ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬಾಕ್ಸಿಂಗ್

ವಿಕಿಸೋರ್ಸ್ದಿಂದ

ಬಾಕ್ಸಿಂಗ್ ಪರಸ್ಪರ ಮುಷ್ಟಿಗಳಿಂದ ಸೆಣೆಸಾಡುವ ಒಂದು ಕ್ರೀಡೆ. ಇದನ್ನು ಪ್ಯುಜಿಲಿಸಮ್ ಎಂತಲೂ ಕರೆಯುತ್ತಾರೆ. ಮುಷ್ಟಿಯುದ್ಧವೆಂದರೆ ಇದೇ. ಮಹಾಭಾರತದಲ್ಲಿ ಕೀಚಕ, ಜರಾಸಂಧ ಹಾಗೂ ಬಕಾಸುರರ ಕೂಡ, ಭೀಮ ಮುಷ್ಟಿಯುದ್ಧ ಮಾಡಿದ ಪ್ರಸಂಗಗಳುಂಟು. ಇದು ಒಂದು ವಿಧದ ಸ್ವಸಂರಕ್ಷಕ ರೀತಿ. ಕ್ರಿ.ಪೂ. 300ರಲ್ಲಿ ಈಜಿಪ್ಟಿನಲ್ಲಿ ಮುಷ್ಟಿಯುದ್ಧ ಪ್ರಚಾರದಲ್ಲಿತ್ತು. ಪ್ರಾಚೀನ ಗ್ರೀಸಿನಲ್ಲಿ ಮುಷ್ಟಿಯುದ್ಧದಷ್ಟು ಜನಪ್ರಿಯ ಕ್ರೀಡೆ ಬೇರೊಂದು ಇರಲಿಲ್ಲ. ಬಯಲಿನಲ್ಲಿ ಒಬ್ಬರಿಗೊಬ್ಬರು ಹತ್ತಿರದಲ್ಲೇ ನಿಂತು ಗುದ್ದಾಡುತ್ತಿದ್ದುದು ಆಗಿನ ಮುಷ್ಟಿಯುದ್ಧದ ರೀತಿ. ಎದುರಾಳಿ ಸೂರ್ಯನ ಕಡೆ ಮುಖ ಮಾಡುವಂತೆ ಮಾಡಿ ಸೂರ್ಯನ ಕಿರಣಗಳು ಅವನ ಕಣ್ಣು ಕುಕ್ಕುವಂತೆ ಮಾಡುವುದು ರೂಢಿಯಲ್ಲಿತ್ತು. ಅರ್ಧಮಿನಿಟ್ಟಿನ ತರುವಾಯ ಪುನಃ ಕಾಳಗ ಆರಂಭವಾಗುತ್ತಿತ್ತು. ಈ ರೀತಿ ನೂರಾರು ಸುತ್ತುಗಳ ಕಾಳಗ ನಡೆಯುತ್ತಿತ್ತು. ಕೆಲವೊಮ್ಮೆ ಇದು ಸಾವಿನಲ್ಲೂ ಪರ್ಯಾವಸಾನವಾಗುತ್ತಿತ್ತು. ಆದರೆ ಈಗಿನ ರೀತಿಯೇ ಬೇರೆಯಾಗಿದ್ದು ಯುಕ್ತ ನಿಯಮಾವಳಿಗಳು ಏರ್ಪಟ್ಟಿವೆ. ಕೈಗಳನ್ನು ಏಟುಗಳಿಂದ ಕಾಪಾಡಲು ಮತ್ತು ಹೊಡೆತಕ್ಕೆ ಹೆಚ್ಚು ತೀಕ್ಷ್ಣತೆ ಬರಲು ಈಗ ತೊಗಲಿನ ಚೀಲಗಳನ್ನು ಬಳಸಲಾಗುತ್ತಿದೆ.

ಬಾಕ್ಸಿಂಗ್ ಪಾಶವೀ ತರಹದ ಕ್ರೀಡೆಯೆಂದು 1896 ರಲ್ಲಿ ಕೈಬಿಡಲಾಗಿತ್ತು. 1904ರಲ್ಲಿ ಇದರ ಪ್ರದರ್ಶನ ಏರ್ಪಡಿಸಲಾಯಿತು. ಪ್ರಥಮತಃ ಒಲಿಂಪಿಕ್ಸ್ ಕ್ರೀಡೆ ಎಂದು ಇಡಲಾಯಿತು. ಮುಂದೆ ಸ್ಟಾಕ್‍ಹೋಮ್ ಒಲಿಂಪಿಕ್ಸ್‍ನಲ್ಲಿ (1912) ಇದರ ಸ್ಪರ್ಧೆಯನ್ನು ಏರ್ಪಡಿಸಲಾಯಿತು. ಸೇಂಟ್‍ಲೂಯಿ ಒಲಿಂಪಿಕ್ಸಿನಲ್ಲಿ 2 ವಿವಿಧ ದೈಹಿಕ ತೂಕಗಳ ವರ್ಗಗಳನ್ನು ಮಾಡಲಾಯಿತು. ಈಗ 9 ವರ್ಗಗಳಿವೆ. ಅಂದರೆ ಸ್ಪರ್ಧಾಳುವಿನ ದೇಹ ತೂಕದ ಆಧಾರದ ಮೇಲೆ ಇದನ್ನು ವರ್ಗೀಕರಿಸಲಾಗಿದೆ. ಸ್ಪರ್ಧೆಗಳು ಆಯಾ ವಿಭಾಗಗಳಲ್ಲಿ ಮಾತ್ರವೇ ನಡೆಯುತ್ತವೆ.

ವರ್ಗೀಕರಣ ಈ ರೀತಿ ಇದೆ.

112 ಪೌಂಡಿಗಿಂತ ಕಡಿಮೆ ತೂಕ ಫ್ಲೈವೇಯ್ಟ್ 118 ” ಬಾಟಮ್ ವೇಯ್ಟ್ 126 ” ಫೆದರ್ ವೇಯ್ಟ್ 135 ” ಲೈಟ್ ವೇಯ್ಟ್ 147 ” ವೆಲ್ಟರ್ ವೇಯ್ಟ್ 160 ” ಮಿಡ್ಲ್ ವೇಯ್ಟ್ 175 ” ಲೈಟ್ ಹೆವಿ ವೇಯ್ಟ್ 175 ಪೌಂಡಿಗಿಂತ ಹೆಚ್ಚು ತೂಕ ಹೆವಿ ವೇಯ್ಟ್

ಸ್ಪರ್ಧೆಯ ನಿಯಮಗಳು: ಸ್ಪರ್ಧೆ ನಡೆಯುವ ಜಾಗಕ್ಕೆ ರಿಂಗ್ ಎಂದು ಹೆಸರು. ಇದು ಚೌಕಾಕಾರದಲ್ಲಿರುವುದು. ಇದರ ಅಳತೆ 12 ಘಿ 12 ರಿಂದ 20 ಘಿ 20 ಚ.ಅ.ವರೆಗೆ ಇರಬಹುದು. ಈ ಚೌಕಾಕೈತಿಯ ನಾಲ್ಕು ಮೂಲೆಗಳಲ್ಲಿಯೂ 4 ರಿಂದ 5 ಅಡಿಗಳವರೆಗಿನ ಕಂಬಗಳನ್ನು ನೆಟ್ಟಿರುತ್ತಾರೆ. ಇದರಲ್ಲಿ ಕಂಬದಿಂದ ಕಂಬಕ್ಕೆ 2 ಅಥವಾ ಮೂರು ಹಗ್ಗಗಳನ್ನು ಒಂದರಿಂದ ಇನ್ನೊಂದಕ್ಕೆ ಸೇರಿಸಿ ಸಮಾಂತರವಾಗಿ ಕಟ್ಟುತ್ತಾರೆ. ನೆಲ ರಬ್ಬರಿನಿಂದ ಮಾಡಲ್ಪಟ್ಟಿದ್ದಾಗಿರಬಹುದು ಇಲ್ಲವೇ ಬಟ್ಟೆ ಅಥವಾ ಜಮಖಾನವನ್ನು ಹೊದಿಸಿದ್ದಾದರೂ ಇರಬಹುದು. ಇದರ ಮೇಲೆ ಆಟಗಾರರು ಬಿದ್ದರೂ ಹೆಚ್ಚು ಪೆಟ್ಟಾಗುವುದಿಲ್ಲ.

ಸ್ಪರ್ಧೆ ನಡೆಯುವ ಅವಧಿ: 2 ಮಿನಿಟುಗಳ 3 ಸುತ್ತು ಇರುತ್ತದೆ. ಕೆಲವು ವೇಳೆ 3 ಮಿನಿಟುಗಳ ಮೂರು ಸುತ್ತುಗಳನ್ನು ಒಳಗೊಂಡಿರುತ್ತದೆ. ಮೊದಲನೆಯ 2 ಸುತ್ತುಗಳು 2 ಮಿನಿಟ್ ಅನಂತರದ ಸುತ್ತು 3 ಮಿನಿಟೆಂದು ಕೂಡ ಮಾಡುತ್ತಾರೆ. ಸೋಲು ಗೆಲುವುಗಳನ್ನು ಅಂಕಗಳ ಮೂಲಕ ನಿರ್ಧರಿಸಲಾಗುತ್ತದೆ. ಹೆಚ್ಚಿನ ಹೊಡೆತಗಳಿಗೆ ಮತ್ತು ಆಯಾ ಹೊಡೆತಕ್ಕೆ ಬೇರೆ ಬೇರೆಯಾದಂತೆ ಅಂಕಗಳಿರುತ್ತವೆ. ಯಾರು ಹೆಚ್ಚು ಅಂಕಗಳನ್ನು ಗಳಿಸುತ್ತಾರೊ ಅವರು ವಿಜಯಿಗಳೆಂದು ತೀರ್ಪು ನೀಡುತ್ತಾರೆ. ಹೋರಾಡಿದ ರೀತಿಯನ್ನು ಅವಲಂಬಿಸಿ ಸೋತವನಿಗೂ ಅಂಕಗಳೂ ಸಿಗುತ್ತವೆ. ಹೊಡೆತಗಳನ್ನು ಕೊಡುವಾಗ ಕೆಲವೊಂದು ನಿಯಮಗಳಿವೆ. ಅವನ್ನು ಪಾಲಿಸಲೇ ಬೇಕು. ಕೈಗಳನ್ನು ಮುಷ್ಟಿ ಹಿಡಿದು ಮಾತ್ರವೇ ಹೊಡೆಯಬೇಕು, ಸೊಂಟಕ್ಕೆ ಸೊಂಟದಿಂದ ಕೆಳಭಾಗಕ್ಕೆ ಹೊಡೆಯಬಾರದು. ಎದುರಾಳು ನೆಲಕ್ಕೆ ಬಿದ್ದಾಗ ಹೊಡೆಯಕೂಡದು; ಎದುರಾಳಿಯನ್ನು ಹಿಡಿದುಕೊಳ್ಳಬಾರದು; ಕುಸ್ತಿಯಾಡಕೂಡದು; ಬದಿಯಲ್ಲಿಯ ಹಗ್ಗಗಳನ್ನು ಬಳಸಕೂಡದು; ಎರಡೂ ಕಿವಿಗಳಿಗೆ ಒಮ್ಮೆಲೇ ಹೊಡೆಯಕೂಡದು; ಹೊಡೆತವನ್ನೆದುರಿಸದೇ ನೆಲಕ್ಕೆ ಬೀಳವಾರದು; ಮೊಣಕೈಯಲ್ಲಿ ಹೊಡೆಯಬಾರದು; ತಲೆ ಅಥವಾ ಕುತ್ತಿಗೆಯ ಹಿಂಭಾಗಕ್ಕೆ ಹೊಡೆಯಕೂಡದು.

ಈ ರೀತಿಯ ಕೆಲವಾರು ನಿರ್ಬಂಧಗಳಿವೆ. ನಿಯಮಗಳನ್ನು ಸರಿಯಾಗಿ ಪಾಲಿಸಿದರೆ ಹೆಚ್ಚು ಅಂಕಗಳು ಬರುತ್ತವೆ. ಮುಚ್ಚಿದ ಮುಷ್ಟಿಯಿಂದ ಬಲವಾದ ಹೊಡೆತಗಳು; ಕುಶಲ ರಕ್ಷಣಾವಿಧಾನಗಳು ಮತ್ತು ಅವಿಶ್ರಾಂತ ದಾಳಿಗಳು ಹೆಚ್ಚು ಅಂಕಗಳನ್ನು ಗಳಿಸಲು ಕಾರಣವಾಗುತ್ತವೆ. ರಿಂಗ್‍ನ ಹೊರಗಡೆ ಕುಳಿತುಕೊಳ್ಳುವ ಇಬ್ಬರು ತೀರ್ಪುಗಾರರು ಮತ್ತು ರೆಫರಿ ಕೂಡಿ ಅಂಕಗಳನ್ನು ಕೊಡುತ್ತಾರೆ. (ಬಿ.ಎಸ್.ಬಿ.)