ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಫ್ರೋಬೆಲ್, ಫೀಡ್ರಿಕ್ ವಿಲ್ಹೆಲ್ಮ್‌ ಆಗಸ್ಟ್‌

ವಿಕಿಸೋರ್ಸ್ದಿಂದ

ಫ್ರೋಬೆಲ್, ಫೀಡ್ರಿಕ್ ವಿಲ್‍ಹೆಲ್ಮ್ ಆಗಸ್ಟ್ 1782-1852 ಜರ್ಮನಿಯ ಶಿಕ್ಷಣ ಕೋವಿದ. ಇವನ ಹೆಸರು ಶಿಕ್ಷಣಶಾಸ್ತ್ರದ ಇತಿಹಾಸದಲ್ಲಿ ಶಾಶ್ವತ ಸ್ಥಾನವನ್ನು ಗಳಿಸಿಕೊಂಡಿದೆ. ಈತ ನಿಯೋಜಿಸಿ ಸ್ಥಾಪಿಸಿ ಪ್ರಚಾರಕ್ಕೆ ತಂದ ಕಿಂಡರ್ ಗಾರ್ಟನ್ ಶಿಕ್ಷಣ ರಚನೆಯಲ್ಲಿ ತನ್ನದೇ ಆದ ಪ್ರತ್ಯೇಕ ಸ್ಥಾನವನ್ನು ಪಡೆದುಕೊಂಡು ಪ್ರಾಥಮಿಕ ಪೂರ್ವದ ಶಿಕ್ಷಣದ ಅರುಣೋದಯದ ಕಾಲದಲ್ಲಿ ಮಹತ್ತರ ಸಾಧನೆಯಾಗಿ ಪರಿಣಮಿಸಿದೆ. ಇವನ ಹೆಸರಿನೊಡನೆ ಹೆಣೆದುಕೊಂಡಿರುವ ಕಿಂಡರ್‍ಗಾರ್ಟನ್ ಪದ ಈಗ ಪ್ರಪಂಚದ ಎಲ್ಲ ಭಾಷೆಗಳ ಶಿಕ್ಷಣ ಸಾಹಿತ್ಯದಲ್ಲೂ ಅಂತರ್ಗತವಾಗಿ ಹೋಗಿದೆ.

ಪ್ರೋಬೆಲ್ 1782ರ ಏಪ್ರಿಲ್ 27ರಂದು ದಕ್ಷಿಣ ಜರ್ಮನಿಯ ಓಬರ್‍ವೈಷ್ ಬಾಷ್ ಎಂಬ ಹಳ್ಳಿಯಲ್ಲಿ ಜನಿಸಿದ. ಶೈಶವದಲ್ಲೆ ತಾಯಿ ತೀರಿಕೊಂಡಳು, ಪಾದ್ರಿ ಕೆಲಸಮಾಡುತ್ತಿದ್ದ ತಂದೆ ಪುನರ್ವಿವಾಹವಾದ. ಮಲತಾಯಿ ಪ್ರೋಬೆಲ್ಲನ ರಕ್ಷಣೆಯ ಬಗ್ಗೆ ನಿರ್ಲಕ್ಷ್ಯ ತೋರಿದಳು. ಸಹೋದರರು ತೀರ ದಡ್ಡರಾಗಿದ್ದರೂ ಅವರವರ ಯೋಗಕ್ಷೇಮವನ್ನು ನೋಡಿಕೊಳ್ಳುತ್ತಿದ್ದರು. ಹೀಗೆ ತಾಯಿತಂದೆಯರ ಮಮತೆಯನ್ನರಿಯದೆ, ಜೊತೆಗಾರರೊಡನೆ ಆಡುವ ಅವಕಾಶವಿಲ್ಲದೆ ಈತ ಅಷ್ಟು ಚಿಕ್ಕ ವಯಸ್ಸಿನಲ್ಲೆ ಒಂಟಿಯಾಗಿ ಕುಳಿತಿರುತ್ತ ಅಂತರ್ಮುಖಿಯಾಗುತ್ತ ಬಂದ. ಒಂದು ರೀತಿಯ ಮಂಕು ಬಡಿದವನಂತೆ ತೋರುತ್ತಿದ್ದ ಈತನನ್ನು ಬಾಲಕರ ಶಾಲೆಗೆ ಬದಲು ಬಾಲಕಿಯರ ಶಾಲೆಗೆ ಸೇರಬೇಕಾಯಿತು. ಶಾಲೆಯಲ್ಲಿ ಈತ ಕ್ರಮವಾದ ಶಿಕ್ಷಣ ಪಡೆಯಲಾರದೆ ನಿಸರ್ಗದ ಸನ್ನಿವೇಶಗಳಲ್ಲಿ ಆಸಕ್ತಿ ಬೆಳೆಸಿಕೊಳ್ಳುತ್ತ ಬಂದ. ಕ್ರಮಕ್ರಮವಾಗಿ ಅದರಲ್ಲೊಂದು ಗೂಡಾರ್ಥವನ್ನು ದರ್ಶಿಸಿ ಒಂದು ರೀತಿಯ ಆಧ್ಯಾತ್ಮಿಕ ಜೀವನ ನಡೆಸಲಾರಂಭಿಸಿದ. ಹತ್ತನೆಯ ವಯಸ್ಸಿನಲ್ಲಿ ಸ್ವಿಟ್ಸರ್‍ಲೆಂಡಿನಲ್ಲಿದ್ದ ತನ್ನ ಸೋದರಮಾವನ ಮನೆಗೆ ಹೋದ. ಅಲ್ಲಿ ನಾಲ್ಕು ವರ್ಷಗಳಕಾಲ ಶಾಲೆಯೊಂದರಲ್ಲಿ ಶಿಕ್ಷಣ ಪಡೆದು ಮತ್ತೆ ಜರ್ಮನಿಗೆ ಹಿಂದಿರುಗಿದ. ತಂದೆ ಈತನನ್ನು ಮರ ಕಡಿಯುವವನೊಬ್ಬನ ಬಳಿ ಕೆಲಸ ಕಲಿಯಲು ಬಿಟ್ಟ. ಅದರಿಂದ ಈತ ಮುಂದೆ ಅರಣ್ಯಶಾಖೆಯಲ್ಲಿ ಕೆಲಸ ಗಳಿಸುವ ಅವಕಾಶ ಬರುವುದೆಂದು ಭಾವಿಸಿದ. ಆದರೆ ಅದರಿಂದ ಇವನಿಗೆ ಯಾವ ಪ್ರಯೋಜನವೂ ಆಗದಾಯಿತು. ಕಡೆಗೆ ಹದಿನೇಳನೆಯ ವಯಸ್ಸಿನಲ್ಲಿ ಜೇನಾದಲ್ಲಿ ವೈದ್ಯವಿದ್ಯೆ ಕಲಿಯುತ್ತಿದ್ದ ತನ್ನ ಅಣ್ಣನ ಬಳಿಗೆ ಹೋದ. ಅಲ್ಲಿ ಬೋಧಿಸುತ್ತಿದ್ದ ಆಳವಾದ ಜ್ಞಾನವನ್ನು ಅರ್ಥಮಾಡಿಕೊಳ್ಳುವ ಶಕ್ತಿ ಈತನಿಗೆ ಇಲ್ಲವಾಗಿ ತತ್ತ್ವಶಾಸ್ತ್ರ, ಭೌತ ಮತ್ತು ರಸಾಯನಶಾಸ್ತ್ರ ಮುಂತಾದವನ್ನು ಕುರಿತ ಸರಳ ಉಪನ್ಯಾಸಗಳನ್ನು ಕೇಳುತ್ತಿದ್ದ. ಅಲ್ಲಿನ ವಿದ್ಯಾರ್ಥಿ ಜೀವನದಿಂದ ಈತನಿಗಾದ ಪ್ರಯೋಜನ ಅತ್ಯಲ್ಪವೇ. ಹಾಗೂ ವಿಶ್ವವಿದ್ಯಾಲಯಕ್ಕೆ ಕೊಡಬೇಕಾಗಿದ್ದ ಶುಲ್ಕವನ್ನು ಸಲ್ಲಿಸದೆ ಕೆಲವು ದಿನ ವಿಶ್ವವಿದ್ಯಾಲಯದ ಸೆರಮನೆ ವಾಸ ಅನುಭವಿಸಿದ. ವರ್ಷದ ಕೊನೆಯಲ್ಲಿ ಮತ್ತೆ ತಂದೆಯ ಮನೆಗೆ ಹಿಂದಿರುಗಿದ. ಏತಕ್ಕೂ ಬಾರದ ಶುಂಠನೆಂದು ಪರಿಗಣಿತನಾಗಿ ಎಲ್ಲರ ತಿರಸ್ಕಾರಕ್ಕೂ ಪಾತ್ರನಾದ. ಕಡೆಗೆ ಮನೆತೊರೆದು ಜೀವನೋಪಾಯಕ್ಕೆ ಕೆಲಸ ಹುಡುಕುತ್ತ ಊರೂರು ತಿರುಗಿದ. ಕೆಲಕಾಲ ಬೇಸಾಯ, ಕೆಲಕಾಲ ಕರಣಿಕವೃತ್ತಿ, ಕೆಲಕಾಲ ಮೋಜಣಿ ಕೆಲಸ ಹೀಗೆ ಏನೇನೋ ಮಾಡಿ ಯಾವುದರಲ್ಲೂ ಯಶಸ್ಸು ಕಾಣದೆ 1805ರಲ್ಲಿ ವಾಸ್ತುವಿದ್ಯೆ ಕಲಿಯುವ ಉದ್ದೇಶದಿಂದ ಫ್ರಾಂಕ್‍ಫರ್ಟ್ ನಗರಕ್ಕೆ ಹೋದ. ಅಲ್ಲಿ ಆಗ ಏರ್ಪಟ್ಟಿದ್ದ ಒಂದು ಪೆಸ್ಟಲಾಟ್ಜಿ ಶಾಲೆಯಲ್ಲಿ ಚಿತ್ರ ಬರೆಯುವ ಕಾರ್ಯಕ್ಕೆ ಈತನನ್ನು ಆಹ್ವಾನಿಸಲಾಯಿತು. ತನ್ನಲ್ಲಿ ಅಂತರ್ಗತವಾಗಿದ್ದ ಯಾವುದೋ ಪ್ರತಿಭೆಗೆ ಅದು ಯುಕ್ತ ವೃತ್ತಿಯೆಂದು ಈತನ ಮನಸ್ಸಿಗೆ ಹೊಳೆಯಿತು. ಅಲ್ಲಿನ ಪಾಠಪ್ರವಚನಗಳಲ್ಲಿ ಆಸಕ್ತಿಮೂಡಿತು. ಉತ್ಸಾಹದಿಂದ ಮಕ್ಕಳಿಗೆ ಪಾಠ ಹೇಳಿದ. ಸ್ವಲ್ಪ ದಿನಗಳ ಅನಂತರ ಯ್ವೆರ್‍ಡಮ್‍ನಲ್ಲಿ ಪೆಸ್ಟಲಾಟ್ಜಿ ನಡೆಸುತ್ತಿದ್ದ ಪಾಠಶಾಲೆಯನ್ನೂ ನೋಡಿಬಂದ. ಅಂದಿನ ಶಾಲೆಯಲ್ಲಿ ಪ್ರಚಾರದಲ್ಲಿದ್ದ ಮಾಮೂಲಿಬೋಧನೆ ಶಾಲೆಯಲ್ಲೂ ಮನೆಯಲ್ಲೂ ಮಕ್ಕಳ ಮೇಲೆ ನಡೆಯುತ್ತಿದ್ದ ದಬ್ಬಾಳಿಕೆ ಈತನಿಗೆ ಹಿಡಿಸಲಿಲ್ಲ. ಶಿಕ್ಷಣದಲ್ಲಿ ಮಹತ್ತರ ಬದಲಾವಣೆಯಾಗಬೇಕೆಂಬ ಭಾವನೆ ಬೆಳೆಯುತ್ತ ಬಂತು. ಹಾಗೆಯೇ ಜ್ಞಾನಾರ್ಜನೆ ಮಾಡಬೇಕೆಂಬ ಆಸಕ್ತಿಯೂ ಹೆಚ್ಚಿತು. ಕಡೆಗೆ ಶಾಲೆಯ ಕೆಲಸ ಬಿಟ್ಟು ವಿಶ್ವವಿದ್ಯಾಲಯದ ಶಿಕ್ಷಣ ಪಡೆಯುವ ಹಂಬಲ ಹೆಚ್ಚಿತು. ಆದರೆ ಅದು ಸಾಧ್ಯವಾಗದ್ದರಿಂದ ಮೂವರು ವಿದ್ಯಾರ್ಥಿಗಳಿಗೆ ಖಾಸಗಿಯಾಗಿ ಪಾಠ ಹೇಳಲಾರಂಭಿಸಿದ. ಜೀನ್ ಜಾಕಿರೂಸೋವಿನ ತತ್ತ್ವದೃಷ್ಟಿಯಲ್ಲಿ ಅವರ ಶಿಕ್ಷಣವನ್ನು ವ್ಯವಸ್ಥೆಗೊಳಿಸುವ ಕಾರ್ಯದಲ್ಲಿ ವಿಫಲನಾಗಿ ಆ ವಿದ್ಯಾರ್ಥಿಗಳನ್ನು ಕರೆದುಕೊಂಡು ಯ್ವೇರಡುಮ್‍ಗೆ ಹೋಗಿ ಅಲ್ಲಿ ಪೆಸ್ಟಲಾಟ್ಜಿ ನಡೆಸುತ್ತಿದ್ದ ವಿನೂತನ ಪಾಠಶಾಲೆಗೆ ಸೇರಿಸಿ ತಾನೂ ಅಲ್ಲೆ ಸಹಾಯಕ ಅಧ್ಯಾಪಕನಾಗಿ ಸೇರಿಕೊಂಡ. ಅಲ್ಲಿ ಕೆಲಸಮಾಡಿದ ನಾಲ್ಕು ವರ್ಷಗಳ ಕಾಲಾವಧಿಯಲ್ಲಿ ಪೆಸ್ಟಲಾಟ್ಜಿ ಪಾಠಕ್ರಮದ ವಿವಿಧ ವಿಷಯಗಳಲ್ಲಿದ್ದ ಸಂಬಂಧವನ್ನಾಗಲಿ ವಿದ್ಯಾರ್ಥಿಯ ಮನಸ್ಸಿನಲ್ಲಿರುವ ಹೊಂದಾಣಿಕೆಯನ್ನಾಗಲಿ ಅರಿಯುವುದು ಈತನಿಗೆ ಸಾಧ್ಯವಾಗಲಿಲ್ಲ. ಜ್ಞಾನದ ವಿವಿಧ ವಿಷಯಗಳಲ್ಲಿ ಅವುಗಳ ಬಗ್ಗೆ ಇದ್ದ ಆಧ್ಯಾತ್ಮಿಕ ಏಕತೆಗೂ ವಿಶ್ವದ ಎಲ್ಲ ಅಂಶಗಳಲ್ಲೂ ಕಂಡುಬರುವ ಬಾಂಧವ್ಯಕ್ಕೂ ಒಂದು ಶಾಶ್ವತವಾದ ಸಂಬಂಧವುಂಟೆಂಬ ಅಭಿಪ್ರಾಯಕ್ಕೆ ಇದು ಎಡೆಮಾಡಿಕೊಟ್ಟಿತು. ಕಡೆಗೆ ನಾಲ್ಕು ವರ್ಷಗಳ ಅನಂತರ ತನ್ನದೇ ಆದ ರೀತಿಯ ಒಂದು ಶಿಕ್ಷಣಸ್ವರೂಪವನ್ನು ದರ್ಶಿಸಿದ. ಅದರ ಆಧಾರದ ಮೇಲೆ ಕಿಂಡರ್‍ಗಾರ್ಟನ್ ಶಾಲೆಯನ್ನು ರೂಪಿಸಿದ. ಮತ್ತೆ ಫ್ರಾಂಕ್‍ಫರ್ಟಿಗೆ ಬಂದು ತನ್ನೊಡನೆ ಹಿಂದಿರುಗಿದ ವಿದ್ಯಾರ್ಥಿಗಳಿಗೆ ಪಾಠ ಹೇಳಲು ಯತ್ನಿಸಿದ. ಮನಸ್ಸಿನಲ್ಲಿ ತಾನೊಬ್ಬ ಖ್ಯಾತ ಅಧ್ಯಾಪಕ ಹಾಗೂ ಶಿಕ್ಷಣದ ಸುಧಾರಕನಾಗಬಲ್ಲೆನೆಂಬ ಭಾವನೆ ದೃಢವಾಗುತ್ತ ಬಂತು. ಆದರೆ ಶಿಕ್ಷಣ ಮತ್ತು ಜ್ಞಾನಗಳ ಬಗ್ಗೆ ತನಗೆ ತಕ್ಕಷ್ಟು ಅನುಭವವಿಲ್ಲದ ಅಂಶವೂ ಮನಸ್ಸಿಗೆ ಹೊಳೆಯುತ್ತಿತ್ತು. ಅವಕಾಶವಾದಷ್ಟು ಆ ಮುಖಗಳಲ್ಲಿ ಅನುಭವ ಸಾಧಿಸಿದ. ಮಾನವರಿಗೂ ನಿಸರ್ಗದ ಆಗುಹೋಗುಗಳಿಗೂ ಸಂಬಂಧವುಂಟೆಂದೂ ಅವುಗಳೊಡನೆ ಸಮನ್ವಯವಾಗುವಂತೆ ನಡೆದುಕೊಳ್ಳುವುದೇ ನಿಜವಾದ ಶಿಕ್ಷಣ ಎಂಬ ಸಿದ್ಧಾಂತ ಮನಸ್ಸಿನಲ್ಲಿ ರೂಪುಗೊಳ್ಳುತ್ತ ಬಂತು; ಅದರ ಆಧಾರದ ಮೇಲೆ ತನ್ನ ಕಿಂಡರ್‍ಗಾರ್ಟನ್ ಶಾಲೆಯನ್ನು ರೂಪಿಸಲು ನಿರ್ಧರಿಸಿಕೊಂಡ, ಆದರೆ ಯಾವ ತತ್ತ್ವದೃಷ್ಟಿಯ ಸರಿಯಾದ ತಳಹದಿಯೂ ಇಲ್ಲದಿದ್ದ ಈತ ತನ್ನ ಆ ಸಿದ್ಧಾಂತ ಒಂದು ಮಬ್ಬು ಜ್ಞಾನವೆಂದು ಭಾವಿಸಿದ. ಆ ಕೊರತೆಯನ್ನು ಸರಿಪಡಿಸಿಕೊಳ್ಳಲು 1811ರಲ್ಲಿ ಕೊಟೆಂಜನ್ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಯಾಗಿ ಸೇರಿದ. ಹೀಬ್ರೂ, ಅರಬ್ಬೀ, ಮುಂತಾದ ಭಾಷೆಗಳನ್ನು ಅಭ್ಯಸಿಸುವುದರಿಂದ ಜಗತ್ತಿನಲ್ಲಿ ಇರತಕ್ಕ ಏಕತೆಯನ್ನು ಅರಿಯಬಹುದೆಂದು ಕೆಲಕಾಲ ವ್ಯಾಸಂಗಮಾಡಿದ. ಅದರಿಂದ ಯಾವ ಪ್ರಯೋಜನವನ್ನೂ ಕಾಣದೆ ಕಡೆಗೆ ತತ್ತ್ವಶಾಸ್ತ್ರ, ನಿಸರ್ಗಶಾಸ್ತ್ರ, ಗಣಿತಶಾಸ್ತ್ರ ಇವನ್ನು ವ್ಯಾಸಂಗಮಾಡಲು ಯತ್ನಿಸಿದ. ಅವು ತನ್ನ ಸಿದ್ಧಾಂತಕ್ಕೆ ಹೆಚ್ಚು ಸಮರ್ಪಕವೆನಿಸಬಲ್ಲ ಮೂಲಭೂತ ನಿಯಮಗಳನ್ನು ಒಳಗೊಂಡಿರುವುವೆಂದು ಅರಿತುಕೊಂಡ. ಗೋಳಾಕೃತಿಯನ್ನು ಕುರಿತು ಪ್ರಬಂಧ ಬರೆದು ಅದು ಜಗತ್ತಿನಲ್ಲಿ ಅಸ್ತಿತ್ವದಲ್ಲಿರುವ ಏಕತೆಗೆ ಒಂದು ಸಂಕೇತವೆಂದು ಪ್ರತಿಪಾದಿಸಿದ. ಮೂರನೆಯ ವರ್ಷ ಬರ್ಲಿನ್ ವಿಶ್ವವಿದ್ಯಾಲಯ ಸೇರಿ ಸ್ಫಟಿಕಶಾಸ್ತ್ರವನ್ನು ವ್ಯಾಸಂಗಮಾಡಿ, ಸ್ಫಟಿಕದ ವಿವಿಧ ಮುಖಗಳ ಜಗತ್ತಿನ ಹಾಗೂ ಜನಜೀವನದ ವಿವಿಧ ಮುಖಗಳ ಸಂಕೇತವೆಂದು ಭಾವಿಸಿದ. ಆಗ ನೆಪೋಲಿಯನ್ನನ ವಿರುದ್ಧ ಎದ್ದಿದ್ದ ರಾಷ್ಟ್ರೀಯ ಆಂದೋಳನದಲ್ಲಿ ಕೆಲಕಾಲ ಕಳೆದು ಕಡೆಗೆ ವಿಶ್ವವಿದ್ಯಾಲಯದ ಲೋಹಪ್ರದರ್ಶನಾಲಯದಲ್ಲಿ ಸಹಾಯಕ ಮೇಲ್ವಿಚಾರಕನಾಗಿ ಕೆಲಸಕ್ಕೆ ಸೇರಿಕೊಂಡ, ಅನಂತರ ವಿಶ್ವವಿದ್ಯಾಲಯ ಅವನಿಗೆ ಒಂದು ಅಧ್ಯಾಪಕಸ್ಥಾನವನ್ನು ನೀಡಿದರೂ ಅದನ್ನು ಒಪ್ಪಿಕೊಳ್ಳದೆ ತನ್ನ ಜೀವನದ ಮಹೋದ್ದೇಶದಾದ ಶಿಕ್ಷಣ ಸುಧಾರಣೆಯ ಕಾರ್ಯದಲ್ಲಿ ತೊಡಗಿದ.

1916ರಲ್ಲಿ ಪ್ರೋಬೆಲ್ ತನ್ನ ಊರಾದ ಗ್ರೀಷೀಮ್‍ಗೆ ಹೋಗಿ ಅಲ್ಲಿ ತನ್ನ ಆದರ್ಶ ಪಾಠಶಾಲೆಯನ್ನು ಆರಂಭಿಸಿದ. ಒಂದು ಸಣ್ಣ ಗುಡಿಸಲಲ್ಲಿ ಆರಂಭವಾದ ಆ ಶಾಲೆಯಲ್ಲಿ ತನ್ನ ಅಣ್ಣನ ಕೆಲವು ಮಕ್ಕಳು ಮಾತ್ರ ವಿದ್ಯಾರ್ಥಿಗಳಾಗಿ ಸೇರಿದ್ದರು. ತನ್ನ ಅತ್ತಿಗೆಯೇ ಅದರ ಕಾರ್ಯನಿರ್ವಾಹಕಳಾದಳು. ಆದರೆ ಅಲ್ಲಿ ತಕ್ಕಷ್ಟು ಉಪಕರಣ ಇರಲಿಲ್ಲ. ಆದ್ದರಿಂದ ಹೆಚ್ಚು ವಿದ್ಯಾರ್ಥಿಗಳೂ ಸೇರಲಿಲ್ಲ. ಆದರೆ ಪ್ರೋಬೆಲ್ ಅದಕ್ಕೆ ವಿಶ್ವಜರ್ಮನ್ ವಿದ್ಯಾಸಂಸ್ಧೆ ಎಂಬ ದೊಡ್ಡ ಹೆಸರನ್ನು ಕೊಟ್ಟು ಆ ಹೆಸರೊಂದೇ ಅದರ ಪುರೋಭಿವೃದ್ಧಿಗೆ ಸಾಕೆಂದು ಭಾವಿಸಿದ. ಶಾಲೆಯಲ್ಲಿ ತಾನೇ ತಂದೆಯೋಪಾದಿಯಲ್ಲೂ ತನ್ನ ಅತ್ತಿಗೆ ತಾಯಿಯೋಪಾದಿಯಲ್ಲೂ ಇದ್ದುಕೊಂಡು ಅದಕ್ಕೊಂದು ಕುಟುಂಬ ಸ್ವರೂಪವನ್ನು ಕೊಟ್ಟ. ಆ ಶಾಲೆ ರಾಷ್ಟ್ರದಲ್ಲಿ ಮಹತ್ತರ ಪ್ರಯೋಗವೆಂದು ಪ್ರಚಾರವಾಗುತ್ತಿದ್ದರೂ ಅಲ್ಲಿಗೆ ವಿದ್ಯಾರ್ಥಿಗಳೇ ಸೇರುತ್ತಿರಲಿಲ್ಲ. ಆದ್ದರಿಂದ 1917ರಲ್ಲಿ ಪಕ್ಕದಹಳ್ಳಿಗೆ ಅದನ್ನು ವರ್ಗಾಯಿಸಿದ. ಅಲ್ಲಿ ವಿದ್ಯಾರ್ಥಿ ಸಂಖ್ಯೆ ಹೆಚ್ಚಿತು. ಯುದ್ಧಕಾಲದಲ್ಲಿ ತನ್ನೊಡನಿದ್ದ ಕೆಲವು ಸ್ನೇಹಿತರು ಬೆಂಬಲವಿತ್ತರು. ಅಣ್ಣ ಮಕ್ಕಳೂ ಅಧ್ಯಾಪಕರಾಗಿ ಸೇರಿದರು. ಆದರೆ ಅವರೊಡನೆ ಪ್ರೋಬೆಲ್ ಮನಸ್ತಾಪ ಬೆಳೆಸಿಕೊಳ್ಳಲಾರಂಭಿಸಿದ. ಶಾಲೆಯ ಆರ್ಥಿಕಸ್ಧಿತಿ ಹದಗೆಟ್ಟಿತು. ಕಡೆಗೆ ತಾನು ಆರಂಭಿಸಿದ್ದ ಆ ಸಂಸ್ಥೆ ರೂಪುಗೊಳ್ಳುತ್ತಿದ್ದಂತೆಯೇ ಅದನ್ನು ತೊರೆದು ಹೊರಬೀಳಬೇಕಾಯಿತು.

ಕೈಲ್ಹಾದಲ್ಲಿ ನಡೆಸಿದ ಆ ಪ್ರಾಯೋಗಿಕ ಶಾಲೆಯಲ್ಲಿ ಪಡೆದ ಅನುಭವ ಶಿಕ್ಷಣದ ಕರ್ತವ್ಯ ಮತ್ತು ಆಚರಣೆಯ ಬಗ್ಗೆ ಆಗಲೆ ತಳೆದಿದ್ದ ಧೋರಣೆಯನ್ನು ದೃಢಗೊಳಿಸಿತು. 1920ರಲ್ಲಿ ಕೆಲವು ಲೇಖನಗಳನ್ನು ಬರೆದು ಜರ್ಮನಿಯ ಶಾಲೆಗಳಿಗೆ ಬೇಕಾಗಿದ್ದ ಮೂಲ ಅವಶ್ಯಕತೆಗಳನ್ನು ಕ್ರೋಢೀಕರಿಸಿದ. ಆರು ವರ್ಷಗಳ ಅನಂತರ ಅವನ್ನು ದಿ ಎಜುಕೇಷನ್ ಆಫ್ ಮ್ಯಾನ್ ಎಂಬ ಹೆಸರಿನಲ್ಲಿ ಪ್ರಕಟಿಸಿದ. ಹತ್ತು ವರ್ಷದವರೆಗಿನ ಶಿಕ್ಷಣವನ್ನು ಅದರಲ್ಲಿ ವಿವರಿಸಲಾಗಿದೆ.

ಮೇಲೆ ಸೂಚಿಸಿದ ಗ್ರಂಥದಲ್ಲಿ ಫ್ರೋಬೆಲ್ ಶಿಕ್ಷಣಕ್ಕೆ ಸಂಬಂಧಿಸಿದ ತನ್ನ ತತ್ತ್ವದೃಷ್ಟಿಯನ್ನು ರೂಪಿಸಿದ್ದಾನೆ. ಈತ ಪ್ರಥಮತಃ ಆಧ್ಯಾತ್ಮವಾದಿ, ಗೂಢಾರ್ಥ, ಸಂಕೇತಾರ್ಥ, ಉದ್ರೇಕ ಮನೋಭಾವಾದಿಗಳಿಂದಲೂ ರಾಗ ಪರವಶತೆಯಿಂದಲೂ ಕೊಡಿರುವ ಈತನ ದೃಷ್ಟಿಪಥವನ್ನು ವಾಸ್ತವಿಕವಾಗಿ ಅರ್ಥಮಾಡಿಕೊಳ್ಳುವುದು ಕಷ್ಟವಾಗುತ್ತದೆ. ಇವನ ಅನಂತರ ಅದನ್ನು ಪರಿಷ್ಕರಿಸಿ ಪ್ರಕಟಿಸಿದ ತಜ್ಞರೂ ಅನುವಾದಕರೂ ಸ್ವಲ್ಪಮಟ್ಟಿಗೆ ಅದನ್ನು ಉತ್ತಮಪಡಿಸಿ ಅರ್ಥ ಕಲ್ಪಿಸಿರುವರು. ಇಷ್ಟಾದರೂ ಇವನ ಅನಂತರ ಶಿಕ್ಷಣವೇತ್ತರೆಲ್ಲ ಅವನ ಕೃತಿಯಿಂದ ಆಯ್ದ ಭಾಗಗಳನ್ನು ಯಥೇಚ್ಛವಾಗಿ ಉಲ್ಲೇಖಿಸಿಕೊಂಡು ತಮ್ಮ ವಾದಸರಣಿಯನ್ನು ಪೋಷಿಸಿಕೊಂಡಿರುವರು. ಅದಕ್ಕೆ ಆ ಕೃತಿಯಲ್ಲಿದ್ದ ಪ್ರಗತಿಪರ ಅಂಶಗಳೇ ಕಾರಣವೆನ್ನಬಹುದು.

ಪ್ರೋಬೆಲ್ಲನ ಪ್ರಕಾರ ವ್ಯಕ್ತಿ ತನ್ನ ಆಂತರಿಕ ಜೀವನದ ಆಧಾರದ ಮೇಲೆ ತನ್ನ ಬೆಳವಣಿಗೆಯ ಎಲ್ಲ ಮುಖಗಳನ್ನೂ ಸಾಧಿಸಬೇಕು. ಎಂದರೆ ವ್ಯಕ್ತಿಗೆ ಹುಟ್ಟಿನಿಂದ ಬಂದಿರುವ ಶಕ್ತಿಸಾಮಥ್ರ್ಯಗಳು ಶಿಕ್ಷಣಕ್ಕೆ ಆಧಾರ. ಅವನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು. ಪ್ರತಿವ್ಯಕ್ತಿಯೂ ತನ್ನ ಸಹಜ ಶಕ್ತಿಸಾಮಥ್ರ್ಯಗಳನ್ನು ಆದಷ್ಟು ಹೆಚ್ಚು ಅಭಿವೃದ್ಧಿಗೊಳಿಸಿಕೊಳ್ಳಲು ಪ್ರಯತ್ನಿಸುತ್ತಾನೆ. ವ್ಯಕ್ತಿಗೆ ಹಸ್ತಗತವಾಗಿರುವ ಶಕ್ತಿ ಸಾಮಥ್ರ್ಯಗಳು ಸುಮ್ಮನೆ ತಾವಾಗಿ ವಿಕಸಿಸುವುದಿಲ್ಲ. ಅವು ಬಹು ಸಂಕೀರ್ಣಸ್ವರೂಪದವು ಅವನ್ನು ಬೆಳೆಸಲು ವ್ಯಕ್ತಿ ಕಾರ್ಯಮುಖನಾಗಬೇಕು. ಪ್ರತಿ ವ್ಯಕ್ತಿಯೂ ತನ್ನ ಸಹಜ ಶಕ್ತಿಗಳನ್ನು ಬೆಳೆಸಿಕೊಳ್ಳುವಾಗ ವಿಶ್ವದೊಡನೆ ಹೊಂದಿಕೊಳ್ಳಲು ಯತ್ನಿಸುತ್ತಾನೆ. ದೈವದತ್ತ ಪ್ರತಿಭೆ ದೇವರ ಸೃಷ್ಟಿಯಾದ ಈ ಸಂಕೀರ್ಣ ವಿಶ್ವದ ಸನ್ನಿವೇಶದಲ್ಲಿ ಪ್ರಕಾಶಗೊಂಡು ದೈವತ್ವದ ಕಡೆ ಮಾನವನನ್ನು ಸಾಗಿಸುತ್ತದೆ. ಈ ಉದ್ದೇಶವನ್ನು ಅರಿತು ಅದನ್ನು ಸಾಧಿಸಿಕೊಳ್ಳುವಾಗ ಮಾನವ ನಿಸರ್ಗ ಸನ್ನಿವೇಶಗಳನ್ನು ಅಗತ್ಯವಾದಂತೆ ಮಾರ್ಪಡಿಸಿಕೊಳ್ಳುತ್ತಾನೆ.

ಆರಂಭದಲ್ಲಿ ಮಾನವ ಶಿಶು ಪಶುವಿನಂತೆ ಅನನುಭವಿ. ಬೆಳವಣಿಗೆಯ ಮೂಲಕ ಪೂರ್ಣತೆ ಸಿದ್ಧಿಸುತ್ತದೆ. ಆ ಕಾರ್ಯ ಅನೇಕ ಅಂತಸ್ತುಗಳಲ್ಲಿ ಸಾಗುತ್ತದೆ. ಒಂದೊಂದು ಅಂತಸ್ತು ಪೂರ್ಣವಾಗಿ ಸಿದ್ಧಿಸಿದ ಮೇಲೆ ಮುಂದಿನ ಅಂತಸ್ತಿಗೆ ಸಾಗುವುದು. ಮಾನವಕುಲ ಸಾಧಿಸಿರುವ ಸಮಗ್ರ ಅನುಭವದ ಇತಿಹಾಸವನ್ನು ವ್ಯಕ್ತಿಗೆ ಪರಿಚಯ ಮಾಡಿಕೊಡಲೆಂದೇ ಅಧ್ಯಾಪಕರು ಅಗತ್ಯವಾಗುತ್ತಾರೆ. (ನೋಡಿ- ಕಿಂಡರ್‍ಗಾರ್ಟನ್) (ಎನ್.ಎಸ್.ವಿ.)