ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಫ್ರೆಂಚ್ ಗಿಯಾನ

ವಿಕಿಸೋರ್ಸ್ದಿಂದ

ಫ್ರೆಂಚ್ ಗಿಯಾನ - ಫ್ರಾನ್ಸಿನ ಆಡಳಿತಕ್ಕೊಳಪಟ್ಟಿರುವ ಸಾಗರಾಂತರ ರಾಜ್ಯ. ದಕ್ಷಿಣ ಅಮೆರಿಕ ಖಂಡದ ಈಶಾನ್ಯ ಕರಾವಳಿಯಲ್ಲಿ ಸಮಭಾಜಕ ವೃತ್ತದ ಉತ್ತರಕ್ಕಿದೆ. ಪಶ್ಜಿಮದಲ್ಲಿ ಸುರಿನಾಮ್ ಪೂರ್ವ ಮತ್ತು ದಕ್ಷಿಣದಲ್ಲಿ ಬ್ರಜಿûಲ್ ದೇಶಗಳೂ ಉತ್ತರದಲ್ಲಿ ಅಟ್ಲಾಂಟಿಕ್ ಸಾಗರ ಈ ರಾಜ್ಯವನ್ನು ಸುತ್ತುವರಿದಿವೆ. ಈ ರಾಜ್ಯಕ್ಕೆ ಸೇರಿದ ಕೆಲವು ದ್ವೀಪಗಳಿವೆ. ಈ ರಾಜ್ಯದ ವಿಸ್ತೀರ್ಣ 91,000 ಚದರ ಕಿಮೀ. ಜನಸಂಖ್ಯೆ 1,45,279 (1995) ರಾಜಧಾನಿ ಕೈಯೆನ್.

ಫ್ರೆಂಚ್ ಗಿಯಾನವನ್ನು ಭೌಗೋಳಿಕವಾಗಿ ಮೂರು ವಲಯಗಳಾಗಿ ವಿಂಗಡಿಸಬಹುದು. ಉತ್ತರದ ಕರಾವಳಿ ಬಯಲು, ಸುಮಾರು 15ರಿಂದ 20 ಕಿಮೀ ಅಗಲದ ಈ ಪ್ರದೇಶ ಮೆಕ್ಕಲುಮಣ್ಣಿನ ತಗ್ಗುಬಯಲುಗಳಿಂದ ಕೂಡಿದೆ. ಮಧ್ಯ ಭಾಗದ ಬೆಟ್ಟಗಾಡು ಪ್ರಸ್ಥಭೂಮಿ, 350 ಮೀ ಗಿಂತ ಹೆಚ್ಚು ಎತ್ತರವಿಲ್ಲದ ಇಲ್ಲಿಯ ಗುಡ್ಡಗಳು ಕಡಿದಾದ ಮಗ್ಗುಲು ಹಾಗೂ ಚಪ್ಪಟೆ ಮೇಲ್ಭಾಗವುಳ್ಳವು. ಈ ಪ್ರದೇಶ ಕರಾವಳಿಗೆ ಸಮಾಂತರವಾಗಿ ಸಾಗುತ್ತದೆ, ದಕ್ಷಿಣದ ಟಮಾಕ್ ಹಮಾಕ್ ಪರ್ವತಶ್ರೇಣಿ, ಪ್ರಾಚೀನ ಗ್ರಾನೈಟ್ ಶಿಲೆಗಳಿಂದ ರೂಪಿತವಾಗಿದೆ ಕೆಲವು ಪರ್ವತಗಳು ಜ್ವಾಲಾಮುಖೀಯ ಉಗಮದವು. 600-700 ಮೀಟರ್ ಎತ್ತರದ ಬೆಟ್ಟಗಳುಂಟು. ಪ್ರೀಕ್ಯಾಂಬ್ರಿಯನ್ ಶಿಲೆ ಕೈಯೆನ್ ನಗರದ ಸಮುದ್ರ ದಂಡೆಯಲ್ಲಿ ಹೊರಚಾಚಿರುವುದನ್ನು ಕಾಣಬಹುದು. ಸಣ್ಣ ದ್ವೀಪಗಳಿವೆ. ಕೈಯೆನ್‍ನ ಪಶ್ಚಿಮ ಭಾಗ ಜವುಗು ನೆಲದಿಂದ ಮತ್ತು ಪ್ರಾಚೀನ ಕಾಲದಲ್ಲಿ ಸೇರಿದ ಮೆಕ್ಕಲು ಮಣ್ಣಿನ ಗಟ್ಟಿನೆಲದಿಂದ ಕೂಡಿದೆ. ಫ್ರೆಂಚ್ ಗಿಯಾನ ಉ.ಅ. 20-60 ನಡುವೆ ಸಮಭಾಜಕ ವೃತ್ತದ ಉಷ್ಣವಲಯದಲ್ಲಿದ್ದರೂ ಸಾಗರಕ್ಕೆ ಅತ್ಯಂತ ಸಮೀಪದಲ್ಲಿ ಇರುವುದರಿಂದ ಅದರ ಪ್ರಭಾವ ಈ ರಾಜ್ಯದ ವಾಯುಗುಣದ ಮೇಲಾಗಿದೆ. ಸತತವಾದ ವಾಣಿಜ್ಯ ಮತ್ತು ಈಶಾನ್ಯ ಮಾರುತಗಳ ಪರಿಣಾಮವಾಗಿ ವರ್ಷಾದ್ಯಂತ ಉಷ್ಣತೆ ಸಮಮಟ್ಟದಲ್ಲಿರುತ್ತದೆ ಎನ್ನಬಹುದು. ಜನವರಿ ತಿಂಗಳಲ್ಲಿ ಸರಾಸರಿ 250ಅ ಇದ್ದರೆ ಅಕ್ಟೋಬರ್ ತಿಂಗಳಲ್ಲಿ 270ಅ ಇರುತ್ತದೆ. ವಾಯುವಿನಲ್ಲಿ ಆದ್ರ್ರತೆ ಯಾವಾಗಲೂ ಹೆಚ್ಚು. ಇಲ್ಲಿಯ ವಾರ್ಷಿಕ ಮಳೆ ಸುಮಾರು 330 ಸೆಂಮೀ. ಪೂರ್ವ ಕರಾವಳಿಯಲ್ಲಿ ವಿಪುಲ ಮಳೆಯಾದರೆ, ಒಳನಾಡಿನಲ್ಲಿ ಸ್ವಲ್ಪ ಕಡಿಮೆ. ಡಿಸೆಂಬರಿನಿಂದ ಫೆಬ್ರುವರಿ ತನಕ ಕಿರುಮಳೆಗಾಲ. ತರುವಾಯ ಫೆಬ್ರುವರಿಯಿಂದ ಏಪ್ರಿಲ್‍ತನಕ ಕಿರು ಬೇಸಗೆ ಇಲ್ಲಿಯ ಮುಖ್ಯ ಮಳೆಗಾಲ ಏಪ್ರಿಲಿನಿಂದ ಜುಲೈ ತನಕ, ಮುಖ್ಯ ಬೇಸಗೆ ಆಗಸ್ಟಿನಿಂದ ಡಿಸೆಂಬರ್ ತನಕ.

ವಿಪುಲವಾದ ಮಳೆ ಹಾಗೂ ಹೆಚ್ಚುನೀರನ್ನು ಹೀರಲಾಗದ ಭೂ ಗುಣದಿಂದಾಗಿ ಫ್ರೆಂಚ್ ಗಿಯಾನದಲ್ಲಿ ಹೆಚ್ಚು ಸಂಖ್ಯೆಯ ನದಿಗಳಿವೆ. ಪರ್ವತ ಪ್ರದೇಶಗಳ ಬುಡದ ಬಳಿಯಲ್ಲಿಯ ತಗ್ಗುಗಳು ಹೆಚ್ಚಿನ ನೀರನ್ನು ಸಂಗ್ರಹಿಸುವುದರ ಫಲವಾಗಿ ನದಿಗಳ ಮಟ್ಟ ವರ್ಷಾದ್ಯಂತ ಒಂದೇ ಸಮವಾಗಿರುತ್ತದೆ. ಇಲ್ಲಿಯ ಇಪ್ಪತ್ತಕ್ಕೂ ಹೆಚ್ಚು ನದಿಗಳು ಉತ್ತರ ಮತ್ತು ಈಶಾನ್ಯಾಭಿಮುಖವಾಗಿ ಹರಿದು ಅಟ್ಲಾಂಟಿಕ್ ಸಾಗರ ಸೇರುತ್ತವೆ. ಮುಖ್ಯ ನದಿಗಳೆಂದರೆ ಮರೋನಿ ಮತ್ತು ಅಯಾಪಾಕ್. ಮರೋನಿ ಫ್ರೆಂಚ್‍ಗಿಯಾನದ ಪಶ್ಜಿಮದ ಗಡಿಯಾಗಿ ಸುರಿನಾಮನ್ನು ಅಯಾಪಾಕ್ ನದಿ ಪೂರ್ವದ ಗಡಿಯಾಗಿ ಬ್ರಜಿóಲ್ ದೇಶವನ್ನು ವಿಂಗಡಿಸಿವೆ. ದೀರ್ಘಕಾಲದ ಗಡಿ ವಿವಾದದ ಬಳಿಕ 1891ರಲ್ಲಿ ರಷ್ಯದ ದೊರೆ eóÁರನ ಮಧ್ಯಸ್ತಿಕೆಯಿಂದ ಸುರಿನಾಮ್ ರಾಷ್ಟ್ರದೊಂದಿಗೆ ಮರೋನಿ ನದಿಯನ್ನು ಸ್ವಿಸ್ ರಾಷ್ಟ್ರದ ಮಧ್ಯಸ್ತಿಕೆಯಿಂದ 1900ರಲ್ಲಿ ಆಯಾಪಾಕ್ ನದಿಯನ್ನು ಬ್ರಜಿûಲ್ ಗಡಿಯಾಗಿ ಒಪ್ಪಿಕೊಳ್ಳಲಾಯಿತು. ಆಪ್ರವಾಗ್, ಕಾಮ್ಟೆ, ಕೌರಾ, ಸಿನ್ನಾಮಾರಿ, ಐರಾಕೌಬೊ ಮತ್ತು ಮಾನಾ ಇವು ಮುಖ್ಯ ನದಿಗಳಾಗಿವೆ.

ಈ ರಾಜ್ಯದ ಶೇಕಡಾ 90ಭಾಗ ಉಷ್ಣವಲಯದ ಅರಣ್ಯ ಪ್ರದೇಶವಾಗಿದ್ದು 80,00,000 ಹೆಕ್ಟೇರ್ ಪ್ರದೇಶವನ್ನು ಆವರಿಸಿಕೊಂಡಿದೆ. ಪ್ರತಿ ಹೆಕ್ಟೇರಿಗೆ 25-30 ಘನ ಮೀಟರ್ ವಾಣಿಜ್ಯ ಮರಮುಟ್ಟು ವೃಕ್ಷಗಳಿವೆ. ಆ್ಯಂಜೆಲಿಕ್, ಗ್ರಿಗ್ನಾನ್, ಫ್ರಾಂಕ್, ಗ್ರಿಗ್ನಾನ್ ಫಿಯಾ, ಸ್ಯಾಪೊಟಾಕ್, ಯಾಯಾಮಡೂ, ಕಾಡುಸೇಬು ಇತ್ಯಾದಿ ವೃಕ್ಷಗಳು ಹೇರಳವಾಗಿವೆ. ಇಲ್ಲಿಯ ಕಾಡುಮೃಗಗಳಲ್ಲಿ ಆ್ಯಸಲಾಟ್ ಕಾಡುಬೆಕ್ಕು, ಹಾಕಾ ಹುಲಿ, ಜಾಗ್ವಾರ್ ಚಿರತೆ ಪ್ರಸಿದ್ಧ. ಅತ್ಯಂತ ದೊಡ್ಡ ಭೂಪ್ರಾಣಿ ಎಂದರೆ ಟೇಪರ್. ಈಚೆಗೆ ಇದು ವಿರಳವಾಗುತ್ತಿದೆ. ಮನಾಟೆ ಪ್ರಾಣಿ ಸಸ್ಯಾಹಾರಿಯಾದ ಸಾಗರ ಸ್ತನಿ. ಇಲ್ಲಿ ಸ್ಲಾತ್, ಇರುವೆತಿನ್ನುಗ, ಪೊದೆಹಂದಿ ಹಾಗೂ ಆರ್ಮಡಿಲೊ ಇವನ್ನೂ ನೋಡಬಹುದು.

ಫ್ರೆಂಚ್ ಗಿಯಾನದ ಅತ್ಯಂತ ಪ್ರಮುಖ ಖನಿಜ ಸಂಪನ್ಮೂಲಗಳು ಮೂರು: ಚಿನ್ನ, ಟ್ಯಾಂಟಾಲಿಕ್ ಕೊಲಂಬೈಟ್. ಮತ್ತು ಬಾಕ್ಸೈಟ್. ಬಂಗಾರ ಗಣಿಗಾರಿಕೆಯನ್ನು 1964ರಿಂದ ನಿಲ್ಲಿಸಲಾಗಿತ್ತು. 1966ರಿಂದ ಪಾಲ್ ಐಲೆಂಡ್‍ನ ಮೆಕ್ಕಲು ಗಣಿ ಪ್ರದೇಶದಲ್ಲಿ ಹೊಸ ಕೆಲಸವನ್ನು ಆರಂಭಿಸಲಾಗಿದೆ.

ಜನ: ಫ್ರೆಂಚ್ ಗಿಯಾನದ ಶೇಕಡಾ 90 ಪ್ರಜೆಗಳು 16 ಮತ್ತು 17ನೆಯ ಶತಮಾನಗಳಲ್ಲಿ ಫ್ರೆಂಚ್ ಗಿಯಾನಕ್ಕೆ ಕರೆತಂದ ಗುಲಾಮ ಸಂತತಿಯ ನೀಗ್ರೋ ಅಥವಾ ಕ್ರಿಯೋಲರು. (ನೀಗ್ರೋ ಹಾಗೂ ಬಿಳಿ ಜನಾಂಗದ ಮಿಶ್ರ ಸಂತತಿ). ಉಳಿದವರಲ್ಲಿ ಅಮೆರಿಕನ್ ಇಂಡಿಯನ್ನರು, ಚೀನಿಯರು, ಐರೋಪ್ಯರು, ಇಂಡೋಚೀನಿಯರು, ಲೆಬನೀಯರು ಮತ್ತು ಸಿರಿಯನ್ನರು ಇದ್ದಾರೆ. ಫ್ರೆಂಚ್ ಗಿಯಾನದ ಮೂಲ ನಿವಾಸಿಗಳಾದ ಅಮೆರಿಕನ್ ಇಂಡಿಯನ್ನರು ಇಂದು ಒಳನಾಡಿನಲ್ಲಿ ಜೀವಿಸುತ್ತಿದ್ದಾರೆ. ಗಿಯಾನದ ಹೆಚ್ಚು ಮಂದಿ ಕರಾವಳಿಯ ಉದ್ದಕ್ಕೂ ಹರಡಿಕೊಂಡಿದ್ದಾರೆ. ಬಹಳಷ್ಟು ಫ್ರೆಂಚ್ ಗಿಯಾನೀಯರ ಭಾಷೆಫ್ರೆಂಚ್. ರಾಜ್ಯದ ಅಧಿಕೃತ ಭಾಷೆಯೂ ಫ್ರೆಂಚ್, ಹಲವು ಕ್ರಿಯೋಲರು ಫ್ರೆಂಚ್ ಮತ್ತು ಇಂಗ್ಲಿಷ್ ಮಿಶ್ರವಾದ ಉಪ ಭಾಷೆ ಆಡುತ್ತಾರೆ. ಹೆಚ್ಚು ಮಂದಿ ರೋಮನ್ ಕ್ಯಾತೊಲಿಕರು.

ಫ್ರೆಂಚ್ ಗಿಯಾನದಲ್ಲಿ ಸರ್ಕಾರಿ ಹಾಗೂ ಖಾಸಗಿ ಪ್ರಾಥಮಿಕ, ಪ್ರೌಢಶಾಲೆಗಳೂ ಮತ್ತು ವೃತ್ತಿಶಿಕ್ಷಣ ಶಾಲೆಗಳೂ ಇವೆ. ಮಕ್ಕಳು ಕಾನೂನಿನ ಪ್ರಕಾರ ಕಡ್ಡಾಯವಾಗಿ ಶಾಲೆಗೆ ಹೋಗಬೇಕು. ಶೇಕಡಾ ಸುಮಾರು 75 ಮಂದಿ ಅಕ್ಷರಸ್ಥರಿದ್ದಾರೆ. ಇದು ಫ್ರಾನ್ಸಿನ ಕಡಲಾಚೆಯ ರಾಜ್ಯವಾದ ಮೇಲೆ 1946ರಲ್ಲಿ ಫ್ರೆಂಚ್ ಸರ್ಕಾರ ಆಸ್ಪತ್ರೆ ಔಷಧಾಲಯಗಳನ್ನು ಸ್ಥಾಪಿಸಿತು.

ಫ್ರಾನ್ಸಿನ ಇತರ ರಾಜ್ಯಗಳಂತೆಯೇ ಫ್ರೆಂಚ್ ಸರ್ಕಾರದಿಂದ ನೇಮಿತನಾದ ರಾಜ್ಯಪಾಲ ಇಲ್ಲಿಯ ಮುಖ್ಯ ಆಡಳಿತಗಾರ. ಅವನಿಗೆ ಸಹಾಯಕವಾಗಿ ಒಬ್ಬ ಪ್ರಧಾನ ಕಾರ್ಯದರ್ಶಿ ಹಾಗೂ ಚುನಾಯಿತ 16 ಸದಸ್ಯರ ಮಂಡಳಿ ಇರುತ್ತದೆ. ಫ್ರೆಂಚ್ ಪಾರ್ಲಿಮೆಂಟಿನ ಪ್ರತಿ ಸದನಕ್ಕೂ ಫ್ರೆಂಚ್ ಗಿಯಾನದ ಒಬ್ಬೊಬ್ಬ ಚುನಾಯಿತ ಪ್ರತಿನಿಧಿಯನ್ನು ಕಳುಹಿಸುತ್ತಾರೆ. ನ್ಯಾಯಾಲಯ ವ್ಯವಸ್ಥೆಯೂ ಫ್ರಾನ್ಸಿನಲ್ಲಿರುವಂತೆಯೇ ಇದೆ.

ಫ್ರೆಂಚ್ ಗಿಯಾನ ಅನಭಿವೃದ್ದಿ ರಾಜ್ಯ. ಸರ್ಕಾರ ನಿರ್ವಹಿಸಲು, ಉದ್ಯಮಗಳಿಗೆ ಬೆಂಬಲ ನೀಡಲು, ಆರೋಗ್ಯ ಪಾಲನೆಗೆ ಮತ್ತಿತರ ಸೇವೆಗಳಿಗೆ ಫ್ರಾನ್ಸಿನಿಂದಲೇ ಆರ್ಥಿಕ ನೆರವು ದೊರೆಯಬೇಕು. ಇಲ್ಲಿಯ ಬಹುಪಾಲು ಕಾರ್ಮಿಕರು ಸರ್ಕಾರದ ಉದ್ಯೋಗಿಗಳೇ ಆಗಿದ್ದಾರೆ. ಫ್ರೆಂಚ್ ಗಿಯಾನದ ಒಳನಾಡಿನಲ್ಲಿ ಖನಿಜ ಹಾಗೂ ಅರಣ್ಯ ಸಂಪತ್ತು ಉಂಟು. ಆದರೆ ಅವನ್ನು ಅಭಿವೃದ್ಧಿಪಡಿಸಿಲ್ಲ. ಪ್ರಮುಖ ಉದ್ಯಮಗಳೆಂದರೆ ಚಿನ್ನ ಗಣಿಗಾರಿಕೆ, ವ್ಯಾವಸಾಯಿಕ ಹಾಗೂ ಅರಣ್ಯ ಉತ್ಪನ್ನಗಳ ಸಂಸ್ಕರಣೆ, ಸೀಗಡಿಗಾರಿಕೆ ಈ ಉದ್ಯಮಗಳನ್ನು ಅಭಿವೃದ್ಧಿಗೊಳಿಸಲಾಗುತ್ತಿದೆ. ಇಲ್ಲಿಯ ಮುಖ್ಯ ಬೆಳೆಗಳೆಂದರೆ ಯಾಮ್ ಗೆಡ್ಡೆ, ಮರಗೆಣಸು, ಬಾಳೆಹಣ್ಣು, ಕಬ್ಬು, ಮೆಕ್ಕೆಜೋಳ, ಅನಾನಸು ಇತ್ಯಾದಿ. ಇಲ್ಲಿಯ ಜನರಿಗೆ ಸಾಕಾಗುವಷ್ಟು ಆಹಾರ ಉತ್ಪಾದನೆಯಾಗದೆ ಆಹಾರ ಸರಕುಗಳನ್ನು ಆಮದು ಮಾಡಿಕೊಳ್ಳುತ್ತಾರೆ. ಇಲ್ಲಿಯ ಮುಖ್ಯ ರಫ್ತುಗಳೆಂದರೆ ರೋಸ್‍ವುಡ್ ಮತ್ತು ರಬ್ಬರ್.

ಕೈಯೆನ್ ಈ ರಾಜ್ಯದ ದೊಡ್ಡ ನಗರ. 1643ರಲ್ಲಿ ಫ್ರೆಂಚರು ಇದನ್ನು ಸ್ಥಾಪಿಸಿದರು. ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಸುಮಾರು ಅರ್ಧಪಾಲು ಈ ನಗರದಲ್ಲಿ ವಾಸಿಸುತ್ತಾರೆ. ಜನಸಂಖ್ಯೆ 29405 (1980). ಮಾಂಟ್‍ಸಿನರಿ, ಬಿಯ್ನೆವೆನ್ಯೂ, ಕಮೊಪಿ, ಕಾರ್ಬೆಟ್‍ಮೊಯ್ಸ, ಪೇಸೆನ್ಸ್ ಸೇಂಟ್‍ಲೂಯಿಸ್, ಸೇಂಟ್ ಲಾರೆಟ್, ಸೇಂಟ್ ಜಾನ್, ಸಿಟ್ರಾನ್, ಕಾಲರ್, ಗರೆಟಗ್ರೆ ಕೌರ, ಕಾ, ಗೈಸ್‍ಬರ್ಗ್, ಸೇಂಟ್ ಜಾರ್ಜ್ ಮುಂತಾದ ಊರುಗಳಿವೆ. ವಿಮಾನ ನಿಲ್ದಾಣ ವಿದ್ದು ವಿಮಾನ ಸಂಪರ್ಕವಿದೆ. ಹಡುಗುಗಳ ಸಂಚಾರ, ರೈಲು ಮುಂತಾದ ಸಂಪರ್ಕ ಸಾಧನಗಳು ಉತ್ತಮ ರಸ್ತೆ ಮಾರ್ಗಗಳು ಇನ್ನೂ ಅಭಿವೃದ್ಧಿ ಸ್ಥಿತಿಯಲ್ಲಿವೆ.

ಇತಿಹಾಸ: ಕ್ರಿಸ್ಟೋಫರ್ ಕೊಲಂಬಸನ ಸಂಗಾತಿಯಾಗಿದ್ದ ವಿಸೆಂಟ್ ಯಾನೆಜ್ ಪಿನ್ನೋ ಎಂಬಾತ 1500ರಲ್ಲಿ ಫ್ರೆಂಚ್ ಗಿಯಾನದ ಕರಾವಳಿಯನ್ನು ಅನ್ವೇಷಿಸಿದ. ಇವನನ್ನು ಹಿಂಬಾಲಿಸಿ ಸಾವಿರಾರು ಸಾಹಸಿಗಳು ಈ ಪ್ರದೇಶದಲ್ಲಿದೆಯೆಂದು ದಂತಕತೆಯಾಗಿದ್ದ ಬಂಗಾರದ ಪಟ್ಟಣವನ್ನು ಅರಸಿ ಬಂದರು. ನಾಲ್ಕನೆಯ ಹೆನ್ರಿಯ ಧನಸಹಾಯದಿಂದ ಇಲ್ಲಿಗೆ ಬಂದ ಫ್ರೆಂಚ್ ಗಣ್ಯನೊಬ್ಬ 1604ರಲ್ಲಿ ಕೈಯೆನ್ ಪ್ರದೇಶವನ್ನು ಜನನಿವಾಸಿ ಯೋಗ್ಯವಾದುದೆಂದು ಆರಿಸಿದ. ಫ್ರೆಂಚರು 1643ರಿಂದ ಈ ನಗರವನ್ನು ಕಟ್ಟಿ ಅಭಿವೃದ್ಧಿ ಪಡಿಸಿದರು. 1667ರಿಂದ ಫ್ರೆಂಚ್ ಗಿಯಾನ ಫ್ರೆಂಚರ ವಸಾಹತಾಗಿದ್ದು ಅಂದಿನಿಂದ ಫ್ರೆಂಚರ ನಿಯಂತ್ರಣದಲ್ಲಿಯೇ ಇದೆ. 1800ರ ಆರಂಭದಲ್ಲಿ ಸ್ವಲ್ಪ ಅವಧಿಯತನಕ ಇದನ್ನು ಬ್ರಿಟಿಷ್ ಹಾಗೂ ಪೋರ್ಚುಗೀಸರು ವಶಪಡಿಸಿಕೊಂಡಿದ್ದರು.

ಐತಿಹಾಸಿಕವಾಗಿ ಫ್ರೆಂಚ್ ಗಿಯಾನ ಶಿಕ್ಷಾವಸಾಹತುವಾಗಿ ಪ್ರಸಿದ್ಧಿ ಪಡೆದಿದೆ. 1790ರ ದಶಕದಲ್ಲಿ ಫ್ರೆಂಚ್ ಕ್ರಾಂತಿಯ ಸಮಯದಲ್ಲಿ ಫ್ರಾನ್ಸ್ ತನ್ನ ರಾಜಕೀಯ ಕೈದಿಗಳನ್ನು ಇಲ್ಲಿಗೆ ಗಡಿಪಾರು ಮಾಡುತ್ತಿತ್ತು. ರಾಜಕೀಯ ಕೈದಿಗಳನ್ನು ಸಾಗರದ ನಡುವಿನ ದ್ವೀಪವಾದ ಡೆವಿಲ್ಸ್ ಐಲೆಂಡಿನಲ್ಲಿಯೂ ಇತರ ಕೈದಿಗಳನ್ನು ಕುರೂ ಮತ್ತು ಸ್ಯಾಂಟ್ ಲಾರೆಟಿನ ಕೈದಿ ಶಿಬಿರಗಳಲ್ಲಿಯೂ ಇಡಲಾಗುತ್ತಿತ್ತು. ಈ ಕೈದಿ ಶಿಬಿರಗಳು ಕ್ರೌರ್ಯಕ್ಕೆ ಸುಪ್ರಸಿದ್ಧವಾಗಿದ್ದುವು. 1854ರಲ್ಲಿ ಕ್ರಮಬದ್ಧ ಜೈಲು ವ್ಯವಸ್ಥೆಯನ್ನು ಮಾಡಲಾಯಿತು. ಸುಮಾರು 70,000 ಕೈದಿಗಳನ್ನು ವಿವಿಧ ಜೈಲುಗಳಲ್ಲಿ 1852ರಿಂದ 1945ರ ತನಕ ಇಡಲಾಗಿತ್ತು. 1945ರಲ್ಲಿ ಜೈಲುಗಳನ್ನು ಮುಚ್ಚಿ ಕೈದಿಗಳನ್ನು ಫ್ರಾನ್ಸಿಗೆ ಮರಳಿಸಲಾಯಿತು. 1960ರ ದಶಕದಲ್ಲಿ ಕುರೂ ಶಿಬಿರವನ್ನು ಫ್ರಾನ್ಸ್ ಅಂತರಿಕ್ಷ ಸಂಶೋಧನ ಕೇಂದ್ರವಾಗಿ ಪರಿವರ್ತಿಸಿತು.

ಫ್ರೆಂಚ್ ಗಿಯಾನದ ಪ್ರಜೆಗಳು ಸಂಪೂರ್ಣ ಫ್ರಾನ್ಸಿನ ಪ್ರಜೆಗಳು. 1848ರಿಂದ ಇವರಿಗೆ ಮತ ನೀಡುವ ಹಕ್ಕಿದೆ. ಫ್ರೆಂಚ್ ಗಿಯಾನವನ್ನು ಫ್ರಾನ್ಸ್ ಸರ್ಕಾರ ತನ್ನ ಒಂದು ಜಿಲ್ಲೆ (ಡಿಪಾರ್ಟ್‍ಮೆಂಟ್) ಎಂದು ಅದರ ಆಡಳಿತ ನಿರೂಪಿಸಿದೆ. 1877ರಿಂದ ಈ ವಸಾಹತು ಫ್ರೆಂಚ್ ಪಾರ್ಲಿಮೆಂಟಿನಲ್ಲಿ ಪ್ರಾತಿನಿಧ್ಯ ಪಡೆದಿದೆ. (ಎಸ್.ಎಸ್.ಎಂ.ಯು.; ಎ.ವಿ.ವಿ.)