ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬೋಸ್, ಶರತ್ಚಂದ್ರ

ವಿಕಿಸೋರ್ಸ್ದಿಂದ

ಬೋಸ್, ಶರತ್‍ಚಂದ್ರ 1889-1950. ದೇಶಭಕ್ತ, ಸ್ವಾತಂತ್ರ್ಯ ಹೋರಾಟಗಾರ, ಪ್ರಸಿದ್ಧ ವಕೀಲ ಮತ್ತು ಪತ್ರಿಕಾಕರ್ತ. ಕಲ್ಕತ್ತದಲ್ಲಿ 1889 ಸೆಪ್ಟೆಂಬರ್ 7ರಂದು ಜನನ. ತಂದೆ ಜಾನಕೀನಾಥಬೋಸ್. ತಾಯಿ ಪ್ರಭಾವತಿದೇವಿ. ಪತ್ನಿ ಬಿಭಾವತಿದೇವಿ. ನೇತಾಜಿ ಸುಭಾಸ್‍ಚಂದ್ರಬೋಸರು ಇವರ ತಮ್ಮಂದಿರಲ್ಲೊಬ್ಬರು. ಕಟಕ್ ಮತ್ತು ಕಲ್ಕತ್ತಗಳಲ್ಲಿ ವಿದ್ಯಾಭ್ಯಾಸ ಮಾಡಿ ಪದವೀಧರರಾದರು. 1911ರಲ್ಲಿ ಇಂಗ್ಲೆಂಡಿಗೆ ತೆರಳಿ ಬ್ಯಾರಿಸ್ಟರ್ ಪದವಿ ಪಡೆದು 1913ರಲ್ಲಿ ಸ್ವದೇಶಕ್ಕೆ ಹಿಂತಿರುಗಿ ಬಂದರು. ಕಲ್ಕತ್ತದ ಉಚ್ಚನ್ಯಾಯಾಲಯದ ನ್ಯಾಯವಾದಿಯಾಗಿ ವೃತ್ತಿ ಪ್ರಾರಂಭಿಸಿ ಕ್ರಮೇಣ ವೃತ್ತಿಯಲ್ಲಿ ಹೆಸರು, ಹಣ ಎರಡನ್ನೂ ಗಳಿಸಿದರು.

ಶರತ್‍ಚಂದ್ರರು ಸಿ.ಆರ್. ದಾಸರ ನೇತೃತ್ವದಲ್ಲಿ ತಮ್ಮ ಸಕ್ರಿಯ ರಾಜಕೀಯ ಜೀವನ ಪ್ರಾರಂಭಿಸಿ ದಾಸರ ಮರಣಾನಂತರ ಬಂಗಾಳದ ಕಾಂಗ್ರೆಸ್ಸಿನ ಮುಖ್ಯಸ್ಥರಲ್ಲಿ ಒಬ್ಬರಾದರು. ಸಮಕಾಲೀನ ಕಾಂಗ್ರೆಸ್ ನಾಯಕರೊಂದಿಗೆ ಶರತ್‍ಚಂದ್ರರು ಬಹಳ ವರ್ಷಗಳ ಕಾಲ ಕಾಂಗ್ರೆಸ್ಸಿನ ರಾಜಕೀಯ ಮತ್ತು ಕಲ್ಕತ್ತಾ ನಗರಪಾಲಿಕೆಯ ವ್ಯವಹಾರಗಳಲ್ಲಿ ಮುಖ್ಯಸ್ಥರಾಗಿದ್ದರು. ಆಗಿನ ಅಸಹಕಾರ ಚಳವಳಿಯಲ್ಲಿ ಪಾಲುಗೊಂಡರು. ಸ್ವತಃ ಅಹಿಂಸಾವಾದಿಯಾಗಿದ್ದರೂ ಕ್ರಾಂತಿಕಾರೀ ಸ್ವಾತಂತ್ರ ಹೋರಾಟಗಾರರ ಬಗೆಗೆ ಸಹಾನುಭೂತಿಯನ್ನು ಹೊಂದಿದ್ದ ಅವರು ಆ ಕಾರಣವಾಗಿ ಚಿತ್ತಗಾಂಗ್ ಶಸ್ತ್ರಾಗಾರದ ಆಕ್ರಮಣ ಪ್ರಕರಣದಲ್ಲಿ ಆಪಾದಿತರ ಪರವಾಗಿ ವಾದಿಸಿದರು. ಕಾಂಗ್ರೆಸ್ ಕಾರ್ಯಕಾರೀ ಸಮಿತಿಯ ಸದಸ್ಯರಾಗಿದ್ದರು (1937-39) 1937ರಿಂದ ಮುಂದಿನ ಒಂಬತ್ತು ವರ್ಷಗಳ ಕಾಲ ಅವರು ರಾಜಕೀಯ ಜೀವನದ ಉಚ್ಚಶ್ರಾಯ.

ಬಂಗಾಳದ ವಿಧಾನಸಭೆಯಲ್ಲಿ ಕಾಂಗ್ರೆಸ್ ಶಾಸನಸಭಾ ಮಂಡಲಿಯ ಮುಂದಾಳುತನ ವಹಿಸಿ ತಮ್ಮ ವಾದಚಾತುರ್ಯ ಮತ್ತು ರಾಜಕೀಯ ಮುತ್ಸದ್ದಿತನಗಳನ್ನು ಪ್ರದರ್ಶಿಸಿದರು. ಅವರು ಬಂಗಾಳದಲ್ಲಿ ಮುಸ್ಲಿಮ್ ಲೀಗಿನ ಆಡಳಿತದಲ್ಲಿ ಜಾತೀಯತೆಯ ಉಬ್ಬರವನ್ನು ತಡೆಯಲು ಸಾಕಷ್ಟು ಯತ್ನಿಸಿದರು. 1946ರಲ್ಲಿ ಅವರು ಕೇಂದ್ರದ ಮಧ್ಯವರ್ತಿ ಸರ್ಕಾರವನ್ನು ಸೇರಿಕೊಂಡರಾದರೂ ಕೊಂಚಕಾಲದಲ್ಲಿಯೇ ರಾಜೀನಾಮೆಯಿತ್ತರು (ನವೆಂಬರ್ 1946). ಈಗಾಗಲೇ ಕಾಂಗ್ರೆಸ್‍ನೊಂದಿಗೆ ಭಿನ್ನಾಭಿಪ್ರಾಯ ತಾಳಿದ್ದ ಅವರು 1946ರ ಕೊನೆಯಲ್ಲಿ ಕಾಂಗ್ರೆಸ್ಸಿಗೆ ರಾಜಿನಾಮೆಯಿತ್ತು ಸೋಷಲಿಸ್ಟ್ ರಿಪಬ್ಲಿಕ್ ಪಕ್ಷವನ್ನು ಸ್ಥಾಪಿಸಿದರು. ಬಂಗಾಳದ ವಿಭಜನೆಯನ್ನು ವಿರೋಧಿಸಿ ಸುಹ್ರವರ್ದಿಯವರ ಸಹಕಾರದಿಂದ ಅವಿಭಜಿತ ಬಂಗಾಳವನ್ನು ಭಾರತ ಮತ್ತು ಪಾಕಿಸ್ತಾನಗಳ ಹೊರಗೆ ಸ್ವತಂತ್ರ ದೇಶವಾಗಿ ಸ್ಥಾಪಿಸಲು ಪ್ರಯತ್ನಿಸಿದರು. ಆದರೆ ಅದು ಸಾಧ್ಯವಾಗಲಿಲ್ಲ. ತಮ್ಮ ಕೊನೆಯ ದಿನಗಳಲ್ಲಿ ಶರತ್‍ಚಂದ್ರರು ಭಾರತವನ್ನು ಸಮಾಜಸ್ವಾಮ್ಯವಾದದ ಪ್ರಜಾಧಿಪತ್ಯದ ಒಕ್ಕೂಟವಾಗಿ ಮಾರ್ಪಡಿಸುವ ಯೋಚನೆಯಲ್ಲಿದ್ದರು. ನಮ್ಮ ದೇಶದ ಅನಿಷ್ಟಗಳಿಗೆ ಸಮಾಜ ಸ್ವಾಮ್ಯವಾದವೊಂದೇ ಪರಿಹಾರವೊದಗಿಸಬಲ್ಲದು, ಬಲಪಂಥದ ಕಾಂಗ್ರೆಸ್ ಮುಂದಾಳುತನದ ತಪ್ಪು ನೀತಿಯಿಂದಾಗಿ ದೇಶ ಗುಲಾಮಗಿರಿಯ ಒಂದು ಹಿಡಿತದಿಂದ ಮತ್ತೊಂದು ಹಿಡಿತಕ್ಕೆ ಸಾಗುತ್ತಿದೆ, ರಾಜಕೀಯ ಮತ್ತು ಆರ್ಥಿಕ ಅವನತಿ ಆಗಿದೆ ಎಂದು ಅವರು 1949ರಲ್ಲಿ ಸಾರಿದರು. ಅದೇ ವರ್ಷ ಶರತ್‍ಚಂದ್ರರು ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಿ ಪಶ್ಚಿಮ ಬಂಗಾಳದ ವಿಧಾನ ಸಭೆಯ ಸದಸ್ಯರಾಗಿ ಆಯ್ಕೆಗೊಂಡರು.

ದೇಶ ಸೇವೆಯ ಹೋರಾಟದಲ್ಲಿ ಇವರು ಅನೇಕ ಸಲ ಜೈಲುಕಂಡರು. ಕಾಂಗ್ರೆಸ್ಸಿನಲ್ಲಿದ್ದಾಗ ಪ್ರಮುಖ ಇಂಗ್ಲಿಷ್ ದೈನಿಕಗಳಾಗಿದ್ದ ಫಾರ್ವರ್ಡ್ ಮತ್ತು ಅಡ್ವಾನ್ಸ್‍ಗಳೊಂದಿಗೆ ನಿಕಟಸಂಬಂಧ ಹೊಂದಿದ್ದರು. ಅನಂತರ 1948ರಲ್ಲಿ ನೇಶನ್ ಎಂಬ ಇಂಗ್ಲಿಷ್ ದೈನಿಕವನ್ನು ಪ್ರಾರಂಭಿಸಿದರು. ಬ್ರಿಟಿಷ್ ಇಲ್ಲವೇ ಇನ್ನಾವುದೇ ವಿದೇಶೀ ಪ್ರಭಾವ ಮತ್ತು ಹಿಡಿತಗಳಿಗೆ ನಿಲುಕದ ಮತ್ತು ಪ್ರಪಂಚದ ಯಾವುದೇ ಪರರಾಷ್ಟ್ರಕ್ಕೆ ನಿಲುಕದ ಪೂರ್ಣ ಸತ್ವಪೂರಿತ ಮತ್ತು ಶುದ್ಧ ಸ್ವಾತಂತ್ರ್ಯದ ಆದರ್ಶ ಧ್ಯೇಯಗಳನ್ನು ಪ್ರಚಾರ ಮಾಡುವುದು ಈ ಪತ್ರಿಕೆಯ ಉದ್ದೇಶವಾಗಿತ್ತು. ಇವರು ಪ್ರಾದೇಶಿಕತೆ ಮತ್ತು ಜಾತೀಯತೆಗಳನ್ನು ವಿರೋಧಿಸಿದರು. ಸಾಮಾಜಿಕ ವಿಷಯಗಳಲ್ಲಿ ಆಚಾರ ವಿಚಾರಗಳಿಂದ ಉದಾರ ಹೃದಯದವರಾಗಿದ್ದ ಇವರು ಯಾವಾಗಲೂ ದೇಶಬಾಂಧವರನ್ನು ಜಾತೀಯತೆ ಮತ್ತು ಅಸ್ಪøಶ್ಯತೆಗಳ ವಿರುದ್ಧ ಎಚ್ಚರಿಸುತ್ತಿದ್ದರು. ಅವರು ತಮ್ಮ ಕಾರ್ಯಕ್ಷೇತ್ರವನ್ನು ಬಂಗಾಳದ ಹೊರಗೆ ವಿಸ್ತರಿಸಲು ಒಮ್ಮೆ ನಿರ್ಧರಿಸಿದ್ದರು ಎನ್ನಲಾಗಿದೆ.

ಶರತ್‍ಚಂದ್ರರು ಕಲ್ಕತ್ತದಲ್ಲಿ 1950 ಫೆಬ್ರುವರಿ 20ರಂದು ನಿಧನ ಹೊಂದಿದರು. (ಜಿ.ಕೆ.ಯ.)