ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಫ್ಲೆಕರ್, ಜೇಮ್ಸ್‌ ಎಲರಿ

ವಿಕಿಸೋರ್ಸ್ದಿಂದ

ಫ್ಲೆಕರ್, ಜೇಮ್ಸ್ ಎಲರಿ 5-11-1884-3-1-1915. ಆಂಗ್ಲಕವಿ ಮತ್ತು ನಾಟಕಕಾರ. ಹುಟ್ಟಿದ್ದು ಲಂಡನ್ನಿನಲ್ಲಿ. ರಾಯಭಾರಿಯಾಗಿ ಸೇವೆ ಸಲ್ಲಿಸುವ ಆಸೆಯಿಂದ ಪ್ರಾಚ್ಯ ಭಾಷೆಗಳನ್ನು ಕಲಿಯಲು ಕೇಂಬ್ರಿಜ್ ವಿಶ್ವವಿದ್ಯಾಲಯದ ಕೆಯಸ್ ಕಾಲೇಜು ಸೇರಿದ. ಅನಂತರ 1910ರ ಜೂನ್ ತಿಂಗಳಲ್ಲಿ ನೌಕರಿ ಹಿಡಿದು ಕಾನ್‍ಸ್ಟ್ಯಾಂಟಿನೋಪಲ್ಲಿಗೆ ಹೋದ. ಆ ವರ್ಷವೇ ಟ್ವೆಂಟಿಸಿಕ್ಸ್ ಪೊಯಮ್ಸ್ ಎಂಬ ಇವನ ಕವನ ಸಂಕಲನ ಬಿಡುಗಡೆಯಾಯಿತು. ಸೆಪ್ಟೆಂಬರ್ ತಿಂಗಳ ಹೊತ್ತಿಗೆ ಕಾಯಿಲೆ ಬಿದ್ದುದರಿಂದ ಇಂಗ್ಲೆಂಡಿಗೆ ಮರಳಿದ. 1911ರ ಮಾರ್ಚ್ ತಿಂಗಳಿನಲ್ಲಿ ಗುಣಮುಖನಾಗಿ ಮತ್ತೆ ಕೆಲಸಕ್ಕೆ ವಾಪಸ್ಸಾದ. ಏಪ್ರಿಲ್‍ನಲ್ಲಿ ಸ್ಮಿರ್ನಕ್ಕೆ ವರ್ಗವಾಯಿತು. 1913ರ ಆದಿಯಲ್ಲಿ ಕಾಯಿಲೆ ಮರುಕಳಿಸಿದ್ದರಿಂದ ಸುಧಾರಿಸಿಕೊಳ್ಳಲು ಸ್ವಿಟ್ಜರ್‍ಲೆಂಡಿಗೆ ಹೋದ. ಅದೇ ವರ್ಷ ದಿ ಗೋಲ್ಡನ್ ಜರ್ನಿ ಟು ಸಮರ್‍ಕಂಡ್ ಎಂಬ ಕವನ ಸಂಕಲನ ಪ್ರಕಟಿಸಿದ. ಕಾಯಿಲೆಯಿಂದ ಚೇತರಿಸಿಕೊಳ್ಳಲಾಗದೆ. ದವಾಸ್‍ನಲ್ಲಿ 31ನೆಯ ವಯಸ್ಸಿನಲ್ಲಿ ನಿಧನವಾದ.

ಇವನಲ್ಲಿ ಪರಾಸಿಯನ್ ಪಂಥದ ಪ್ರಭಾವ ಆಗೀಗ ಕಂಡುಬಂದರೂ ಈತ ಯಾವ ಫಂಥಕ್ಕೂ ಸೇರಿದವನಲ್ಲ. ಈತ ಕಾವ್ಯಕ್ಕೆ ಆರಿಸಿಕೊಂಡ ಹಲವಾರು ವಸ್ತುಗಳಲ್ಲಿ ಗ್ರೀಸ್, ಪೌರಸ್ತ್ಯ ದೇಶಗಳು ಹಾಗೂ ಇಂಗ್ಲೆಂಡಿಗೆ ಸಂಬಂಧಿಸಿದ ವಿಷಯಗಳೇ ಆಗಾಗ್ಗೆ ಕಾಣುತ್ತವೆ. ತನ್ನ ಓಕ್ ಮತ್ತು ಅಲಿವ್ ಎಂಬ ಕೃತಿಯಲ್ಲಿ ಈತ ತಾನೊಬ್ಬ ಶ್ರೇಷ್ಠ ಕವಿಯೆಂಬುದನ್ನು ಸಾದರಪಡಿಸಿದ್ದಾನೆ. ಇವನ ಕೆಲವು ಭಾವಗೀತೆಗಳಾದ ಎ.ಷಿಪ್, ಎನ್ ಐಲ್ ಮತ್ತು ಡೈಯಿಂಗ್ ಪೇಟ್ರಿಯಟ್ ಕವನಗಳನ್ನು ಸುಲಭವಾಗಿ ಮರೆಯುವಂತಿಲ್ಲ. ಹಸನ್ ಮತ್ತು ಡಾನ್ ವಾನ್ ಎಂಬ ಎರಡು ನಾಟಕಗಳು ಈತ ಸತ್ತ ಅನಂತರ ಹೊರ ಬಂದುವು. ಎರಡನೆಯದಕ್ಕಿಂತ ಮೊದಲನೆಯ ನಾಟಕ ನಿಜವಾಗಿಯೂ ಚೆನ್ನಾಗಿದೆ. ನಾಟಕದ ವಿಷಯವೆ ಹೊಸತು. ಇದರ ಪಾತ್ರ ವಿನ್ಯಾಸ, ಏರಿಳಿಯುವ ಭಾವೋದ್ರೇಕ, ಆಗೀಗ ಪರ್ಯಾಯವಾಗಿ ಬರುವ ಹಾಸ್ಯಲಹರಿ ಮತ್ತು ಛಂದೋಗತಿಯ ಸಾಮರಸ್ಯಗಳಿಂದ ಜನಪ್ರಿಯವೆನಿಸಿದೆ. ದಿ ಗ್ರೀಕ್ಸ್ (1910) ಎಂಬ ನಾಟಕ ದಿ ಕಿಂಗ್ ಆಫ್ ಅಸ್ಲಾಂಡರ್ (1914) ಎಂಬ ಕಾದಂಬರಿ ಇವನ ಇನ್ನೆರಡು ಕೃತಿಗಳು.

ಈತನ ಇನ್ನೂ ಮೂರು ಮುಖ್ಯ ಕೃತಿಗಳೆಂದರೆ : ಜೆ.ಸಿ.ಸ್ಕ್ವೇರ್‍ನ ಮುನ್ನುಡಿಯೊಂದಿಗೆ ಪ್ರಕಟವಾದ ಕಾವ್ಯಸಂಗ್ರಹ (1916); ಗದ್ಯಸಂಗ್ರಹ (1920 ಮತ್ತು 1922) ಮತ್ತು ಫ್ಯ್ರಾಂಕ್ ಸೇವರ್‍ಗೆ ಬರೆದ ಲೇಖನಗಳು (1926). (ಎ.ಎಂ.ಎ.)