ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬೇಜ್ ಬರುವ ಲಕ್ಷ್ಮೀನಾಥ

ವಿಕಿಸೋರ್ಸ್ದಿಂದ

ಬೇಜ್ ಬರುವ ಲಕ್ಷ್ಮೀನಾಥ 1868-1938. ಅಸ್ಸಾಮೀ ಆಧುನಿಕ ಸಣ್ಣ ಕಥೆಗಳ ಜನಕ. ಹುಟ್ಟಿದ್ದು ಅಸ್ಸಾಮಿನಲ್ಲಿ. ತಂದೆ ದೀನನಾಥ ಬೇಜ್ ಬರುವ ಬ್ರಿಟಿಷ್ ಸರಕಾರದಲ್ಲಿ ಅಧಿಕಾರಿಯಾಗಿದ್ದರು. ಚಿಕ್ಕಂದಿನಿಂದ ಇವರನ್ನು ನೋಡಿಕೊಳ್ಳುತ್ತಿದ್ದ ರಬಿನಾಥ ಎಂಬಾತ ತುಂಬ ಶಿಸ್ತುಗಾರ. ಸುಸಂಸ್ಕøತ, ಬರುವ ಅವನನ್ನು ತುಂಬ ಪ್ರೀತಿಸುತ್ತಿದ್ದರು. ಇವರ ಪ್ರಾಥಮಿಕ ಶಿಕ್ಷಣ ಗೌಹತಿಯಲ್ಲೂ ಎಲೆಮೆಂಟರಿ ಶಿಕ್ಷಣ ಸಿಖ್‍ಸಾಗರದಲ್ಲೂ ಆಯಿತು.

ಆದರ್ಶ ಬಂಗ ವಿದ್ಯಾಲಯದಲ್ಲಿ ವಿದ್ಯಾರ್ಥಿಯಾದುದರಿಂದ ಬಂಗಾಲಿ ಸಾಹಿತ್ಯ ಹಾಗೂ ಆ ಸಂಸ್ಕøತಿಯ ಪ್ರಭಾವ ಇವರ ಮೇಲೆ ಹೆಚ್ಚಾಗಿ ಆಯಿತು. 1886ರಲ್ಲಿ ಎಂಟ್ರೆನ್ಸ್ ಪರೀಕ್ಷೆ ಮುಗಿಸಿ ಕಲ್ಕತ್ತಾದ ಜನರಲ್ ಅಸೆಂಬ್ಲಿ ಕಾಲೇಜಿನಲ್ಲಿ ಓದಿ 1890ರಲ್ಲಿ ಪದವಿ ಪಡೆದರು. ಮುಂದೆ ಅಲ್ಲಯೇ ಬಿ.ಎಲ್ ಮತ್ತು ಎಂ.ಎ. ಗೆ ಸೇರಿ, ಯಶಸ್ವಿಯಾಗದೆ, ಅಣ್ಣನ ಜೊತೆಗೂಡಿ ಉದ್ಯೋಗ ಪ್ರಾರಂಭಿಸಿದರು. 1891ರಲ್ಲಿ ಮಹರ್ಷಿ ದೇವೇಂದ್ರನಾಥ ಟಾಗೂರರ ಮೊಮ್ಮಗಳು ಪ್ರಜ್ಞಾ ಸುಂದರಿದೇವಿಯೊಂದಿಗೆ ಮದುವೆಯಾಯಿತು. 1938 ಮಾರ್ಚಿಯಲ್ಲಿ ಎಪ್ಪತ್ತನೆಯ ವಯಸ್ಸಿನಲ್ಲಿ ದಿಬ್ರೂಘರ್‍ನಲ್ಲಿ ವಿಧಿವಶರಾದರು.

ಇವರು ಕತೆ, ಕವನ, ಪ್ರಹಸನ, ನಾಟಕ, ಪ್ರಬಂಧ ಮೊದಲಾದ ಸಾಹಿತ್ಯ ಪ್ರಕಾರಗಳಲ್ಲಿ ಸುಮಾರು ಮೂವತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಐದು ದಶಕಗಳ ಕಾಲ ಅಸ್ಸಾಮೀ ಸಾಹಿತ್ಯದ ಶ್ರೇಷ್ಠ ಬರಹಗಾರರಲ್ಲೊಬ್ಬರಾಗಿ ಮೆರೆದ ಇವರ ಬರವಣಿಗೆ ಆಳವಾದ ಆಲೋಚನೆ, ಬದುಕಿನ ವೀಕ್ಷಣೆ, ಲೋಕಾನುಭವ, ಸಾಮಾಜಿಕ ದೃಷ್ಟಿಕೋನ ಹಾಗೂ ಕಲಾ ಕೌಶಲ್ಯಗಳಿಂದ ಕೂಡಿದ ಗಂಭೀರ ರೀತಿಯದು ಮತ್ತು ಬದುಕನ್ನು ಪರಿಚಯಿಸುವಂಥದು. ಇವರು ತಮ್ಮ ಸಾಹಿತ್ಯಕ ಚಟುವಟಿಕೆ ಪ್ರಾರಂಭಿಸುವ ಕಾಲಕ್ಕೆ ಅಸ್ಸಾಮೀ ಸಮಾಜ ಇತ್ತ ತನ್ನತನವನ್ನು ಕಾಪಾಡಿಕೊಳ್ಳದೆ, ಅತ್ತ ಇಂಗ್ಲಿಷರ ಪ್ರಭಾವಕ್ಕೂ ಪ್ರರ್ತಿಯಾಗಿ ಒಳಗಾಗದೆ ರೋಗಗ್ರಸ್ತವಾಗಿತ್ತು. ಆ ಕಾಲದಲ್ಲಿ ಬರುವ ಅವರು ಭಾರತೀಯ ಸಂಸ್ಕøತಿಯನ್ನು ಸರಿಯಾಗಿ ಅರ್ಥವಿಸಲು ಶ್ರಮಿಸಿದರು. ಸಮಾಜದಲ್ಲಿ ಬೇರೂರಿದ್ದ ಮೂಢ ನಂಬಿಕೆ, ಕುರುಡು, ಆಚರಣೆ, ಜೊಳ್ಳು ಸಂಪ್ರದಾಯಗಳ ವಿರುದ್ಧ ಎಚ್ಚರಿಸುವ ಲೇವಡಿಮಾಡುವ, ತೀಕ್ಷ್ಣವ್ಯಂಗ್ಯ, ವಿಡಂಬನೆಯಿಂದ ಕೂಡಿದ ಪ್ರಬಂಧಗಳನ್ನು ರಚಿಸಿದರು. ಬರ್ಬರೌರ್ ಕಾಕತರ ತೋಪೊಲ, ಬರ್ಬರೌರ್ ಬಾಬರ್ ಬುರ್ಬುರಾನಿ, ಕೃಪಾಬರ್ ಬರೌರ್ ಓವತನಿ ಮೊದಲಾದ ವ್ಯಕ್ತಿಗತ ಪ್ರಬಂಧಗಳಲ್ಲಿ ಸಮಾಜವನ್ನು ತಿದ್ದುವುದೇ ಇವರ ಮುಖ್ಯ ಉದ್ದೇಶವಾಯಿತು. ಬಖರ್ ತತ್ತ್ವ ಕಥಾ ಮತ್ತು ಭಗವತ್ ಕಥಾ ಲೇಖನಗಳು ಭಾರತೀಯ ತತ್ತ್ವಶಾಸ್ತ್ರ, ವೈಷ್ಣವ ನೀತಿಶಾಸ್ತ್ರಗಳ ಹಿನ್ನೆಲೆಯಿಂದ ಬಂದ ಗಂಭೀರ ಲೇಖನಗಳು.

ಇವರ ನಾಟಕಗಳು ಎರಡು ಬಗೆ, ವ್ಯಂಗ್ಯ ವಿಡಂಬನೆಯಿಂದ ಕೂಡಿದ ಪ್ರಹಸನಗಳು ಹಾಗೂ ಐತಿಹಾಸಿಕ ನಾಟಕಗಳು, ಲಿಟಿಕಾಯ್, ನೋಮಲ್, ಚಿಕರ್ ಪತಿ-ನಿಕರಪತಿ, ಪಚಾನಿ-ಇವು ಪ್ರಹಸನಗಳು. ಬೆಲಿಮಾರ್, ಜಾಯ್ಮತಿಕುವರಿ, ಚಕ್ರಧ್ವಜಸಿಂಗ್-ಇವು ಐತಿಹಾಸಿಕ ನಾಟಕಗಳು. ನಾಟಕಗಳಲ್ಲಿ ಇತಿಹಾಸವನ್ನು ಹೊಸ ಬೆಳಕಿನಲ್ಲಿ ನೋಡಲು ಪ್ರಯತ್ನಿಸಿದ್ದಾರೆ. ರಂಗತಂತ್ರದ ದೃಷ್ಟಿಯಿಂದ ಪರಿಣಾಮಕಾರಿ ಯಶಸ್ಸುಗಳಿಸಿದ ಕೃತಿಯಾದ ಜಾಯ್ಮತಿಕುವರಿ ತತ್ತ್ವ ಮತ್ತು ವ್ಯಕ್ತಿಯ ನಡುವಿನ ಸಂಘರ್ಷವನ್ನು ಚಿತ್ತಿಸುತ್ತದೆ. ಅಸ್ಸಾಮ್ ತನ್ನ ಸ್ವಾತಂತ್ರ್ಯವನ್ನು ಕಳೆದುಕೊಂಡ ರೀತಿಯೇ ವಸ್ತುವಾಗುಳ್ಳ ಬೆಲಿಮಾರ್ ಜನತೆಯ ದುರಂತವನ್ನು ಚಿತ್ರಿಸುವ ಕೃತಿ. ಚಕ್ರಧ್ವಜಸಿಂಗ್ ಇತಿಹಾಸದ ಮೇಲೆ ಬೆಳಕು ಚೆಲ್ಲುವ ನಾಟಕ. ಆದರೆ ಇವರ ಐತಿಹಾಸಿಕ ನಾಟಕಗಳಲ್ಲಿ ಐತಿಹಾಸಿಕ ಪಾತ್ರಗಳ ಚಿತ್ರಣಕ್ಕಿಂತ ಅಲ್ಲಿ ಬರುವ ಕಾಲ್ಪನಿಕ ಪಾತ್ರಗಳು ಹೆಚ್ಚು ಜೀವಂತಿಕೆಯಿಂದ ಕೂಡಿದ್ದು ಯಶಸ್ವಿಯಾಗಿವೆ. ಮೊರ ಜೀವನ್ ಸೋವರನ್ ಇದು ಎರಡು ಭಾಗಗಳಲ್ಲಿ ಹೊರಬಂದಿರುವ ಆತ್ಮಕಥೆ. ಇದರಲ್ಲಿ ಅವರ ಬಾಲ್ಯದ ನೆನಪು ಸುಂದರವಾಗಿ ಮೂಡಿಬಂದಿದೆ. ಕಾಕದೇವತಾ ಆರು ನತಿಲೋರ, ಸಾಧುಕಾಧರ್‍ಕುರೆ ಮೊದಲಾದವು ಮಕ್ಕಳಿಗಾಗಿ ಬರೆದ, ಜಾನಪದಶೈಲಿಯ ಆಕರ್ಷಕ ನೀತಿಕಥೆಗಳು (1912) ಇವರ ಮೊದಲಕಥಾಸಂಕಲನ `ಸುರಲು ಸಣ್ಣ ಕಥೆಗಳ ರಚನೆಗೆ ನಾಂದಿಹಾಡಿದ ಕೃತಿ. ಜೂನ್‍ಬಿರಿ, ಜುನುಕ, ಬುರಿಯರ್ ಸಾಧು-ಮುಂತಾದವು ಕಥಾಸಂಕಲನಗಳು. ಬದುಕಿನ ವಿವಿಧ ಮುಖಗಳ ವಾಸ್ತವ ಚಿತ್ರಣವನ್ನು ಇವರ ಕಥೆಗಳಲ್ಲಿ ಕಾಣಬಹುದಾಗಿದೆ. ಪದುಮ್‍ಕುವರಿ ಇವರ ಏಕೈಕ ರೊಮೆಂಟಿಕ್ ಕಾದಂಬರಿ. ರೋಮಿಯೋ ಜ್ಯೂಲಿಯಟ್ ಕಥೆಯನ್ನು ಅನುಕರಿಸಿರುವ ಈ ಕೃತಿ ಅಷ್ಟಾಗಿ ಯಶಸ್ಸನ್ನು ಗಳಿಸಲಿಲ್ಲ. ಇವರ ಕವನಗಳು ಪ್ರೇಮಕವನ, ಪ್ರಕೃತಿಕವನ, ದೇಶ ಭಕ್ತಿಗೀತೆಗಳು ಮತ್ತು ಲಾವಣಿ ಸ್ವರೂಪದವು. ಪ್ರಿಯತಮರ್ ಸೌಂದಜ್ಯ ಕವನ ಅಸ್ಸಾಮೀ ಸಾಹಿತ್ಯದ ಅತಿಶ್ರೇಷ್ಠ ಪ್ರೇಮ ಕವನಗಳಲ್ಲೊಂದು. ಇವರ ಓ ಮೋರ್ ಅಪನಾರ್ ದೇಶ್ ಅಸ್ಸಾಮೀ ನಾಡಗೀತೆ. ಕಲಾತ್ಮಕಥೆ ಹಾಗೂ ಕಾವ್ಯಮಯ ಭಾಷೆಯಿಂದ ಇವರ ಗೀತೆಗಳು ಇಂದಿಗೂ ಜನಪ್ರಿಯವಾಗಿದೆ. ಈಶ್ವರ ಅರು ಭಕತಿ, ಪ್ರಾಕೃತ ಜೀವನ್ ಸುಖಭೋದ್, ಮಾನ್ ಅಪಮಾನ್ ಮುಂತಾದವು ಇವರ ಆಧ್ಯಾತ್ಮಿಕ ಗೀತೆಗಳು. ಮುಖ್ಯವಾಗಿ ಬರುವ ಅವರು ತಮ್ಮ ಬರಹಗಳಲ್ಲಿ ಅಸ್ಸಾಮೀ ಸಂಸ್ಕøತಿಯನ್ನು ಎತ್ತಿ ಹಿಡಿದು ಬ್ರಿಟಿಷರ ಆಳ್ವಿಕೆಯಿಂದಾದ ಬದಲಾವಣೆಯನ್ನು ಲೇವಡಿ ಮಾಡಿ ಆ ಮೂಲಕ ಜನರ ಮನಸ್ಸನ್ನು ಪರಿವರ್ತಿಸಲು ಪ್ರಯತ್ನಿಸಿದರು. (ಆರ್.ಎಸ್.ಜೆ.)