ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬೆಹಿಸ್ತನ್

ವಿಕಿಸೋರ್ಸ್ದಿಂದ

ಬೆಹಿಸ್ತನ್ ಇರಾನಿನ ಜಂಜರ್ಸ್ ಪರ್ವತಶ್ರೇಣಿಯ ತಪ್ಪಲಲ್ಲಿ, ಸಮಸ್-ಅಬ್ ನದಿಯ ಬಲದಂಡೆಯಲ್ಲಿರುವ ಒಂದು ಗ್ರಾಮ. ಇದರ ಬಳಿ ಇರುವ ಬಂಡೆಯೊಂದರ ಮೇಲೆ ಕೆತ್ತಿರುವ (ಕ್ರಿ. ಪೂ. ಸು. 516) ಪರ್ಷಿಯದ ದೊರೆ ಒಂದನೆಯ ಡೇರಿಯಸ್ಸನ ಶಾಸನ ಮತ್ತು ಶಿಲ್ಪ ಪ್ರಪಂಚ ವಿಖ್ಯಾತವಾದುದು. ಪ್ರಾಚೀನ ಕಾಲದಲ್ಲಿ ಈ ಸ್ಥಳ ತನ್ನ ನೀರಿನ ಚಿಲುಮೆಯಿಂದಾಗಿ ಎಕ್ಬಟಾನ ಮತ್ತು ಬ್ಯಾಬಿಲಾನಿನ ನಡುವಣ ಮಾರ್ಗಮಧ್ಯದ ಒಂದು ತಂಗುದಾಣವಾಗಿತ್ತು. ನೀರಿನ ಚಿಲುಮೆಯಿಂದ ಸುಮಾರು 90ಮೀ ಎತ್ತರದಲ್ಲಿ ಕಡಿದಾದ ಒಂದು ಬಂಡೆಯಿದೆ. ಇದರಲ್ಲಿರುವ ಶಾಸನ ಎರಡನೆಯ ಕ್ಯಾಂಬಿಸೆನ್ ಮೃತನಾದ ಮೇಲೆ ಸಿಂಹಾಸನವನ್ನು ಅತಿಕ್ರಮಿಸಿದ ಗೌಮತ ಮೊದಲಾದ ದಂಗೆಕೋರರನ್ನು ಡೇರಿಯಸ್ ಹೇಗೆ ಹೋರಾಡಿ ಸೋಲಿಸಿ ಕೊಂದನೆಂಬ ವಿಷಯ ವಿವರಿಸುತ್ತದೆ. ಪರ್ಷಿಯನ್ ಭೂಪ್ರದೇಶವನ್ನು ಪ್ರಾಂತ ಅಥವಾ ಸತ್ರಪಿಗಳ ವಿಂಗಡಿಸಲಾದ ವಿಷಯವೂ ಇದರಲ್ಲಿ ಉಲ್ಲೇಖಿತವಾಗಿದೆ. ಈ ಶಾಸನ ಪರ್ಷಿಯನ್, ಸುಸಿಯನ್, ಬ್ಯಾಬಿಲಾನಿಯನ್-ಈ ಮೂರೂ ಭಾಷೆಗಳಲ್ಲಿ ಬರೆಯಲ್ಪಟ್ಟಿದೆ. ಶಾಸನದ ಷರ್ಪಿಯನ್ ಭಾಗವನ್ನು 1835ರಲ್ಲಿ ಹೆನ್ರಿ ರಾಲಿನ್‍ಸನ್ ಓದುವಲ್ಲಿ ಯಶಸ್ವಿಯಾದ; ಮುಂದಿನ ವರ್ಷಗಳಲ್ಲಿ ಸುಸಿಯನ್ ಮತ್ತು ಬ್ಯಾಬಿಲಾನಿಯನ್ (ಅಥವಾ ಎಲಾಮೈಟ್ ಮತ್ತು ಅಕ್ಕೇಡಿಯನ್) ಪಾಠಗಳೂ ಆರ್ಥಸಹಿತವಾಗಿ ಪ್ರಕಟಿಸಲ್ಪಟ್ಟವು. ಅಸ್ಸೀರಿಯನ್ ಬೆಣಿಲಿಪಿಯ ರಹಸ್ಯ ಈ ಶಾಸನದಿಂದ ಬಯಲಾಯಿತು.

ಶಾಸನದಲ್ಲಿರುವ ಶಿಲ್ಪಗಳು ಅಖಮೇನಿಯನ್ ಸಾಮ್ರಾಜ್ಯದ ಅವಿಸ್ಮರಣೀಯ ಸಾಹಸ ಮತ್ತು ಹೆಮ್ಮೆಯನ್ನು ಪ್ರತಿಬಿಂಬಿಸುತ್ತವೆ. ಡೇರಿಯಸ್ ತನ್ನಿಬ್ಬರು ಅನುಯಾಯಿಗಳೊಡನೆ ನಿಂತಿರುವಂತೆಯೂ ಮಾಜಿಯನನ್ನೊಬ್ಬ ಆತನ ಕಾಲಿಗೆ ಬೀಳುತ್ತಿರುವಂತೆಯೂ ಹಲವು ಶತ್ರುಗಳು ಬಂಧಿತರಾಗಿರುವಂತೆಯೂ ಶಿಲ್ಪದಲ್ಲಿ ತೋರಿಸಲಾಗಿದೆ. ಶತ್ರುಗಳ ತಲೆಯ ಮೇಲೆ ಅಖಮೇನಿಯನ್ನರ ದೇವತೆ ಅಹುರಮೆಜ್ದನ ಚಿಹ್ನೆಯಿದೆ. ಇದನ್ನು ಅಸ್ಸೀರಿಂiÀiನ್ನರ ಅಸ್ಸೂರ್ ದೇವತೆಯಂತೆಯೇ ಕೆತ್ತಲಾಗಿದೆ. ಶಿಲ್ಪದಲ್ಲಿ ಅಸ್ಸೀರಿಯಾದ ಶೈಲಿಯ ಛಾಯೆಯಿದ್ದರೂ ಇದು ತನ್ನದೇ ಆದ ಸಹಜ ಆವಿಷ್ಕಾರದಿಂದ ವಿನೂತನಾವಾಗಿದೆ. (ಎಚ್.ಎಂ.ಎನ್.ಆರ್.)