬುದರೋಗವನ್ನು (ಲ್ಯೂಕೀಮಿಯ) ತಡೆಗಟ್ಟಲು ಏಜಾóಸೀರಿನನ್ನನ್ನು ಚಿಕಿತ್ಸಕವಾಗಿ ಬಳಸುವುದಿದೆ.

3 ಏಜಾóಗ್ವಾನಿಡಿನ್ ಮತ್ತು 6-ಮರ್‍ಕ್ಯಾಪ್ಟೊಪ್ಯೂರಿನ್ನುಗಳು ಪ್ಯೂರಿನ್ನಿನ ಪ್ರತಿವಸ್ತುಗಳಾಗಿಯೂ ಏಜಾಯೂರಸಿಲ್ ಮತ್ತು ಏಜಾಥೈಮಿನ್ ಇವು ಪಿರಮಿಡಿನ್ನಿನ ಪ್ರತಿವಸ್ತುಗಳಾಗಿಯೂ ಇವೆ. ಪ್ಯೂರಿನ್ ಮತ್ತು ಪಿರಮಿಡಿನ್ನುಗಳು ನ್ಯೂಕ್ಲಿಯಿಕ್ ಆಮ್ಲಗಳ ಕ್ರಿಯಾತ್ಮಕ ಘಟಕಗಳಾಗಿವೆ. ಕೋಶಸಂಖ್ಯಾಭಿವೃದ್ಧಿಗೆ ನ್ಯೂಕ್ಲಿಯಿಕ್ ಆಮ್ಲ ಹೊಸ ಹೊಸದಾಗಿ ಸಂಯೋಗವಾಗುತ್ತ ಅದರ ಸರಪಣಿಯ ದ್ವಿಪ್ರತಿ (ರೆಪ್ಲಿಕೇಟ್) ಆಗುವುದು ಅಗತ್ಯ. ಶೀಘ್ರಸಂಖ್ಯಾಭಿವೃದ್ಧಿ ಆಗುತ್ತಿರುವ ಕಡೆ-ಏಡಿಗಂತಿಗಳಲ್ಲಿ-ಇಂಥ ಪ್ರಕ್ರಿಯೆಯ ಅಗತ್ಯ ಸ್ವಾಭಾವಿಕವಾಗಿಯೇ ಹೆಚ್ಚು. ಪ್ಯೂರಿನ್ ಮತ್ತು ಪಿರಮಿಡಿನ್ನುಗಳ ಪ್ರತಿವಸ್ತುಗಳನ್ನು ಕೊಟ್ಟಾಗ ನ್ಯೂಕ್ಲಿಯಿಕ್ ಆಮ್ಲಗಳಲ್ಲಿ ಅವು ಘಟಕಗಳಾಗಿ ಸೇರಿಬಿಟ್ಟು ಕೋಶಸಂಖ್ಯಾಭಿವೃದ್ಧಿಗೆ ಮಾತ್ರವಲ್ಲದೆ ಇತರ ಕೋಶಕ್ರಿಯೆಗಳಿಗೆಲ್ಲ ಕುತ್ತಾಗುತ್ತವೆ. ಇಂಥ ಪರಿಣಾಮ ಏಡಿಗಂತಿಯ ವೃದ್ಧಿಗೆ ತಡೆ ಎಂಬುದು ವ್ಯಕ್ತ. ಆದ್ದರಿಂದ ಪ್ಯೂರಿನ್ ಮತ್ತು ಪಿರಮಿಡಿನ್ನಿನ ಪ್ರತಿವಸ್ತುಗಳನ್ನು ಏಡಿಗಂತಿ ಚಿಕಿತ್ಸೆಗೆ ಬಳಸಲಾಗುತ್ತದೆ.

4 ಎಸರಿನ್, ಡೈಐಸೊಪ್ರೊಪೈಲ್ ಪ್ಲೋರೊಫಾಸ್ಫೇಟ್ (ಡಿ ಎಫ್ ಪಿ), ಫಾಲಿಡಾಲ್, ಟಿಕ್-20 ಟೆಟ್ರ ಇಥೈಲ್ ಫೈರೋಫಾಸ್ಫೇಟ್ (ಟಿಇಪಿಪಿ) ಇತ್ಯಾದಿಗಳು ಅಸಿಟೈಲ್‍ಕೋಲಿನ್ ಎಂಬ ಜೀವರಾಸಾಯನಿಕದ ಪ್ರತಿವಸ್ತುಗಳು. ನರಗಳು ಕ್ರಿಯಾಂಗಗಳಿಗೆ (ಹೃದಯ, ಸ್ನಾಯುಗಳು ಮತ್ತು ಗ್ರಂಥಿಗಳು) ಸಂದೇಶವನ್ನು ಒಯ್ದಾಗ ಆ ನರಗಳ ಅಂತ್ಯದಲ್ಲಿ ಅಸಿಟೈಲ್‍ಕೋಲಿನ್ ಬಿಡುಗಡೆ ಆಗುತ್ತದೆ. ಕ್ರಿಯಾಂಗ ನರಸಂದೇಶಕ್ಕೆ ಯುಕ್ತರೀತಿಯಲ್ಲಿ ಪ್ರತಿವರ್ತಿಸುವಂತೆ ಮಾಡುವುದು ಈ ವಸ್ತುವೇ. ಆದರೆ ಆ ಕೂಡಲೆ ಇದು ನಾಶವಾಗದಿದ್ದರೆ ನರಪ್ರಚೋದನೆ ಕ್ರಿಯಾಂಗಗಳಲ್ಲಿ ಪರಿಣಾಮಯುಕ್ತವಾಗಿರುವುದಿಲ್ಲ. ಕೋಲಿನ್ ಎಸ್ಟರೇಸ್ ಎಂಬ ಕಿಣ್ವ ಅಸಿಟೈಲ್‍ಕೋಲಿನ್ನನ್ನು ನಾಶಮಾಡಿ ಕ್ರಿಯಾಂಗಗಳ ಸಫಲ ಕಾರ್ಯಕ್ಕೆ ಕಾರಣವಾಗಿದೆ. ಅಸಿಟೈಲ್‍ಕೋಲಿನ್ನಿನ ಪ್ರತಿವಸ್ತುಗಳನ್ನು ಬಳಸಿದಾಗ ಕೋಲಿನ್ ಎಸ್ಟರೇಸ್ ಅಸಿಟೈಲ್ ಕೋಲಿನ್ನನ್ನು ನಾಶಮಾಡುವ ಸೌಕರ್ಯ ವಿವಿಧ ಕಾರಣಗಳಿಂದ ತಪ್ಪಿಹೋಗುತ್ತದೆ. ಆದ್ದರಿಂದ ಕ್ರಿಯಾಂಗಗಳ ಸಫಲ ಕಾರ್ಯಕ್ಕೆ ಹಾನಿ ಆಗುತ್ತದೆ. ಸ್ನಾಯುಸಂಕೋಚನ ವ್ಯಾಕೋಚನಗಳು ಸಾಧ್ಯವಾಗದೆ ಉಸಿರುಕಟ್ಟಿ ಪ್ರಾಣಹೋಗಬಹುದು. ಡಿ ಎಫ್ ಪಿ, ಟಿ ಇ ಪಿ ಪಿ ಮುಂತಾದವನ್ನು ಬಳಸಿದಾಗ ಆಗುವುದು ಹೀಗೆಯೇ. ಆದ್ದರಿಂದ ಇಂಥವನ್ನು ಯುದ್ಧಕಾಲದ ವಿಷಾನಿಲಗಳಾಗಿ ಬಳಸಿ ಶತ್ರುನಾಶ ಮಾಡುವುದುಂಟು. ಕೀಟನಾಶಕಗಳೂ ಉಪದ್ರವಕಾರಕ ಪಿಡುಗುನಾಶಕಗಳೂ (ಪೆಸ್ಟಿಸೈಡ್ಸ್) ಇದೇ ರೀತಿ ಕೀಟಗಳಿಗೆ ಮತ್ತು ಉಪದ್ರವಿಗಳಿಗೆ ಮಾರಕವಾಗಿ ಪರಿಣಮಿಸುತ್ತವೆ. ಮೇಲೆ ಹೇಳಿರುವ ಅಸಿಟೈಲ್ ಕೋಲಿನ್ನಿನ ಪ್ರತಿವಸ್ತುಗಳು ಕಿಣ್ವದ ಸ್ವಾಭಾವಿಕ ಕಾರ್ಯಾಚರಣೆಯನ್ನು ಪೂರ್ಣವಾಗಿ ಹಾಗೂ ಖಾಯಮ್ಮಾಗಿ ಸ್ಥಗಿತಗೊಳಿಸತಕ್ಕವು. ಆದ್ದರಿಂದಲೇ ಅವು ಪ್ರಾಣಾಂತಿಕ ವಸ್ತುಗಳಾಗಿವೆ. ಆದರೆ ಎಸರಿನ್ನಿನಂಥ ಅಸಿಟೈಲ್-ಕೋಲಿನ್ ಪ್ರತಿ ವಸ್ತುಗಳು ಕಿಣ್ವದ ಸ್ವಾಭಾವಿಕ ಕಾರ್ಯವನ್ನು ಹೀಗೆ ಪೂರ್ಣವಾಗಿ ಮತ್ತು ಖಾಯಮ್ಮಾಗಿ ಲೋಪಗೊಳಿಸುವುದಿಲ್ಲ. ಸ್ವಲ್ಪಕಾಲಾನಂತರ ಕಿಣ್ವದ ಸ್ವಾಭಾವಿಕ ಪ್ರಕ್ರಿಯೆ ಕಂಡುಬರುತ್ತದೆ. ಆದ್ದರಿಂದ ತಾತ್ಕಾಲಿಕವಾಗಿ ಕಿಣ್ವದ ಕ್ರಿಯೆಯನ್ನು ಅರ್ಥಾತ್ ಕ್ರಿಯಾಂಗಗಳ ಕ್ರಿಯೆಯನ್ನು ತಡೆಗಟ್ಟುವುದಕ್ಕೆ ಇಲ್ಲವೆ ಅಸಿಟೈಲ್ ಕೋಲಿನ್ ನಾಶವಾಗದೆ ಶೇಖರವಾಗುವುದಕ್ಕೆ ಎಸರಿನ್ನಿನಂಥ ವಸ್ತುಗಳನ್ನು ಬಳಸುತ್ತಾರೆ. ಈ ಎರಡು ಬಗೆಯ ಪ್ರತಿವಸ್ತುಗಳಿಗೂ ಅನುಕ್ರಮವಾಗಿ ಖಾಯಂ ತಡೆಕಾರಕವಸ್ತುಗಳು (ಲಾಂಗ್ ಆ್ಯಕ್ಟಿಂಗ್ ಇನ್‍ಹಿಬಿಟರ್ಸ್) ಮತ್ತು ಅಲ್ಪಕಾಲೀನ ತಡೆಕಾರಕವಸ್ತುಗಳು (ಶಾರ್ಟ್ ಆ್ಯಕ್ಟಿಂಗ್ ಇನ್‍ಹಿಬಿಟರ್ಸ್) ಎಂದು ಹೆಸರು. ಅಲ್ಲದೆ ಎಸರಿನ್ನನ್ನು ಬಳಸಿದಾಗ ಕಿಣ್ವ ಅದರ ಮೇಲೆ ವರ್ತಿಸುವುದೇ ಪ್ರಧಾನವಾಗಿರುತ್ತದೆ. ಆದರೆ ಕಾಲಕಳೆದಂತೆ ನಾಶವೇ ಆಗುತ್ತಿಲ್ಲವಾದ ಕೋಲಿನ್ ಅಸಿಟೈಲ್ ಶೇಖರವಾಗಿ ಅದರ ಪರಿಮಾಣ ಹೆಚ್ಚಿದಾಗ ಕಿಣ್ವ ಅದರ ಮೇಲೆಯೇ ಪ್ರಧಾನವಾಗಿ ವರ್ತಿಸುತ್ತದೆ. ಅಂದರೆ ಎಸರಿನ್ನೂ ಅಸಿಟೈಲ್ ಕೋಲಿನ್ನೂ ಯಾವುದು ಹೆಚ್ಚಾಗಿದ್ದರೆ ಅದು ಕಿಣ್ವದ ಕ್ರಿಯೆಯನ್ನು ತನ್ನೆಡೆಗೆ ತಿರುಗಿಸಿಕೊಳ್ಳಬಹುದೆಂದಾಯಿತು. ಇದಕ್ಕೆ ಪೈಪೋಟಿ ವಿಧಾನದ ವರ್ತನೆ (ಕಾಂಪಿಟಟಿವ್ ಅ್ಯಕ್ಷನ್) ಎಂದು ಹೆಸರು. ಮೊದಲಗುಂಪಿನ ಪ್ರತಿವಸ್ತುಗಳಲ್ಲಿ ಹೀಗಾಗಲಾರದಾದ್ದರಿಂದ ಅದನ್ನು ಪೈಪೋಟಿ ರಹಿತವರ್ತನೆ (ನಾನ್‍ಕಾಂಪಿಟಿಟಿವ್ ಆ್ಯಕ್ಷನ್) ಎಂದು ಕರೆಯಲಾಗಿದೆ.

5 ಬಿ ವಿಟಮಿನ್ ಗುಂಪಿಗೆ ಸೇರಿದ ಥೈಯಮಿನ್, ಪಿರಿಡಾಕ್ಸಿನ್ ಹಾಗೂ ಪೋಲಿಕ್ ಆಮ್ಲಗಳಿಗೆ ಕ್ರಮವಾಗಿ ಪ್ರತಿವಸ್ತುಗಳು ಪೈರಿಥೈಯಮಿನ್ ಮತ್ತು ಆಕ್ಸಿಥೈಯಮಿನ್, ಡಿಆಕ್ಸಿ ಪಿರಿಡಾಕ್ಸಿನ್ ಹಾಗೂ ಅಮೀನಾಪ್ಟೆರಿನ್ ಎಂಬವು ಇವೆ. ಪ್ರಾಯೋಗಿಕವಾಗಿ ಇವನ್ನು ಪ್ರಾಣಿಗಳಿಗೆ ಊಡಿದಾಗ ಸ್ವಾಭಾವಿಕ ವಿಟಮಿನ್ನುಗಳು ಪಾಲುಗೊಳ್ಳುವ ರಾಸಾಯನಿಕ ಕ್ರಿಯೆಯ ಪ್ರಥಮ ಘಟ್ಟದಲ್ಲಿ ಅವುಗಳ ಬದಲು ಈ ಪ್ರತಿವಸ್ತುಗಳು ಭಾಗವಹಿಸಿ ಮುಂದಿನ ರಾಸಾಯನಿಕ ಕ್ರಿಯೆ ಜರುಗದಂತೆ ತಡೆ ಮಾಡುತ್ತವೆ. ತತ್ಫಲವಾಗಿ ಈ ವಿಟಮಿನ್ನುಗಳ ಕೊರತೆಯ ಪರಿಣಾಮಗಳು ಕಂಡು ಬರುತ್ತವೆ. ಅಂದರೆ ಸುಲಭ ವಿಧಾನದಿಂದ ನಿರ್ದಿಷ್ಟ ವಿಟಮಿನ್ನಿನ ಕೊರತೆಯನ್ನು ಉಂಟುಮಾಡಬಹುದಲ್ಲದೆ ಆ ವಿಟಮಿನ್ನಿನ ಕಾರ್ಯವಿಧಾನ. ಕ್ಷೇತ್ರ ಇತ್ಯಾದಿ ಮಾಹಿತಿಯನ್ನೂ ಪಡೆಯಬಹುದಾಗಿದೆ.

6 ಡೈಕೂಮಾರಿನ್: ಇದು ಕೆ ವಿಟಮಿನ್ನಿನ ಪ್ರತಿವಸ್ತು, ಕ್ಲೂವರ್ ಹೇ ಎಂಬ ದನದ ಮೇವು. ಪಾಶ್ಚಾತ್ಯದೇಶಗಳಲ್ಲಿ ಬಳಕೆಯಲ್ಲಿದೆ. ಕೊಳೆತ ಈ ಮೇವನ್ನು ತಿಂದ ದನಗಳು ರಕ್ತಸ್ರಾವದಿಂದ ಸಾಯುತ್ತಿದ್ದುವು. ಇದರ ತನಿಖಾ ವ್ಯಾಸಂಗದಿಂದ ಮಾರಕ ರಕ್ತಸ್ರಾವಕ್ಕೆ ಕೊಳೆತ ಮೇವಿನಲ್ಲಿದ್ದ ಡೈಕೂಮಾರಿನ್ ಕಾರಣವೆಂದೂ ಅದು ಕೆ ವಿಟಮಿನ್ನಿನ ಪ್ರತಿವಸ್ತುವಾಗಿ ವರ್ತಿಸುವುದೆಂದೂ ವಿಶದವಾಯಿತು. ರಕ್ತದಲ್ಲಿ ಕಿಂಚಿತ್ ಪರಿಮಾಣದಲ್ಲಿರುವ ಆದರೆ ಆತ್ಯಗತ್ಯವಾದ ಪ್ರೊಥ್ರಾಂಬಿನ್ ಎಂಬ ಪ್ರೋಟೀನಿನ ಉತ್ಪತ್ತಿಗೆ ಕೆ ವಿಟಮಿನ್ ಅವಶ್ಯಕ್ತ. ಪ್ರೊಥ್ರಾಂಬಿನ್ ಕೊರತೆ ಉಂಟಾದಲ್ಲಿ ರಕ್ತಗರಣೆಕಟ್ಟಲು ಅಸಾಧ್ಯವಾಗಿ ಗಾಯಗಳಿಂದ ರಕ್ತಸ್ರಾವವಾಗುವುದು ನಿಲ್ಲದೆ ಸ್ಥಿತಿ ಮಾರಕವಾಗಿ ಪರಿಣಮಿಸುವುದಿದೆ. ಕೊಳೆತ ಕ್ಲೂವರ್ ಹೇ ಯನ್ನು ತಿಂದ ದನಗಳಲ್ಲಿ ಕಂಡುಬರುವುದೂ ಅದೇ ಸ್ಥಿತಿ. ಅವುಗಳಲ್ಲಿ ಪ್ರೋಥ್ರಾಂಬಿನ್ ಪರಿಪೂರ್ಣ ಕಡಿಮೆ ಆಗಿ ಸಾವು ಉಂಟಾಗುವುದರಿಂದಲೂ ವಿಟಮಿನ್ ಕೆಯನ್ನು ವಿಪುಲವಾಗಿ ಕೊಟ್ಟು ಸಾವನ್ನು ತಪ್ಪಿಸಬಹುದಾದ್ದರಿಂದಲೂ ಡೈಕೂಮಾರಿನ್ ವಿಟಮಿನ್ ಕೆ ಗೆ ಪ್ರತಿವಸ್ತು ಎಂದು ವ್ಯಕ್ತಪಟ್ಟಿತು. ವಿಟಮಿನ್ ಕೆಯ ಬೃಹದಣುವಿನ ಹಾಗೂ ಡೈಕೂಮಾರಿನ್ನಿನ ಬೃಹದಣುವಿನ ರಚನೆಯಲ್ಲಿ ಬಹಳ ಹೋಲಿಕೆ ಇದೆ. ಆದ್ದರಿಂದ ಡೈಕೂಮಾರಿನ್ನನ್ನು ಬಳಸಿದಾಗ ಪ್ರೋಥ್ರಾಂಬಿನ್ ಸಂಯೋಜನೆಯ ಆಯಕಟ್ಟು ಘಟ್ಟದಲ್ಲಿ ಕೆ ವಿಟಮಿನ್ನಿನ ಬದಲು ಅದು ಭಾಗವಹಿಸುತ್ತದೆ. ತತ್ಫಲವಾಗಿ ಪ್ರೂಥ್ರಾಂಬಿನ್ ಸಂಯೋಜನಾ ಸರಪಣಿ ಮುಂದುವರಿಯಲಾಗದೆ ಹೋಗುತ್ತದೆ. ಪರಿಣಾಮ ಪ್ರೋಥ್ರಾಂಬಿನ್ ಕೊರತೆ, ರಕ್ತ ಗರಣೆಕಟ್ಟಲಾರದ ಸ್ಥಿತಿ. ಮಾರಕರಕ್ತಸ್ರಾವ. ಆದರೆ ವೈಟಮಿನ್ ಕೆ ಹಾಗೂ ಡೈಕೂಮರಿನ್ ಇವು ಮೇಲೆ ಹೇಳಿದ ಆಯಕಟ್ಟು ಘಟ್ಟದಲ್ಲಿ ಪರಸ್ಪರ ಪೈಪೋಟಿವಸ್ತುಗಳಾಗಿ ಭಾಗವಹಿಸಬಹುದಾದ್ದರಿಂದ ತತ್ಕಾಲದಲ್ಲಿ ತಕ್ಕಷ್ಟು ವೈಟಮಿನ್-ಕೆಯನ್ನು ಕೊಟ್ಟು ಡೈಕೂಮಾರಿನ್ನಿನ ವರ್ತನೆಯನ್ನು ಇಚ್ಛೆಬಂದಂತೆ ನಿಯಂತ್ರಿಸಬಹುದಾಗಿದೆ. ಹೀಗೆ ಮಾಡಿ ರಕ್ತನಾಳ ಅಥವಾ ಹೃದಯದ ಒಳಗೆ ರಕ್ತಗರಣೆಕಟ್ಟಿಕೊಂಡು ರಕ್ತಪರಿಚಲನೆಗೆ ಅಡ್ಡಿಯಾಗುವ ಪ್ರಸಂಗಗಳ ಚಿಕಿತ್ಸೆ ಮಾಡಲಾಗುತ್ತದೆ. (ಸಿ.ಎಸ್.ಎನ್.)