ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಫ್ರಾಸ್ಟ್‌, ರಾಬರ್ಟ್ ಲೀ

ವಿಕಿಸೋರ್ಸ್ದಿಂದ

ಫ್ರಾಸ್ಟ್, ರಾಬರ್ಟ್ ಲೀ 1874-1963: ವಿ. ಹುಟ್ಟಿದ್ದು ಸ್ಯಾನ್ ಫಾನ್ಸಿಸ್ಕೊದಲ್ಲಿ. ಹತ್ತುವರ್ಷದಲ್ಲಿ ತಂದೆಯನ್ನು ಕಳೆದುಕೊಂಡ. ಅನೇಕ ಕಾಲ ವಿದ್ಯಾಭ್ಯಾಸಮಾಡಿ ಒಂದು ವರ್ಷ ಡಾರ್‍ಮೌತ್‍ನಲ್ಲಿ ಓದಿ ಫ್ರಾಸ್ಟ್ ಲಾರೆನ್ಸಿನ ಒಂದು ಬಟ್ಟೆಗಿರಣಿಯಲ್ಲಿ ಕೆಲಸಕ್ಕೆ ಸೇರಿದ. ಇಪ್ಪತ್ತರಲ್ಲಿ ಎಲೀನರ್ ಮೇರಿಯಮ್ ಹ್ವೈಟ್ ಎಂಬಾಕೆಯನ್ನು ಮದುವೆಯಾದ. 1897ರಿಂದ 1899ರ ವರೆಗೆ ಹಾರ್ವರ್ಡಿನಲ್ಲಿ ಇದ್ದನಾದರೂ ಪದವೀಧರನಾಗಲಿಲ್ಲ. ಅನಂತರ ಅವನಿಗೆ 16 ಗೌರವ ಡಾಕ್ಟರೇಟುಗಳು ಸಿಕ್ಕಿದ್ದು ಬೇರೆ ಮಾತು. ಅಧ್ಯಾಪಕನಾಗಿ, ಚಮ್ಮಾರನಾಗಿ, ಪತ್ರಿಕಾ ಸಂಪಾದಕನಾಗಿ ಕೊನೆಗೆ 11ವರ್ಷ ನ್ಯೂ ಹ್ಯಾಂಪೈರಿನ ಡೆರಿ ಎಂಬಲ್ಲಿ ಬೇಸಾಯಗಾರನಾಗಿ ದುಡಿದ. ಆಮೇಲೆ 1912ರಲ್ಲಿ ಇಂಗ್ಲೆಂಡಿಗೆ ಹೋಗಿ ಬೀಕನ್ಸ್‍ಫೀಲ್ಡಿನಲ್ಲಿ ತಂಗಿದ. ಎಡ್ವರ್ಡ್ ತಾಮಸ್ ಮೊದಲಾದವರ ಸಂಪರ್ಕ ಉಂಟಾಯಿತು. ಮೊದಲ ಕವನ ಸಂಕಲನ ಎ ಬಾಯ್ಸ್ ವಿಲ್ (1913), ಎರಡನೆಯದು ನಾರ್ತ್ ಆಫ್ ಬಾಸ್ಟನ್ (1914), 1915ರಲ್ಲಿ ಅಮೆರಿಕ ಸಂಸ್ಥಾನಕ್ಕೆ ಬಂದು ಹಾರ್ವಡ್ ವಿಶ್ವವಿದ್ಯಾಲಯದಲ್ಲಿ ಕಾವ್ಯವಿಭಾಗದ ಪ್ರಾಚಾರ್ಯನಾದ. ಇವನಿಗೆ ನಾಲ್ಕು ಬಾರಿ ಅಂದರೆ 1924, 1931, 1937, 1943-ಕಾವ್ಯಕ್ಕೆ ಮೀಸಲಾದ ಪುಲಿಟ್ಜರ್ ಪುರಸ್ಕಾರ ಸಿಕ್ಕಿತು. 1938ರಲ್ಲಿ ಅಮೆರಿಕದ ಕಲೆ ಮತ್ತು ಸಾಹಿತ್ಯ ಅಕಾಡೆಮಿಯ ಪಾರಿತೋಷಕ ಇವನದಾಯಿತು. 1941ರಲ್ಲಿ ಅಮೆರಿಕಾದ ಕಾವ್ಯ ಸಂಘದ ಪಾರಿತೋಷಕ ಲಭಿಸಿತು. ಕ್ಯಾಲಿಫೋರ್ನಿಯದವನಾದರೂ ಈತ ನ್ಯೂ ಇಂಗ್ಲೆಂಡಿನ ಮುಖವಾಣಿಯಾಗಿ ನಿಂತ. ಈತನನ್ನು ಅಮೆರಿಕದ ತೀರ ಶುದ್ಧ ಅಭಿಜಾತ ಸಾಹಿತಿ ಎಂದು ಹೊಗಳಲಾಗಿದೆ.

ಮೌಂಡನ್ ಇಂಡರ್‍ವಲ್ (1916); ನ್ಯೂ ಹ್ಯಾಂಪೈರ್ (1923); ಪೆಸ್ಟ್ ರನಿಂಗ್ ಬ್ರೂಕ್ (1928); ಎ ಫರ್ದರ್ ರೇಂಜ್ (1936); ಎ ವಿಟ್‍ನೆಸ್ ಟ್ರೀ (1942); ಎ ಮಾಸ್ಕ್ ಆಫ್ ರೀಸನ್ (1945); ಸ್ಟೀಪಲ್ ಬುಷ್ (1947), ಎ ಮಾಸ್ಕ್ ಆಫ್ ಮರ್ಸಿ (1947); ಕಂಪ್ಲೀಟ್ ಪೊಯೆಮ್ಸ್ (1948)-ಇವು ಈತನ ಕೆಲವು ಕೃತಿಗಳು.

(ಎಂ.ಕೆ.ಎಸ್.)

ಫ್ರಾಸ್ಟ್‍ನ ಕಾವ್ಯ ಆವೇಶರಾಹಿತ್ಯ, ಸಮಚಿತ್ತದ ವಿಚಾರ, ಸೂಕ್ಷ್ಮವೇದಿಯಾದ ಪಾತ್ರ ಚಿತ್ರಣ, ಉಜ್ಜ್ವಲವಾದ ನಿಸರ್ಗದ ಗ್ರಹಿಕೆ-ಇವುಗಳ ಗಣಿ. ಇವೆಲ್ಲ ನಿರಾಡಂಬರವಾದ, ಬಳಕೆಯ ಭಾಷೆಯ ಸಂಯಮಯುತವಾದ ಮತ್ತು ಹಲವು ವೇಳೆ ಸರಸೋಕ್ತಿಯಿಂದ ಕೂಡಿದ ಕಾವ್ಯ ಶೈಲಿಯಲ್ಲಿವೆ. ಇವನ ಏಕಪಾತ್ರರ ಭಾಷಣಗಳು ಉಜ್ಜ್ವಲವಾದ ಆಧ್ಯಾತ್ಮಿಕ ಅಥವಾ ಮಾನಸಿಕ ಪ್ರಭೆಯನ್ನು ತೋರಬಲ್ಲಂಥವು. ಮಾನವ ಬಯಸುವಂಥ ಸುತ್ತಮುತ್ತಲಿನ ಜಗತ್ತು, ವಾಸ್ತವಿಕವಾಗಿ ಇರುವ ಜಗತ್ತು ಇವುಗಳ ಅಂತರವನ್ನು ಮತ್ತೆ ಮತ್ತೆ ಈತ ಚಿತ್ರಿಸುತ್ತಾನೆ. (ಎಂ.ಕೆ.ಎಸ್.)