ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬೊಜ್ಜು

ವಿಕಿಸೋರ್ಸ್ದಿಂದ

ಬೊಜ್ಜು - ವಯಸ್ಸು, ಲಿಂಗ ಹಾಗೂ ಎತ್ತರಗಳಿರುವ ವೈಯಕ್ತಿಕ ಭೇದಗಳಿಗೆ ಅನುಸಾರವಾಗಿ ಸರಾಸರಿ ಇರಬೇಕಾದ ತೂಕಕ್ಕಿಂತಲೂ ಅಧಿಕ ದೇಹತೂಕ ಹಾಗೂ ಆಕಾರ ಇರುವ ವ್ಯಕ್ತಿಯ ಸ್ಥಿತಿ (ಒಬೇಸಿಟಿ). ಸಾಮಾನ್ಯವಾಗಿ ವಯಸ್ಸಿಗೆ ಹೊಂದಿಕೊಂಡು ತೂಕವಿರುತ್ತದೆ. ವ್ಯಕ್ತಿ ತನ್ನ ದೇಹದ ಅವಶ್ಯಕತೆಗಿಂತ ಹೆಚ್ಚಿನ ಆಹಾರ ಸೇವಿಸಿದಾಗ ಆತನ ತೂಕ ಹೆಚ್ಚಾಗುತ್ತದೆ. ತೂಕ ನಿಯಂತ್ರಣದಲ್ಲಿ ಮಿದುಳು ಭಾಗವಾದ ಹೈಪೊತ್ಯಾಲಮಸಿನಲ್ಲಿರುವ ಒಂದು ಕೇಂದ್ರ ಮುಖ್ಯ ಪಾತ್ರ ವಹಿಸುತ್ತದೆ. ಈ ಕೇಂದ್ರಕ್ಕೆ ಯಾವುದಾದರೂ ಆಘಾತ ಬಡಿದಾಗ ಹೆಚ್ಚಿಗೆ ತಿನ್ನುವಂತಾಗುತ್ತದೆ. ಉದಾಹರಣೆಗೆ ತಲೆಯ ಬುರುಡೆಯೊಳಗೆ ದುರ್ಮಾಂಸ ಬೆಳೆದಾಗ, ಮಿದುಳಿನ ಮೂರನೆಯ ಕುಹರದ ತಳದಲ್ಲಿ ಗೆಡ್ಡೆ ಬೆಳೆದಾಗ, ಮೂರನೆಯ ಕುಹರದ್ರವದಲ್ಲಿ ಒತ್ತಡ ಏರಿಕೆ ಆದಾಗ ಅಥವಾ ಪಿಟ್ಯುಟರಿ ಗ್ರಂಥಿ ಕೋಶದಲ್ಲಿ ಗೆಡ್ಡೆ ಬೆಳೆದಾಗ ಸ್ಥೂಲಕಾಯ ಉಂಟಾಗುತ್ತದೆ. ಮಾನಸಿಕ ಕಾರಣಗಳು ದೇಹದ ತೂಕವನ್ನು ವ್ಯತ್ಯಾಸ ಮಾಡಬಲ್ಲವು. ಸ್ಥೂಲಕಾಯದಲ್ಲಿ ತೂಕ ಹೆಚ್ಚಾಗಲು ಚರ್ಮದ ಅಡಿಯಲ್ಲಿರುವ ಕೊಬ್ಬು ಮುಖ್ಯ ಕಾರಣವಾಗಿರುತ್ತದೆ.

ಬೊಜ್ಜು ಸಾಮಾನ್ಯವಾಗಿ ಹೊಕ್ಕಳದ ಅಂಡವಾಯುವನ್ನು ಉಂಟುಮಾಡುತ್ತದೆ. ಹೆಚ್ಚಿಗೆ ದಪ್ಪವಾಗಿರುವ ವ್ಯಕ್ತಿಗಳಲ್ಲಿ ಚರ್ಮದ ಕೆಳಗಡೆಯಲ್ಲಿ ಅಲ್ಲದೆ ದೇಹದ ಒಳಗಿರುವ ಅಂಗಾಂಶಗಳಲ್ಲಿಯೂ ಕೊಬ್ಬು ಶೇಖರವಾಗಿರುತ್ತದೆ. ಕೆಲವು ಜನರಲ್ಲಿ ಬೊಜ್ಜು ವಂಶಪಾರಂಪರ್ಯವಾಗಿ ಬರಬಹುದು. ಹೆಚ್ಚಿನ ಆಹಾರ ಸೇವನೆಯಿಂದ ದೇಹಾವಶ್ಯಕತೆಗೆ ಮೀರಿದ ಆಹಾರ ಕೊಬ್ಬಾಗಿ ರೂಪುಗೊಂಡು ನಮ್ಮ ದೇಹದಲ್ಲಿ ಶೇಖರವಾಗುತ್ತದೆ. ಒಂದೇ ವಿಧವಾದ ಆಹಾರವನ್ನು ಸೇವಿಸುವುದರಿಂದ ಕೆಲವರು ದಪ್ಪಗಾದರೆ ಇನ್ನು ಕೆಲವರ ದೇಹತೂಕದ ಮೇಲೆ ಅದರಿಂದ ಯಾವ ತೆರನಾದ ಪರಿಣಾಮವೂ ಉಂಟಾಗುವುದಿಲ್ಲ. ಪ್ರಾರಂಭದಲ್ಲಿ ಮಾನಸಿಕ ಕಾರಣಗಳಿಂದ ಬಲತ್ಕಾರದಿಂದ ಇಲ್ಲವೇ ಭಾವಾತಿರೇಕದಿಂದ ಕೆಲವರು ಹೆಚ್ಚಿಗೆ ಆಹಾರ ಸೇವಿಸಲು ಪ್ರಾರಂಭಿಸುತ್ತಾರೆ. ಕೊನೆಗೆ ಅವರಿಗೆ ಅದು ರೂಢಿಯಾಗಿಬಿಡುತ್ತದೆ. ಅಂಥವರು ದೇಹದ ಅವಶ್ಯಕತೆಗಿಂತ ಹೆಚ್ಚಿನ ಆಹಾರ ಸೇವನೆಮಾಡಿ ದಪ್ಪವಾಗುತ್ತಾರೆ. ದೇಹದ ಅವಶ್ಯಕತೆಗೆ ಸಾಕಾಗುವಷ್ಟು ಮಾತ್ರ ಆಹಾರ ಸೇವಿಸಿದರೂ ಒಬ್ಬ ವ್ಯಕ್ತಿಗೆ ಬಲವಂತವಾಗಿ ಜಡತೆ ಏರ್ಪಟ್ಟಲ್ಲಿ ದೇಹದ ತೂಕ ಹೆಚ್ಚಾಗುತ್ತದೆ. ಕೆಲವರಲ್ಲಿ ದಪ್ಪವಾಗುವಿಕೆ ಅವರ ದೇಹ ಪ್ರಕೃತಿಯನ್ನು ಅವಲಂಬಿಸುತ್ತದೆ.

ಸ್ಥೂಲಕಾಯದ ಜನರಲ್ಲಿ ಕಾಯಿಲೆಗಳು ಬಹಳ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತವೆ. ಮುಖ್ಯವಾಗಿ ಹೃದ್ರೋಗ, ರಕ್ತನಾಳಗಳ ಕಾಯಿಲೆ, ಚರ್ಮವ್ಯಾಧಿ, ಶ್ವಾಸಕೋಶಗಳ ರೋಗ. ಮೂಳೆಗಳ ತೊಂದರೆಗಳು, ಪಿತ್ತಕೋಶ ಮತ್ತು ಪಿತ್ತಜನಕಾಂಗದ ತೊಂದರೆಗಳು, ಜಠರರೋಗ, ಮಧುಮೇಹ ಇತ್ಯಾದಿ ಕಂಡುಬರುವ ಹಲವಾರು ಕಾಯಿಲೆಗಳಲ್ಲಿ ಕೆಲವು. ಸ್ಥೂಲಕಾಯದವರ ಆಯುಷ್ಯ ಬಹಳ ಮಟ್ಟಿಗೆ ಬೇರೆ ಜನರಿಗಿಂತ ಕಡಿಮೆ. ದೇಹವನ್ನು ಸಮತೂಕದಲ್ಲಿರಿಸ ಬಯಸುವವರು ಪಿಷ್ಟಪದಾರ್ಥಗಳ ಮತ್ತು ಹೆಚ್ಚಿನ ಆಹಾರದ ಸೇವನೆಯನ್ನು ಕಡಿಮೆ ಮಾಡಬೇಕು. ಮೇದಸ್ಸನ್ನು ಕಡಿಮೆ ಸೇವಿಸಬೇಕು. ಆಹಾರ ಸೇವನೆ ಮತ್ತು ಶಕ್ತಿಯ ಉಪಯೋಗಗಳನ್ನು ಮನದಟ್ಟಾಗುವಂತೆ ತಿಳಿಯಬೇಕು. ಸ್ಥೂಲಕಾಯಕ್ಕೆ ಅಂಜುವವರು ವ್ಯಾಯಾಮಕ್ಕಿಂತ ಆಹಾರ ಸೇವನೆಯ ಕಡೆಗೆ ಗಮನ ಹರಿಸುವುದು ಒಳ್ಳೆಯದು. ಹಸಿವೆಯನ್ನು ಕುಗ್ಗಿಸುವ ಔಷಧಿಗಳಾದ ಓರ್ಲಿಸ್ವಾಟ್ ಮತ್ತು ಸಿಬುಟ್ರಮಿನ್‍ಗಳು ಕೊಡುವ ಲಾಭ ಗಮನಾರ್ಹವಲ್ಲ. ಶಸ್ತ್ರಚಿಕಿತ್ಸೆಯಿಂದ ದೇಹದಲ್ಲಿ ಒಗ್ಗೂಡಿ ಬಿದ್ದ ಕೊಬ್ಬನ್ನು ತೆಗೆಯಬಹುದು. (ಕೆ.ಜಿ.ಡಿ.)