ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಫ್ರೂಡ್, ಜೇಮ್ಸ್‌ ಆಂತೊನಿ

ವಿಕಿಸೋರ್ಸ್ದಿಂದ

ಫ್ರೂಡ್, ಜೇಮ್ಸ್ ಆಂತೊನಿ 1818-1894. ಇತಿಹಾಸಕಾರ. ಹುಟ್ಟಿದ್ದು ಡೆವನ್‍ಷೈರಿನ ಡಾರ್ಟಿಂಗ್ಟನ್ನಿನಲ್ಲಿ. ತಂದೆ ಪೌರೋಹಿತ್ಯ ಮಾಡುತ್ತಿದ್ದ. ವೆಸ್ಟ್‍ಮಿನ್‍ಸ್ಟರ್ ಸ್ಕೂಲು ಮತ್ತು ಆಕ್ಸ್‍ಫರ್ಡಿನಲ್ಲಿ ವಿದ್ಯಾಭ್ಯಾಸ ಮುಗಿಸಿ ಅಲ್ಲೆ ಫೆಲೊ ಆದ. ನ್ಯೂಮನ್ನನ ಪ್ರಭಾವಕ್ಕೊಳಗಾದ. ಆಗ ಈತ ಬರೆದ ದಿ ನೆಮೆಸಿಸ್ ಆಫ್ ಫೇತ್ (1849) ಪುಸ್ತಕದಲ್ಲಿ ಧರ್ಮವಿರುದ್ಧವಾದ ಅಭಿಪ್ರಾಯಗಳಿದ್ದುವಾಗಿ ಫೆಲೊಷಿಪ್ ಕಳೆದುಕೊಂಡ. ವೆಸ್ಟ್ ಮಿನ್‍ಸ್ಟರ್ ರಿವ್ಯೂಗೆ ಬರೆದ. ಫ್ರೇಸರ್ಸ್ ಮ್ಯಾಗಜೀನನ್ನು ಕೆಲಕಾಲ(1860-1874) ಸಂಪಾದಿಸಿದ. ಈತ ಆಗ ಬರೆದ ಲೇಖನಗಳ ಸಂಗ್ರಹವೇ ಷಾರ್ಟ್ ಸ್ಟಡೀಸ್ ಆನ್ ಗ್ರೇಟ್ ಸಬ್ಜಕ್ಟ್ಸ್ ಎಂಬ ಪುಸ್ತಕ. ಇವನ ಪ್ರಖ್ಯಾತ ಪುಸ್ತಕವೆಂದರೆ 12 ಸಂಪುಟಗಳಲ್ಲಿರುವ ದಿ ಹಿಸ್ಟರಿ ಆಫ್ ಇಂಗ್ಲೆಂಡ್ ಫ್ರಾಂ ದಿ ಫಾಲ್ ಆಫ್ ಕಾರ್ಡಿನಲ್ ಊಲ್ಸಿ ಟು ದಿ ಸ್ಪ್ಯಾನಿಷ್ ಆರ್ಮಡ. ಅವು ಅಚ್ಚಾದದ್ದು 1856-70ರ ಅವಧಿಯಲ್ಲಿ. ಬರೆಹದಲ್ಲಿ ನಾಟಕೀಯತೆ ಇದ್ದರೂ ವರ್ಣನೆಗಳು ಸೊಗಸಾಗಿದ್ದರೂ ಪಕ್ಷಪಾತ ದೃಷ್ಟಿ ಹಾಗೂ ವಿಷಯಕ್ಕೆ ಸಂಬಂಧಪಟ್ಟ ಲೋಪದೋಷಗಳು ಈ ಗ್ರಂಥದಲ್ಲಿ ಸಾಕಷ್ಟಿವೆ. 1869ರಲ್ಲಿ ಈತ ಸೇಂಟ್ ಆಂಡ್ರೂಸಿನಲ್ಲಿ ಲಾರ್ಡ್ ರೆಕ್ಟರ್ ಆದ. ಕೆಲವರ್ಷಗಳ ಮೇಲೆ ದಿ ಇಂಗ್ಲಿಷ್ ಇನ್ ಐರ್ಲೆಂಡ್ ಇನ್ ದಿ ಎಯಟೀನ್ತ್ ಸೆಂಚುರಿ ಎಂಬ ಪುಸ್ತಕ ಬರೆದ. 1849ರಲ್ಲಿ ಕಾರ್ಲೈಲನ ಪರಿಚಯವಾಯಿತು. ಅಂದಿನಿಂದ ಫ್ರೂಡ್ ಅವನ ಶಿಷ್ಯನಾದ. ಕಾರ್ಲೈಲನ ಮರಣಾನಂತರ ಅವನ ರೆಮಿನಿಸೆನ್ಸಸ್ ಪುಸ್ತಕವನ್ನು ಶೋಧಿಸಿ ಪ್ರಕಟಿಸಿದ್ದಲ್ಲದೆ (1881) ನಾಲ್ಕು ಸಂಪುಟಗಳಲ್ಲಿ ಕಾರ್ಲೈಲನ ಜೀವನವನ್ನು ಚಿತ್ರಿಸಿದ. ಇದರಲ್ಲೂ ಅಸಹ್ಯವಾದ ವಿಷಯಗಳು ಬಂದಿರುವುದಲ್ಲದೆ ಲೋಪದೋಷಗಳಿವೆಯೆಂದು ವಿಮರ್ಶಕರ ಅಭಿಪ್ರಾಯ. ಆಸ್ಟ್ರೇಲಿಯ ಹಾಗೂ ವೆಸ್ಟ್ ಇಂಡಿಯ ದ್ವೀಪಗಳಿಗೆ ಹೋಗಿ ಬಂದು ತನ್ನ ಅನುಭವಗಳನ್ನು ಓಷಿಯಾನಿಯ (1886) ಮತ್ತು ದಿ ಇಂಗ್ಲಿಷ್ ಇನ್ ದಿ ವೆಸ್ಟ್ ಇಂಡೀಸ್ (1888) ಎಂಬ ಎರಡು ಪುಸ್ತಕಗಳಲ್ಲಿ ತಿಳಿಸಿದ. ಆಕ್ಸ್‍ಫರ್ಡಿನಲ್ಲಿ ಆಧುನಿಕ ಇತಿಹಾಸದ ಪ್ರಾಧ್ಯಾಪಕನಾದ ಮೇಲೆ (1892) ಲೈಫ್ ಅಂಡ್ ಲೆಟರ್ಸ್ ಆಫ್ ಇರಾಸ್ಮಸ್ (1894) ಮತ್ತು ಇಂಗ್ಲಿಷ್ ಸೀಮನ್ ಇನ್ ದಿ ಸಿಕ್ಸ್‍ಟೀಂತ್ ಸೆಂಚರಿ (1895) ಎಂಬ ಪುಸ್ತಕಗಳನ್ನು ಬರೆದ. (ಎಲ್.ಎಸ್.ಎಸ್.)