ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬೊಲೊನ್ಯ

ವಿಕಿಸೋರ್ಸ್ದಿಂದ

ಬೊಲೊನ್ಯ ಉತ್ತರ ಇಟಲಿಯ ಎಮೀಲ್ಯ ರೋಮಾನ್ಯ ವಿಭಾಗದ ರಾಜಧಾನಿ, ಹಾಗೂ ಬೊಲೊನ್ಯ ಪ್ರಾಂತ್ಯದ ಆಡಳಿತ ಕೇಂದ್ರನಗರ. ರೀನೊ ಮತ್ತು ಸವೆನ ನದಿಗಳ ಮಧ್ಯೆ ಪ್ರದೇಶವನ್ನಾವರಿಸಿರುವ ಈ ವಿಭಾಗದ ವಿಸ್ತೀರ್ಣ 3690.96 ಚಕಿಮೀ. ಜನಸಂಖ್ಯೆ 901,658 (1968). ಬೊಲೊನ್ಯನಗರ ಅಪೆನೈನ್ ಪರ್ವತ ಶ್ರೇಣಿಯ ಉತ್ತರದ ಬುಡದಲ್ಲಿ ಸಮುದ್ರ ಮಟ್ಟದಿಂದ 55 ಮೀಟರ್ ಎತ್ತರದಲ್ಲಿ ಫ್ಲಾರೆನ್ಸಿಗೆ ಈಶಾನ್ಯದಲ್ಲಿ ಸುಮಾರು 106 ಕಿಮೀ ದೂರದಲ್ಲೂ ಮಿಲಾನಿಗೆ ಆಗ್ನೇಯದಲ್ಲಿ ಸುಮಾರು 214 ಕಿಮೀ ದೂರದಲ್ಲೂ ಇದೆ. ನಗರ ಜನಸಂಖ್ಯೆ 481,120 (1977).

ನಗರ ಒಂದು ಪ್ರಮುಖ ಕೈಗಾರಿಕಾಕೇಂದ್ರ. ಉತ್ತರ ಇಟಲಿಯೊಂದಿಗೆ ಸಂಪರ್ಕ ಕಲ್ಪಿಸುವ ರೈಲು ಮತ್ತು ರಸ್ತೆಗಳ ಹೆದ್ದಾರಿ ಕೂಡು ಸ್ಥಳ. ಪ್ರಥಮ ಮಹಾಯುದ್ಧದವರಿಗೆ ಕೃಷಿ ಆಧಾರಿತ ಸಣ್ಣ ಕೈಗಾರಿಕೆಗಳಿದ್ದು ಮುಂದೆ ಅಭಿವೃದ್ಧಿ ಹೊಂದಿದಂತೆ ಕೃಷಿಯಂತ್ರೋಪಕರಣಗಳ, ವಿದ್ಯುತ್ ಮೋಟಾರುಗಳ, ಮೋಟಾರು ಸೈಕಲ್ಲುಗಳ, ರೈಲ್ವೆ ಯಂತ್ರ ಸಾಮಗ್ರಿ, ರಾಸಾಯನಿಕ ವಸ್ತುಗಳ ಮತ್ತು ಚರ್ಮೊದ್ಯೋಗದೆ ಕೇಂದ್ರವಾಯಿತು. ಇಲ್ಲಿಯ ವಿಶ್ವವಿದ್ಯಾಲಯ ಯೂರೊಪಿನಲ್ಲೇ ಪ್ರಾಚೀನವಾದ್ದು. 11ನೆಯ ಶತಮಾನದಲ್ಲಿ ಪ್ರಾರಂಭವಾಗಿ 12-13ನೆಯ ಶತಮಾನದಲ್ಲಿ ಬಹು ಪ್ರಸಿದ್ಧವಾದುವು. ಇಲ್ಲಿ ವಿದ್ಯಾಭ್ಯಾಸ ಮಾಡಿದ ಸಾವಿರಾರು ವಿದ್ಯಾರ್ಥಿಗಳ ಪೈಕಿ ಮಹಾಕವಿ ಡಾಂಟೆ ಮತ್ತು ಪೆಟ್ರಾರ್ಕ್ ಇವರ ಹೆಸರನ್ನು ಉಲ್ಲೇಖಿಸಬಹುದು.

ಬೊಲೊನ್ಯ ಕ್ರಿ.ಪೂ. ಸುಮಾರು 190ರ ಹೊತ್ತಿಗೆ ರೋಮನ್ನಾರ ಕಾಲೋನಿಯಾಗಿತ್ತು. ಅನಂತರ ವಿಸಿಗಾಥರ, ಹೂಣರ ಮತ್ತು ಲಂಬಾರ್ಡರ ಆಕ್ರಮಣಕ್ಕೆ ತುತ್ತಾಯಿತು. 12ನೆಯ ಶತಮಾನದಲ್ಲಿ ಇದನ್ನು ಒಂದು ಸ್ವತಂತ್ರ ಪ್ರದೇಶವಾಗಿ ಇಟಲಿಯ ಚಕ್ರವರ್ತಿ ಪರಿಗಣಿಸಿದ. ಮುಂದೆ ಪಾಳೆಗಾರರ ವಶದಲ್ಲಿದ್ದ ಇದನ್ನು 1500ರಲ್ಲಿ ಎರಡನೆಯ ಪೋಪ್ ಜೂಲಿಯಸ್ ಪಾಪಲ್ ರಾಜ್ಯಕ್ಕೆ ಸೇರಿಸಿದ. ಇದಾದ ಅನಂತರ ಮೂರು ಶತಮಾನಕ್ಕೂ ಹೆಚ್ಚು ಕಾಲ ಈ ನಗರ ಶಾಂತಿ ಮತ್ತು ಅಭಿವೃದ್ಧಿ ಕಂಡಿತು. ಈ ಮಧ್ಯೆ 1797-1814ರ ಅವಧಿ ಫ್ರೆಂಚರ ವಶದಲ್ಲಿಯೂ 1840-1860ರ ಅವಧಿಯಲ್ಲಿ ಆಸ್ಟ್ರಿಯನ್ನರ ವಶದಲ್ಲೂ ಇದ್ದು 1860ರ ಹೊತ್ತಿಗೆ ಇಟಲಿ ಚಕ್ರಾಧಿಪತ್ಯಕ್ಕೆ ಸೇರಿತು. ಎರಡನೆಯ ಮಹಾಯುದ್ಧ ಹೊತ್ತಿನಲ್ಲಿ 1943-45ರವರೆಗೆ ಜರ್ಮನ್ ಸೈನಿಕರ ಬಾಂಬ್ ದಾಳಿಗೆ ಈ ನಗರ ಗುರಿಯಾಗಿತ್ತು.

ಬೊಲೊನ್ಯದಲ್ಲಿ ಮಧ್ಯಕಾಲದ ಎರಡು ದೊಡ್ಡ ಗೋಪುರಗಳು ಇಂದಿಗೂ ಇವೆ. ನಗರ ಹಳೆಯ ಕಿರಿದಾದ ರಸ್ತೆಗಳಿಂದ ಕೂಡಿದೆ. ರಸ್ತೆಯ ಉದ್ದಕ್ಕೂ ಎರಡೂ ಬದಿಗಳಲ್ಲಿ ಅಂಗಡಿಗಳ ಸಾಲುಗಳಿವೆ. ನೂರಮೂವತ್ತು ಇಗರ್ಜಿಗಳಿವೆ. ಈ ಪೈಕಿ 1200ರಲ್ಲಿ ಕಟ್ಟಿದವೂ ಇವೆ. 1110ರ ಅಂದಾಜಿಗೆ ನಿರ್ಮಿತವಾದ 180ಗೋಪುರಗಳ ಪೈಕಿ ಎರಡು ಮಾತ್ರ ಉಳಿದಿವೆ. 1712ರಲ್ಲಿ ಸ್ಥಾಪಿಸಿದ ವಸ್ತು ಸಂಗ್ರಹಾಲಯವಿದೆ. ಇದರಲ್ಲಿ ಬೊಲೊನ್ಯದ ಪ್ರಸಿದ್ಧ ಚಿತ್ರಕಾರರ ಚಿತ್ರಗಳೂ ಇವೆ. ಇಲ್ಲಿಯ ಕೆಲವು ಮಂದಿರಗಳು ಮತ್ತು ಶಿಲ್ಪ ಕೃತಿಗಳು ಪ್ರಸಿದ್ಧವಾದುವು. ಬೊಲೊನ್ಯ ವಿವಿಧ ಕಲೆಯ ತೌರೆಂದು ಹೆಸರಾಗಿದೆ. (ವಿ.ಜಿ.ಕೆ,; ಕೆ.ಆರ್.)