ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬೋಸ್, ಸುಭಾಷ್ಚಂದ್ರ

ವಿಕಿಸೋರ್ಸ್ದಿಂದ

ಬೋಸ್, ಸುಭಾಷ್‍ಚಂದ್ರ 1897-1945. ನೇತಾಜಿ ಎಂದು ಪ್ರಸಿದ್ದರಾದ ಭಾರತ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಪ್ರಮುಖರು. ಆಧುನಿಕ ಭಾರತದ ಇತಿಹಾಸದ ಮೇಲಷ್ಟೇ ಅಲ್ಲದೆ ಏಷ್ಯದ ಜನಮನದ ಮೇಲೂ ಅಚ್ಚಳಿಯದ ಪ್ರಭಾವ ಬೀರಿದವರು. 1897 ಜನವರಿ 23ರಂದು ಒರಿಸ್ಸದ ಕಟಕ್‍ನಲ್ಲಿ ಜನನ. ತಂದೆ ಜಾನಕೀನಾಥ್ ಬೋಸ್, ವಕೀಲರು, ತಾಯಿ ಪ್ರಭಾವತಿದೇವಿ. ಹದಿನಾಲ್ಕು ಮಕ್ಕಳಲ್ಲಿ ಇವರು ಒಂಬತ್ತನೆಯವರು.

ಬೋಸರು ತಮ್ಮ ಬಾಲ್ಯದಲ್ಲಿ ಧಾರ್ಮಿಕ ಮನೋಭಾವದ ತಾಯಿತಂದೆಯರಿಂದ ಪ್ರಭಾವಿತರಾದುದಲ್ಲದೆ ಕಟಕ್‍ನ ತ್ಯಾವೆನ್‍ಷಾ ಕಾಲೇಜಿಯಟ್ ಶಾಲೆಯ ಮುಖ್ಯೋಪಾಧ್ಯಾಯರಾಗಿದ್ದ ವೇಣಿಮಾಧವದಾಸರ ಪ್ರಭಾವಕ್ಕೂ ಒಳಗಾಗಿದ್ದರು. ಸುಭಾಷರು ರ್ಯಾವೆನ್‍ಷಾ ಕಾಲೇಜಿಯೆಟ್ ಶಾಲೆಯಿಂದ ಕಲ್ಕತ್ತ ವಿಶ್ವವಿದ್ಯಾಲಯಕ್ಕೆ ಎರಡನೆಯವರಾಗಿ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಕಲ್ಕತ್ತೆ ಪ್ರೆಸಿಡೆನ್ಸಿ ಕಾಲೇಜಿಗೆ ಸೇರಿದರು. ಪ್ರಾಧ್ಯಾಪಕ ಓಟನ್ ತಮ್ಮ ಉಪನ್ಯಾಸವೊಂದರಲ್ಲಿ ಭಾರತ ಹಾಗೂ ಭಾರತೀಯರ ವಿರುದ್ಧ ಅವಹೇಳನಕರವಾಗಿ ಮಾತನಾಡಿದ್ದರಿಂದ ಕೆರಳಿದ ಕಾಲೇಜಿನ ಕೆಲವು ವಿದ್ಯಾರ್ಥಿಗಳು ಅವರನ್ನು ಥಳಿಸಿದರು. ಉತ್ಸಾಹಿ ಸುಭಾಷರನ್ನು ಈ ಘಟನೆಗೆ ಮುಖ್ಯ ಪ್ರೇರಕನೆಂದು 1916ರಲ್ಲಿ ವಿಶ್ವವಿದ್ಯಾಲಯದಿಂದ ತಾತ್ಕಾಲಿಕವಾಗಿ ಹೊರದೂಡಲಾಯಿತು. ಆದಾಗ್ಯೂ ಸರ್ ಅಶುತೋಷ್ ಮುಖರ್ಜಿಯವರ ನೆರವಿನಿಂದ, ಅನಾಕ್ಷೇಪ ಪತ್ರದೊಡನೆ ಸುಭಾಷರು ಸ್ಕಾಟಿಷ್ ಚರ್ಚಸ್ ಕಾಲೇಜು ಸೇರಿದರು (1917). ತತ್ತ್ವಶಾಸ್ತ್ರವನ್ನು ಮುಖ್ಯ ವಿಷಯವಾಗಿ ತೆಗೆದುಕೊಂಡಿದ್ದ ಸುಭಾಷರು ಪ್ರಥಮ ದರ್ಜೆದಲ್ಲಿ ಬಿ.ಎ. ಪಾಸುಮಾಡಿದರು (1919).

ಈ ವೇಳಾಗಾಗಲೇ ಯುವಕ ಸುಭಾಷರ ಅಂತರಶ್ಚೇತನ ಸ್ವಾಮಿ ವಿವೇಕಾನಂದರ ಪ್ರಭಾವಕ್ಕೊಳಗಾಗಿತ್ತು. ಇವರ ಹೃದಯ ಆಧ್ಯಾತ್ಮಿಕ ಮತ್ತು ದೇಶಭಕ್ತಿ ನೆಲೆಯಾಗಿತ್ತು. ತಾಯಿತಂದೆ ತಮ್ಮ ಮನೋಭಿಲಾಷೆಯನ್ನು ಸುಭಾಷರಿಗೆ ತಿಳಿಸಿದಾಗ ಅವರ ಮಾತನ್ನು ಮೀರದೆ ಇಂಡಿಯನ್ ಸಿವಿಲ್ ಸರ್ವಿಸ್ (ಐ.ಸಿ.ಎಸ್.) ಪರೀಕ್ಷೆಗಾಗಿ ಇಂಗ್ಲೆಂಡಿಗೆ ಹೋದರು. ಸ್ಪರ್ಧಾ ಪರೀಕ್ಷೆಯಲ್ಲಿ ನಾಲ್ಕನೆಯವರಾಗಿ ಐ.ಸಿ.ಎಸ್. ಪಾಸುಮಾಡಿದರು (1920).

ಸ್ಪರ್ಧಾಪರೀಕ್ಷೆಯಲ್ಲಿ ಉತ್ತಿರ್ಣನಾದ ಪ್ರತಿಯೊಬ್ಬ ಅಭ್ಯರ್ಥಿಯೂ ಒಂದು ವರ್ಷ ಕಾಯಂ ಪೂರ್ವ ಅವಧಿಯನ್ನು ಪೂರೈಸಬೇಕಾಗಿತ್ತು. ಆದರೆ ಸುಭಾಷರು ಅದನ್ನು ಪೂರೈಸದೆ 1921 ಏಪ್ರಿಲ್‍ನಲ್ಲಿ ರಾಜೀನಾಮೆ ನೀಡಿ 1921 ಜುಲೈ 16ರಂದು ಭಾರತಕ್ಕೆ ಬಂದರು. ಕಾರಣ ಆಗ ಭಾರತದಲ್ಲಿ ಆಗಿದ್ದ ತೀವ್ರ ಘಟನೆಗಳಿಂದ ಅವರ ಮನಸ್ಸು ಪ್ರಕ್ಷುಬ್ಧವಾಗಿತ್ತು. 1919ರಲ್ಲಿ ಜನರಲ್ ಡೈಯರ್‍ನಿಂದ ಜಲಿಯನ್ ವಾಲಾಬಾಗ್ ಹತ್ಯಾಕಾಂಡ ನಡೆದಿತ್ತು. ಇದಾದ ಅನಂತರ 1920 ಆಗಸ್ಟ್‍ನಲ್ಲಿ ಮಹಾತ್ಮ ಗಾಂಧಿಯವರು ತ್ಯಾಗ, ಬಲಿದಾನಗಳಿಗಾಗಿ ಕರೆ ಇತ್ತಿದ್ದರು. ಭಾರತಕ್ಕೆ ಬಂದ ಸುಭಾಷರು ನೇರವಾಗಿ ಮಹಾತ್ಮ ಗಾಂಧಿಯವರಲ್ಲಿಗೆ ಮಾರ್ಗದರ್ಶನಕ್ಕಾಗಿ ತೆರಳಿದರು. ಭಾರತದ ಸ್ವಾತಂತ್ರ್ಯದ ಬಗ್ಗೆ ಸುಭಾಷರಿಗಿದ್ದ ತೀವ್ರ ಆಸಕ್ತಿಯನ್ನು ಗಮನಿಸಿದ ಗಾಂಧಿಯವರು ಅವರನ್ನು ದೇಶಬಂಧು ಚಿತ್ತರಂಜನ್ ದಾಸರಲ್ಲಿಗೆ ಕಳುಹಿಸಿದರು. ಅಲ್ಲಿಂದ ಸಿ.ಆರ್. ದಾಸ್ ಅವರು ತಮ್ಮ ಅಂತ್ಯದ ತನಕ (1925) ಸುಭಾಷರ ರಾಜಕೀಯ ಗುರುವಾಗಿದ್ದರು. ಸುಭಾಷರು ಭಾರತ ರಾಷ್ಟ್ರೀಯ ಕಾಂಗ್ರೆಸ್ ಸೇರಿದ (1921) ಮೇಲೆ 1921 ಡಿಸೆಂಬರ್‍ನಲ್ಲಿ 6 ತಿಂಗಳ ಜೈಲು ಶಿಕ್ಷೆ ಅನುಭsವಿಸಬೇಕಾಯಿತು. ಅನಂತರ ಹನ್ನೊಂದು ಬಾರಿ ಬಂಧನಕ್ಕೊಳಗಾದರು.

1921 ಡಿಸೆಂಬರ್ 25ರಂದು ಪ್ರಿನ್ಸ್ ಆಫ್ ವೇಲ್ಸ್ ಕಲ್ಕತ್ತಕ್ಕೆ ಭೇಟಿನೀಡಿದರು ಅವರ ಭೇಟಿಯ ಸಂಪೂರ್ಣ ಬಹಿಷ್ಕಾರಕ್ಕೆ ಸುಭಾಷ್ ಯಶಸ್ವಿಯಾಗಿ ಕಾರ್ಯನಿರ್ವಹಿಸಿ ಬಂಧನಕ್ಕೊಳಗಾದರು. ಸಿ. ಆರ್.ದಾಸ್‍ರವರು ಕಲ್ಕತ್ತ ಕಾರ್ಪೊರೇಷನ್ನಿನ ಮೇಯರರಾಗಿದ್ದಾಗ ಸುಭಾಷರು ಪ್ರಧಾನ ಕಾರ್ಯನಿರ್ವಹಣಾಧಿಕಾರಿಯಾಗಿ (1924) ತಮ್ಮ ಸಂಘಟನಾ ವಿಚಕ್ಷಣೆಯನ್ನು ತೋರಿದರು. ಆದರೆ ಸುಭಾಷರು ಬಂಗಾಲದ ಭಯೋತ್ಪಾದಕರೊಡನೆ ಸಕ್ರಿಯ ಸಂಬಂಧ ಪಡೆದಿರುವರೆಂಬ ಆಪಾದನೆಯ ಮೇಲೆ ಅವರನ್ನು 1924 ಅಕ್ಟೋಬರ್ 25ರಿಂದ 1927 ಮೇ 16ರ ತನಕ ನ್ಯೂ ಬೆಂಗಾಲ್ ಆರ್ಡಿನನ್ಸ್ ಮೇಲೆ ಯಾವ ವಿಚಾರಣೆಯೂ ಇಲ್ಲದೆ ಬರ್ಮದ ಮಂಡಾಲೆಯಲ್ಲಿ ಸೆರೆಮೆನೆಯಲ್ಲಿಡಲಾಯಿತ್ತು. ಮೂರು ವರ್ಷಗಳ ಸೆರೆವಾಸದ ತರುವಾಯ ವೈದ್ಯಕೀಯ ಕಾರಣಗಳ ಮೇಲೆ ಬಿಡುಗಡೆಮಾಡಲಾಯಿತು. ಸುಭಾಷರ ಆರೋಗ್ಯ ಸರಿಯಿಲ್ಲದಿದ್ದರೂ ರಾಜಕೀಯ ಜೀವನದಲ್ಲಿ ಮತ್ತೆ ಸಕ್ರಿಯವಾಗಿ ಪಾಲ್ಗೊಳ್ಳಲಾರಂಭಿಸಿದರು. ಬಂಗಾಲ ಪ್ರಾಂತೀಯ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಆಯ್ಕೆಗೊಂಡರು. ಯುವ ಸಂಘಟನೆ ಹಾಗೂ ಟ್ರೇಡ್ ಯೂನಿಯನ್ ಚಳವಳಿಯ ಸಂಘಟನೆಗಾಗಿ ದುಡಿಯಲಾರಂಭಿಸಿದರು.

ಕಾಂಗ್ರೆಸ್ ನೇಮಕಮಾಡಿದ್ದ ಮೋತಿಲಾಲ್ ನೆಹರೂ ಸಮಿತಿಯ (1928) ಭಾರತ ಅಧಿರಾಜ್ಯ ಸ್ಥಾನದ (ಡೊಮಿನಿಯನ ಸ್ಟೇಟಸ್) ಪೆವಾದ ವಾದವನ್ನು ಜವಹರ್‍ಲಾಲ್ ನೆಹರೂ ಅವರೊಡನೆ ಬೇಡವೆಂದು ಘೋಷಿಸಿದರು. ಸುಭಾಷ್ ಸಂಪೂರ್ಣ ಸ್ವಾತಂತ್ರವಲ್ಲದೆ ಬೇರೇನೂ ಬೇಡವೆಂದು ಘೋಷಿಸಿದರು. ಸುಭಾಷ್ ಇಂಡಿಪೆಂಡೆನ್ಸ್ ಲೀಗಿನ ಪ್ರಾರಂಭವನ್ನೂ ಪ್ರಕಟಿಸಿದರು. ಕಲ್ಕತ್ತಾ ಕಾಂಗ್ರೆಸ್ ಅಧಿವೇಶನದಲ್ಲಿ (1928) ಮೋತೀಲಾಲ್ ನೆಹರು ಅಧ್ಯಕ್ಷರಾಗಿದ್ದರು. ಸುಭಾಷ್ ಚಂದ್ರಬೋಸರು ಕಾಂಗ್ರೆಸ್ ಸ್ವಯಂಸೇವಕ ತಂಡದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದರು. ಜವಹರ್‍ಲಾಲರ ಅಧ್ಯಕ್ಷತೆಯ ಲಾಹೋರ್ ಕಾಂಗ್ರೆಸ್ ಅಧಿವೇಶನದಲ್ಲಿ (1929) ಕಾಂಗ್ರೆಸ್‍ನ ಗುರಿ ಪೂರ್ಣ ಸ್ವರಾಜ್ಯ ಎಂಬ ನಿರ್ಣಯವನ್ನು ಅಂಗೀಕರಿಸಿತು.

ಗಾಂಧೀಜಿಯವರ ಉಪ್ಪಿನ ಸತ್ಯಾಗ್ರಹ ಚಳವಳಿಯಿಂದಾಗಿ (1930) ಸುಭಾಷರು ಮತ್ತೊಮ್ಮ ತೀವ್ರ ಹೋರಾಟಕ್ಕಿಳಿದರು. ಸರ್ಕಾರ ಅವರನ್ನು ಬಂಧಿಸಿ, ಸೆರೆಮನೆಯಲ್ಲಿಟ್ಟಿತು. ಗಾಂಧಿ ಇರ್ವಿನ್ ಒಪ್ಪಂದವಾದ ಅನಂತರ ಇವರಿಗೆ ಸೆರೆಯಿಂದ ಬಿಡುಗಡೆಯಾಯಿತು. ಆದರೆ ಭಗತ್‍ಸಿಂಗ್ ಹಾಗೂ ಅವರ ಒಡನಾಡಿ ದೇಶಪ್ರೇಮಿಗಳನ್ನು ಗಲ್ಲು ಶಿಕ್ಷೆಯಿಂದ ರಕ್ಷಿಸದಿದ್ದುದರಿಂದ ಸುಭಾಷರು ಒಪ್ಪಂದದ ವಿರುದ್ಧ ಹಾಗೂ ಸತ್ಯಾಗ್ರಹವನ್ನು ನಿಲ್ಲಿಸಿದುದರ ವಿರುದ್ಧ ಪ್ರತಿಭಟನೆ ವ್ಯಕ್ತಪಡಿಸಿದರು. ಮತ್ತೊಮ್ಮೆ ಸುಭಾಷರನ್ನು ನವಬಂಗಾಲ ನಿಬಂಧನೆಯನ್ವಯ ಬಂಧಿಸಲಾಯಿತು. ಒಂದು ವರ್ಷದ ಅವಧಿಯಲ್ಲಿಯೇ ಅವರ ದೈಹಿಕಸ್ಥಿತಿ ತುಂಬ ಆತಂಕಕಾರಿಯಾಗಿ ಪರಿಣಮಿಸಿದುದರಿಂದ ಅವರನ್ನು ಬಿಡುಗಡೆ ಮಾಡಿ ಯೂರೋಪಿಗೆ ಗಡಿಪಾರು ಮಾಡಲಾಯಿತು. ಅಲ್ಲಿ ಸುಭಾಷರು ತಮ್ಮ ಆರೋಗ್ಯವನ್ನು ಚೇತರಿಸಿಕೊಂಡುದಷ್ಟೇ ಅಲ್ಲದೆ ಭಾರತ ಯೂರೊಪುಗಳ ನಡುವೆ ರಾಜಕೀಯ-ಸಾಂಸ್ಕøತಿಕ ಸಂಬಂಧಗಳನ್ನು ವೃದ್ಧಿ ಪಡಿಸುವ ಸಲುವಾಗಿ ಯೂರೊಪಿನ ಬೇರೆ ಬೇರೆ ರಾಜಧಾನಿಗಳಲ್ಲಿ ಕೇಂದ್ರಗಳನ್ನು ಸ್ಥಾಪಿಸಲು ಕ್ರಮ ಕೈಗೊಂಡರು.

ಸುಭಾಷರು ಭಾರತವನ್ನು ಪ್ರವೇಶಿಸಲು ನಿಷೇಧವಿದ್ದರೂ 1936 ಏಪ್ರಿಲ್ 11ರಂದು ಮುಂಬಯಿಗೆ ಬಂದಿಳಿದರು. ತತ್‍ಕ್ಷಣ ಅವರನ್ನು ಬಂಧಿಸಿ ಒಂದು ವರ್ಷ ಸೆರೆಮನೆಗೆ ಕಳುಹಿಸಲಾಯಿತು. 1937 ಮಾರ್ಚ್‍ನಲ್ಲಿ ಸುಭಾಷರು ಸೆರೆಮನೆಯಿಂದ ಹೊರಬಂದರು. 1937ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಏಳು ಪ್ರಾಂತ್ಯಗಳಲ್ಲಿ ಅಧಿಕಾರಕ್ಕೆ ಬಂದುದರಿಂದಾಗಿ ಅವರು (ಗುಜರಾತ್) ಕ್ರಾಂಗ್ರೆಸ್ ಅಧಿವೇಶನದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಗೊಂಡರು (1938). ಏಳು ಪ್ರಾಂತ್ಯಗಳಲ್ಲಿ ಕಾಂಗ್ರೆಸ್ ಮಂತ್ರಿಮಂಡಲಗಳ ಕಾಂತ್ರಿಕಾರಿ ಸಾಧ್ಯತೆಗಳ ಬಗ್ಗೆ ಅವರು ತಮ್ಮ ಅಧ್ಯಕ್ಷ ಭಾಷಣದಲ್ಲಿ ಒತ್ತಿ ಹೇಳಿದರು. ಕಾಂಗ್ರೆಸ್ ಅಧ್ಯಕ್ಷರಾಗಿ ಸುಭಾಷರು 1938ರಲ್ಲಿ ಯೋಜನೆಯ ಬಗ್ಗೆ ಚರ್ಚಿಸಿ ಆ ವರ್ಷದ ಅಕ್ಟೋಬರ್‍ನಲ್ಲಿ ರಾಷ್ಟ್ರೀಯ ಯೋಜನಾಸಮಿತಿಯೊಂದನ್ನು ರಚಿಸಿದರು.

ತ್ರಿಪುರ ಕಾಂಗ್ರೆಸ್ ಅಧಿವೇಶನಕ್ಕೆ ಅಧ್ಯಕ್ಷೀಯ ಚುನಾವಣೆ 1939ರ ಪ್ರಾರಂಭದಲ್ಲಿ ನಡೆಯಿತು. ಮಹಾತ್ಮಗಾಂಧಿ ಮತ್ತು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಿಂದ ಬೆಂಬಲಿತರಾಗಿದ್ದ ಪಟ್ಟಾಭಿ ಸೀತಾರಾಮಯ್ಯನವರನ್ನು ಪರಭಾವಗೊಳಿಸಿ ಸುಭಾಸ್‍ರವರು ಪುನರಾಯ್ಕೆಗೊಂಡರು. ಚುನಾವಣೆಯಾದ ತತ್‍ಕ್ಷಣ ಕಾರ್ಯಕಾರಿ ಸಮಿತಿ ಸದಸ್ಯರು ರಾಜೀನಾಮೆ ನೀಡಿದರು. ತ್ರಿಪುರಿಯಲ್ಲಿದ್ದ ಸುಭಾಷರಿಗೆ ಆರೋಗ್ಯ ಸರಿಯಿರಲಿಲ್ಲ, ಇನ್ನು ಆರು ತಿಂಗಳ ಒಳಗಾಗಿ ಯುದ್ಧ ಆರಂಭವಾಗುವುದೆಂದು ಎಚ್ಚರಿಸಿ, ಬ್ರಿಟನ್ನಿಗೆ ಕಾಂಗ್ರೆಸ್ ಆರು ತಿಂಗಳ ಕಾಲಾವಕಾಶ ನೀಡಬೇಕು. ಒಂದು ಪಕ್ಷ ಅದು ಒಪ್ಪದಿದ್ದರೆ ಪೂರ್ಣಸ್ವರಾಜ್ಯಕ್ಕಾಗಿ ದೇಶಾದ್ಯಂತ ಹೋರಾಟ ಆರಂಭಿಸಬೇಕೆಂದು ಒತ್ತಾಯಿಸಿದರು. ಸುಭಾಷರ ಈ ಮಾತುಗಳ ಕಡೆ ಯಾರೂ ಗಮನಹರಿಸಲಿಲ್ಲ. ಜೊತೆಗೆ ಕಾಂಗ್ರೆಸ್ ಅಧ್ಯಕ್ಷರಾಗಿ ಅವರಿಗಿದ್ದ ಅಧಿಕಾರಗಳನ್ನು ಕಡಿಮೆಮಾಡಲಾಯಿತು. ಆಗ ಸುಭಾಷರು ಅಧ್ಯಕ್ಷಸ್ಥಾನಕ್ಕೆ ರಾಜೀನಾಮೆ ಇತ್ತು ಕಾಂಗ್ರೆಸ್‍ನಲ್ಲಿಯೇ ಫಾರ್ವರ್ಡ ಬ್ಲಾಕ್ ಅನ್ನು ಸ್ಥಾಪಿಸಿದರು (1939). ಅದೇ ಆಗಸ್ಟ್‍ನಲ್ಲಿ ಸುಭಾಷರನ್ನು ಬಂಗಾಲ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷಸ್ಥಾನದಿಂದ ತೆಗೆದುಹಾಕಲಾಯಿತು.

1939 ಸೆಪ್ಟೆಂಬರ್‍ನಲ್ಲಿ ಯೂರೋಪಿನಲ್ಲಿ ಯುದ್ಧ ಆರಂಭವಾಯಿತು. ತ್ರಿಪುರಿಯಲ್ಲಿ ಸುಭಾಷರು ಹೇಳಿದ್ದ ಮಾತುಗಳು ಬಲುಮಟ್ಟಿಗೆ ನಿಜವಾಗಿ ಪರಿಣಮಿಸಿದವು. ಭಾರತ ಯುದ್ಧ ಹೂಡಿರುವ ದೇಶ ಎಂದು ಘೋಷಿಸಿ ಗವರ್ನರ್ ಜನರಲ್ ಹೊರಡಿಸಿದ ಆದೇಶದಿಂದ ಭಾರತವನ್ನು ಬ್ರಿಟಿಷ್ ಪರವಾಗಿ ಸಮರಕ್ಕೆ ಸೆಳೆಯಲಾಯಿತು. ಏಳು ಪ್ರಾಂತ್ಯಗಳಲ್ಲಿ ಕಾಂಗ್ರೆಸ್ ಮಂತ್ರಿಮಂಡಲಗಳು 1939 ಅಕ್ಟೋಬರ್‍ನಲ್ಲಿ ರಾಜೀನಾಮೆ ನೀಡಿದವು. ಆದರೆ ಯುದ್ಧ ಸಮಯದಲ್ಲಿ ಬ್ರಿಟಿಷ್ ಸರ್ಕಾರವನ್ನು ಪೇಚಿಗೆ ಸಿಲುಕಿಸಲು ತಾವು ಇಚ್ಛಿಸುವುದಿಲ್ಲ ಎಂಬುದಾಗಿ ಗಾಂಧೀಜಿ ಘೋಷಿಸಿದರು.

1940 ಮಾರ್ಚಿಯಲ್ಲಿ ಬಿಹಾರದ ರಾಮಗಢದಲ್ಲಿ ಘಾರ್ವರ್ಡ್‍ಬ್ಲಾಕ್ ಮತ್ತು ಕಿಸಾನ್ ಸಭಾ-ಇವುಗಳ ಸಂಯುಕ್ತ ಆಶ್ರಯದಲ್ಲಿ ರಾಜಿವಿರೋಧಿ ಸಮ್ಮೇಳನವನ್ನು ಸುಭಾಷರು ಏರ್ಪಡಿಸಿದರು. ಸೇನೆ, ದ್ರವ್ಯ ಅಥವಾ ಸಾಮಗ್ರಿಗಳಿಂದ ಸಾಮಾಜ್ಯಷಾಹಿ ಸಮರಕ್ಕೆ ನೆರವು ನೀಡಬಾರದೆಂದು ಮತ್ತು ಬ್ರಿಟಿಷ್ ಸಾಮ್ರಾಜ್ಯದ ಸಂರಕ್ಷಣೆಗಾಗಿ ಭಾರತೀಯ ಸಂಪನ್ಮೂಲಗಳನ್ನು ಬಳಸಿಕೊಳ್ಳುವುದನ್ನು ಎಲ್ಲ ರೀತಿಗಳಿಂದಲೂ ಪ್ರತಿಭಟಿಸಬೇಕೆಂದೂ ಜನತೆಗೆ ಕರೆನೀಡಿದ ಸಮ್ಮೇಳನ ಏಪ್ರಿಲ್ 6ರಿಂದ ಪ್ರತಿಭಟಿಸಬೇಕೆಂದೂ ಪ್ರಪಂಚಾದ್ಯಂತ ಹೋರಾಟ ಆರಂಭಿಸಬೇಕೆಂದು ತೀರ್ಮಾನಿಸಿತು. ಸ್ವಾತಂತ್ರ್ಯಕ್ಕಾಗಿ ಹಂಬಲಿಸುತ್ತಿದ್ದ ಭಾರತೀಯ ಜನತೆ ಏಪ್ರಿಲ್ 6ರಿಂದ ಫಾರ್ವರ್ಡ್‍ಬ್ಲಾಕ್ ದೇಶಾದ್ಯಂತ ಆರಂಭಿಸಿದ ಚಳುವಳಿಯಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸಿದರು. ನಾಗಪುರದಲ್ಲಿ ನಡೆದ ಅಖಿಲ ಭಾರತ ಫಾರ್ವರ್ಡ್‍ಬ್ಲಾಕ್‍ನ ಅಧಿವೇಶನದಲ್ಲಿ (1940) ರಾಮಗಢ ನಿಲುವನ್ನು ಮತ್ತೆ ಒತ್ತಿಹೇಳಲಾಯಿತು. ಭಾರತದಲ್ಲಿ ತಾತ್ಕಾಲಿಕ ರಾಷ್ಟ್ರೀಯ ಸರ್ಕಾರವನ್ನು ತಕ್ಷಣ ಸ್ಥಾಪಿಸುವಂತೆ ಫಾರ್ವರ್ಡ್‍ಬ್ಲಾಕ್ ಒತ್ತಾಯಿಸಿತು.

ನಾಗಪುರ ಅಧಿವೇಶನ ಮುಗಿಯುತ್ತಿದ್ದಂತೆಯೇ ಕಲ್ಕತ್ತದಲ್ಲಿ ಹಾಲ್ ಸ್ಮಾರಕ ವಿರೋಧ ಸತ್ಯಾಗ್ರಹದ ಮೊದಲು ಸುಭಾಷರನ್ನು ಬಂಗಾಲ ಸರ್ಕಾರ 1940 ಜಲೈ 2ರಂದು ಬಂಧಿಸಿ ಸೆರೆಮನೆಗೆ ದೂಡಿತು. ಸರಕಾರ ತಮ್ಮ ಬಗ್ಗೆ ಸರಿಯಾಗಿಯೂ ನ್ಯಾಯಬದ್ಧವಾಗಿಯೂ ನಡೆದುಕೊಳ್ಳುತ್ತಿಲ್ಲವೆಂದು ಸೆರೆಮನೆಯಲ್ಲಿದ್ದಾಗಲೇ 1940 ನವೆಂಬರ್ 29ರಂದು ಅಮರಣಾಂತ ಉಪವಾಸ ಸತ್ಯಾಗ್ರಹ ಪ್ರಾರಂಭಿಸಿದರು. 1940 ಡಿಸೆಂಬರ್‍ನಲ್ಲಿ ಸರ್ಕಾರ ಅವರನ್ನು ಬಿಡುಗಡೆಮಾಡಿತು. 1941 ಜನವರಿ 26ರಂದು ಭಾರತ ತನ್ನ ಐತಿಹಾಸಿಕ ಸ್ವಾತಂತ್ರ್ಯ ದಿನವನ್ನು ಆಚರಿಸುತ್ತಿತ್ತು. ಕಲ್ಕತ್ತದ ಎಲ್ಜಿನ್ ರಸ್ತೆಯಲ್ಲಿಯ ಅವರ ಗೃಹಬಂಧನದಿಂದ ಸುಭಾಷರು ತಪ್ಪಿಸಿಕೊಂಡು ಹೋಗಿರುವರು ಎಂಬ ಸುದ್ಧಿ ಭಾರತದ ಜನತೆಗೆ ತಿಳಿಯಿತು. ಸುಭಾಷರು ಭಾರತವನ್ನು ಬಿಟ್ಟು ಹೋಗಿರುವರು ಎಂಬ ಸುದ್ಧಿ 1941 ನವಂಬರ್‍ನಲ್ಲಿ ಬರ್ಲಿನ್ನಿನಿಂದ ಬರಲಾರಂಭಿಸಿದರು. ಅವರ ಮಾತಿನಲ್ಲಿಯೇ ಹೇಳುವುದಾದರೆ ತಾಯ್ನಾಡಿನಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಹೊರಗಡೆಯಿಂದ ನೆರವು ಪಡೆಯಲು ಹೋಗಿದ್ದರು. ಸುಭಾಷರು ಮೊದಲಿಗೆ ಜರ್ಮನಿಯೊಡನೆ ಮಾತುಕತೆ ಆರಂಭಿಸಿದರು. ಅನಂತರ ಪೂರ್ವದಲ್ಲಿ ಬ್ರಿಟನ್ನಿನ ಶತ್ರುವಾಗಿದ್ದ ಜಪಾನಿನೊಡನೆ ಪರಸ್ಪರ ಸಹಾಯಕ ಮೈತ್ರಿಯನ್ನು ಮಾಡಿಕೊಂಡರು. ಜನವರಿ 1942ರಿಂದ ರೇಡಿಯೋ ಬರ್ಲಿನ್ನಿನಿಂದ ನಿಯತವಾಗಿ ಪ್ರಸಾರ ಆರಂಭಿಸಿದರು. ಇದು ಭಾರತದಲ್ಲಿ ಅತ್ಯಪೂರ್ವ ಉತ್ಸಾಹ ಉಂಟುಮಾಡಿತು. 1942ರ ಅಂತ್ಯದ ವೇಳೆಗೆ ಪೂರ್ವ ಏಷ್ಯಾದಲ್ಲಿ ಡಚ್, ಫ್ರೆಂಚ್, ಬ್ರಿಟಿಷ್ ಸಾಮ್ರಾಜ್ಯಷಾಹಿಗಳ ವಸಾಹತುಗಳು ಜಪಾನೀಯರ ದಾಳಿಗೆ ತುತ್ತಾದುವು. ಸುಭಾಷರು ಜರ್ಮನ್ ಮತ್ತು ಜಪಾನಿ ಸರ್ಕಾರಗಳ ಸಂಪೂರ್ಣ ಸಹಕಾರದೊಡನೆ 1943ರ ಪ್ರಾರಂಭದಲ್ಲಿ ಜರ್ಮನಿಯಿಂದ ಹೊರಟರು. ಜಲಾಂತರ್ಗಾಮಿ ನೌಕೆಯಲ್ಲಿ ಅಪಾಯಕಾರಿಯಾದ ಮೂರು ತಿಂಗಳ ಯಾನದ ಅನಂತರ 1943ರ ಜುಲೈ 2ರಂದು ಸಿಂಗಪುರ ತಲುಪಿದರು.

ಸಿಂಗಪುರದಲ್ಲಿದ್ದ ಭಾರತೀಯ ಯುದ್ಧ ಕೈದಿಗಳು ಹಾಗೂ ಪೂರ್ವ ಏಷ್ಯಾದ ಇತರೆಡೆಗಳಲ್ಲಿಯ ಜನರಿಗೂ ಕ್ರಿಯಾಶೀಲನಾಯಕ ಇದ್ದಕ್ಕಿದ್ದಂತೆ ಗೋಚರಿಸಿದ್ದು ಅಮಿತೋತ್ಸಾಹ ಉಂಟುಮಾಡಿತು. ಎರಡು ದಿನಗಳ ತರುವಾಯ ಎಂದರೆ ಜುಲೈ 4ರಂದು ಅವರು ರಾಷ್ ಬಿಹಾರಿ ಬೋಸರಿಂದ ಪೂರ್ವ ಏಷ್ಯಾದಲ್ಲಿ ಭಾರತೀಯ ಸ್ವಾತಂತ್ರ್ಯ ಚಳವಳಿಯ ಮುಖಂಡತ್ವ ವಹಿಸಿಕೊಂಡರು. ಅಜಾದ್ ಹಿಂದ್ ಫೌಜನ್ನು ಸಂಘಟಿಸಿ (ಇಂಡಿಯನ್ ನ್ಯಾಷನಲ್ ಆರ್ಮಿ), ಆಗಸ್ಟ್ 25ರಂದು ಅದರ ಪ್ರಧಾನ ದಂಡಾಧಿಕಾರಿಯಾದರು. ಅಕ್ಟೋಬರ್ 21ರಂದು ಅಜಾದ್ ಹಿಂದ್‍ನ ತಾತ್ಕಾಲಿಕ ಸರ್ಕಾರ ಘೋಷಿಸಿದರು. ಅದೇ ನವೆಂಬರಿನಲ್ಲಿ ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳ ವಿಮೋಚನೆಯಾಯಿತು. ಅವುಗಳಿಗೆ ಕ್ರಮವಾಗಿ ಷಾಹಿದ್ ಮತ್ತು ಸ್ವರಾಜ್ ದ್ವೀಪಗಳೆಂದು ಪುನರ್ ನಾಮಕರಣಮಾಡಲಾಯಿತು. 1944 ಜನವರಿಯಲ್ಲಿ ಐ.ಎನ್.ಎ.ಯ ಕೇಂದ್ರ ಕಾರ್ಯಸ್ಥಾನವನ್ನು ರಂಗೂನಿಗೆ ವರ್ಗಾಯಿಸಲಾಯಿತು. ದಿಲ್ಲಿ ಲೋ ಎಂಬ ಸಮರ ಘೋಷಣೆಯೊಡನೆ ತಾಯ್ನಾಡಿನತ್ತ ಹೊರಟ ಆಜಾದ್ ಹಿಂದ್ ಪಡೆ ಬರ್ಮಾದ ಗಡಿಯನ್ನು ದಾಟಿ, 1944 ಮಾರ್ಚ್ 18ರಂದು ಭಾರತದ ಪ್ರದೇಶವನ್ನು ತಲುಪಿತು. ಅನಂತರ ಕೊಹಿಮಾ ಹಾಗೂ ಇಂಫಾಲವರೆಗೆ ಮುನ್ನುಗ್ಗಿ ಬಂದು “ಜೈಹಿಂದ್” ಮತ್ತು "ನೇತಾಜಿ ಜಿಂದಾಬಾದ್” ಎಂಬ ಘೋಷಣೆಗಳೊಡನೆ ಅಲ್ಲಿ ಸ್ವತಂತ್ರ ಭಾರತದ ಧ್ವಜ ಹಾರಿಸಲಾಯಿತು. ಈ ಹೊತ್ತಿಗೆ ಹಿರೋಷಿಮಾ ಹಾಗೂ ನಾಗಸಾಕಿಗಳ ಮೇಲಣ ಬಾಂಬ್ ದಾಳಿಯಿಂದಾಗಿ ಜಪಾನ್ ಶರಣಾಯಿತು. ಅನಂತರ ಐ.ಎನ್.ಎ. ಹಿಮ್ಮೆಟ್ಟಬೇಕಾಗಿ ಬಂದು, ಬೋಸರು ಮುಂದಿನ ಕಾರ್ಯಯೋಜನೆಗಾಗಿ ಭಾರತವನ್ನು ಬಿಡಬೇಕಾಗಿ ಬಂತು. ಸಿಂಗಪುರದಿಂದ ಜಪಾನಿಗೆ ಹೋಗುವ ಮಾರ್ಗದಲ್ಲಿ 1945 ಆಗಸ್ಟ್ 18ರಂದು ತೈವಾನಿನ ತೈಪೆ ವಿಮಾನಾಪಘಾತದಲ್ಲಿ ಮಡಿದರೆಂದು ವರದಿಯಾಯಿತು. ವೀರಯೋಧ, ಸಮರ್ಥ ರಾಜತಂತ್ರಜ್ಞ ಸುಭಾಷರಿಗೆ ಆಗ ಇನ್ನೂ ಐವತ್ತು ವರ್ಷಗಳಾಗಿರಲಿಲ್ಲ. ಅವರ ಸಾವಿನ ಬಗ್ಗೆ ಖಚಿತವಾದ ಸಾಕ್ಷ್ಯಾಧಾರಗಳು ಇಲ್ಲ ಎಂಬುದನ್ನು ಭಾರತ ಸರ್ಕಾರ ಒಪ್ಪಿಕೊಂಡಿದ್ದು ಅದರ ಖಚಿತತೆಗಾಗಿ 1956 ಏಪ್ರಿಲ್‍ನಲ್ಲಿ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಸರ್ಕಾರ ಮೇಜರ್ ಜನರಲ್ ಷಾಹನವಾಜ್ ಖಾನ್, ನೇತಾಜಿಯವರ ಹಿರಿಯಣ್ಣ ಎಸ್.ಸಿ.ಬೋಸ್, ಅಂಡಮಾನ್ ನಿಕೋಬಾರ್ ದ್ವೀಪಗಳ ಮುಖ್ಯ ಕಮಿಷನರ್ ಎಸ್.ಎನ್.ಮೈತ್ರಿ ಇವರ ಅಧಿಕೃತ ಸಮಿತಿಯನ್ನು ರಚಿಸಿತು. ಸಮಿತಿ ದೆಹಲಿ, ಕಲ್ಕತ್ತ, ಬಾಂಗ್‍ಕಾಕ್, ಸೈಗಾನ್ ಮತ್ತು ಟೋಕಿಯೊಗಳಲ್ಲಿ 67 ಸಾಕ್ಷಿಗಳನ್ನು ಪರೀಕ್ಷಿಸಿತು. ನೇತಾಜಿಯವರು ವಿಮಾನ ಅಪಘಾತದಲ್ಲಿ ಮೃತರಾದರು. ಟೋಕಿಯೋದಲ್ಲಿ ರಂಕೋಜಿ ದೇವಾಲಯದಲ್ಲಿರುವ ಚಿತಾಭಸ್ಮ ನೇತಾಜಿಯವರ ಚಿತಾಭಸ್ಮ ಎಂದು ಜನರಲ್ ಷಾಹನವಾಜ್ ಮತ್ತು ಮೈತ್ರಿ ನಿರ್ಧಾರಕ್ಕೆ ಬಂದರು. ಆದರೆ ಭಾರತ ಸರ್ಕಾರ ಈ ಸಮಿತಿಯ ಶಿಫಾರಸುಗಳನ್ನು ಕಾರ್ಯಗತಗೊಳಿಸಲಿಲ್ಲ. ಅವರು ಇದ್ದಕ್ಕಿದಂತೆ ಕಣ್ಮರೆಯಾದ ಪರಿಸ್ಥಿತಿಗಳ ಬಗ್ಗೆ ವಿಚಾರಣೆ ನಡೆಸುವಂತೆ 400ಕ್ಕೂ ಹೆಚ್ಚು ಸದಸ್ಯರು ಭಾರತದ ರಾಷ್ಟ್ರಪತಿಯವರನ್ನು 1970ರಲ್ಲಿ ಒತ್ತಾಯಿಸಿದರು. 1970 ಜುಲೈ 11ರಂದು ಪಂಜಾಬ್ ಹೈಕೋರ್ಟಿನ ನಿವೃತ್ತ ಮುಖ್ಯ ನ್ಯಾಯಧೀಶ ಜಿ.ಡಿ. ಖೋಸ್ಲ ಅವರ ಏಕ ಸದಸ್ಯ ವಿಚಾರಣಾ ಆಯೋಗವನ್ನು ನೇಮಕಮಾಡಿದ ತನ್ನ ತೀರ್ಮಾನವನ್ನು ಭಾರತ ಸರ್ಕಾರ ಪ್ರಕಟಿಸಿತು. ಈ ಆಯೋಗ ದೆಹಲಿ, ಕಲ್ಕತ್ತ, ಮುಂಬೈಗಳಲ್ಲಿ ಮತ್ತು ಜಪಾನಿನಲ್ಲಿಯೂ ಸಾಕ್ಷ್ಯ ಸಂಗ್ರಹಿಸಿತು.

1942ರಲ್ಲಿ ನೇತಾಜಿಯವರು ಜರ್ಮನಿಯಲ್ಲಿದ್ದಾಗ ಅನೇಕ ವರ್ಷಗಳಿಂದ ಯೂರೋಪಿನಲ್ಲಿ ತಮ್ಮ ಸಹಕಾರ್ಯಕರ್ತೆಯಾಗಿದ್ದ ಎಮಿಲ್ ಷೆಂಕಲ್ ಎಂಬಾಕೆಯನ್ನು ವಿವಾಹವಾಗಿದ್ದರು. ಅವರು ಜರ್ಮನಿಯನ್ನು ಬಿಟ್ಟಾಗ ಅವರಿಗೆ ಎರಡು ತಿಂಗಳ ಮಗುವೊಂದಿತ್ತು. ನೇತಾಜಿಯವರ ಪತ್ನಿ ಈಗ ವಿಯನ್ನಾದಲ್ಲಿ ವಾಸವಾಗಿದ್ದಾರೆ. ನೇತಾಜಿಯವರ ಮಗಳು ಅನಿತಾಬೋಸ್ 1961ರಲ್ಲಿ ಭಾರತ ಯಾತ್ರೆ ಕೈಗೊಂಡಿದ್ದರು. ಈಕೆ ಈಗ ವಿವಾಹವಾಗಿ ಅಮೆರಿಕಾದಲ್ಲಿ ನೆಲೆಸಿದ್ದಾರೆ. ನೇತಾಜಿ ಸುಭಾಷ್‍ಚಂದ್ರ ಬೋಸ್ ಭಾರತದ ಜನತೆಗೆ ಎಂದೆಂದಿಗೂ ಸ್ಫೂರ್ತಿನೀಡುವ ಹೆಸರಾಗಿದೆ. (ಎನ್.ಎಸ್.ಎಸ್.ಪಿ.)