ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬಸವನಾಳ, ಶಿವಲಿಂಗಪ್ಪ ಶಿವಯೋಗಪ್ಪ

ವಿಕಿಸೋರ್ಸ್ದಿಂದ

ಬಸವನಾಳ, ಶಿವಲಿಂಗಪ್ಪ ಶಿವಯೋಗಪ್ಪ 1893-1951. ಸಾಹಿತಿ, ಶಿಕ್ಷಣತಜ್ಞ, ಸಮಾಜಸುಧಾರಕ. ವೀರಶೈವಧರ್ಮ ಮತ್ತು ಸಂಸ್ಕøತಿಗಳ ಪುನರುಜ್ಜೀವನಕ್ಕಾಗಿ ಶ್ರಮಿಸಿದವರು.

ಹುಟ್ಟಿದ್ದು 7-11-1893ರಂದು ಧಾರವಾಡ ಜಿಲ್ಲೆಯ ಹಾವೇರಿಯಲ್ಲಿ. ತಂದೆ ಶಿವಯೋಗಪ್ಪನವರು ಜನಪ್ರಿಯ ಸ್ಟೇಷನ್ ಮಾಸ್ತರು. ಬಾಲ್ಯದ ವಿದ್ಯಾಭ್ಯಾಸ ಬಳ್ಳಾರಿಯ ಸುತ್ತಮುತ್ತಣ ಊರುಗಳಲ್ಲಿ. ಗದುಗಿನಲ್ಲಿ ಮಾಧ್ಯಮಿಕ ಶಾಲೆ ಮುಗಿಸಿ ಅನಂತರ ಧಾರವಾಡ ಸೇರಿ 1910ರಲ್ಲಿ ಮೆಟ್ರಿಕ್ ಪಾಸು ಮಾಡಿದರು. 1911ರಲ್ಲಿ ಪುಣೆಯ ಡೆಕ್ಕನ್ ಕಾಲೇಜನ್ನು ಸೇರಿದರು. ಅಲ್ಲಿ ಹಳಗನ್ನಡ ಸಾಹಿತ್ಯದ ಬಗ್ಗೆ ಅಭಿರುಚಿ ಬೆಳಸಿಕೊಂಡರು. 1916ರಲ್ಲಿ ಮುಂಬಯಿ ವಿಶ್ವವಿದ್ಯಾಲಯದ ಎಂ.ಎ. ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಪಡೆದು ತೇರ್ಗಡೆಯಾದರು. ಲಿಂಗಾಯುತ ಸಮಾಜದಲ್ಲಿ ಮೊದಲು ಎಂ.ಎ. ಪರೀಕ್ಷೆಯಲ್ಲಿ ತೇರ್ಗಡೆಯಾಗುವವರಿಗಾಗಿ ಧಾರವಾಡದ ಲಿಂಗಾಯುತ ಫಂಡಿನ ಸಂಘ ಇಟ್ಟಿದ್ದ ನಿಧಿಯನ್ನು ಪಡೆದರು. ಮುಂದೆ ಕನ್ನಡ-ಸಂಸ್ಕøತ-ಇಂಗ್ಲಿಷ್ ಭಾಷೆಗಳಲ್ಲಿ ಘನವಿದ್ವಾಂಸರೆನಿಸಿಕೊಂಡರು. ಇವರಿಗೆ ಮರಾಠಿ ಮತ್ತು ತೆಲುಗು ಭಾಷೆಗಳ ಪರಿಚಯವೂ ಇತ್ತು.

1916ರಲ್ಲಿ ಕರ್ನಾಟಕ ಲಿಂಗಾಯುತ ಎಜುಕೇಷನ್ ಅಸೋಸಿಯೇಷನ್ ಎಂಬ ಸಂಸ್ಥೆಯನ್ನು ಸ್ಥಾಪನೆ ಮಾಡಿದರು. ಇದರ ಮೂಲಕ ಬೆಳಗಾಂವಿಯಲ್ಲಿ ಗಿಲಗಂಚಿ ಅರಟಾಳ ಹೈಸ್ಕೂಲು ಸ್ಥಾಪನೆಯಾಯಿತು. 1922ರಲ್ಲಿ ಧಾರವಾಡದಲ್ಲಿ ರಾಜಾಲಖಮಗೌಡ ಸರದೇಸಾಯಿ ಹೈಸ್ಕೂಲನ್ನು ಪ್ರಾರಂಭಿಸಿದರು. 1933ರಲ್ಲಿ ಬೆಳಗಾಂವಿಯ ಲಿಂಗರಾಜ ಕಾಲೇಜನ್ನು ಸ್ಥಾಪಿಸಿ, ಅದರ ಪ್ರಾಧ್ಯಾಪಕರನ್ನಾಗಿ ಡಾ|| ನಂದಿಮಠ ಅವರನ್ನು ನೇಮಿಸಿದರು. ಅದೇ ಕಾಲೇಜಿನಲ್ಲಿ ಕನ್ನಡ ಮತ್ತು ಇತಿಹಾಸ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು. ಬಾರ್ಶಿ, ಬಾಗಲಕೋಟೆ, ಸೊಲ್ಲಾಪುರಗಳಲ್ಲಿ ಕರ್ನಾಟಕ ಲಿಂಗಾಯತ ವಿದ್ಯಾಸಂಸ್ಥೆಯ ವತಿಯಿಂದ ಹೈಸ್ಕೂಲುಗಳನ್ನು ಸ್ಥಾಪಿಸಿದರು. ಬಸವನಾಳರು ಶಿಕ್ಷಣವೇತ್ತರು, ಶಿಕ್ಷಣ ಪ್ರಸಾರದಲ್ಲಿ ಅಗಾಧ ನಂಬಿಕೆಯುಳ್ಳವರಾಗಿದ್ದು ಜನಾನುರಾಗಿಗಳಾಗಿದ್ದರು. ಇದರಿಂದ ನಾಡಿನ ಹಲವು ಕಡೆ ಕಾಲೇಜು ಸ್ಥಾಪಿಸಲು ಇವರಿಗೆ ತೊಂದರೆಯಾಗಲಿಲ್ಲ. ಬೆಳಗಾಂವಿಯ ಲಿಂಗರಾಜ ಕಾಲೇಜು ಮತ್ತು ಟ್ರೈನಿಂಗ್ ಕಾಲೇಜು, ಸೊಲ್ಲಾಪುರದಲ್ಲಿ ಕಾಡಾದಿ ಹೈಸ್ಕೂಲು, ಸಂಗಮೇಶ್ವರ ಕಾಲೇಜು; ಬಾಗಲಕೋಟೆಯ ಬಸವೇಶ್ವರ ಕಾಲೇಜು, ಬಳ್ಳಾರಿಯ ವೀರಶೈವ ಕಾಲೇಜು, ಹುಬ್ಬಳ್ಳಿಯ ಭೂಮರೆಡ್ಡಿ ಎಂಜಿನಿಯರಿಂಗ್ ಕಾಲೇಜು ಮತ್ತು ಜೆ.ಜೆ. ಕಾಮರ್ಸ್ ಕಾಲೇಜು, ಬಿಜಾಪುರದ ಸಿದ್ಧೇಶ್ವರ ಹೈಸ್ಕೂಲು ಮತ್ತು ವಿಜಯಾ ಕಾಲೇಜು ಹೀಗೆ ನಾನಾ ಕಡೆ ಕಾಲೇಜುಗಳ ಸ್ಥಾಪನೆಗಾಗಿ ದುಡಿದರು.


ಬಸವನಾಳರು ಅಸಾಧ್ಯ ಸಂಘಟನಾ ಪಟುವಾಗಿದ್ದರು. ಕರ್ನಾಟಕ ವಿಶ್ವವಿದ್ಯಾಲಯದ ಸ್ಥಾಪನೆಯಲ್ಲಿ ಇವರ ಪರಿಶ್ರಮ ಅಗಾಧವಾದುದು. ಕರ್ನಾಟಕ ವಿಶ್ವವಿದ್ಯಾಲಯದ ಸ್ಥಾಪಕರಾಗಿ, ಪ್ರಮುಖ ಸದಸ್ಯರಾಗಿ ಸೇವೆ ಸಲ್ಲಿಸಿದರು. ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಬೋರ್ಡ್ ಪರೀಕ್ಷಾ ಸದಸ್ಯರಾಗಿಯೂ ಮುಂಬಯಿ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯರಾಗಿಯೂ ಕೆಲಸ ಮಾಡಿದರು. ಧಾರವಾಡದ ವಿದ್ಯಾವರ್ಧಕ ಸಂಘದ ಮುಂದಾಳುಗಳಾಗಿದ್ದರು.

ಬಸವನಾಳರು ಹಳಗನ್ನಡದಲ್ಲಿ ಒಳ್ಳೆಯ ಪಾಂಡಿತ್ಯವನ್ನು ಪಡೆದಿದ್ದುದಲ್ಲದೆ ಗ್ರಂಥ ಸಂಪಾದನಾಕಾರ್ಯದಲ್ಲೂ ನಿಷ್ಣಾತರಾಗಿದ್ದು ಕಾವ್ಯವಲೋಕನಂ; ಕರ್ನಾಟಕ ಶಬ್ದಾನುಶಾಸನ ಪ್ರಕಾಶಿಕೆ; ಚೆನ್ನಬಸವ ಪುರಾಣ; ಪ್ರಭುಲಿಂಗ ಲೀಲೆ; ಶಬರಶಂಕರ ವಿಳಾಸಂ; ವೀರಶೈವ ತತ್ತ್ವಪ್ರಕಾಶ; ಬಸವಣ್ಣನವರ ವಚನಗಳು; ಗಿರಿಜಾಕಲ್ಯಾಣ; ಪಂಪಾಶತಕ; ರಕ್ಷಾಶತಕ; ಬಸವಪುರಾಣ; ಮಲುಹಣ ರಗಳೆ; ಕುಂಬಾರ ಗುಂಡಯ್ಯ ರಗಳೆ; ಕೈವಲ್ಯ ಕಲ್ಪವಲ್ಲರಿ; ಹಿಂದೂಸ್ಥಾನದ ಇತಿಹಾಸ-ಮುಂತಾದ ಗ್ರಂಥಗಳನ್ನು ಸಂಪಾದಿಸಿ ಪ್ರಕಟಿಸಿದರು. ಇದರ ಜೊತೆಗೆ ಬಸವಣ್ಣನವರ 120 ವಚನಗಳನ್ನು ವಿದ್ವಾಂಸರ ಶ್ರೀನಿವಾಸ ಅಯ್ಯಂಗಾರರ ಸಹಕಾರದಿಂದ ಮ್ಯೂಸಿಂಗ್ಸ್ ಆಫ್ ಬಸವ ಎಂಬ ಹೆಸರಿನಲ್ಲಿ ಇಂಗ್ಲಿಷಿಗೆ ಅನುವಾದಿಸಿದರು.

ಇವರು 1944ರಲ್ಲಿ ರಬಕವಿಯಲ್ಲಿ ನಡೆದ 28ನೆಯ ಅಖಿಲ ಕರ್ನಾಟಕ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದರು. ಅದೇ ವರ್ಷ ಹಿರೇಕೆರೂರಿನಲ್ಲಿ ನಡೆದ ಅಖಿಲ ಭಾರತ ವೀರಶೈವ ಸಮ್ಮೇಳನದ ಉದ್ಘಾಟಕರಾಗಿ ಆರಿಸಲ್ಪಟ್ಟು ಗೌರವಾನ್ವಿತರಾದರು. ವೀರಶೈವ ಸಾಹಿತ್ಯದಲ್ಲಿ ಇವರದು ಪ್ರಕಾಂಡ ಪಾಂಡಿತ್ಯ.

ಪತ್ರಿಕಾಕರ್ತರಾಗಿ ಇವರು ಸಲ್ಲಿಸಿದ ಸೇವೆ ಬಹು ದೊಡ್ಡದು. ಬೆಳಗಾಂವಿಯಿಂದ ಸುಮಾರು 50 ವರ್ಷಗಳ ಹಿಂದೆಯೆ ಪ್ರಬೋಧ ಎಂಬ ಮಾಸಪತ್ರಿಕೆಯನ್ನು ಪ್ರಾರಂಭಿಸಿ ನಡೆಸಿದರು. ವಿದ್ಯಾವರ್ಧಕ ಸಂಘದ ವಾಗ್ಭೂಷಣ ಪತ್ರಿಕೆಯಲ್ಲೂ ಸೇವೆ ಸಲ್ಲಿಸಿದರು. ಆಲೂರ ವೆಂಕಟರಾಯದಿಂದ ಪ್ರಾರಂಭಿಸಲ್ಪಟ್ಟು, ಬೆಳಗಾಂವಿ ರಾಮಚಂದ್ರರಾಯದಿಂದ ಮುಂದುವರಿಸಲ್ಪಟ್ಟ ಜಯಕರ್ನಾಟಕ ಮಾಸಪತ್ರಿಕೆಯನ್ನು ವಹಿಸಿಕೊಂಡು ಉತ್ತಮವಾಗಿ ನಡೆಸಿದರು. ಅಲ್ಲದೆ ಜಯಕರ್ನಾಟಕ ವಾರಪತ್ರಿಕೆಯನ್ನು ಹೊರಡಿಸಿದರು. ಕನ್ನಡ ಮತ್ತು ಇಂಗ್ಲಿಷ್ ಪತ್ರಿಕೆಗಳಿಗೆ ನೂರಾರು ಮಹತ್ತ್ವದ ಲೇಖನಗಳನ್ನು ಬರೆದರು. ತಮ್ಮ 58ನೆಯ ವಯಸ್ಸಿನಲ್ಲಿ 22-12-1951ರಂದು ನಿಧನರಾದರು. (ಎಸ್.ಕೆ.ಎ.)