ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಫ್ರ್ಯಾಂಕ್, ಜೇಮ್ಸ್‌

ವಿಕಿಸೋರ್ಸ್ದಿಂದ

ಫ್ರ್ಯಾಂಕ್, ಜೇಮ್ಸ್ 1882-1964. ಜರ್ಮನ್-ಅಮೇರಿಕನ್ ಭೌತವಿಜ್ಞಾನಿ. ಜನನ 26-8-1882. ಮರಣ 21-5-1964. 1906ರಲ್ಲಿ ಬರ್ಲಿನ್ ವಿಶ್ವವಿದ್ಯಾಲಯದಿಂದ ಭೌತವಿಜ್ಞಾನ ಡಾಕ್ಟೊರೇಟ್ ಪದವಿಗಳಿಸಿಕೊಂಡ. ಫ್ರ್ಯಾಂಕ್ ಒಂದನೆಯ ಮಹಾಯುದ್ಧದಲ್ಲಿ ಜರ್ಮನಿಗಾಗಿ ನೀಡಿದ ಸಮರ ಸೇವೆಗೆ ವಿಶಿಷ್ಟ ಪದಕದ ಗೌರವ ಪಡೆದ. ಮುಂದೆ 1920ರಲ್ಲಿ ಗಟಿಂಗೆನ್ನಿನಲ್ಲಿ ಭೌತವಿಜ್ಞಾನ ಪ್ರಾಧ್ಯಾಪಕನಾಗಿ ನೇಮಕಗೊಂಡ. ಇಲ್ಲಿ ಫ್ರ್ಯಾಂಕ್ ಹಾಗೂ ಹಟ್ರ್ಸ್ ನಡೆಸಿದ ಸಂಶೋಧನೆ ಇವರಿಗೆ 1925ರ ಭೌತವಿಜ್ಞಾನ ವಿಭಾಗದ ನೊಬೆಲ್ ಪಾರಿತೋಷಿಕ ಗಳಿಸಿಕೊಟ್ಟಿತು. ಈ ಸಂಶೋಧನೆಯಲ್ಲಿ ಇವರು ಅನಿಲಗಳನ್ನೂ ಬಾಷ್ಪಗಳನ್ನೂ (ಗ್ಯಾಸಸ್ ಅಂಡ್ ವೇಪರ್ಸ್) ವಿವಿಧ ಶಕ್ತಿಗಳ ಎಲೆಕ್ಟ್ರಾನುಗಳಿಂದ ಬಂಬಾಯಿಸಿದರು. ಶಕ್ತಿಯ ಒಂದು ಪೂರ್ಣ ಕ್ವಾಂಟಮ್ಮನ್ನು ಹೀರಲು ಅನುವು ಮಾಡುವಷ್ಟು ಶಕ್ತಿ ಎಲೆಕ್ಟ್ರಾನಿನಲ್ಲಿ ಇಲ್ಲದಿದ್ದಾಗ ಅದು ಪುಟಿತವಾಗಿ ಹಿಂಪುಟಿಯುತ್ತಿತ್ತು (ಇಲ್ಯಾಸ್ಟಿಕಲಿ ರೀಬೌಂಡ್). ಆಗ ಬೆಳಕಿನ ಉತ್ಸರ್ಜನೆ ಆಗುತ್ತಿರಲಿಲ್ಲ. ಸಾಕಷ್ಟುಶಕ್ತಿ ಇದ್ದಾಗ ಒಂದು ಕ್ವಾಂಟಮ್ ಹೀರಲ್ಪಟ್ಟು ಬೆಳಕು ಉತ್ಸರ್ಜಿಸಲ್ಪಟುತ್ತಿತ್ತು. ಇದು ಪ್ಲ್ಯಾಂಕನ ಕ್ವಾಂಟಮ್ ಸಿದ್ಧಾಂತದ ತೀರ್ಮಾನಗಳೊಡನೆ ಚಿನ್ನಾಗಿ ಹೊಂದಿಕೊಂಡು ಪರಮಾಣುವಿನ ಅಂತರಾಳದ ಬಗ್ಗೆ ಸಮರ್ಪಕ ಮಾಹಿತಿ ನೀಡಿತು. ಎಲೆಕ್ಟ್ರಾನುಗಳು ವಸ್ತುವಿನ ಪರಮಾಣುಗಳನ್ನು ಬಂಬಾಯಿಸಿದಾಗ ಉಂಟಾಗುವ ಶಕ್ತ್ಯಂತರ ಅಧ್ಯಯನವನ್ನು ಫ್ರ್ಯಾಂಕ್ ಹಾಗೂ ಹಟ್ರ್ಸ್ ನಡೆಸಿದರು. ಮಂದಗತಿಯಲ್ಲಿ ಚಲಿಸುವ ಎಲೆಕ್ಟ್ರಾನುಗಳು ಪಾದರಸದ ಪರಮಾಣುಗಳನ್ನು ಬಂಬಾಯಿಸಿದಾಗ ಶಕ್ತಿಯ ವರ್ಗಾವಣೆ ನಡೆಯುವುದೇ ಎಂಬುದನ್ನು ವೀಕ್ಷಿಸುವುದು ಪ್ರಯೋಗದ ಉದ್ದೇಶ. ಇದಕ್ಕಾಗಿ ವಿವಿಧ ಶಕ್ತಿಯ ಎಲೆಕ್ಟ್ರಾನುಗಳನ್ನು ಬಳಸಿಕೊಳ್ಳಲಾಯಿತು. ಎಲೆಕ್ಟ್ರಾನಿನ ಶಕ್ತಿ 4.9 eಗಿಗಿಂತ ಕಡಿಮೆ ಇದ್ದಾಗ ಶಕ್ತಿಯ ವರ್ಗಾವಣೆ ನಡೆಯದು ಎನ್ನುವ ಮುಖ್ಯ ವಿಷಯ ತಿಳಿದುಬಂತು. ಇದರಿಂದ ತಿಳಿಯುವುದೇನೆಂದರೆ ಎಲೆಕ್ಟ್ರಾನಿನ 4.9 eಗಿ ಶಕ್ತಿಯನ್ನು ಪರಮಾಣುವಿನಲ್ಲಿರುವ ಎಲೆಕ್ಟ್ರಾನ್ ಪಡೆದು ಒಂದು ಉದ್ರಿಕ್ತ ಮಟ್ಟಕ್ಕೆ ಸ್ಥಿತ್ಯಂತರಗೊಳ್ಳುವುದು. ಅಂದರೆ ಪರಮಾಣುವಿನಲ್ಲಿ ವಿವಿಧ ಉದ್ರಿಕ್ತಮಟ್ಟಗಳಿರುವ ಅಂಶವನ್ನು ಪ್ರಯೋಗಿಕವಾಗಿ ಸಿದ್ಧಪಡಿಸಿದಂತಾಯಿತು. ನೀಲ್ಸ್‍ಬೋರ್ ಆದಾಗಲೇ ಈ ಅಂಶವನ್ನು ತನ್ನ ಪರಮಾಣುವಾದಲ್ಲಿ ಮಂಡಿಸಿದ್ದ. ಇದರಂತೆ, ಉದ್ರಿಕ್ತಮಟ್ಟದಿಂದ ಪರಮಾಣುವಿನ ಎಲೆಕ್ಟ್ರಾನ್ ತನ್ನ ಹಿಂದಿನ ಮಟ್ಟಕ್ಕೆ ಮರಳಿದಾಗ ಅಷ್ಟೇ ಶಕ್ತಿಯ (4.9 eಗಿ) ವಿಕಿರಣವನ್ನು ಹೊರದೂಡಬೇಕಾಗುವುದು. ಬೋರನ ಆವರ್ತಾಂಕ ನಿಬಂಧನೆಯಂತೆ ಲೆಕ್ಕಾಚಾರ ಹಾಕಿದಾಗ ಪಾದರಸ ಪರಮಾಣು 2530x10-8 ಸೆಂಮೀ ಅಲೆಯುದ್ಧದ ವಿಕಿರಣವನ್ನು ನೀಡಬೇಕಾಗುವುದು. ಫ್ರ್ಯಾಂಕ್ ಹಾಗೂ ಹಟ್ರ್ಸ್ ಉದ್ರಿಕ್ತ ಪಾದರಸದ ರೋಹಿತದ ಅತಿನೇರಿಳೆ ಪ್ರದೇಶದಲ್ಲಿ 2535(10-8 ಸೆಂ ಮೀ ಅಲೆಯುದ್ದದ ವಿಕಿರಣವನ್ನು ಪತ್ತೆಹಚ್ಚುವಲ್ಲಿ ಸಫಲರಾದರು.

ಇವರ ಸಂಶೋಧನೆ ಬೋರ್‍ನ ಪರಮಾಣುವಾದವನ್ನು ಪುಷ್ಟೀಕರಿಸಿದಂತಾಯಿತು.

ನಾಟ್ಸೆ ಸರ್ಕಾರದ ಧೋರಣೆಯಿಂದ ಕುಪಿತಗೊಂಡ ಫ್ರ್ಯಾಂಕ್ 1933ರಲ್ಲಿ ತನ್ನ ಹುದ್ದೆಗೆ ರಾಜೀನಾಮೆ ನೀಡಿ ಅಮೆರಿಕಕ್ಕೆ ವಲಸೆ ಹೋದ 1935ರಲ್ಲಿ ಬಾಟ್ಲೀ ಮೋರಿನ ಜಾನ್ಸ್ ಹಾಪಕಿನ್ಸ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕನಾಗಿ ನೇಮಕಗೊಂಡ. 1938ರಲ್ಲಿ ಶಿಕಾಗೋ ವಿಶ್ವವಿದ್ಯಾಲಯದ ಭೌತ ರಸಾಯನವಿಜ್ಞಾನ ವಿಭಾಗದ ಮುಖ್ಯಸ್ಥನಾದ.

ಎರಡನೆಯ ಮಹಾಯುದ್ಧದ ವೇಳೆ ಪರಮಾಣು ಬಾಂಬಿನ ರಚನಾಕಾರ್ಯದಲ್ಲಿ ಈತನೂ ಭಾಗಿಯಾಗಿದ್ದ. ಆದರೆ ಬಾಂಬನ್ನು ಜಪಾನಿನ ಮೇಲೆ ಅಸ್ಫೋಟಿಸುವುದನ್ನು ಪ್ರಬಲವಾಗಿ ವಿರೋಧಿಸಿದ್ದ. ಮಾರಕ ಪರಮಾಣು ಬಾಂಬನ್ನು ಭವಿಷ್ಯತ್ತಿನಲ್ಲಿ ಯಾರೂ ಬಳಸಬಾರದಾಗಿ ಅಂದಿನ ಯುದ್ಧಕಾರ್ಯದರ್ಶಿಯನ್ನು ವಿನಂತಿಸಿಕೊಂಡ ವಿಜ್ಞಾನಿಗಳ ಪೈಕಿ ಫ್ರ್ಯಾಂಕನೂ ಒಬ್ಬ. (ಕೆ.ಎಚ್.ಬಿ.ಎಚ್.)