ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬಾಚಿಕಾಯಕದ ಬಸವಣ್ಣ

ವಿಕಿಸೋರ್ಸ್ದಿಂದ

ಬಾಚಿಕಾಯಕದ ಬಸವಣ್ಣ - 12ನೆಯ ಶತಮಾನದ ಒಬ್ಬ ವಚನಕಾರ. ಬಸವಣ್ಣನವರ ಸಮಕಾಲೀನ. ಇವನ ಹೆಸರು ಗಣಸಹಸ್ರನಾಮದಲ್ಲಿ ಉಲ್ಲೇಖಗೊಂಡಿದೆ. ಬಡಗಿಯ ವೃತ್ತಿ ಈತನ ಕಾಯಕ. ಬಸವಣ್ಣ ಪ್ರಿಯ ವಿಶ್ವ ಕರ್ಮಟಕ್ಕೆ ಕಾಳಿಕಾ ವಿಮಲ ರಾಜೇಶ್ವರಲಿಂಗ ಎಂಬುದು ಇವನ ವಚನಗಳ ಅಂಕಿತ. ಇವನ ಹತ್ತು ವಚನಗಳು ಪ್ರಕಟವಾಗಿವೆ. ಇವುಗಳಲ್ಲಿ ಎರಡು ಬೆಡಗಿನ ವಚನಗಳು. ಇವಕ್ಕೆ ಟೀಕು ಇದೆ. ಇವನ ವಚನಗಳಲ್ಲಿ ವೀರಶೈವ ಧರ್ಮದ ಮಹತ್ತ್ವವನ್ನು ನಿರೂಪಿಸಲಾಗಿದೆ. ಒಂದು ಬೆಡಗಿನ ವಚನ ಹೀಗಿದೆ.

ಮೂರಂಗುಲದಲ್ಲಳದು ಐದಂಗುಲದಲ್ಲಿ ಪ್ರಮಾಣಿಸಿ
ಆರಂಗುಲದಲ್ಲಿ ವಟ್ಟಕ್ಕೆ ಶುದ್ಧವಾಯಿತು
ಎಂಟರೊಳಗೆ ಹದಿನಾರಲು ಚತುರಸದ ಮೂವತ್ತೆರಡರ ಮಧ್ಯದಲ್ಲಿ
ಹಸ್ತಕಂಬಿಯತಿಕ್ಕಿ ಮೂರರಲ್ಲಿ ಭಾಗಿಸಲಾಗಿ
ಎರಡು ಒಳಗೆ ನಿಂದಿತ್ತು ಒಂದು ಹೊರಗಾಗಿ ಕೈಸಾಲೆಯಾಯಿತ್ತು
ಆ ಕೆಲಸವ ಹೊರಗೆ ಬಾಚಿಯಲ್ಲಿ ಸವದೆ, ಒಳಗೆ ಉಳಿಯಲ್ಲಿ ಸವದೆ
ಇಂತೀ ತೆರನ ತಿಳಿದಡೆ ಬಸವಣ್ಣಪ್ರಿಯ ವಿಶ್ವಕರ್ಮಟಕ್ಕೆ
ಕಾಳಿಕಾವಿಮಲ ರಾಜೇಶ್ವರಲಿಂಗವಲ್ಲದಿಲ್ಲಾ ಎಂದೆ

(ಎನ್.ಬಿ)