ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬಾವುಲ್ ಗಾಯಕರು (ಬಂಗಾಳಿ)

ವಿಕಿಸೋರ್ಸ್ದಿಂದ

ಬಾವುಲ್ ಗಾಯಕರು (ಬಂಗಾಳಿ) ಬಂಗಾಳಿ ಜನಪದ ಗೀತಗಳ ಮಧುರ ಭಾವನೆಗಳನ್ನು ಸಂಗೀತ ರೂಪದಲ್ಲಿ ಹಾಡುವ ಒಂದು ಪಂಗಡ. ಈ ಸಂಗೀತ ಬಂಗಾಳದ ತುಂಬ ಪ್ರಸಿದ್ಧವಾದುದು. ಭಾವನೆ ಮತ್ತು ರೂಪಗಳ ದೃಷ್ಟಿಯಿಂದ ಟಾಗೂರರ ಭಾವಗೀತೆಗಳು ಈ ಬಾವುಲ್ ಸಂಗೀತದಿಂದ ಹೆಚ್ಚು ಪ್ರಭಾವಿತಗೊಂಡಿವೆ ಎನ್ನಲಾಗಿದೆ.

ಬಾವುಲರು ಬಂಗಾಳದ ಒಂದು ಸ್ಥಳೀಯ ಧಾರ್ಮಿಕ ಪಂಥದವರು. ಈ ಪಂಥ ಬೌದ್ಧ ಧರ್ಮ, ಯೋಗ, ಹಿಂದೂ ತತ್ತ್ವ ಮತ್ತು ಇಸ್ಲಾಮ್-ಹೀಗೆ ನಾನಾ ಮೂಲಗಳಿಂದ ಧಾರ್ಮಿಕ ಭಾವನೆಗಳನ್ನು ಎರವಲು ಪಡೆದಿದೆ. ಉತ್ತರ ಭಾರತದ ಬೇರೆ ಬೇರೆ ಭಾಗಗಳಲ್ಲಿ ದಾದು, ನಾನಕ್, ಕಬೀರ್ ಮುಂತಾದ ಮಧ್ಯಯುಗದ ಆಧ್ಯಾತ್ಮ ಕವಿಗಳು ಇದರ ರಚನೆಗೆ ತೊಡಗಿದರು ಎನ್ನಲಾಗಿದೆ. ಇದೇ ವೇಳೆಗೆ ಆಧ್ಯಾತ್ಮ ಭಾವನೆಗಳನ್ನು ಹೊಂದಿದ್ದ ಚೈತನ್ಯದಂಥ ಶ್ರೇಷ್ಠ ಧಾರ್ಮಿಕ ಸುಧಾರಕರು ಬಂಗಾಳದಲ್ಲಿ ಕಾಣಿಸಿಕೊಂಡರು. ಈ ಪಂಥದ ಅನುಯಾಯಿಗಳು ಚೈತನ್ಯ ಮತ್ತು ಬಾವುಲರು ಉಪದೇಶಿಸುವ ಧಾರ್ಮಿಕ ಭಾವನೆಗಳಲ್ಲಿ ಮೂಲಭೂತವಾದ ವ್ಯತ್ಯಾಸಗಳಿದ್ದರೂ ಚೈತನ್ಯವಾಗಿ ಗುರುವಾಗಿ ಒಪ್ಪಿಕೊಂಡಿದ್ದಾರೆ. ಚೈತನ್ಯದ ಗುಂಪಿನವರು ವಿಗ್ರಹಾರಾಧನೆ, ಧ್ಯಾನ, ಜಪತಪಗಳಿಗೆ ವಿಶೇಷ ಮಹತ್ತ್ವ ನೀಡಿದರೆ ಬಾವುಲರು ಏಕದೇವತಾವಾದಿಗಳು. ಪರಮಾತ್ಮನನ್ನು ತಮ್ಮ ಅಂತರಂಗದಲ್ಲೇ ಕಾಣುವವರು. ವಿಗ್ರಹಾರಾಧನಾ ವಿರೋಧಿಗಳು. ತಾವು ಸಾಯಿನ್ (ಭಗವಂತ) ಜೊತೆ ಸಾಧಿಸಿಕೊಂಡ ಸಿದ್ಧಿ ಸಂಯೋಗದ ಆನಂದವನ್ನು ಅವರು ತಮ್ಮ ನೃತ್ಯಗೀತೆಗಳಲ್ಲಿ ಪ್ರಕಟಪಡಿಸಿದ್ದಾರೆ. ಬಾವುಲರು ದೇವರನ್ನು ಸಮೀಪಿಸಲು ಯಾವುದೇ ವ್ರತಾಚರಣೆಗಳನ್ನು ಆಚರಿಸುವುದಿಲ್ಲ. ದೇವರಿಗೆ ಒಂದು ರೂಪವಿದೆ ದೇವಾಲಯಗಳು ದೇವರ ನೆಲೆಗಳು ಎಂಬುದನ್ನು ಒಪ್ಪುವುದಿಲ್ಲ. ಭಕ್ತಿ ಧ್ಯಾನಗಳಿಂದ ಅವನನ್ನು ಅಂತರಂಗದಲ್ಲಿ ಕಾಣಬಹುದು ಎಂದು ತಿಳಿಯುತ್ತಾರೆ. ಇವರು ಧರ್ಮಗ್ರಂಥಗಳನ್ನು ನಂಬುವುದಿಲ್ಲ ಮತ್ತು ಆ ಬಗೆಯ ಯಾವ ಶಾಸ್ತ್ರಗ್ರಂಥಗಳನ್ನೂ ಹೊಂದಿಲ್ಲ. ಆದರೆ ತಮ್ಮ ಧರ್ಮ ಸೂಕ್ತಿಗಳನ್ನು ಕಂಠಸ್ಥ ಪರಂಪರೆಯಲ್ಲಿ ಉಳಿಸಿಕೊಂಡು ಬಂದಿದ್ದಾರೆ. ಅವನ್ನು ಇವರು ತಮ್ಮ ಪಂಥಕ್ಕೆ ಸೇರಿದವರಿಗೆ ಮಾತ್ರ ಗುರುವಿನ ಮೂಲಕ ಕಲಿಸಿಕೊಡುತ್ತಾರೆ.

ಈ ಪಚಿಥದ ಅನುಯಾಯಿಗಳು ಮೂಲತಃ ಬಂಗಾಳಿ ಹಿಂದೂ ಮತ್ತು ಇಸ್ಲಾಮ್ ಸಮುದಾಯಗಳಿಂದ ಸ್ವಂತ ಧರ್ಮ ತಿರಸ್ಕರಿಸಿ ಮತಾಂತರಗೊಂಡವರು. ಇವರ ಆರಾಧನಾವಿಧಿ ವಿಶ್ವಭ್ರಾತೃತ್ವವನ್ನು ಬೋಧಿಸುತ್ತದೆ. ಹಿಂದೂ ಮತಾಂತರಿಗಳು ವೈಷ್ಣವ ಬಾವುಲರೆಂದೂ ಮುಸ್ಲಿಮ್ ಮತಾಂತರಿಗಳು ಫಕೀರರೆಂದೂ ಹೆಸರಾಗಿದ್ದಾರೆ. ಪ್ರಾಪಂಚಿಕ ಜೀವನ ತೊರೆದು ಭಿಕ್ಷುಕ ಜೀವನ ಒಪ್ಪಿಕೊಂಡ ಈ ವಿರಾಗಿಗಳು ಬಂಗಾಳದಾದ್ಯಂತ ಸಣ್ಣ ಸಣ್ಣ ಗುಂಪುಗಳಲ್ಲಿ ಅಲ್ಲಲ್ಲಿ ನೆಲಸಿದ್ದಾರೆ. ಇವರ ನೆಲೆಗಳಿಗೆ ಅಕ್ರಾ ಎಂದು ಹೆಸರು. ಇವರಲ್ಲಿ ವಿರಾಗಿ ಬಾವುಲರಲ್ಲದೆ ಸಂಸಾರಿ ಬಾವುಲರೂ ಇದ್ದಾರೆ. ವಿರಾಗಿ ಬಾವುಲರು ತಮ್ಮ ಪಂಥಕ್ಕೆ ಸೇರಬಯಸುವ ಸ್ತ್ರೀಯರನ್ನು ನಿರುತ್ಸಾಹಗೊಳಿಸುವುದಿಲ್ಲವಾದರೂ ಅತ್ಯಂತ ನಿಷ್ಠೆಯಿಂದ ಅವರು ಜೀವನದುದ್ದಕ್ಕೂ ಬ್ರಹ್ಮಚರ್ಯೆಯನ್ನು ಪಾಲಿಸುತ್ತಾರೆ. ಕೆಲವು ವೇಳೆ ಅಂಥ ಸ್ತ್ರೀಯರನ್ನು ಬಾವುಲರು ತಮ್ಮ ಆಧ್ಯಾತ್ಮಜೀವನದ ಸಂಗಾತಿಗಳಾಗಿ ಒಪ್ಪಿಕೊಳ್ಳುವುದುಂಟು. ಸಂಸಾರಿ ಬಾವುಲರ ಜೀವನ ಬೇರೆ ಬಗೆಯದು. ಅವರು ಮಾಮೂಲಿ ಕೌಟುಂಬಿಕ ಜೀವನ ನಡೆಸುತ್ತಾರೆ. ಮದುವೆಯಾಗಿ ತಮ್ಮ ಹೆಂಡತಿಯರಿಂದ ಮಕ್ಕಳನ್ನು ಪಡೆಯುತ್ತಾರೆ. ಅವರ ಕುಟುಂಬದ ಸದಸ್ಯರೆಲ್ಲ ಈ ಧಾರ್ಮಿಕ ಆರಾಧನಾ ಪದ್ಧತಿಗೆ ದೀಕ್ಷೆಪಡೆಯುವುದು ಸಂಪ್ರದಾಯ. ಸ್ತ್ರೀ ಅನುಯಾಯಿಗಳನ್ನು ಕ್ಸೆಪಿ ಅಥವಾ ಮಾಡ್ ಹೆಂಗಸರು ಎಂದು ಕರೆಯುತ್ತಾರೆ.

ಬಾವುಲರು ಒಂದು ತಂತಿಯ ಏಕತಾರಿ ಹಿಡಿದು ಹಾಡುತ್ತ ಊರಿಂದ ಊರಿಗೆ ಹೋಗಿ ಭಿಕ್ಷಾಟನೆ ನಡೆಸುತ್ತಾರೆ. ಆಧ್ಯಾತ್ಮ ಗೀತೆಗಳನ್ನುಳಿದು ಬೇರೆ ಏನನ್ನೂ ಇವರು ಕಲಿತಿರುವುದಿಲ್ಲ. ಇವರಲ್ಲಿ ದೇವರು ದೇವರು ಪದ ಪ್ರಯೋಗಕ್ಕೆ ಸಂವಾದಿಯಾಗಿ ಮನೆರ್ ಮನುಷ್ ಅಥವಾ ಹೃದಯವಂತ ಮಾನವ ಎಂಬ ಮಾತುಗಳು ಪ್ರಚಲಿತವಾಗಿವೆ. ದೂರ ದೂರದ ಪ್ರದೇಶಗಳಿಗೆ ಇವರು ಸಂಚಾರ ಕೈಗೊಳ್ಳುವುದರಲ್ಲಿ, ವಾಸ್ತವವಾಗಿ, ದೇವರನ್ನು ಹುಡುಕಿಕೊಂಡು ಹೋಗುವ ಉದ್ದೇಶ ಇಟ್ಟುಕೊಂಡಿರುತ್ತಾರೆ.

ಭಿಕ್ಷಾಟನೆಯಿಂದ ಜೀವಿಸುವ ಬಾವುಲರು ಹಾಡುವ ಹಾಡುಗಳು ಆಧ್ಯಾತ್ಮದಲ್ಲಿ ನಂಬಿಕೆ ಇಲ್ಲದವರ ಮೇಲೆ ಕೂಡ ಗಾಢ ಪರಿಣಾಮ ಬೀರಲು ಶಕ್ತವಾಗಿವೆ. ಈ ಹಾಡುಗಳಲ್ಲಿ ಅವರು ಮಹಾಚೇತನದಲ್ಲಿ ಐಕ್ಯವಾಗುವ ತಮ್ಮ ಉತ್ಕಟ ಹಂಬಲವನ್ನು ತೋಡಿಕೊಂಡಿದ್ದಾರೆ. ಮಹಾ ಚೇತನ ಇವರ ಒಲುಮೆಯ ಸಂಗಾತಿ. ಅದರೊಂದಿಗೆ ಸಂಯೋಗ ಸಾಧಿಸುವ ಮೊದಲು ತನ್ನಲ್ಲಿರುವ ಹೃದಯವಂತ ಮಾನವನನ್ನು ಅರಿಯಬೇಕು. ಇವರ ಪ್ರಕಾರ ಆತನನ್ನು ಬಾಹ್ಯಪ್ರಪಂಚದಲ್ಲಿ ಹುಡುಕಬಾರದು, ಆತ ಮಾನವ ದೇಹದಲ್ಲೇ ನೆಲೆಸಿದ್ದಾನೆ. ಗಾಢ ಭಕ್ತಿ, ಧ್ಯಾನಗಳಿಂದ ಅವನ ಸಂಯೋಗ ಸಾಧಿಸಬಹುದು. ಇದು ಅನಕ್ಷರಸ್ಥ ಬಾವುಲರು ತಮ್ಮ ಹಾಡು ಮತ್ತು ನೃತ್ಯಗಳಲ್ಲಿ ಬೋಧಿಸುವ ಮಹಾಚೇತನದ ಅಧ್ಮಾತ್ಮ ಪರಿಕಲ್ಪನೆ.

ಬಾವುಲರು ತಮ್ಮ ಹಾಡುಗಳನ್ನು ಫಿಕಿರ್‍ಚಾಂದಿ ಶೈಲಿಯಲ್ಲಿ ಹಾಡುತ್ತಾರೆ. ಫಿಕಿರ್‍ಚಾಂದಿ ಎಂಬವನಿಂದ ಈ ಶೈಲಿ ಅನ್ವೇಷಣೆಗೊಂಡಿದ್ದರಿಂದ ಅದಕ್ಕೆ ಈ ಹೆಸರು ಬಂದಿದೆ. ಬಾವುಲರ ಬಹುತೇಕ ಹಾಡುಗಳು ಕ್ರಿಯಾತ್ಮಕ ಗೀತೆಗಳು. ಅವರ ಹಾಡುಗಳಲ್ಲಿ ಬಾವುಲ್ ನೃತ್ಯ ತಾಳಬದ್ಧವಾಗಿ ಜೋಡಣೆಗೊಂಡಿರುತ್ತದೆ. ನೃತ್ಯ ಸಾಮಾನ್ಯವಾಗಿ ಶೈಲೀಕೃತವಾಗಿರುತ್ತದೆ. ಅದು ಸ್ವೇಚ್ಛಾನುಸಾರವಾದುದಲ್ಲ. ನೃತ್ಯ ಮತ್ತು ಸಂಗೀತ ಒಂದರೊಡನೊಂದು ಬೆರೆತಿರುವುದು ವಿಶೇಷ. ಸಂಗೀತದ ದೃಷ್ಟಿಯಿಂದ ಬಾವುಲರ ಹಾಡುಗಳನ್ನು ಹಿಂದೂ ಮತದಿಂದ ಮತಾಂತರಗೊಂಡವರ ಹಾಡುಗಳು ಮತ್ತು ಇಸ್ಲಾಮ್ ಮತದಿಂದ ಮತಾಂತರ ಗೊಂಡವರ ಹಾಡುಗಳು ಎಂದು ಎರಡು ಗುಂಪಾಗಿ ವಿಂಗಡಿಸಬಹುದು. ಅವರನ್ನು ಕ್ರಮವಾಗಿ ಬಾವುಲರು ಮತ್ತು ದರ್ಖೇಷ್ ಅಥವಾ ಫಕೀರರು ಎಂದು ಕರೆಯಲಾಗುವುದು. ಕೆಲವು ಪ್ರಾದೇಶೀಕ ಉಪವಿಂಗಡಣೆಗಳೂ ಸಾಧ್ಯ. ರಾಧಿ ಮತ್ತು ನವದ್ವೀಪಿ ಎಂಬ ಎರಡು ಗುಂಪಿದೆ. ರಾಧಿ ಗುಂಪಿನವರು ಹಾಡುತ್ತಾ ನರ್ತಿಸುತ್ತಾರೆ. ಆದ್ದರಿಂದ ಅವರ ಸಂಗೀತ ಹೆಚ್ಚು ತಾಳಬದ್ಧವಾಗಿರುತ್ತದೆ. ಉಳಿದವರು ಹಾಡುವಾಗ ನರ್ತಿಸುವುದಿಲ್ಲ. ಬದಲಾಗಿ ಏಕತಾರಿ ಬಳಸುವುದರಿಂದ ಅವರ ಸಂಗೀತ ಸ್ವಾಭಾವಿಕವಾಗಿ ಭಾಟಿಯಾಲೆ ಶೈಲಿಯಲ್ಲಿರುತ್ತದೆ. (ಎ. ಎಚ್.)