ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬಹುರೂಪಿ ಚೌಡಯ್ಯ

ವಿಕಿಸೋರ್ಸ್ದಿಂದ

ಬಹುರೂಪಿ ಚೌಡಯ್ಯ ಕ್ರಿ.ಶ. ಸು. 1160. ವಚನಕಾರ ಹಾಗೂ ಶಿವಶರಣ, ಬಸವಣ್ಣನವರ ಸಮಕಾಲೀನ ಎನ್ನಲಾಗಿದೆ. ಶ್ರೀಧರಗಣೇಶ್ವರನ ಅವತಾರವೆನಿಸಿದ್ದ ಈತ ಗಾಯನ, ನರ್ತನ, ಜಾತಿಗಾರ ಕಲೆಗಳನ್ನು ಕಾಯಕವಾಗಿ ಮಾಡಿಕೊಂಡಿದ್ದ ರೇಕಳಿಕೆ ಗ್ರಾಮದ ಜನವಶ್ಯ (ಜನಸೇವ್ಯ) ಮತ್ತು ಧರ್ಮವತಿ ಎಂಬ ಬ್ರಾಹ್ಮಣ ದಂಪತಿಗಳ ಮಗನಾಗಿ ಹುಟ್ಟಿದ ಈತ ಅದೇ ಗ್ರಾಮದ ರೇಕನಾಥಾಚಾರ್ಯರಿಂದ (ರೇಕಣ್ಣ) ವೀರಶೈವ ದೀಕ್ಷೆ ಪಡೆದ, ಅನಂತರ ಈತ, ಚಿತ್ರವಿಚಿತ್ರವಾದ ಬಹುರೂಪಗಳನ್ನಾಡಿ ಭಕ್ತರನ್ನು ತಣಿಸುವ ಹಾಗೂ ಧರ್ಮಪ್ರಸಾರ ಮಾಡುವ ಕಾಯಕವನ್ನು ಕೈಗೊಂಡ. ಅದರಿಂದ ದೊರೆತ ಸಂಪತ್ತಿನಿಂದ ದಾಸೋಹ ಮಾಡಲಾರಂಭಿಸಿದ.

ಒಮ್ಮೆ ತನ್ನೊಡನೆ ಸ್ಪರ್ಧೆಗೆ ಬಂದ ನೀಲಗಿರಿ (ಕೋಟೆಗಿರಿ) ರಾಮದೇವ ಭೂಪಾಲನ ಆಸ್ಥಾನ ಕಲಾವಿದ ಅಚ್ಯುತನನ್ನೂ ಇನ್ನೊಬ್ಬ ಕಲಾವಿದ ಯಕ್ಷನಾಥನನ್ನು ಭರತನಾಟ್ಯದಲ್ಲಿ ಸೋಲಿಸಿ ಅನಂತರ ಅವರಿಬ್ಬರನ್ನೂ ತನ್ನ ಶಿಷ್ಯರನ್ನಾಗಿ ಮಾಡಿಕೊಂಡು ಮೇಳದಲ್ಲಿ ಸೇರಿಕೊಂಡ.

ಚೌಡಯ್ಯನಿಗೆ ಒಮ್ಮೆ ಜಂಗಮರಿಗೆ ಒಂದು ಗಣಪರ್ವ ಮಾಡಬೇಕೆಂಬ ಮನಸ್ಸಾಯಿತು. ಆದರೆ ಅದಕ್ಕೆ ಸಾಕಾಗುವಷ್ಟು, ಹಣ ಆತನಲ್ಲಿರಲಿಲ್ಲ. ಅದರ ಸಲುವಾಗಿ ಆತ ತನ್ನ ಪ್ರೀತಿಯ ರಾಗವಾದ ರಾಮಕ್ರಿಯರಾಗವನ್ನು ಅರಸನಲ್ಲಿ ಒತ್ತೆಯಿಟ್ಟು ಹನ್ನೆರಡು ಸಾವಿರ ವರಹಗಳನ್ನು ಪಡೆದು ಅದರಿಂದ ದಾಸೋಹವನ್ನು ಪೂರೈಸಿದ.

ಅನಂತರ ಶಿವನಾಗಿನಾಥನೆಂಬ ಜಂಗಮ ರೂಪಿನಲ್ಲಿ ಚೌಡಯ್ಯನ ಬಳಿಗೆ ಬಂದು ಪರೀಕ್ಷೆಗಾಗಿ ರಾಮಕ್ರಿಯಾರಾಗವನ್ನು ಅವನಿಂದ ಕೇಳಲು ಬಯಸಿದ. ಆದರೆ ಒತ್ತೆಯ ಹಣ ಸಂದಾಯವಾಗುವವರೆಗೂ ಆ ರಾಗವನ್ನು ಹಾಡುವುದು ತನ್ನಿಂದ ಸಾಧ್ಯವಿಲ್ಲವೆಂದು ಹೇಳಿದ ಚೌಡಯ್ಯ ಬೇಕಾದರೆ ಆವರೆಗೂ ಆ ಜಂಗಮರೂಪಿ ತನ್ನಲ್ಲೇ ಉಳಿದಿರಬಹುದೆಂದು ಸೂಚಿಸಿದ. ಅದರಂತೆ ಶಿವ ಅಲ್ಲೆ ಉಳಿದ. ತನ್ನ ಕಾಯಕದಿಂದ ಚೌಡಯ್ಯ ಹಣವನ್ನು ತೀರಿಸುತ್ತ ಬಂದ. ಅದೇ ಸಮಯದಲ್ಲಿ ನಾಗಿನಾಥ ಈತನಿಗೆ ವೀರಶೈವ ತತ್ತ್ವಗಳನ್ನು ಬೋಧಿಸಿದ. ಆದ್ದರಿಂದ ಚೌಡಯ್ಯ ನಾಗಿನಾಥನನ್ನೂ ತನ್ನ ಜ್ಞಾನಗುರುವೆಂದು ತಿಳಿದು, ತನ್ನ ದೀಕ್ಷಾಗುರುವಾದ ರೇಕನಾಥನನ್ನು ಒಟ್ಟಿಗೆ ಸೇರಿಸಿಕೊಂಡಂತೆ `ರೇಕಯ್ಯಪ್ರಿಯ ನಾಗಿನಾಥ ಎಂಬ ಅಂಕಿತವನ್ನು ತನ್ನ ವಚನಗಳಲ್ಲಿ ಇಟ್ಟುಕೊಂಡ.

ಸಾಲ ತೀರಿದ ಮೇಲೆ, ಚೌಡಯ್ಯ ರಾಮಕ್ರಿಯಾರಾಗವನ್ನು ನಾಗಿನಾಥನ ಎದುರು ಹಾಡಿ ತೋರಿಸಿದ. ಸಂತುಷ್ಟನಾದ ನಾಗಿನಾಥ ತನ್ನ ನಿಜರೂಪವನ್ನು ತೋರಿಸಿ ಹರಸಿದ.

ಬಸವಾದಿ ಪ್ರಮಥರ ವಿಷಯ ತಿಳಿದಿದ್ದ ಈತ ಮುಂದೆ ಕಲ್ಯಾಣಕ್ಕೆ ಹೋಗಿ ಅವರ ದರ್ಶನ ಪಡೆದು ಶಿವಶರಣರ ಚರಿತ್ರೆಗಳನ್ನು ಉತ್ತಮವಾಗಿ ಅಭಿನಯಿಸಿ ತನ್ನ ಕಲೆಯಿಂದ ಎಲ್ಲರನ್ನೂ ಸಂತೋಷಗೊಳಿಸಿ ಅದನ್ನೇ ಕಾಯಕ ಮಾಡಿಕೊಂಡು, ತನ್ನ ಜೀವನದ ಕೊನೆಯವರೆಗೂ ಅಲ್ಲಿಯೇ ಇದ್ದು ಜೀವನ್ಮುಕ್ತನಾದ.

ಈ ವರೆಗೆ ದೊರೆತು ಪ್ರಕಟವಾಗಿರುವ, ಚೌಡಯ್ಯನ ವಚನಗಳ ಸಂಖ್ಯೆ ನಲವತ್ತನಾಲ್ಕು. ಅತಿ ಉದ್ದವೂ ಅಲ್ಲದ ಅತಿ ತುಂಡೂ ಅಲ್ಲದ ವಚನಗಳು ಇವು. ಬಸವಣ್ಣನವರ ವಚನಗಳ ಸರಳತೆ ಇಲ್ಲಿಲ್ಲ. ಹೆಚ್ಚಿನವು ಬೆಡಗಿನ ವಚನಗಳೇ ಆಗಿವೆ. ಸಮಾಜದ ವಿಡಂಬನೆಯಾಗಲಿ, ನೀತಿಬೋಧನೆಯಾಗಲಿ ಇಲ್ಲಿ ಇಲ್ಲವೆಂದೇ ಹೇಳಬೇಕು. ಷಟ್ಸ್ಥಳವನ್ನು ಕುರಿತ ವಿವಿಧ ವಿಷಯಗಳ ವಿವರಣೆ ಇಲ್ಲಿ ಹೆಚ್ಚು.

ಆಡುವಡೆ ಸದಾಚಾರಿಗಳ ಕೂಡೆ ಆಡುವುದು
ನುಡಿವಡೆ ಜಂಗಮ ಪ್ರೇಮಿಯ ಕೂಡೆ ನುಡಿವುದು
ಮಾತಾಡುವಡೆ ಪ್ರಸಾದಿಯ ಕೂಡೆ ಮಾತನಾಡುವುದು
ಭಕ್ತಿಹೀನನ ಕಂಡಂತೆ ಮನಮುನಿಸ ಮಾಡಿಸಾ ರೇಕಣ್ಣ ಪ್ರಿಯನಾಗಿನಾಥಾ

ಇಲ್ಲಿ ಬಸವಣ್ಣನವರ ದಟ್ಟಪ್ರಭಾವವನ್ನು ಗುರುತಿಸಬಹುದು. ಈತ ತನ್ನ ಕಾಯಕಕ್ಕೆ ಸಂಬಂಧಿಸಿದ ಅಂಶಗಳನ್ನೇ ವಿಶೇಷವಾಗಿ ಬಳಸಿಕೊಂಡು ವಚನಗಳನ್ನು ರಚಿಸಿದ್ದಾನೆ. (ಕೆ.ಚಿ.ಎಸ್.ಪಿ.)