ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಫ್ಲೆಮಿಂಗ್, ಅಯಾನ್ ಲಂಕಾಸ್ಟರ್

ವಿಕಿಸೋರ್ಸ್ದಿಂದ

ಫ್ಲೆಮಿಂಗ್, ಅಯಾನ್ ಲಂಕಾಸ್ಟರ್ 1908-64. ಜನಪ್ರಿಯ ರೋಮಾಂಚಕ ಕಾದಂಬರಿ ಕರ್ತೃ ಜೇಮ್ಸ್‍ಬಾಂಡ್ ಪಾತ್ರದ ಸೃಷ್ಟಿ ಕರ್ತ. 20ನೆ ಶತಮಾನದ ಸಾಹಿತ್ಯದ ನಾಯಕ ಪಾತ್ರಗಳೆಲ್ಲೆಲ್ಲ ಜೇಮ್ಸ್‍ಬಾಂಡ್ ಅತ್ಯಂತ ಯಶಸ್ವೀಪಾತ್ರ ಎನಿಸಿದೆ.

1908 ಮೇ 28ರಂದು ಲಂಡನ್ನಿನಲ್ಲಿ ಹುಟ್ಟಿದ ಈತನ ವ್ಯಾಸಂಗ ಇಂಗ್ಲೆಂಡ್, ಜರ್ಮನಿ ಹಾಗೂ ಸ್ವಿಟ್ಜರ್ಲೆಂಡುಗಳಲ್ಲಾಯಿತು. 1929ರಿಂದ 33ರ ತನಕ ಮಾಸ್ಕೋದಲ್ಲಿ ಪತ್ರಕರ್ತನಾಗಿದ್ದ. 1935-39ರ ಅವಧಿಯಲ್ಲಿ ಲೇವಾದೇವಿಗಾರ ಮತ್ತು ಮಾರುಕಟ್ಟೆ ದಲ್ಲಾಳಿಯಾಗಿ ಕೆಲಸ ಮಾಡಿದ, ಎರಡನೆಯ ಮಹಾಯುದ್ಧ ಕಾಲದಲ್ಲಿ ಬ್ರಿಟಿಷ್ ನೌಕಾದಳದ ಗುಪ್ತಚಾರ ಪಡೆಯಲ್ಲಿ ಉನ್ನತಾಧಿಕಾರಿಯಾಗಿ ಸೇವೆಸಲ್ಲಿಸಿದ. ಯುದ್ಧಾನಂತರ ಲಂಡನ್ನಿನ ಸಂಡೇ ಟೈಮ್ಸ್ ಪತ್ರಿಕೆಯ ವಿದೇಶಾಂಗ ಮ್ಯಾನೇಜರ್ ಆಗಿ ದುಡಿದ.

ಜೇಮ್ಸ್‍ಬಾಂಡ್ ಸೃಷ್ಟಿ ಪಾತ್ರದ 13 ಕಾದಂಬರಿಗಳ ಪೈಕಿ ಕ್ಯಾನೆನೊ ರಾಯಲ್ (1953) ಮೊದಲನೆಯದು. ಹಿಂಸಾಪೂರಿತ ಸಾಹಸ, ಕೂದಲೆಳೆಯಷ್ಟರಲ್ಲಿ ರೋಮಾಂಚಕ ಪಲಾಯನ, ಅಂತಾರಾಷ್ಟ್ರೀಯ ಗೂಢಾಚರ್ಯೆ, ಭಯಾನಕತೆ ಪಿತೂರಿ ಇತ್ಯಾದಿಗಳೆಲ್ಲವನ್ನು ಹಿಡಿದು ತುಂಬಿರುವ ಈತನ ಕಾದಂಬರಿಗಳು ಪ್ರಪಂಚ ವಿಖ್ಯಾತವಾಗಿದೆ. ಈತನ ಕೃತಿಗಳು 11 ಭಾಷೆಗಳಿಗೆ ಭಾಷಾಂತರವಾಗಿ, ಎರಡು ಕೋಟಿಗೂ ಹೆಚ್ಚು ಪ್ರತಿಗಳು ಮಾರಾಟವಾಗಿವೆ.

ಜೂಜು, ವಾಯುವೇಗದ ಕಾರುಗಳು ತುಂಬುಯೌವನದ ತರುಣಿಯರತ್ತ ಒಲವುಳ್ಳ ಜೇಮ್ಸ್‍ಬಾಂಡ್ ಪಾತ್ರ 50-60ರ ದಶಕದಲ್ಲಿ ಪ್ರಪಂಚಾದ್ಯಂತ ಮೆಚ್ಚಿಗೆಗಳಿಸಿತು. ಅನೇಕ ಬಾಂಡ್ ಕಾದಂಬರಿಗಳು ಅದ್ಧೂರಿಯ ಚಲನಚಿತ್ರಗಳಾಗಿ ಯಶಸ್ಸು ಕಂಡವು. ಫ್ರಮ್ ರಷ್ಯಾ ವಿತ್‍ಲವ್ (1957); ಡಾ. ನೋ. (1958); ಗೋಲ್ಡ್‍ಫಿಂಗರ್ (1959); ತಂಡರ್‍ಬಾಲ್ (1961); ಡೈಮಂಡ್ ಫಾರ್ ಎವೆರ್ (1966); ಮ್ಯಾನ್ ವಿತ್ ಗೋಲ್ಡನ್ ಗನ್ ಇತ್ಯಾದಿ.

43ನೆಯ ವಯಸ್ಸಿನ ತನಕವೂ ಅವಿವಾಹಿತನಾಗಿದ್ದ ಈತ 1952 ಮಾರ್ಚ್ 24ರಂದು ಲೇಡಿ ರೋತ್‍ವಿಯರಳನ್ನು ಮದುವೆಯಾದ. 1964 ಆಗಸ್ಟ್ 12ರಂದು ಇಂಗ್ಲೆಂಡಿನ ಕ್ಯಾಂಟರ್‍ಬರಿಯಲ್ಲಿ ಮರಣಹೊಂದಿದ. (ಎಸ್.ಎಸ್.ಎಂ.ಯು.)