ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬೋಲ್ಟ್‌ವುಡ್, ಬಟರ್ರ್‌ಮ್ ಬಾರ್ಡಿನ್

ವಿಕಿಸೋರ್ಸ್ದಿಂದ

ಬೋಲ್ಟ್‍ವುಡ್, ಬಟ್ರ್ರಮ್ ಬಾರ್ಡಿನ್ 1870-1927, ಅಮೆರಿಕದ ರಸಾಯನ ಮತ್ತು ಭೌತವಿಜ್ಞಾನಿ. ಮ್ಯಾಸಾಚೂಸೆಟ್ಸಿನ ಅಮ್ಹಸ್ರ್ಟ್ ಎನ್ನುವಲ್ಲಿ 1870 ಜುಲೈ 27ರಂದು ಜನನ. ಯೇಲ್‍ನಲ್ಲಿರುವ ಷೆಫೀಲ್ಡ್ ವೈಜ್ಞಾನಿಕ ಶಾಲೆಯಲ್ಲಿ ಅಧ್ಯಯನ. 1897ರಿಂದ ಯೇಲ್ ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿ. ಪದವಿ ಗಳಿಸಿದ. 1910ರಿಂದ ಮುಂದಕ್ಕೆ ಅದೇ ವಿಶ್ವವಿದ್ಯಾಲಯದಲ್ಲಿ ರೇಡಿಯೊ ರಸಾಯನವಿಜ್ಞಾನದ ಪ್ರಾಧ್ಯಾಪಕನಾಗಿದ್ದ. ಪ್ರಯೋಗ ಮಂದಿರ ಕಟ್ಟಿ ಬೆಳೆಸುವುದರಲ್ಲಿ ಬಲು ಸಮರ್ಥ.

ವಿಕಿರಣಪಟುಧಾತುಗಳ ಕ್ಷೇತ್ರದಲ್ಲಿ ಈತನ ಸಂಶೋಧನೆಗಳು ಅನೇಕ ಪ್ರಮುಖ ಆವಿಷ್ಕಾರಗಳಿಗೆ ಎಡೆಮಾಡಿಕೊಟ್ಟಿವೆ. ರೇಡಿಯಮ್ ಧಾತು ಯುರೇನಿಯಮ್ ಧಾತುವಿನಿಂದ ಸಿಡಿದು ಬಂದು ಧಾತು ಎಂದ ಈತ ಆವಿಷ್ಕರಿಸಿದ. ಇದು ಒಂದು ಮಧ್ಯಸ್ಥ ಧಾತುವಿನ ಮೂಲಕ ಉಂಟಾಗುತ್ತದೆಂದು ಹೇಳಿ ಈ ಮಧ್ಯಸ್ಥ ಧಾತುವನ್ನು ಅಯೋನಿಯಮ್ ಎಂದು ಹೆಸರಿಸಿದ. ಯುರೇನಿಯಮ್ ಸಿಡಿಯುತ್ತ ಕೊನೆಯಲ್ಲಿ ಸೀಸ ಅಥವಾ ಅದರ ಒಂದು ಸಮಸ್ಥಾನಿಯಾಗಿ ಪರ್ಯವಸಾನಗೊಳ್ಳುತ್ತದೆ; ಅಯೋನಿಯಮ್ ಮತ್ತು ತೋರಿಯಮ್ ಧಾತುಗಳು ಬೆರಕೆಯಾಗಿದ್ದಾಗ ಗೊತ್ತಾದ ಯಾವ ವಿಧಾನದಿಂದಲೂ ಇವನ್ನು ಬೇರ್ಪಡಿಸಲು ಸಾಧ್ಯವಿಲ್ಲ-ಈ ಗುಣಗಳನ್ನು ಬೋಲ್ಟ್‍ವುಡ್ ಆವಿಷ್ಕರಿಸಿದ. ಧಾತುಗಳ ವಿವಿಧ ಸಮಸ್ಥಾನಿಗಳ ಆವಿಷ್ಕಾರಕ್ಕೆ ಇದರಿಂದ ಉತ್ತೇಜನ ದೊರೆಯಿತು. ಭೂವೈಜ್ಞಾನಿಕ ಕಾಲಮಾಪನ ಮಾಡಲು ಈ ವಿಧಾನ ಹೊಸತಂತ್ರ ನೀಡಿತು. ಭೂಮಿಯ ವಿವಿಧ ಭಾಗಗಳಿಂದ ಆಯ್ದ ಯುರೇನಿಯಮ್ ಮತ್ತು ಅದರ ಕ್ಷಯಶೇಷ ಸೀಸ ಇವುಗಳ ಒಂದು ಸಾರಣೆ ತಯಾರಿಸಿದ. ಇದರಿಂದ ಯುರೇನಿಯಮ್ ಸಿಡಿತದ ಹರವು ಎಷ್ಟು, ಹಾಗೆಯೇ ಯುರೇನಿಯಮ್ ಖನಿಜಗಳಿರುವ ಭೂವೈಜ್ಞಾನಿಕ ಪದರದ ವಯಸ್ಸೇನು ಮೊದಲಾದ ವಿವರಗಳು ಲಭಿಸಿದುವು. ಅಕ್ಟೀನಿಯಮ್ ಕೂಡ ಯುರೇನಿಯಮ್ ಸಿಡಿತದಿಂದ ಉಂಟಾದ ಧಾತು, ಆದರೆ ಅದು ಅಯೋನಿಯಮ್-ರೇಡಿಯಮ್- ಸೀಸಗಳಿರುವ ಸಾಲಿನಲ್ಲಿರುವ ಧಾತು ಅಲ್ಲ, ಬೇರೆ ಶಾಖೆಯಲ್ಲಿ ಇರುವ ಧಾತು ಎಂದು ಶೋಧಿಸಿದ. ಧಾತುಗಳು ಹೇಗೆ ಉಂಟಾಗುತ್ತವೆ ಎಂಬ ಮೂಲಭೂತ ಪ್ರಶ್ನೆಗೆ ಉತ್ತರ ಹುಡುಕುವಲ್ಲಿ ಈ ಶೋಧ ಮುಖ್ಯ ಪಾತ್ರ ವಹಿಸಿದೆ. ತೀವ್ರ ನರದೌರ್ಬಲ್ಯದಿಂದ ನರಳುತ್ತಿದ್ದ ಬೋಲ್‍ವುಡ್ ಒಂದು ದುರ್ಧರ ಪ್ರಸಂಗದಲ್ಲಿ ಆತ್ಮಹತ್ಯೆ ಮಾಡಿಕೊಂಡು ಅಸುನೀಗಿದ (15-8-1927). (ಸಿ.ಕೆ.ವಿ.)