ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬೋಸ್, ಆನಂದ ಮೋಹನ

ವಿಕಿಸೋರ್ಸ್ದಿಂದ

ಬೋಸ್, ಆನಂದ ಮೋಹನ 1847-1906. ಬಂಗಾಲದ ರಾಜಕಾರಣಿ ಶಿಕ್ಷಣ ತಜ್ಞ ಮತ್ತು ಮತಸುಧಾರಕ. ಮೈಮೆನ್‍ಸಿಂಗ್ ಜಿಲ್ಲೆಯ ಮಧ್ಯಮ ವರ್ಗದ ಬಂಗಾಳಿ ಕುಟುಂಬದಲ್ಲಿ ಜನನ. ಕಲ್ಕತ್ತದ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಶಿಕ್ಷಣ ಪಡೆದು ಗಣಿತದಲ್ಲಿ ಪ್ರಥಮ ದರ್ಜೆಯಲ್ಲಿ ಪ್ರಥಮರಾಗಿ ಪದವಿ ಗಳಿಸಿದರು (1867). ಪ್ರೇಮ್‍ಚಂದ್‍ರಾಯ್‍ಚಂದ್ ವಿದ್ಯಾರ್ಥಿವೇತನ ಇವರಿಗೆ ದೊರಕಿತು. ಕೇಂಬ್ರಿಜ್ ವಿಶ್ವವಿದ್ಯಾಲಯದ ಪ್ರಥಮ ಭಾರತೀಯ ರ್ಯಾಂಗ್ಲರ್ ಆದ ಗೌರವ ಬೋಸರದು. ಮರುವರ್ಷವೇ ಬಾರ್‍ಗೆ ಸೇರಲು ಕರೆ ಬಂದುದರಿಂದ ಭಾರತಕ್ಕೆ ಹಿಂತಿರುಗಿದರು.

ಭಾರತಕ್ಕೆ ಬೋಸ್ ಸಲ್ಲಿಸಿರುವ ಸೇವೆ ಬಹುಮುಖವಾದ್ದು. 1876ರಲ್ಲಿ ಕಲ್ಕತ್ತದಲ್ಲಿ ಆರಂಭವಾದ ಇಂಡಿಯನ್ ಅಸೋಸಿಯೇಷನ್ನಿಗೆ ಇವರು ಸಂಸ್ಥಾಪಕ ಕಾರ್ಯದರ್ಶಿ ಆಗಿದ್ದರು. ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಸ್ಥಾಪನೆಗೆ ಒಂದು ರೀತಿಯಲ್ಲಿ ಇವರು ದಾರಿ ಮಾಡಿದರೆಂದು ಹೇಳಬಹುದು. ನಿಷ್ಠಾವಂತ ಕಾಂಗ್ರೆಸಿಗರಾಗಿದ್ದ ಬೋಸ್ 1898ರಲ್ಲಿ ಮದರಾಸಿನಲ್ಲಿ ಸಮಾವೇಶಗೊಂಡಿದ್ದ 14ನೆಯ ಅಧಿವೇಶನಕ್ಕೆ ಅಧ್ಯಕ್ಷರಾಗಿದ್ದರು. ಬಂಗಾಳ ವಿಭಜನೆಗೆ ಇವರು ವಿರೋಧಿಯಾಗಿದ್ದರೂ ಸ್ವದೇಶಿ ಚಳವಳಿಯ ಸೂಚನೆ ಬಂದುದು ಇವರಿಂದ. ಆ ನಿಟ್ಟಿನಲ್ಲಿ ಇವರು ಸ್ವದೇಶ ಉದ್ಯಮಗಳಿಗೆ ಉತ್ತೇಜನ ನೀಡಿದರು. ಶಿಕ್ಷಣಕ್ಕೆ ಇವರದು ನಿರಂತರ ಪ್ರೋತ್ಸಾಹ. ಇವರ ಹೆಸರು ಹೊತ್ತ ಆನಂದ ಮೋಹನ್ ಕಾಲೇಜು ಮೈಮೆನ್‍ಸಿಂಗ್‍ನಲ್ಲಿದೆ. ಇವರಲ್ಲಿ ಮತ ಶ್ರದ್ದೆ ಅಪರಿಮಿತವಾಗಿತ್ತು. ಚಿಕ್ಕಂದಿನಲ್ಲೇ ಬ್ರಾಹ್ಮಣ ಧರ್ಮ ಅವಲಂಬಿಸಿ ಸಾಧಾರಣ ಬ್ರಹ್ಮಸಮಾಜದ ಅಧ್ಯಕ್ಷರೂ ಆಗಿದ್ದರು. *