ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬೋಸ್, ಸತ್ಯೇಂದ್ರನಾಥ

ವಿಕಿಸೋರ್ಸ್ದಿಂದ

ಬೋಸ್, ಸತ್ಯೇಂದ್ರನಾಥ 1894-1974. ಭಾರತದ ಪ್ರಸಿದ್ಧ ಭೌತವಿಜ್ಞಾನಿ. ಈಸ್ಟ್ ಇಂಡಿಯಾ ರೈಲ್ವೆಯಲ್ಲಿ ನೌಕರರಾಗಿದ್ದ ಸುರೇಂದ್ರನಾಥ ಬೋಸ್ ಮತ್ತು ಇವರ ಪತ್ನಿ ಅಮೋದಿನೀದೇವಿ ಈ ದಂಪತಿಗಳ ಪ್ರಥಮ ಪುತ್ರನಾಗಿ ಸತ್ಯೇಂದ್ರನಾಥ ಬೋಸ್ 1894 ಜನವರಿ 1ರಂದು ಜನಿಸಿದರು. ಇವರ ಪ್ರಾಥಮಿಕ ಶಿಕ್ಷಣ ಬೆಂಗಾಲ್ ನಾರ್ಮಲ್ ಸ್ಕೂಲಿನಲ್ಲಿ ತೊಡಗಿತು. ಮುಂದೆ ಜನರಲ್ ಆಸೆಂಬ್ಲಿ ಸ್ಕೂಲಿಗೆ ಬದಲಾಯಿಸಿದರು. ಇಲ್ಲಿಯ ಮುಖ್ಯೋಪಾಧ್ಯಾಯರು ಬಾಲಕ ಸತ್ಯೇಂದ್ರನಾಥನ ಬುದ್ದಿವಂತಿಕೆಗೆ ಬೆರಗಾಗಿ ಅಂದಿಗೆ ಅತ್ಯುತ್ತಮವೆಂದು ಪರಿಗಣಿತವಾಗಿದ್ದ ಹಿಂದೂ ಸ್ಕೂಲಿಗೆ ಈತನನ್ನು ವರ್ಗಾಯಿಸಿದರು. ಅಲ್ಲಿ ಸತ್ಯೇಂದ್ರನಾಥರು ಎಲ್ಲ ವಿಷಯಗಳಲ್ಲಿಯೂ ಅಸಾಧಾರಣ ಪ್ರತಿಭೆ ತೋರಿಸಿ ಶಿಕ್ಷಕರ ಮೆಚ್ಚುಗೆಗೆ ಪಾತ್ರರಾದರು. ಉಪೇಂದ್ರಲಾಲಬಕ್ಷಿ ಎಂಬ ಹಿರಿಯ ಗಣಿತ ಅಧ್ಯಾಪಕರು ಈತನಿಗೆ ವಿಶೇಷ ಪ್ರೋತ್ಸಾಹ ಕೊಟ್ಟರು. ಒಮ್ಮೆ ಗಣಿತ ಪರೀಕ್ಷೆಯಲ್ಲಿ ಬೋಸರು ಎಲ್ಲ ಪ್ರಶ್ನೆಗಳನ್ನೂ ಸಾಧ್ಯವಿದ್ದ ಎಲ್ಲ ರೀತಿಗಳಲ್ಲೂ ಬಿಡಿಸಿದ್ದರಿಂದ ಬಕ್ಷಿಯವರು ಸುಪ್ರೀತರಾಗಿ ಇವರಿಗೆ 100ಕ್ಕೆ 110 ಅಂಕಗಳನ್ನು ಕೊಟ್ಟಿದ್ದರು. ಪೈಥಾಗೊರಸ್ ಮತ್ತು ಲಾಪ್ಲಾಸರಂತೆ ಈ ಬಾಲಕ ಶ್ರೇಷ್ಠತಮ ಗಣಿತಜ್ಞನಾಗುವನೆಂದು ಅವರು ಭವಿಷ್ಯ ನುಡಿದಿದ್ದರು.

1909ರಲ್ಲಿ ಸತ್ಯೇದ್ರನಾಥರು ಕಲ್ಕತ್ತೆಯ ಪ್ರೆಸಿಡೆನ್ಸಿ ಕಾಲೇಜ್ ಸೇರಿದರು. ಭವಿಷ್ಯದಲ್ಲಿ ಇನ್ನೊಬ್ಬ ಖ್ಯಾತ ಭೌತವಿಜ್ಞಾನಿ ಆಗಲಿದ್ದ ಮೇಘನಾದ ಸಹಾ ಇಲ್ಲಿಯೇ ಅವರಿಗೆ ಸಹಪಾಠಿಯಾಗಿ ಮತ್ತು ಆತ್ಮೀಯ ಮಿತ್ರರಾಗಿ ಲಭಿಸಿದರು. ಬೋಸ್_ಸಹಾ ಸ್ನೇಹ ಕೊನೆಯತನಕವೂ ಆದರ್ಶ ಪ್ರಾಯವಾಗಿ ಉಳಿದಿದ್ದು ಭಾರತೀಯ ವಿಜ್ಞಾನದ ಸುದೈವ. ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಜಗದೀಶಚಂದ್ರ ಬೋಸ್ ಭೌತವಿಜ್ಞಾನವನ್ನೂ ಪ್ರಫುಲ್ಲ ಚಂದ್ರರಾಯ್ ಮತ್ತು ಎ.ಸಿ. ಮೈತ್ರಾ ರಸಾಯನವಿಜ್ಞಾನವನ್ನೂ ಶಾಮದಾಸ್ ಮುಖ್ಯೋಪಾಧ್ಯಾಯ, ಸಿ.ಇ.ಕೆಲ್ಲಿಸ್ ಮತ್ತು ಡಿ.ಎನ್.ಮಲ್ಲಿಕ್ ಗಣಿತವನ್ನೂ ಕಲಿಸುತ್ತಿದ್ದರು. ಇಂಥ ಶ್ರೇಷ್ಠ ವಿಜ್ಞಾನಿಗಳ ಶಿಷ್ಯರಾಗುವ ಸುಯೋಗ ಸತ್ಯೇಂದ್ರನಾಥ ಮತ್ತು ಮೇಘನಾದರಿಗೆ ಒದಗಿತ್ತು. ಸತ್ಯೇಂದ್ರನಾಥರು 1913ರಲ್ಲಿ ಬಿ.ಎಸ್‍ಸಿ. ಮತ್ತು 1915ರಲ್ಲಿ ಎಂ.ಎಸ್‍ಸಿ. ಪರೀಕ್ಷೆಗಳನ್ನು ಪ್ರಥಮ ವರ್ಗದಲ್ಲಿ ಪ್ರಥಮರಾಗಿ ಉತ್ತೀರ್ಣರಾದರು. ಮೇಘನಾದ ಸಹಾ ಈ ಎರಡೂ ಪರೀಕ್ಷೆಗಳಲ್ಲಿ ಎರಡನೆಯ ಸ್ಥಾನ ಪಡೆದರೆಂಬುದನ್ನು ಗಮನಿಸಬೇಕು.

ವಿದ್ಯಾರ್ಥಿ ದೆಸೆಯಲ್ಲಿ ಬೋಸರು ಯಾವಾಗಲೂ ಸ್ವಾತಂತ್ರ್ಯ ಚಳುವಳಿಯೊಂದಿಗೆ ಸಂಬಂಧ ಇಟ್ಟು ಕೊಂಡಿದ್ದರು. ಇವರು ಕ್ರಾಂತಿಕಾರಿ ಅನಿಶೀಲನ ಪಕ್ಷದ ಸದಸ್ಯರಾಗಿದ್ದರೆಂದೂ ಕ್ರಾಂತಿಪುರುಷ ಯದುಗೋಪಾಲ ಮುಖರ್ಜಿಯವರ ಹಿಂಬಾಲಕರಾಗಿದ್ದರೆಂದೂ ಇವರ ಮೇಲೆ ಗುಮಾನಿ ಇತ್ತು. ಕಾಲೇಜು ದಿನಗಳಲ್ಲಿ ಗುಟ್ಟಿನಿಂದ ಸ್ವತಃ ಕೈಬಾಂಬುಗಳನ್ನು ತಯಾರಿಸುತ್ತಿದ್ದರೆಂದೂ ಹೇಳಲಾಗುತ್ತಿತ್ತು. ಈ ರಾಷ್ಟ್ರಪ್ರೇಮ ಹಾಗೂ ರಾಜಕೀಯ ಹೋರಾಟದಲ್ಲಿಯ ಆಸ್ಥೆಯನ್ನು ಬೋಸರು ಕೊನೆ ಉಸಿರಿನತನಕವೂ ಉಳಿಸಿಕೊಂಡು ಬಂದಿದ್ದರು.

1914ರಲ್ಲಿ ಸತ್ಯೇಂದ್ರನಾಥರು ವಿವಾಹವಾದರು. ಅವರ ಪತ್ನಿ ಉಷಾದೇವಿ ಪತಿಯೊಂದಿಗೆ ಸಹಕರಿಸಿದ ಆದರ್ಶ ಗೃಹಿಣಿ. ಬೋಸರ ಕೌಟುಂಬಿಕ ಜೀವನ ಸದಾ ಸುಖಮಯವಾಗಿತ್ತು. ಇಬ್ಬರು ಪುತ್ರರು ಮತ್ತು ಐವರು ಪುತ್ರಿಯರು ಇದ್ದ ತುಂಬು ಸಂಸಾರವಿದು. ತಂದೆ ಸುರೇಂಧ್ರನಾಥ ತೊಂಬತ್ತಾರು ವರ್ಷಪರ್ಯಂತ ಬಾಳಿ ತಮ್ಮ ಪ್ರತಿಭಾವಂತ ಮಗನ ಏಳ್ಗೆ ನೋಡಿ ಆನಂದ ಪಟ್ಟರು. ಎಸ್.ಎನ್. ಬೋಸ್ ಸಾಹಿತ್ಯ, ಸಂಗೀತ ಮತ್ತು ಕಲೆಯ ಉಪಾಸಕರು. ಬಂಗಾಳಿ ಮತ್ತು ಇಂಗ್ಲಿಷ್ ಅಲ್ಲದೆ ಫ್ರೆಂಚ್, ಜರ್ಮನ್ ಮತ್ತು ಇಟಾಲಿಯನ್ ಸಾಹಿತ್ಯ ಕೂಡ ಓದಿಕೊಂಡರು. ಈ ಭಾಷೆಗಳಿಂದ ಕಥೆ ಕವಿತೆಗಳನ್ನು ಆಯ್ದು ಬಂಗಾಳಿ ಭಾಷೆಗೆ ಅನುವಾದಿಸುವುದಿತ್ತು.

ಆಗ ಅಶುತೋಷ್ ಮುಖರ್ಜಿಯವರು ಭಾರತೀಯ ವಿಜ್ಞಾನದ ದಿಗ್ದರ್ಶ ಸ್ಥಾನದಲ್ಲಿ ಇದ್ದವರು. 1914ರಲ್ಲಿ ವಿಜ್ಞಾನದಲ್ಲಿ ಪ್ರೌಢ ವ್ಯಾಸಂಗ ಮತ್ತು ಸಂಶೋಧನೆಗಳಿಗಾಗಿ ಕಲ್ಕತ್ತದ ವಿಶ್ವವಿದ್ಯಾಲಯದಲ್ಲಿ ಅವರು ವಿಜ್ಞಾನದ ಮಹಾವಿದ್ಯಾಲಯ ಸ್ಥಾಪಿಸಿದರು. ಎಸ್.ಎನ್. ಬೋಸರು ಆ ಕಾಲೇಜಿನ ಅನ್ವಿತ ಗಣಿತ ವಿಭಾಗಕ್ಕೆ ಅಧ್ಯಾಪಕರಾಗಿ ಸೇರಿದರು (1916), 1917ರಲ್ಲಿ ಭೌತವಿಜ್ಞಾನ ವಿಭಾಗವೂ ಪ್ರಾರಂಭವಾಯಿತು. ಆಗ ಅಶುತೋಷ್ ಮುಖರ್ಜಿಯವರು ಎಸ್.ಎನ್.ಬೋಸರನ್ನು ಬೋಧನೆ ಮತ್ತು ಸಂಶೋಧನೆಗಳಿಗೆ ಸಹಾಯಮಾಡಲು ಕೇಳಿಕೊಂಡರು. ಈ ಶತಮಾನದ ಆರಂಭದಲ್ಲಿ ಮ್ಯಾಕ್ಸ್ ಫ್ಲಾಂಕ್ ಶಕಲ ಸಿದ್ಧಾಂತ ಮಂಡಿಸಿ (1900) ಭೌತವಿಜ್ಞಾನದಲ್ಲಿ ನವಯುಗವನ್ನೇ ಪ್ರವರ್ತಿಸಿದರು. ಕಳೆದ ಶತಮಾನದ ಕೊನೆಗೆ ಸೈದ್ಧಾಂತಿಕ ಭೌತವಿಜ್ಞಾನದಲ್ಲಿ ಗಣಿತೀಯ ಪದ್ಧತಿಗಳು ವಸ್ತುವಿನ ಪರಮಾಣುವಾದದ ಕಾರಣವಾಗಿ ಸಂಖ್ಯಾ ಕಲಾತ್ಮಕವಾಗಿದ್ದುವು. ಗಿಪ್ಸ್ ಬರೆದ ಎಲಿಮೆಂಟ್ಸ್ ಆಫ್ ಸ್ಟ್ಯಾಟಿಸ್ಟಿಕಲ್ ಮೆಕ್ಯಾನಿಕ್ಸ್ 1901ರಲ್ಲಿ ಪ್ರಕಟವಾಗಿ ಆಧುನಿಕ ಭೌತವಿಜ್ಞಾನಕ್ಕೆ ಮಹಾನ್ ಕೊಡುಗೆ ಎನಿಸಿಕೊಂಡಿತು. 1905ರಲ್ಲಿ ಐನ್‍ಸ್ಟೈನ್ ವಿಶೇಷ ಸಾಪೇಕ್ಷತಾ ಸಿದ್ಧಾಂತವನ್ನು ಮುಂದೆ 1915ರಲ್ಲಿ ಸಾರ್ವತ್ರಿಕ ಸಾಪೇಕ್ಷತಾ ಸಿದ್ಧಾಂತವನ್ನು ಪ್ರಕಟಿಸಿ ಅಭಿಜಾತ ಭೌತವಿಜ್ಞಾನದ ದೋಷಗಳನ್ನು ಎತ್ತಿ ತೋರಿಸಿದ್ದರು. ಹೀಗಾಗಿ ಈ ಶತಕದ ಎರಡನೆಯ ದಶಕ ಭೌತ ವಿಜ್ಞಾನದಲ್ಲಿ ಅತ್ಯಂತ ಚಟುವಟಿಕೆಯದಾಗಿತ್ತು.

ಸಹಜವಾಗಿಯೇ ಈ ಬೆಳೆವಣಿಗೆಗಳು ತರುಣ ವಿಜ್ಞಾನಿ ಸತ್ಯೇಂದ್ರನಾಥರನ್ನು ಆಕರ್ಷಿಸಿದುವು. ಸಂಖ್ಯಾಕಲನಾತ್ಮಕ ಉಷ್ಣಗತಿವಿಜ್ಞಾನದಲ್ಲಿ (ಸ್ಟ್ಯಾಟಿಸ್ಟಿಕಲ್ ತರ್ಮೊಡೈನಮಿಕ್ಸ್) ಬೋಸರ ಮೊದಲ ಸಂಶೋಧನ ಪ್ರಬಂಧಗಳು ಲಂಡನ್ನಿನ ಪ್ರಸಿದ್ಧ ಫಿಲಸಾಫಿಕಲ್ ಮ್ಯಾಗಝೀನಿನಲ್ಲಿ ಪ್ರಕಟವಾದುವು. ಮೇಘನಾದ ಸಹಾರೊಂದಿಗೆ ಇವರು ಅನಿಲಗಳ ಸ್ಥಿತಿ ಸಮೀಕರಣದ ಮೇಲೆ ಅಣುಗಳ ಪರಿಮಿತ ಗಾತ್ರದ ಪ್ರಭಾವ ಪರಿಶೀಲಿಸಿ ವಾನ್‍ಡರದದವಾಲ್ಸ್ ಸಮೀಕರಣಕ್ಕಿಂತ ಹೆಚ್ಚು ವ್ಯಾಪಕ ಸಮೀಕರಣ ಮಂಡಿಸಿದರು. ಹೈಡ್ರೊಜನ್ ರೋಹಿತೆಗಳ ಬೋರ್-ಸಾಮರ್‍ಫೆಲ್ಡ್ ಸಿದ್ಧಾಂತ ಎಲೆಕ್ಟ್ರಾನುಗಳ ಪರಮಾಣುಗಳಿಗೆ ಅನ್ವಯವಾಗುವಂತೆ ಇನ್ನೂ ವ್ಯಾಪಕವಾಗಿ ಸಾರ್ವತ್ರೀಕರಿಸಿದರು (1920). ಮೇಘನಾದ ಸಹಾರೊಂದಿಗೆ ಈ ಅವಧಿಯಲ್ಲಿಯೇ ಐನ್‍ಸ್ಟೈನರ ಸಾಪೇಕ್ಷತಾ ಸಿದ್ಧಾಂತ ಕುರಿತ ಮೂಲ ಜರ್ಮನ್ ಪ್ರಬಂಧಗಳನ್ನು ಇಂಗ್ಲಿಷಿಗೆ ಅನುವಾದಿಸಿದರು. ಇವನ್ನು ಕಲಕತ್ತಾ ವಿಶ್ವವಿದ್ಯಾಲಯ ಪ್ರಕಟಿಸಿತು (1920).

ಕಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಆರು ವರ್ಷ ಪರ್ಯಂತ ದುಡಿದ ಮೇಲೆಯೂ ಕೇವಲ ಅರ್ಧಾವಧಿ ಉಪನ್ಯಾಸಕರಾಗಿಯೇ ಇರಬೇಕಾಗಿದ್ದುದ್ದರಿಂದಲೂ ವಿವಿಧ ವಿಭಾಗಗಳಲ್ಲಿ ಏಕಕಾಲಕ್ಕೆ ದುಡಿದರು. ಕೇವಲ ನೂರು ರೂಪಾಯಿಗಳ ಸಂಬಳ ಬರುತ್ತಿದ್ದರಿಂದಲೂ ಬೋಸರು ಅದೇ ಪ್ರಾರಂಭವಾದ ಢಾಕಾ ವಿಶ್ವವಿದ್ಯಾಲಯದಲ್ಲಿ ಭೌತವಿಜ್ಞಾನದಲ್ಲಿ ರೀಡರ್ ಹುದ್ದೆಗೆ ಬಂದ ಆಹ್ವಾನ ಸ್ವೀಕರಿಸಿದರು. 1922ರಲ್ಲಿ ಅಲ್ಲಿಗೆ ತೆರಳಿದರು. ಆದರೆ ಢಾಕಾದಲ್ಲಿ ಅವರಿಗೆ ನಿರೀಕ್ಷಿತ ಸ್ಥಾನಮಾನ ಸಿಗಲಿಲ್ಲ. ಅವರು ಕಲ್ಕತ್ತದೊಂದಿಗೆ ಸಂಪರ್ಕ ಕಡಿದುಕೊಳ್ಳಲಿಲ್ಲ.

ಪ್ರಸಿದ್ಧ ಭೌತವಿಜ್ಞಾನಿ ಪೌಲಿ 1923ರಲ್ಲಿ ಪ್ರಕಟಿಸಿದ ವಸ್ತು ಮತ್ತು ವಿಕಿರಣಗಳ ಪರಸ್ಪರ ಕ್ರಿಯೆಯ ಬಗೆಗಿನ ಸಂಶೋಧನ ಪ್ರಬಂಧವನ್ನು ಸಹಾ ಅವರು ಬೋಸರ ಗಮನಕ್ಕೆ ತಂದರು. ಪೌಲಿಯವರ ಗ್ರಹಿಕೆಯಲ್ಲಿ ಬೋಸರಿಗೆ ನ್ಯೂನತೆ ಕಂಡುಬಂದಿತು. ಅದನ್ನು ಸರಿಪಡಿಸಿ ತಾವೇ ವಸ್ತು ವಿಕಿರಣ ಪರಸ್ಪರ ಕ್ರಿಯೆಯ ಸಮಸ್ಯೆಯನ್ನು ಕ್ವಾಂಟಮ್ ಸಿದ್ಧಾಂತದ ಮೇಲೆ ನೇರವಾಗಿ ಏಕೆ ಬಿಡಿಸಬಾರದು ಎಂದು ಯೋಚಿಸಿದರು. ಈ ಸಮಸ್ಯೆ ಕುರಿತ ತಮ್ಮ ಪ್ರಬಂಧವನ್ನು ಝೈಟ್‍ಶ್ಚಿಫ್ಟ್ ಫರ್ ಫಿಸೀಕ್ ಎಂಬ ಜರ್ಮನ್ ಭೌತವಿಜ್ಞಾನ ಪತ್ರಿಕೆಯಲ್ಲಿ ಪ್ರಕಟಿಸಲು ನೆರವಾಗಬೇಕೆಂದು ಎಷ್ಟು ಮೆಚ್ಚಿಕೊಂಡರೆಂದರೆ ಇದನ್ನು ಸತಃ ತಾವೇ ಜರ್ಮನ್ ಭಾಷೆಗೆ ಅನುವಾದಿಸಿ ಆ ಪತ್ರಿಕೆಗೆ ಕಳುಹಿಸಿದರು. ಬೋಸ್ ಕೊಟ್ಟಿರುವ ಫ್ಲಾಂಕನ ಸೂತ್ರದ ಹೊಸ ಸಾಧನೆ ತಮ್ಮ ಅಭಿಪ್ರಾಯದಲ್ಲಿ ಮಹತ್ವದ ಮುನ್ನಡೆ ಎಂದು ಐನ್‍ಸ್ಟೈನ್ ಆ ಪತ್ರಿಕೆಗೆ ತಿಳಿಸಿದರು. ಬೋಸರ ಈ ಪ್ರಬಂಧ 1924ರಲ್ಲಿ ಪ್ರಕಟವಾಯಿತು. ಬರ್ಲಿನ್ ಅಕಾಡೆಮಿ ಆಫ್ ಸೈನ್ಸಸ್ ಏರ್ಪಡಿಸಿದ್ದ ಸಭೆಯೊಂದರಲ್ಲಿ ಸತಃ ಐನ್‍ಸ್ಟೀನರು ಈ ಪ್ರಬಂಧ ಓದಿದರು. ಐನ್‍ಸ್ಟೈನರಿಂದ ಪುರಸ್ಕøತವಾಗಿ ಪರಿಷ್ಕಾರಗೊಂಡಿದ್ದರಿಂದ ಬೋಸರ ಈ ಹೊಸ ಸಂಖ್ಯಾಕಲನಾತ್ಮಕ ಸಿದ್ಧಾಂತಕ್ಕೆ ಬೋಸ್-ಐನ್‍ಸ್ಟೈನ್ ಸಂಖ್ಯಾಕಲವಿಜ್ಞಾನ ಎಂದು ಹೆಸರಾಯಿತು.

ಪ್ಲ್ಯಾಂಕನ ನಿಯಮ ಸಾಧಿಸುವಾಗ ಬೋಸ್ ನಿರ್ದಿಷ್ಟ ಉಷ್ಣತೆಯಲ್ಲಿದ್ದ ಕೃಷ್ಣಕಾಯದ ವಿಕಿರಣ ಪರಿಶೀಲಿಸುತ್ತ ಇದು ದ್ಯುತಿ ಕಣಗಳಾದ ಫೋಟಾನುಗಳ ಮುಕ್ತ ಅನಿಲವೆಂದು ಭಾವಿಸಿ ಫೋಟಾನುಗಳ ಸಂಖ್ಯಾಕಲನಾತ್ಮಕ ವರ್ತನೆ ಗಮನಿಸುವುದರಿಂದ ಸಾಧ್ಯವೆಂದು ತೋರಿಸಿದರು. ಸ್ವತಃ ಪ್ಲ್ಯಾಂಕರಾಗಲಿ ಇತರರಾಗಲಿ ಈ ನಿಯಮ ಸಾಧಿಸುವಾಗ ಅನಾವಶ್ಯಕವಾದ ಅಭಿಗೃಹೀತಗಳನ್ನು (ಉದಾಹರಣೆಗೆ ಹಟ್ರ್ಸಿಯನ್ ಆಂದೋಳಕಗಳು, ಬೋರ್ ಪರಮಾಣುಗಳು ಇತ್ಯಾದಿ) ಅಂಗೀಕರಿಸಿದ್ದರು. ಫೋಟಾನುಗಳ ಶಕ್ತಿ ವಿತರಣವಿನ್ಯಾಸವನ್ನು ಸೈದ್ಧಾಂತಿಕವಾಗಿ ಸಾಧಿಸಿ ಪ್ರಾಯೋಗಿಕ ನಿರ್ಣಯಗಳೊಂದಿಗೆ ಅದನ್ನು ತಾಳೆ ನೋಡುವುದೇ ಪ್ಲ್ಯಾಂಕರ ಗುರಿಯಾಗಿತ್ತು. ಆದರೆ ಅವರು ಉಪಯೋಗಿಸಿದ ಅಭಿಜಾತ ಬೋಲ್ಟ್ಸ್‍ಮನ್ ಸಂಖ್ಯಾಕಲನವಿಜ್ಞಾನದಲ್ಲಿ ಒಂದು ಶಕ್ತಿಮಟ್ಟದ ಎಲ್ಲ ಕಣಗಳು ಏಕರೂಪಿಯಾಗಿದ್ದರೂ ವಿಭಿನ್ನವಾಗಿರುತ್ತವೆ. ಅಲ್ಲದೇ ಪ್ರಾವಸ್ಥಾಕಾಶದ ಯಾವುದೇ ಕೋಶದಲ್ಲಿ ಬೇಕಾದಷ್ಟು ಕಣಗಳಿರಬಹುದು. ಬೋಸ್ ಆವಿಷ್ಕರಿಸಿದ ಮುಖ್ಯ ಸಂಗತಿ ಎಂದರೆ ಈ ಕಣಗಳು ಏಕರೂಪಿಯಾಗಿರುವುದಲ್ಲದೇ ಅಭಿನ್ನವಾಗಿದ್ದು ಒಂದರಿಂದ ಮತ್ತೊಂದನ್ನು ಬೇರ್ಪಡಿಸಿ ವಿವರಿಸಲು ಸಾಧ್ಯವಿಲ್ಲ ಎಂಬುದನ್ನು. ಇದರಿಂದ ಕಣಗಳ ಸರಾಸರಿ ಶಕ್ತಿಗೆ ಸರಿಯಾದ ಸೂತ್ರ ದೊರೆತು ಪ್ಲ್ಯಾಂಕನ ನಿಯಮಕ್ಕೆ ಸಾಧನೆ ಒದಗಿತು. ಆಧುನಿಕ ಕ್ವಾಂಟಮ್ ಭೌತವಿಜ್ಞಾನದಲ್ಲಿ ಅಭಿನ್ನ ಮೂಲ ಕಣಗಳ ಯಾವುದೇ ಗುಂಪು. ಒಂದೇಶಕ್ತಿ ಮಟ್ಟದಲ್ಲಿ ಬೇಕಾದಷ್ಟು ಇಂಥ ಕಣಗಳಿರಬಹುದೆಂದಾದರೆ, ಬೋಸ್-ಐನ್‍ಸ್ಟೈನ್ ಸಂಖ್ಯಾಕಲನವಿಜ್ಞಾನವನ್ನು ಪಾಲಿಸುತ್ತದೆ. ಲೇಸರ್ ಪ್ರಕಾಶಕಣಗಳ ಸಂಸಕ್ತ ಪ್ರವಾಹ ಮತ್ತು ಅಲೆ ಪ್ರವಾಹೀ ಹೀಲಿಯಂನ ಘರ್ಷಣಾರಹಿತ ಜಾರುವಿಕೆ ಈ ಸಂಖ್ಯಾಕಲನವಿಜ್ಞಾನದ ಕಾರಣವಾಗಿಯೇ ನಡೆಯುವುದಾಗಿದೆ. ಪೌಲಿಯ ಬಹಿಷ್ಕರಣ ತತ್ತ್ವ ಈ ಕಣಗಳಿಗೆ ಅನ್ವಯಿಸುವುದಿಲ್ಲ ಪೌಲಿಯ ತತ್ತ್ವ ಅನ್ವಯವಾಗುವ ಏಕರೂಪಿ ಅಭಿನ್ನಕಣಗಳ ಗುಂಪು ಪಾಲಿಸುವ ಸಂಖ್ಯಾಕಲನವಿಜ್ಞಾನವನ್ನು ಫರ್ಮಿ ಮತ್ತು ಡಿರಾಕ್ ಆವಿಷ್ಕರಿಸಿದರು (1926). ಇಂಥ ಕಣಗಳ ಗಿರಕಿ (ಸ್ಪಿನ್) ಪೂರ್ಣಾಂಕ (0,1 ಇತ್ಯಾದಿ). ಈ ಕಣಗಳಿಗೆ ಬೋಸಾನುಗಳೆಂದು ಹೆಸರು. ಫೋಟಾನುಗಳಲ್ಲದೆ, ಮೇನಾಸುಗಳು, ಫೋನಾನುಗಳು ಮತ್ತು ಮ್ಯಾಗ್ನಾನುಗಳು ಕೂಡ ಬೋಸಾನುಗಳಿಗೆ ಉದಾಹರಣೆ.

ಬೋಸಾನುಗಳ ಅನಿಲ ಬೋಸ್ ಸಾಂದ್ರೀಕರಣ (ಬೋಸ್ ಕಂಡೆನ್ಸೇಶನ್) ತೋರಿಸಬೇಕೆಂದು ಐನ್‍ಸ್ಟೈನ್ ಸೂಚಿಸಿದರು. ಪ್ರವಾಹಿ ಹೀಲಿಯಮ್ಮಿನ ವಿಚಿತ್ರ ವರ್ತನೆ ಈ ಕಾರಣವಾಗಿ ಎಂದು ಹನ್ನೆರಡು ವರ್ಷಗಳ ತರುವಾಯ ಸಿದ್ಧವಾಯಿತು. ಹೀಗೆ ಬೋಸ್-ಐನ್ಸ್‍ಸ್ಟೈನ್ ಸಂಖ್ಯಾಕಲನವಿಜ್ಞಾನ ಕ್ವಾಂಟಮ್ ಭೌತವಿಜ್ಞಾನದ ಅವಿಭಾಜ್ಯ ಅಂಗವಾಗಿ ನೆಲೆಗೊಂಡಿದೆ.

1923ರಲ್ಲಿ ಸತ್ಯೇಂದ್ರನಾಥರು ಪೌಲಿಯ ಪ್ರಬಂಧಕ್ಕೆ ಸಂಬಂಧಪಟ್ಟ ವಸ್ತುವಿನ ಸನಿಹದಲ್ಲಿ ವಿಕಿರಣ ಕ್ಷೇತ್ರದ ಶಾಖ ಸಮಸ್ಥಿತಿ (ಥರ್ಮಲ್ ಈಕ್ವಿಲಿಬ್ರಿಯಮ್ ಆಫ್ ರೇಡಿಯೇಷನ್ ಫೀಲ್ಡ್ ಇನ್ ದಿ ಪ್ರೆಸೆನ್ಸ್ ಆಫ್ ಮ್ಯಾಟರ್) ಎಂಬ ಇನ್ನೂ ವ್ಯಾಪಕವಾದ ಒಂದು ಪ್ರಬಂಧ ಪ್ರಕಟಿಸಿದರು. ಆದರೆ ಐನ್‍ಸ್ಟೈನ್ ಈ ಪ್ರಬಂಧದ ಕೊನೆಗೆ ಟೀಕೆ ಮಾಡಿದ ಒಂದು ಟಿಪ್ಪಣಿ ಸೇರಿಸಿದ್ದರಿಂದ ಇದಕ್ಕೆ ಅಷ್ಟು ಪ್ರಸಿದ್ಧಿ ದೊರೆಯಲಿಲ್ಲ.

ಢಾಕಾದಲ್ಲಿದ್ದ ಇಪ್ಪತ್ತಮೂರು ವರ್ಷಗಳಲ್ಲಿ ಬೋಸರು ವಿಜ್ಞಾನದ ವಿವಿಧ ಕ್ಷೇತ್ರಗಳಲ್ಲಿ ಸಂಶೋಧನೆಗೈದರು. ಸಂಖ್ಯಾಕಲನಾತ್ಮಕ ಭೌತವಿಜ್ಞಾನ ಏಕೀಕೃತ ಕ್ಷೇತ್ರ ಸಿದ್ಧಾಂತ ಸಂಖ್ಯಾಕಲನವಿಜ್ಞಾನ ರೇಡಿಯೊ ತರಂಗಗಳು, ಕ್ವಾಂಟಮ್ ಸಿದ್ಧಾಂತ ಯಂತ್ರವಿಜ್ಞಾನ ಮತ್ತು ರಸಾಯನವಿಜ್ಞಾನ ಇವರು ಸಂಶೋಧನೆ ಮಾಡಿದ ಕ್ಷೇತ್ರಗಳು. ಢಾಕಾದಲ್ಲಿ ಎಕ್ಸ್‍ಕಿರಣಗಳ ಪ್ರಯೋಗಾಲಯವನ್ನೂ ರಾಸಾಯನಿಕ ಪ್ರಯೋಗಾಲಯವನ್ನೂ ನಿರ್ಮಿಸಿದರು.

ಬೋಸರ ಪ್ರತಿಭೆ ಗುರುತಿಸಿ ಡಾಕಾ ವಿಶ್ವವಿದ್ಯಾಲಯ ಇವರಿಗೆ ಎರಡು ವರ್ಷ ಅಧ್ಯಯನ ರಜೆಕೊಟ್ಟು ಯೂರೊಪ್ ಪ್ರವಾಸಕ್ಕೆ ಕಳಿಸಿತು. 1924ರಲ್ಲಿ ಇವರು ಪ್ಯಾರಿಸ್ಸಿಗೆ ಹೋಗಿ ಒಂದು ವರ್ಷ ಅಲ್ಲಿದ್ದು ಮ್ಯಾಡಮ್ ಕ್ಯೂರಿಯವರ ಪ್ರಯೋಗಶಾಲೆಯಲ್ಲಿ ಸಂಶೋಧನೆ ನಡೆಸಿದರು. ಅದೇ ವೇಳೆ ಇತರ ಪ್ರಸಿದ್ಧ ಭೌತವಿಜ್ಞಾನಿಗಳಾದ ಲಾಂಜವಾಡ್, ಡಿ. ಬ್ರಾಗ್ಲೀ ಮುಂತಾದವರೊಡನೆ ಸಂಪರ್ಕವಿಟ್ಟುಕೊಂಡರು. ಅಲ್ಲಿಂದ ಜರ್ಮನಿಗೆ ಹೋಗಿ ಐನ್‍ಸ್ಟೈನರನ್ನು ಪ್ರತ್ಯಕ್ಷವಾಗಿ ಭೇಟಿ ಆದರು. ಆಗ ಆ ಸುಮಾರಿಗೆ ಢಾಕಾ ವಿಶ್ವವಿದ್ಯಾಲಯದಲ್ಲಿ ಮುಖ್ಯ ಪ್ರಾಧ್ಯಾಪಕ ಹುದ್ದೆ ಖಾಲಿ ಬಿದ್ದಿತೆಂದು ಸುದ್ದಿ ಬಂದಿತು. ಆದರೆ ಬೋಸರಿಗೆ ಆಗ ಬರಿ ಎಂ.ಎಸ್‍ಸಿ. ಪದವಿ ಮಾತ್ರ ಇತ್ತು ಅಷ್ಟೆ. ಆದರೂ ಮಿತ್ರರ ಒತ್ತಾಯದ ಮೇರೆಗೆ ಆ ಹುದ್ದೆಗೆ ಅರ್ಜಿ ಹಾಕಿ ಜೊತೆಗೆ ಐನ್‍ಸ್ಟೈನರ ಒಂದು ಶಿಫಾರಸು ಪತ್ರ ಇಟ್ಟರು. ಸಹಜವಾಗಿ ಆ ಹುದ್ದೆ ಬೋಸರಿಗೆ ಸಿಕ್ಕಿತು (1926).

ಬೋಸರು ಯೂರೋಪಿನಲ್ಲಿದ್ದಾಗ ಅವರ ಮುಖಾಂತರ ಭಾರತದ ಕ್ರಾಂತಿಕಾರಿ ರಾಜಕೀಯ ಪಕ್ಷವೊಂದು ವಿದೇಶಗಳಲ್ಲಿದ್ದ ಸದಸ್ಯರಿಗೆ ಹಣದ ವಿಲೇವಾರಿ ಮಾಡುತ್ತದೆ ಎಂಬ ಅನುಮಾನ ಬಂದದ್ದರಿಂದ ಆಗಿನ ಭಾರತ ಸರ್ಕಾರ ಬೋಸರ ಮೇಲೆ ಕಣ್ಣಿಟ್ಟಿತು. ಢಾಕಾ ವಿಶ್ವವಿದ್ಯಾಲಯದ ಬ್ರಿಟಿಷ್ ಕುಲಪತಿಗಳಿಗೆ ಈ ವಿಷಯದಲ್ಲಿ ಅವರ ವಿರುದ್ಧ ವಿಚಾರಣೆ ನಡೆಸಲು ಕೇಳಿಕೊಂಡಿತು. ಕುಲಪತಿಗಳು ಪ್ಯಾರಿಸಿನಲ್ಲಿದ್ದ ಲೇವಿ ಎಂಬ ವಿದ್ವಾಂಸರ ಸಹಾಯದಿಂದ ವಿಚಾರಣೆ ನಡೆಸಿ ಬೋಸರಂಥ ಪ್ರತಿಭಾವಂತರ ಸಂಶೋಧನೆಗಳಿಗೆ ಅಡ್ಡಿ ಮಾಡಬಾರದೆಂದು ನಿರ್ಣಯಿಸಿ ಅವರನ್ನು ಆರೋಪಮುಕ್ತರಾಗಿ ಮಾಡಿದರು. 1945ರಲ್ಲಿ ಕಲಕತ್ತಾ ವಿಶ್ವವಿದ್ಯಾಲಯ ಬೋಸರನ್ನು ಖೈರಾ ಪ್ರೊಫೆಸರ್ ಆಫ್ ಫಿಸಿಕ್ಸ್ ಎಂದು ನೇಮಿಸಿತು. ಅಲ್ಪ ಕಾಲದಲ್ಲಿಯೇ ಇವರು ಭೌತವಿಜ್ಞಾನ ವಿಭಾಗದ ಮುಖ್ಯಸ್ಥರಾದುದರಲ್ಲದೇ ವಿಜ್ಞಾನ ವಿಭಾಗಗಳ ಡೀನರೂ ಆದರು. ಕಲಕತ್ತದಲ್ಲಿ ಬೋಸರಿಗೆ ಎಲ್ಲ ಅನುಕೂಲತೆಗಳೂ ಪ್ರತಿಭಾವಂತ ವಿದ್ಯಾರ್ಥಿ ವೃಂದವೂ ಲಭಿಸಿದ್ದರಿಂದ ಇವರ ಸಂಶೋಧನೆ ನಿರಾತಂಕವಾಗಿ ಸಾಗಿತು. ಏಕೀಕೃತ ಕ್ಷೇತ್ರ ಸಿದ್ಧಾಂತದ ಮೇಲಿನ ಇವರ ಐದು ಪ್ರಬಂಧಗಳು ಪ್ರಕಟವಾದದ್ದು ಈ ಕಾಲದಲ್ಲಿಯೇ (1953-58).

ಭಾರತ-ಪಾಕಿಸ್ತಾನಗಳ ಗಡಿ ರೇಖೆ ನಿರ್ಧರಿಸುವ ರ್ಯಾಡ್‍ಕ್ಲಿಫ್ ಆಯೋಗಕ್ಕೆ ಬೋಸರು ಭಾರತ ರಾಷ್ಟ್ರೀಯ ಕಾಂಗ್ರೆಸ್ಸಿನ ಆಹ್ವಾನದ ಮೇರೆಗೆ ಕಾಂಗ್ರೆಸ್ ಪರವಾಗಿ ಮುಖ್ಯ ವೈಜ್ಞಾನಿಕ ಸಲಹೆಗಾರರಾಗಿ ಕೆಲಸಮಾಡಿದರು. 1956ರಲ್ಲಿ ಖೈರಾ ಪ್ರೊಫೆಸರ್ ಹುದ್ದೆಯಿಂದ ನಿವೃತ್ತರಾದಾಗ ಕಲಕತ್ತಾ ವಿಶ್ವವಿದ್ಯಾಲಯ ಇವರನ್ನು ಎಮಿರೆಟಸ್ ಪ್ರೊಫೆಸರರಾಗಿ ನೇಮಿಸಿ ಗೌರವಿಸಿತು. ರವೀಂದ್ರನಾಥ ಟಾಗೋರರ ವಿಶ್ವಭಾರತಿ ವಿಶ್ವವಿದ್ಯಾಲಯದ ಕುಲಪತಿ ಹುದ್ದೆ ಸ್ವೀಕರಿಸಿ ಅಲ್ಲಿಗೆ ಹೋದರು. ಅಲ್ಲಿ ಇವರು ವಿಜ್ಞಾನದಲ್ಲಿ ಹೆಚ್ಚಿನ ಅಧ್ಯಯನ ಮತ್ತು ಸಂಶೋಧನೆಗಳಿಗೆ ಪ್ರಾಶಸ್ತ್ಯಕೊಡಲು ಪ್ರಯತ್ನಿಸಿದಾಗ ವಿರೋಧ ಕಂಡು ಬಂದಿತು. ಹೀಗಾಗಿ ಆ ಹುದ್ದೆ ತೊರೆದರು. 1959ರಲ್ಲಿ ಭಾರತ ಸರ್ಕಾರ ರಾಷ್ಟ್ರೀಯ ಪ್ರಾಧ್ಯಾಪಕರೆಂದು ಇವರನ್ನು ನೇಮಿಸಿ ಗೌರವಿಸಿತು. ಇದೇ ಸುಮಾರಿಗೆ ಇಂಡಿಯನ್ ಅಸೋಸಿಯೇಷನ್ ಫಾರ್ ಕಲ್ಟಿವೇಷನ್ ಆಫ್ ಸೈನ್ಸ್ ಎಂಬ ಸಂಸ್ಥೆ ಇವರನ್ನು ಎಮಿರೆಟಸ್ ಪ್ರೊಫೆಸರ್ ಎಂದು ಕೂಡ ನೇಮಿಸಿತು. ಈ ಹುದ್ದೆಗಳ ಸದುಪಯೋಗ ಮಾಡಿಕೊಂಡು ಬೋಸರು ವಿಜ್ಞಾನದಲ್ಲಿ ಸೈದ್ಧಾಂತಿಕ ಹಾಗೂ ಪ್ರಾಯೋಗಿಕ ಕ್ಷೇತ್ರಗಳಲ್ಲಿ ವಿವಿಧ ಸಂಶೋಧನ ಯೋಜನೆಗಳನ್ನು ಸಿದ್ಧಪಡಿಸಿಕೊಟ್ಟರು.

1952ರಲ್ಲಿ ಇವರು ರಾಜ್ಯಸಭೆಯ ಸದಸ್ಯರಾಗಿ ಚುನಾಯಿತರಾದರು. 1958ರ ತನಕ ರಾಜಕೀಯ ಕ್ಷೇತ್ರದಲ್ಲಿದ್ದು ವಿಜ್ಞಾನದ ಸಂಪೂರ್ಣ ಪ್ರಯೋಜನ ಸಮಾಜಕ್ಕಾಗಬೇಕೆಂದು ಹೋರಾಡಿದರು. 1958ರಲ್ಲಿ ಭಾರತ ಇವರಿಗೆ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿತು. 1964ರಲ್ಲಿ ದಿಲ್ಲಿ ವಿಶ್ವವಿದ್ಯಾಲಯ ಇವರಿಗೆ ಡಿ.ಎಸ್.ಸಿ. ಪದವಿ ಇತ್ತು ಸನ್ಮಾನಿಸಿತು. ಹಲವಾರು ವಿಶ್ವವಿದ್ಯಾಲಯಗಳು ಇವರಿಗೆ ಡಾಕ್ಟರೇಟ್ ಪ್ರಶಸ್ತಿ ಪ್ರಧಾನಿಸಿದವು. ಇಂಡಿಯನ್ ಸೈನ್ಸ್ ಕಾಂಗ್ರೆಸ್ಸಿನ ಭೌತವಿಜ್ಞಾನ ವಿಭಾಗಕ್ಕೆ ಅಧ್ಯಕ್ಷರಾಗಿ 1927ರಲ್ಲಿ ಅದರ ಸಾಮಾನ್ಯ ಅಧ್ಯಕ್ಷರಾಗಿ 1944ರಲ್ಲಿಯೂ ಚುನಾಯಿತರಾದರು. 1958ರಲ್ಲಿ ರಾಯಲ್ ಸೊಸೈಟಿ ಇವರನ್ನು ಫೆಲೊ ಎಂದು ಆರಿಸಿ ಗೌರವಿಸಿತು. ಬೋಸರು ವಿಜ್ಞಾನವನ್ನು ಜನಪ್ರಿಯಗೊಳಿಸಲು ಸದಾಕಾಲ ಪ್ರಯತ್ನಿಸಿದರು. ಢಾಕಾದಲ್ಲಿದ್ದಾಗ ಇವರ ನಿರ್ದೇಶನದಲ್ಲಿ ಬೆಂಗಾಲಿ ಭಾಷೆಯಲ್ಲಿ ಜನಪ್ರಿಯ ವಿಜ್ಞಾನ ನಿಯತಕಾಲಿಕೆಯೊಂದು ಪ್ರಕಟವಾಗತೊಡಗಿತು. 1948ರಲ್ಲಿ ಇವರು ವಂಗೀಯ ವಿಜ್ಞಾನ ಪರಿಷತ್ತನ್ನು ಸ್ಥಾಪಿಸಿದರು. ಜ್ಞಾನ-ವ-ವಿಜ್ಞಾನ ಎಂಬ ಜನಪ್ರಿಯ ವಿಜ್ಞಾನ ಮಾಸಿಕವನ್ನು ಈ ಪರಿಷತ್ತು ಪ್ರಕಟಿಸಲಾರಂಭಿಸಿತು.

1974 ಭಾರತದ ವಿಜ್ಞಾನ ಕ್ಷೇತ್ರದಲ್ಲಿ ವಿಶಿಷ್ಟ ವರ್ಷ. ಆ ವರ್ಷ ಬೋಸ್ ಸಂಖ್ಯಾಕಲನ ವಿಜ್ಞಾನದ ಸುವರ್ಣ ಮಹೋತ್ಸವವನ್ನೂ ಬೋಸರ 80ನೆಯ ಜನ್ಮದಿನವನ್ನೂ ಅವರು ಸ್ಥಾಪಿಸಿದ ವಂಗೀಯ ವಿಜ್ಞಾನ ಪರಿಷತ್ತಿನ ಬೆಳ್ಳಿಹಬ್ಬವನ್ನೂ ಆಚರಿಸುವ ಸಂಭ್ರಮ ದೇಶಾದ್ಯಂತ ತುಂಬ ವ್ಯಾಪಿಸಿತ್ತು. ಇವೆಲ್ಲ ಜನವರಿಯಲ್ಲಿಯೇ ನಡೆದುವು. ಅದೇ 24ರಂದು ಬೋಸರು ಅಸ್ವಸ್ಥರಾದರು ಮತ್ತು 1974 ಫೆಬ್ರುವರಿ 4 ರಂದು ನಿಧನರಾದರು. (ಆರ್.ಎಸ್.ಬಿ.)