ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬಿಷನ್ ಸಿಂಗ್ ಬೇಡಿ

ವಿಕಿಸೋರ್ಸ್ದಿಂದ

ಬಿಷನ್ ಸಿಂಗ್ ಬೇಡಿ 1964-ಕ್ರಿಕೆಟ್ ಜಗತ್ತಿನಲ್ಲಿ ಶ್ರೇಷ್ಠ ಎಡಗೈ ಸ್ಪಿನ್ ಬೌಲರ್ ಎಂದು ಖ್ಯಾತರಾಗಿರುವ ಕ್ರೀಡಾಪಟು. ಅಮೃತಸರದಲ್ಲಿ 1946 ಸೆಪ್ಟೆಂಬರ್ 25 ರಂದು ಜನನ. ಶಾಲೆಯಲ್ಲಿ ಕ್ರಿಕೆಟ್ ಆಡಲು ಪ್ರಾರಂಭಿಸಿದಾಗ ಇವರ ವಯಸ್ಸು ಕೇವಲ ಹದಿಮೂರು ವರ್ಷ. ಸುಭಾಷ್‍ಗುಪ್ತೆ, ವಿನೂ ಮಂಕಡ್ ಇವರನ್ನು ಆದರ್ಶವಾಗಿರಿಸಿಕೊಂಡು ಸ್ಪಿನ್ ಬೌಲಿಂಗ್ ಅಭ್ಯಸಿಸತೊಡಗಿದರು. ಬೌಲಿಂಗ್ ಕೌಶಲ ಇವರಿಗೆ ಸಹಜವಾಗಿ ಕರಗತವಾಯಿತು ಅಷ್ಟೆ. ಯಾರ ಬಳಿಯೂ ತರಬೇತಿ ದೊರೆಯಲಿಲ್ಲ.

ಹದಿನೈದು ವರ್ಷಕ್ಕೆ ರಣಜಿ ಟ್ರೋಫಿಯಲ್ಲಿ ಪಾಲ್ಗೊಳ್ಳುವ ಭಾಗ್ಯ ಇವರದಾಯಿತು. ಬೇಡಿ ಭಾಗವಹಿಸಿದ ಪ್ರಥಮ ಟೆಸ್ಟ್ ಪಂದ್ಯ 1966-67ರಲ್ಲಿ ಆಡಿದ್ದು-ವೆಸ್ಟ್ ಇಂಡೀಸ್ ವಿರುದ್ಧ. ಏಕಪ್ರಕಾರವಾಗಿ, ಒಂದೇ ಮಟ್ಟದಲ್ಲಿ ಲೀಲಾಜಾಲವಾಗಿ ಬೌಲ್ ಮಾಡುವುದನ್ನು ಸಾಧಿಸಿದ ಬೇಡಿ ಬ್ಯಾಟ್ ಮಾಡುತ್ತಿದ್ದವರನ್ನು ತಲ್ಲಣಗೊಳಿಸುತ್ತಿದ್ದರು. ಚಂಡು ಯಾವ ರೀತಿ ಬರುವುದೆಂಬುದನ್ನು ಊಹಿಸಲಾಗದೆ ತಬ್ಬಿಬ್ಬಾಗುವುದು, ಔಟಾಗುವುದು ಬ್ಯಾಟ್ ಹಿಡಿದವರ ಪಾಲಿಗೆ ಬರುತ್ತಿತ್ತು. ಈ ರೀತಿಯ ಬೌಲಿಂಗ್ ಜಾಣ್ಮೆಯ ಫಲವಾಗಿ ವಲ್ರ್ಡ್ ಇಲವೆನ್‍ಗೆ ಆಯ್ಕೆಯಾದರು. 1972-74 ಅವಧಿಯಲ್ಲಿ 35 ಟೆಸ್ಟ್ ಪಂದ್ಯಗಳಲ್ಲಿ ಆಡಿ 131 ವಿಕೆಟುಗಳನ್ನು ಪಡೆದಿರುವರಲ್ಲದೆ ಬ್ಯಾಟ್ ಮನ್ ಆಗಿ 277 ರನ್ನುಗಳನ್ನೂ ಗಳಿಸಿದ್ದಾರೆ. ವಿದೇಶಗಳಿಗೆ ಹೋಗಿ ಬಂದುದರ ಫಲವಾಗಿ ಅನುಭವ ಹೆಚ್ಚಿಸಿ ಕೊಂಡು ಉತ್ತಮ ಫೀಲ್ಡರ್ ಎನಿಸಿಕೊಂಡು 16 ಕ್ಯಾಚ್ ಹಿಡಿದಿದ್ದಾರೆ. ಶ್ರೀಲಂಕಾ ವಿರುದ್ಧ ಆಡಿದ ಟೆಸ್ಟಿನಲ್ಲಿ ಜಯಗಳಿಸಿದರು. ಭಾರತಕ್ಕೆ ರಬ್ಬರ್ ತಂದುಕೊಟ್ಟ ಕೀರ್ತಿ ಇವರದು. ಮಲ್ಬೋರ್ನ್ ಕ್ರಿಕೆಟ್ ಕ್ಲಬ್ ವಿರುದ್ಧ ಆಡಿದ ಉತ್ತರವಲಯ ತಂಡದಲ್ಲೂ ಬೇಡಿ ಇದ್ದರು.

ಆಸ್ಟ್ರೇಲಿಯನ್ ಮಹಿಳೆ ಗ್ಲೆನ್ ಮೈಲ್ಸ್‍ರನ್ನು ಬೇಡಿಯವರು ವಿವಾಹವಾಗಿದ್ದಾರೆ. ಸೌಜನ್ಯ ಶೀಲ ನಡವಳಿಕೆ, ಆಟದಲ್ಲಿ ಸ್ಪೂರ್ತಿ, ಅನ್ಯಾಯ ಕಂಡಾಗ ಪ್ರತಿಭಟನೆ ವ್ಯಕ್ತಿ ಪಡಿಸುವುದು ಬೇಡಿಯವರಲ್ಲಿ ಕಂಡುಬಂದಿದೆ. ಬೇಡಿಯವರ ಕ್ರೀಡಾ ಪ್ರತಿಭೆ ಗುರುತಿಸಿ ಸರ್ಕಾರ ಇವರಿಗೆ 1969ರಲ್ಲಿ ಅರ್ಜುನ ಪ್ರಶಸ್ತಿಯನ್ನೂ 1970ರಲ್ಲಿ ಪದ್ಮಶ್ರೀ ಬಿರುದನ್ನೂ ನೀಡಿ ಗೌರವಿಸಿದೆ.