ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬರ್ಗ್ಸನ್, ಹೆನ್ರಿ

ವಿಕಿಸೋರ್ಸ್ದಿಂದ

ಬರ್ಗ್‍ಸನ್, ಹೆನ್ರಿ 1859-1941. ಫ್ರೆಂಚ್ ತತ್ತ್ವಶಾಸ್ತ್ರಜ್ಞ. ಆಧುನಿಕ ಜಗತ್ತಿನ ದಾರ್ಶನಿಕರಲ್ಲಿ ಅಂತಃಜ್ಞಾನದ ಪ್ರಾಶಸ್ತ್ಯವನ್ನು ಎತ್ತಿ ಹಿಡಿದವ. ಪ್ಯಾರಿಸಿನಲ್ಲಿ ಹುಟ್ಟಿದ. ತಂದೆ ಪೋಲೆಂಡಿನವ. ತಾಯಿ ಆಂಗ್ಲಮಹಿಳೆ. ಸಾರ್‍ಬಾನ್, ಪ್ಯಾರಿಸ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕನಾಗಿ ಸೇವೆ ಸಲ್ಲಿಸಿದ. ಈತನ ಆಕರ್ಷಕ ಬೋಧನಕ್ರಮ ಮೆಚ್ಚಿ ಜನ ಎಲ್ಲ ದೇಶಗಳಿಂದಲೂ ಉಪನ್ಯಾಸ ಕೇಳಲು ಬರುತ್ತಿದ್ದರು. ಈತನ ತತ್ತ್ವದೃಷ್ಟಿ ಫ್ರಾನ್ಸ್‍ನಲ್ಲಿ ಮಾತ್ರವಲ್ಲದೆ ಜರ್ಮನಿ, ಅಮೆರಿಕ ದೇಶಗಳಲ್ಲಿಯೂ ಪ್ರಭಾವ ಬೀರಿದೆ. ಮಾನವನಿಗೆ ಬಹಿರಂಗಜ್ಞಾನವನ್ನು ಅವನ ಬುದ್ಧಿ ಮಾಡಿಕೊಡುತ್ತದೆ. ಆದರೆ ವಿಶ್ವದ ಆಂತರಿಕ ತತ್ತ್ವದ ಸಾಕ್ಷಾತ್ಕಾರ ಬುದ್ಧಿಯನ್ನು ಮೀರಿದ ಅಪರೋಕ್ಷ ಜ್ಞಾನದಿಂದ ಸಾಧ್ಯವಾಗುತ್ತದೆ ಎಂಬುದು ಈತನ ವಾದ. ಆಧುನಿಕ ದಾರ್ಶನಿಕರಲ್ಲಿ ಈತ ಆರ್ಷಜ್ಞಾನದ ಪ್ರತಿಪಾದಕ. ಹಲವಾರು ಗ್ರಂಥಗಳ ಕರ್ತೃ. ಇವುಗಳ ಪೈಕಿ ಮುಖ್ಯವಾದವು ಇಂಟ್ರಡಕ್ಷನ್ ಟು ಮೆಟಫಿಸಿಕ್ಸ್ ಮತ್ತು ಕ್ರಿಯೇಟೀವ್ ಎವಲ್ಯೂಷನ್. ಈತ ಬೌದ್ಧ ದರ್ಶನದಲ್ಲಿ ಕಾಣುವಂಥ ಕ್ಷಣಿಕವಾದವನ್ನು ಮುಂದಿಡುತ್ತಾನೆ. ಸಾಹಿತ್ಯಕ ಕೆಲಸಕ್ಕಾಗಿ ಈತನಿಗೆ 1927ರಲ್ಲಿ ನೊಬೆಲ್ ಪ್ರಶಸ್ತಿ ಲಭಿಸಿವೆ.

ಬರ್ಗ್‍ಸನ್ನನ ವಾದವನ್ನು ಬರ್ಗ್‍ಸನಿಸಮ್ (ಆರ್ಷಜ್ಞಾನವಾದ) ಎನ್ನಲಾಗಿದೆ. (ನೋಡಿ- ಆರ್ಷಜ್ಞಾನ) ಇದು ಅಪರೋಕ್ಷ ಜ್ಞಾನದ ಸಾಧ್ಯತೆಯನ್ನು ಎತ್ತಿ ಹಿಡಿದಿದೆ. ವಿಜ್ಞಾನದ ದಾರಿ ಬುದ್ಧಿ, ದರ್ಶನದ ದಾರಿ ಭಾವ ಎನ್ನುವ ವಿಚಾರಕ್ಕೆ ಗಮನ ಕೊಡುವ ಆಧುನಿಕ ದಾರ್ಶನಿಕರನ್ನು ಬರ್ಗ್‍ಸೋನಿಯರೆಂದು ಕರೆಯಬಹುದು. (ಎಂ.ವೈ.)