ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬೀಚಿ

ವಿಕಿಸೋರ್ಸ್ದಿಂದ

ಬೀಚಿ(ಬೀchi)- 1913-80 ಕನ್ನಡದ ಪ್ರಸಿದ್ಧ ಹಾಸ್ಯ ಸಾಹಿತಿ ಹಾಗೂ ಕಾದಂಬರಿಕಾರರು. ಬೀಚಿ ಇವರ ಕಾವ್ಯನಾಮ. ನಿಜವಾದ ಹೆಸರು ಭೀಮಸೇನ ರಾವ್. ಹುಟ್ಟಿದ್ದು ಬಳ್ಳಾರಿ ಜಿಲ್ಲೆಯ ಹರಪನಹಳ್ಳಿಯಲ್ಲಿ. ತಂದೆ ಶ್ರೀನಿವಾಸರಾವ್, ತಾಯಿ ಭಾರತಮ್ಮ. ಹಾಲು ಹಸುಳೆಯಾಗಿದ್ದಾಗಲೇ ತಂದೆಯನ್ನು ಕಳೆದುಕೊಂಡ ಇವರು ಸೋದರತ್ತೆಯ ಆರೈಕೆಯಲ್ಲಿ ಬೆಳೆದು ಹೇಗೋ ಕಷ್ಟಪಟ್ಟು ಎಸ್.ಎಸ್.ಸಿ. ವರೆಗೆ ಓದಿದರು. ಮುಂದೆ ಓದಿಸುವವರಿಲ್ಲದ್ದರಿಂದ ಓದಿಗೆ ಶರಣು ಹೊಡೆದು ಎಸ್.ಎಸ್.ಸಿ. ಮುಗಿದ ಮರುವರ್ಷ. ಅಂದರೆ 1931ರಲ್ಲಿ ಪೊಲೀಸ್ ಇಲಾಖೆಯಲ್ಲಿ ಅಟೆಂಡರ್ ಕೆಲಸಕ್ಕೆ ಸೇರಿದರು. ಆಗ ಬಳ್ಳಾರಿ ಅಂದಿನ ಮದ್ರಾಸು ರಾಜ್ಯಕ್ಕೆ ಸೇರಿದ್ದರಿಂದ ಕೆಲಕಾಲ ಮದ್ರಾಸಿನಲ್ಲೂ ಕೆಲಸ ಮಾಡಿದರು. ವಿಶಾಲ ಮೈಸೂರು ಉದಯವಾಗಿ ಬಳ್ಳಾರಿ ಮೈಸೂರಿಗೆ ಸೇರಿದ ಮೇಲೆ ಬೆಂಗಳೂರಿನ ರೈಲ್ವೆ ಆಫೀಸಿನಲ್ಲಿ, ನಿವೃತ್ತಿಗೆ ಮುನ್ನ ಸಿ.ಐ.ಡಿ. ಸ್ಪೆಷಲ್ ಬ್ರಾಂಚಿನಲ್ಲಿ ಸೂಪರಿಂಟೆಂಡೆಂಟ್ ಆಗಿ ಕೆಲಸ ಮಾಡಿ 1968ರಲ್ಲಿ ನಿವೃತ್ತರಾದರು.

ಬೀಚಿಯವರು ವಿಪುಲವಾಗಿ ಬರೆದಿದ್ದಾರೆ. ಕತೆ, ಕಾದಂಬರಿ, ನಾಟಕ, ಚುಟುಕ, ಅಂಕಣ ಬರಹ ಮೊದಲಾದ ಸುಮಾರು ಎಪ್ಪತ್ತು ಕೃತಿಗಳು ಅವರ ಹೆಸರಿನಲ್ಲಿವೆ. ಅವುಗಳಲ್ಲಿ ಬಹುಪಾಲು ಕಾದಂಬರಿಗಳು. 1976ರಲ್ಲಿ ಇವರ ಆತ್ಮವೃತ್ತಾಂತ ಭಯಾಗ್ರಫಿ ಎಂಬ ಹೆಸರಿನಲ್ಲಿ ಪ್ರಕಟವಾಗಿದೆ. ಅದಕ್ಕೂ ಮೊದಲು ಈ ಕೃತಿ ಪ್ರಜಾಮತ ವಾರಪತ್ರಿಕೆಯಲ್ಲಿ ಧಾರವಾಹಿಯಾಗಿ ಪ್ರಕಟವಾಗಿತ್ತು. ಆರಂಭದಲ್ಲಿ ಇವರು ತಮ್ಮ ಕೃತಿಗಳ ಪ್ರಕಟಣೆಗಾಗಿ ಕೆಲಕಾಲ 'ತಿಂಮ ಸಾಹಿತ್ಯ ಮಾಲೆಯನ್ನು ನಡೆಸಿದ್ದರು. ವ್ಯಂಗ್ಯ, ವಿಡಂಬನೆ ಬೀಚಿಯವರ ಬೆಳವಣಿಗೆಯ ವೈಶಿಷ್ಟ್ಯ. ದೊಡ್ಡವರ ಸಣ್ಣತನ, ಜಾಣರ ದಡ್ಡತನ, ವಿದ್ಯಾವಂತರ ಮೌಢ್ಯ ಇವನ್ನೆಲ್ಲ ತಮ್ಮ ಸಾಹಿತ್ಯಕ್ಕೆ ವಸ್ತುವಾಗಿಸಿಕೊಂಡಿರುವ ಬೀಚಿಯವರಿಗೆ ಕಪಟ ರಾಜಕಾರಣಿಗಳು, ಭ್ರಷ್ಟರು, ಲಂಚಕೋರರು, ಮಡಿವಂತರುಗಳನ್ನು ಕಂಡರೆ ಎಲ್ಲಿಲ್ಲದ ಕೋಪ. ಶೋಷಿತರ ವಿಷಯವಾಗಿ ಅನುಕಂಪ. ಹಾಗಾಗಿ ಸಮಾಜದಲ್ಲಿರುವ ಕೊಳಕನ್ನು ತಮ್ಮ ಲೇಖನಿಯಿಂದ ಗುಡಿಸಬಯಸಿದರು. ಅವರಿದ್ದ ಇಲಾಖೆಯಲ್ಲೇ ಇಂಥ ವ್ಯಕ್ತಿಗಳನ್ನು ದಿನನಿತ್ಯ ನೋಡುತ್ತಿದ್ದುದರಿಂದ ಆ ಅನುಭವವೂ ಇವರ ಲೇಖಣಿಗೆ ಸಹಾಯವಾಯಿತು. ಯಾವುದೇ ಸಂಕೋಚ, ಮುಜುಗರ, ಮುಲಾಜಿಲ್ಲದ ಸರಳ, ನೇರ, ಸ್ಪಷ್ಟ ಬರವಣಿಗೆ ಬೀಚಿಯವರದು.

ಯಾವುದು ಸಂಭವಿಸಿದರೆ ಅದರಿಂದ ಹುಚ್ಚು ಹಿಡಿಯಬಹುದೋ ಅದನ್ನೇ ಕಂಡು ನಗುವುದು ಹಾಸ್ಯ ಮನೋಧರ್ಮ, ಅಂಥದು ತಮಗೇ ಸಂಭವಿಸಿದಾಗಲೂ ಬೀಚಿಯವರ ಮನೋಧರ್ಮ. ಅವರೊಬ್ಬ ವಿಡಂಬನ ಬ್ರಹ್ಮ. ಅವರ ತಿಂಮ ಚಿರಂಜೀವಿ. ತಿಂಮನಂಥ ಮಂಕರು ಜನಗತ್ತಿನಲ್ಲಿ ಇರುವ ತನಕವೂ ಬೀಚಿಯವರಂಥವರ ಹಾಸ್ಯಕ್ಕೆ ಕೊರತೆಯಿಲ್ಲ. ಅವರು ಮದ್ರಾಸಿನಲ್ಲಿದ್ದಾಗ, ಪಾಟೀಲ ಪುಟ್ಟಪ್ಪನವರು ಹುಬ್ಬಳ್ಳಿಯಿಂದ ಹೊರಡಿಸುತ್ತಿದ್ದ ವಿಶಾಲ ಕರ್ನಾಟಕಕ್ಕೆ 'ಕೆನೆ ಮೊಸರು ಎಂಬ ಅಂಕಣ ಬರಹದ ಕೊನೆಯಲ್ಲಿ ಬರೆಯುತ್ತಿದ್ದ ಚುಟುಕುಗಳ ಸಂಗ್ರಹವೇ ತಿಂಮನ ತಲೆ. ಇದಕ್ಕೆ ಮದರಾಸು ಸರಕಾರದ ಬಹುಮಾನ ದೊರೆತಿವೆ. ಅವರ ಅಂದನಾ ತಿಂಮ ಡಿವಿಜಿಯವರ ಮಂಕುತಿಮ್ಮನ ಕಗ್ಗದಿಂದ ಸ್ಫೂರ್ತಿ ಪಡೆದು ರಚಿತವಾದ ಕೃತಿ.

ಗರುಡ ಪುರಾಣ ಎಂಬ ಏಕಾಂಕನಾಟಕ, ಎರಡು ಕುನ್ನಿ ಎಂಬ ಸಣ್ಣ ಕತೆ, ನಾನೇ ಸತ್ತಾಗ ಎಂಬ ಪ್ರಹಸನ-ಇವು 34-35ರ ಸುಮಾರಿಗೆ ಪತ್ರಿಕೆಗಳಲ್ಲಿ ಪ್ರಕಟವಾದ ಇವರ ಮೊದಲ ಬರಹಗಳು. ಆ ಮೇಲೆ ಕೆಲಕಾಲ ಇವರು ಬರೆಯುವುದನ್ನೇ ನಿಲ್ಲಿಸಿದರು. ಮದ್ರಾಸಿನಲ್ಲಿದ್ದಾಗ ಬರೆದ ಹಲವಾರು ರೇಡಿಯೊ ನಾಟಕಗಳು ಮತ್ತು ಚಿಕ್ಕ ಚಿಕ್ಕ ಕತೆಗಳು, ರೇಡಿಯೋ ನಾಟಕಗಳು ಮತ್ತು ಮಾತ್ರೆಗಳು ಎಂಬ ಹೆಸರಿನಲ್ಲಿ ಪ್ರಕಟವಾದ ಚೊಚ್ಚಲ ಕೃತಿಗಳು. 1950ರ ಸುಮಾರಿಗೆ ಇವರ ಮೊದಲ ಕಾದಂಬರಿ ದಾಸಕೂಟ ಪ್ರಕಟವಾಯಿತು. ಅನಂತರದ ವರ್ಷಗಳಲ್ಲಿ ಇವರ ಸಾಹಿತ್ಯವಾಹಿನಿ ನಿರಂತರವಾಗಿ ಪ್ರವಹಿಸಿತು. ದಾಸಕೂಟದಲ್ಲಿ ತಮ್ಮ ಪರಿಚಯದ ಮಾಧ್ವ ಸಮಾಜದ ಹುಳುಕನ್ನು ಎತ್ತಿ ತೋರಿಸಿದ್ದರೆ, ಖಾದಿ ಸೀರೆಯಲ್ಲಿ ವೀರಶೈವರ ಡಾಂಭಿಕತೆಯನ್ನು ಬಯಲುಗೊಳಿಸಿದ್ದಾರೆ. ಚಿಕ್ಕವರಲ್ಲಿ ದೊಡ್ಡತನವಿರಬಹುದು, ದೊಡ್ಡವರಲ್ಲಿ ಚಿಕ್ಕತನವಿರಬಹುದು. ಇದು ಹೀಗೆ ಎಂದು ಹೇಳುವ ಅಳತೆಗೋಲು ಇನ್ನೂ ಬಂದಿಲ್ಲದಿರುವುದರಿಂದ ಯಾವ ಹುತ್ತದಲ್ಲಿ ಯಾವ ಹಾವಿದೆಯೋ ಎನ್ನುವ ತತ್ತ್ವವನ್ನು ಒಳಗೊಂಡ ಕೃತಿ, ಬ್ರಹ್ಮಚಾರಿಯ ಮಗ. ಸತೀಸೂಳೆ ವೇಶ್ಯೆಯ ಬದುಕನ್ನು ಚಿತ್ರಿಸಿದ್ದರೆ, ಮುರಿದ ಬೊಂಬೆ ಶೋಷಣೆ ಗೊಳಗಾದ ಹೆಣ್ಣಿನ ಆಂತರ್ಯವನ್ನು ತೆರೆದಿಡುತ್ತದೆ. ಒಂದು ಕೈಯಿಂದ ಸರಸ್ವತಿ ಸಂಹಾರ ಮಾಡುತ್ತ, ಇನ್ನೊಂದು ಕೈಯಿಂದ ಲಕ್ಷ್ಮೀಪೂಜೆ ನಡೆಸುವ ದೊಡ್ಡವರ ಭಂಡ ಬದುಕಿನ ಚಿತ್ರಣವೇ ಲಕ್ಷ್ಮೀಪೂಜೆ. ಎಲ್ಲರೂ ಸಂಪನ್ನರೇ; ಕನ್ನಡ ಎಮ್ಮೆ; ಲೇವಡಿ ಟೈಪಿಸ್ಟ್; ಗರತಿಯ ಗುಟ್ಟು; ನರಪ್ರಾಣಿ; ಸತ್ತವನು ಎದ್ದು ಬಂದಾಗ; ಮೇಡಂನ ಗಂಡ; ಕಾಮಂಣ; ಆರಿದ ಚಹಾ; ದೇವರು ಕೊಟ್ಟಿದ್ದು; ಸುನಂದೊಗೇನಂತೆ ಮೊದಲಾದ ಎಲ್ಲ ಕೃತಿಗಳಲ್ಲೂ ಬೀಚಿಯವರು ಬದುಕಿನ ಒಳ ಪ್ರಪಂಚವನ್ನು ತೆರೆದು ತೋರಿಸಿದ್ದಾರೆ. ವ್ಯಂಗ್ಯ ವಿಡಂಬನೆಗಳ ಚಾಟಿಯಿಂದ ಆದು ಉದ್ದೇಶಿಸಿದವರನ್ನು ತಟ್ಟುವಂತೆ ಬರೆಯುವುದೇ ಅದರ ಬರವಣಿಗೆಯ ರೀತಿ. ಹಾಗಾಗಿಯೇ ಅವು ಸೃಷ್ಟಿಸಿದ ಪಾತ್ರಗಳು ಇಂದಿಗೂ ಎಂದಿಗೂ ಸಮಾಜದಲ್ಲಿ ಜೀವಂತವಾಗಿರುವಂಥವು. ಸಂಪ್ರದಾಯ ಶರಣತೆಗೆ ಸಡ್ಡು ಹೊಡೆದು ವೈಚಾರಿಕತೆಗೆ ಪ್ರಾಶಸ್ತ್ಯ ನೀಡುವ ದಿಟ್ಟ ಬರವಣಿಗೆ ಬೀಚಿಯವರದು.

ಇವರ ತಿಂಮನ ತಲೆ, ಚಿನ್ನದ ಕಸ ಕನ್ನಡದಲ್ಲಿ ಹಾಸ್ಯ ವಿಡಂಬನೆಯ ಉತ್ತಮ ಬರಹಗಳು. ಪ್ರತಿಯೊಂದು ಸನ್ನಿವೇಶದಲ್ಲೂ ಹಾಸ್ಯವನ್ನು ಕಾಣುವ ಕಣ್ಣು ಅವರದು. ಬೀಚಿಯವರ ಹಾಸ್ಯ ಬಹಳ ಮಾರ್ಮಿಕ. ಅವರು ಬಣ್ಣಿಸುವ ತಿಂಮನ ತಲೆ ಯಾರಾದರೂ ಆಗಿರಬಹುದು. ಅವರು ಸಿಡಿಸಿರುವ ನಗೆಹನಿಗಳಲ್ಲೂ ಹಾಸ್ಯ ಚಟಾಕಿಗಳಲ್ಲೂ ಕುಹಕ, ಕಟಕಿ, ಬೆಡಗು, ಚುರುಕು, ಚತುರತೆಗಳು ತುಂಬಿವೆ. ಸುಧಾ ವಾರಪತ್ರಿಕೆಯಲ್ಲಿ ಆರಂಭದಿಂದಲೂ ನೀವು ಕೇಳಿದಿರಿ ಅಂಕಣವನ್ನು ನಡೆಸಿಕೊಂಡು ಬಂದವರು. ಅದರ ಒಂದು ಸಂಪುಟವೇ ಉತ್ತರ ಭೂಪ.

ಬೀಚಿಯವರ ಭಯಾಗ್ರಫಿ ಕನ್ನಡದಲ್ಲಿ ಬಂದ ಆತ್ಮಕಥೆಗಳಲ್ಲಿ ವಿಶಿಷ್ಟವಾದುದು. ಇಲ್ಲಿ ಅವರು ತಮ್ಮ ಬದುಕಿನ ಸಿಹಿ-ಕಹಿ ಪ್ರಸಂಗಗಳೆರಡನ್ನೂ ಚಿತ್ರಿಸಿದ್ದಾರೆ; ಆತ್ಮನಿವೇದನೆಯನ್ನು ಮಾಡಿಕೊಂಡಿದ್ದಾರೆ. ಬದುಕಿನ ದೂರನಿಂತು. ಅದು ಇನ್ನೊಬ್ಬನ ಬದುಕೇನೋ ಎನ್ನುವಷ್ಟರ ಮಟ್ಟಿಗೆ ನಿರ್ಲಿಪ್ತತೆಯಿಂದ ತಮ್ಮ ಬದುಕನ್ನು ಕಂಡಿರಿಸಿದ್ದಾರೆ. ಇವರ ಕೆಲವು ಕೃತಿಗಳು ಮೇಲುನೋಟಕ್ಕೆ ಆಶ್ಲೀಲ ಎನ್ನಿಸದಿರದು. ಇವರ ಭಯಾಗ್ರಫಿಯನ್ನು ಓದಿ ಅವರ ಸಾಹಿತ್ಯಕ ಧ್ಯೇಯ-ಧೋರಣೆಗಳನ್ನು ಬದುಕನ್ನು ಅವರು ಕಂಡ ರೀತಿಯನ್ನು ಅರಿತಾಗ ಆ ಆಶ್ಲೀಲತೆ ಅರ್ಥ ಕಳೆದುಕೊಳ್ಳುತ್ತದೆ. ಅವರ ಅನೇಕ ಕೃತಿಗಳಲ್ಲಿ ಅವರೇ ಇರುವುದಾಗಿ ಇಲ್ಲಿ ಹೇಳಿಕೊಂಡಿದ್ದಾರೆ, ಹೆಣ್ಣು ಕಾಣದ ಗಂಡು ಕಾದಂಬರಿಯ ಕಥಾನಾಯಕ ಅಂತ, ದಾಸಕೂಟ ಮತ್ತು ಸತೀಸೂಳೆ ಕೃತಿಗಳ ಉಮೇಶ ಮುಂತಾದವರು.

ಇವರ ಭಯಾಗ್ರಫಿ ಕೇವಲ ಘಟನೆಗಳ ಸರಮಾಲೆಯಲ್ಲ. ನಡೆದ ಯಾವುದೋ ಘಟನೆಯಿಂದ ಅವರ ಮೇಲಾದ ಪ್ರಭಾವ, ಪರಿಣಾಮ ಹಾಗೂ ಅದನ್ನು ಕುರಿತ ವಿಶ್ಲೇಷಣೆ ಎಲ್ಲವೂ ಬರುತ್ತದೆ. ಸಾಹಿತ್ಯ, ಸಮಾಜ, ಬದುಕು, ಸಾವು, ಮದುವೆ, ನೀತಿ, ಶೀಲ, ನಂಬಿಕೆ, ದೊಡ್ಡವರ ಸಣ್ಣತನ, ಸಣ್ಣವರ ದೊಡ್ಡತನ ಎಲ್ಲವನ್ನೂ ಅವರದೇ ಆದ ರೀತಿಯಲ್ಲಿ ವಿಮರ್ಶಿಸಿದ್ದಾರೆ; ವಿಶ್ಲೇಷಿಸಿದ್ದಾರೆ. ಈ ದೃಷ್ಟಿಯಿಂದಲೇ ಇದೊಂದು ಸೊಗಸಾದ ಜೀವನ ಚರಿತ್ರೆ. ಇವರ ಬರವಣಿಗೆಯ ಹದ, ಸೂಕ್ಷ್ಮವಾದ ಕಲೆಗಾರಿಕೆ ಇದರಲ್ಲಿ ಉತ್ತಮವಾಗಿ, ಸ್ವಾರಸ್ಯವಾಗಿ ಮೂಡಿ ಬಂದಿದೆ. ಇದಕ್ಕೂ ಮೊದಲೇ ಪ್ರಕಟವಾದ ಮಾತನಾಡುವ ದೇವರುಗಳು ಮತ್ತು ದೇವರಿಲ್ಲದ ಗುಡಿ ಕೂಡ ಇವರ ಭಯಾಗ್ರಫಿಯ ಭಾಗಗಳು.

ಬರವಣಿಗೆಯನ್ನು ಕಸಬರಿಗೆಯಾಗಿ ಬಳಸಿದ ಬೀಚಿಯವರನ್ನು ಕನ್ನಡದ ಮಡಿವಂತ ಸಾಹಿತಿಗಳು ನಿಷಿದ್ಧವಾಗಿ ಕಂಡರು. ಮೂರೂವರೆ ದಶಕಗಳ ಕಾಲ ತಮ್ಮ ಸಾಹಿತ್ಯದಿಂದ ಕನ್ನಡಿಗರನ್ನು ನಗಿಸುತ್ತಲೇ ಎಚ್ಚರಿಸುತ್ತಿದ್ದ ಬೀಚಿಯವರು 1980 ಡಿಸೆಂಬರ್ 7 ರಂದು ತೀರಿಕೊಂಡರು. 1981ರಲ್ಲಿ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಮರಣೋತ್ತರ ಪ್ರಶಸ್ತಿ ನೀಡಿತು. (ಆರ್.ಎಸ್.ಜೆ.)