ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬೂಷೇ, ಫ್ರಾಂಕೊಯಿಸ್

ವಿಕಿಸೋರ್ಸ್ದಿಂದ

ಬೂಷೇ, ಫ್ರಾಂಕೊಯಿಸ್ 1703-70. ಫ್ರಾನ್ಸಿನ ಚಿತ್ರಕಲಾವಿದ. ಹುಟ್ಟಿದ್ದು ಪ್ಯಾರಿಸ್‍ನಲ್ಲಿ. ಮೊದಲಲ್ಲಿ ಈತನನ್ನು ಮುದ್ರಣ ಫಲಕ ಕೆತ್ತನೆಕಾರನಾಗಿದ್ದ ಜೀನ್ ಫ್ರಾಂಕೊಯಿಸ್ ಕಾರ್ಸ್ (1670-1739) ಎಂಬಾತ ಪುಸ್ತಕಗಳಲ್ಲಿಯ ನಕ್ಷೆ ಮತ್ತು ಚಿತ್ರರಚನೆಗಾಗಿ ನೇಮಿಸಿಕೊಂಡಿದ್ದ. ರೋಮ್ ನಗರದಲ್ಲಿ ನಾಲ್ಕು ವರ್ಷಗಳ ಕಾಲ ಇದ್ದ ಬೂಷೆ 1731ರಲ್ಲಿ ಪ್ಯಾರಿಸಿಗೆ ಹಿಂದಿರುಗಿದ. 1755ರಲ್ಲಿ ಗಾಬೆಲಿನ್ಸ್ ಕಾರ್ಖಾನೆಯ ನಿರ್ದೇಶಕನಾಗಿ ಮತ್ತು 1765ರಲ್ಲಿ ಆಸ್ಥಾನ ಚಿತ್ರಕಾರಕನಾಗಿ ಈತ ನಿಯುಕ್ತನಾದನಲ್ಲದೆ ಬ್ಯೂವೈಸಿನ ನೇಯ್ದ ಚಿತ್ರ ವಸ್ತ್ರ ಕೈಗಾರಿಕೆಯ ತನಿಕಾಧಿಕಾರಿಯೂ ಅದಕ್ಕೆ ಸಂಬಂಧಿಸಿದ ಅಕಾಡೆಮಿಯ ನಿರ್ದೇಶಕನೂ ಆಗಿದ್ದ. ಮ್ಯಾಡಮ್ ಡೆ ಪಾಂಪಡೊರ್ ಎಂಬಾಕೆ ತನ್ನ ಭಾವಚಿತ್ರ ರಚಿಸಲು ಮತ್ತು ಇತರ ವಿವಿಧ ತೆರನ ಅಲಂಕರಣ ಚಿತ್ರಗಳನ್ನು ರಚಿಸಲು ಈತನನ್ನು ನೇಮಿಸಿದಳು. ವಾಟ್ಯೂ-ಸದೃಶ ಶೈಲಿಯಿಂದಾಗಿ ಈತನಿಗೆ ಚಿತ್ರ ಕಲೆಯ ಅನಾಕ್ರಿಯೋನ್ ಎಂಬ ಬಿರುದು ಸಂದಿತು.

ಲಂಡನ್ನಿನ ಪ್ಯಾಲೇಸ್ ಸಂಗ್ರಹದಲ್ಲಿ ಈತನ ಅತಿ ಹೆಚ್ಚು ಚಿತ್ರಗಳಿವೆ. ಇವುಗಳಲ್ಲಿ ಕೆಲವು ಅತ್ಯುತ್ತಮವೆನಿಸಿದೆ. ಏಡಿನ್‍ಬರೋ ನ್ಯಾಷನಲ್ ಗ್ಯಾಲರಿಯಲ್ಲಿರುವ ಮ್ಯಾಡಮ್ ಡೆ ಪಾಂಪಡೋರಳ ಭಾವಚಿತ್ರ ಈತನ ಪ್ರಖ್ಯಾತ ಕೃತಿ.

ತಗಡಿನ ಮೇಲೆ ಸೊಗಸಾಗಿ ಕೊರೆದು ಕೆತ್ತುವ ಕಲೆಯಲ್ಲಿ ಕೂಡ ಬೂಷೇ ನಿಷ್ಣಾತನೆನಿಸಿದ್ದ. 1770, ಮೇ 30 ರಂದು ಮರಣ ಹೊಂದಿದ. (ಎಚ್.ಎಂ.ಎನ್.ಆರ್.)