ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬ್ರಹ್ಮಪುತ್ರ

ವಿಕಿಸೋರ್ಸ್ದಿಂದ

ಬ್ರಹ್ಮಪುತ್ರ ಭಾರತದ ಒಂದು ಮಹಾ ನದಿ. ಚೀನಿ ಗಣರಾಜ್ಯದ ಟಿಬೆಟ್ ಸ್ವಾಯತ್ತ ಪ್ರದೇಶದಲ್ಲಿ ಹುಟ್ಟಿ, ಭಾರತದ ಮೂಲಕ ಹರಿದು ಬಾಂಗ್ಲಾ ದೇಶದಲ್ಲಿ ಬಂಗಾಳ ಕೊಲ್ಲಿಯನ್ನು ಸೇರುತ್ತದೆ. ಇದರ ಒಟ್ಟು ಉದ್ದ 2900 ಕಿ. ಮೀ. ಗಂಗಾನದಿಗಿಂತಲೂ 400 ಕಿಮೀ ಹೆಚ್ಚು. ಸಮುದ್ರಕ್ಕೆ ಒಯ್ಯುವ ನೀರೂ ಗಂಗಾನದಿಗಿಂತ ಜಾಸ್ತಿ.

ದಕ್ಷಿಣ ಟಿಬೆಟಿನಲ್ಲಿ ಮಾನಸ ಸರೋವರದಿಂದ 96 ಕಿಮೀ ಆಗ್ನೇಯದಲ್ಲಿ ಕೈಲಾಸ ಪರ್ವತದ ಬಳಿ ಚೇಮಾ ಯಂಗ್‍ದುಂಗ್ ಎಂಬ ಹಿಮರಾಶಿಯಲ್ಲಿ ಬ್ರಹ್ಮಪುತ್ರ ಹುಟ್ಟುತ್ತದೆ. ಅಲ್ಲಿಂದ ಹಿಮಾಲಯ ಶ್ರೇಣಿಗೆ ಸುಮಾರು ಸಮಾಂತರವಾಗಿ 1,125ಕಿಮೀ ಪೂರ್ವಕ್ಕೆ ಹರಿದ ಬಳಿಕ ಒಮ್ಮೆಲೇ ತಿರುಗಿ 7,756 ಮೀ ಎತ್ತರದ ನಮಜಾ ಬರ್ವಾ ಪರ್ವತದ ಹತ್ತಿರ ಅಗಾಧವೂ ಇಕ್ಕಟ್ಟೂ ಆದ ಕೊರಕಲುಗಳನ್ನು ನಿರ್ಮಿಸುತ್ತ ಆಗ್ನೇಯಾಭಿಮುಖವಾಗಿ ಸಾಗಿ ಅನೇಕಾನೇಕ ತಡಸಲುಗಳಲ್ಲಿ ಧುಮುಕುತ್ತ ಹಿಮಾಲಯದ ದಕ್ಷಿಣ ಮಗ್ಗುಲಲ್ಲಿ ಭಾರತದ ಅರುಣಾಚಲ ಪ್ರದೇಶ ಪ್ರವೇಶಿಸಿ ಅಲ್ಲಿಂದ ಆಗ್ನೇಯವಾಗಿ ಮುಂದುವರಿದು ಅಸ್ಸಾಮ್ ಕೊಳ್ಳ ಹೊಕ್ಕು ಅಲ್ಲಿ ನ್ಯೆಋತ್ಯಾಭಿಮುಖವಾಗಿ 125 ಕಿಮೀ ಹರಿದು ಗಾರೋ ಗುಡ್ಡ ದಾಟಿ ಬಾಂಗ್ಲಾದೇಶ ಪ್ರವೇಶಿಸಿ ದಕ್ಷಿಣಕ್ಕೆ ತಿರುಗುತ್ತದೆ. ಅಲ್ಲಿ ತೀಸ್ತಾ, ಅನಂತರ ಗಂಗಾ ಮತ್ತು ಆಮೇಲೆ ಮೇಘನಾ ನದಿಗಳೂಡನೆ ಕೂಡಿಕೊಂಡು ಹಲವು ಕವಲುಗಳಲ್ಲಿ ಬಂಗಾಳ ಕೊಲ್ಲಿಯಲ್ಲಿ ಲೀನವಾಗುತ್ತದೆ.

ಈ ನದಿ ಬ್ರಹ್ಮಪುತ್ರ ಎಂದೇ ಪ್ರಸಿದ್ಧವಾಗಿದ್ದರೂ ಇದಕ್ಕೆ ಟಿಬೆಟಿನಲ್ಲಿ ಟ್ಸಾಂಗ್‍ಪೋ (ಪಾವನ ನದಿ) ಎಂದೂ ಅರುಣಾಚಲ ಪ್ರದೇಶದಲ್ಲಿ ದಿ ಹಾಂಗ್ ಅಥವಾ ಸಿಯಾಂಗ್ ಎಂದೂ ಅಸ್ಸಾಮಿನಲ್ಲಿ ಬ್ರಹ್ಮಪುತ್ರ ಎಂದೂ ಬಾಂಗ್ಲಾದಲ್ಲಿ ಯಮುನಾ (ಜಮುನಾ), ಪದ್ಮಾ ಮತ್ತು ಕೊನೆಗೆ ಮೇಘನಾ ಎಂದೂ ಹೆಸರುಗಳಿವೆ. 19ನೆಯ ಶತಮಾನದ ಕೊನೆಯಲ್ಲಿ ಕಿನ್‍ಢುಪ್ ಎಂಬ ಭಾರತೀಯ ಸರ್ವೇಕ್ಷಕನೂ ಚೆ. ಎಫ್. ನೀಡ್ಹ್ಯಾಮ್ ಎಂಬ ಬ್ರಿಟಿಷ್ ಶೋದಕನೂ ನದಿಯ ಮೇಲ್ಬಾಗದ ಪರೀಕ್ಷಣ ನಡೆಸಿ ಬ್ರಹ್ಮಪುತ್ರ ಟ್ಸಾಂಗ್-ಪೋ ನದಿಗಳು ಒಂದೇ ಎಂದು ತಿಳಿಸಿದ.

ಬ್ರಹ್ಮಪುತ್ರ ಹೆಚ್ಚು ಹರಿಯುವುದು ಹೆಚ್ಚು ಮಳೆ ಬೀಳುವ ಪ್ರದೇಶದಲ್ಲಿ. ಜೋತೆಗೆ ಈ ನದಿ 9,35,000 ಚ.ಕಿಮೀ. ಪ್ರದೇಶದಿಂದ 120 ಉಪನದಿಗಳ ಮೂಲಕ ನೀರನ್ನು ಬಸಿಯುತ್ತದೆ. ಇದರ ಪ್ರಮುಖ ಉಪನದಿಗಳಲ್ಲಿ ಬುಹಿತ, ದಿಬಾಂಗ್ ಅಥವಾ ಸಿಕಾಂಗ್ ಸುಬನ್‍ಸಿರಿ. ಮನಾಶ್. ತೀಸ್ತಾ ಮೊದಲಾದವು ಹಿಮಲಯದ ಕಡೆಯಿಂದಲೂ ಕೊವಲಿ ಮೊದಲಾದವು ದಕ್ಷಿಣ ಗಿರಿ ಪ್ರದೇಶದಿಂದಲೂ ಹರಿದುಬರುತ್ತವೆ. ಮಳೆಗಾಲದಲ್ಲಿ ಬ್ರಹ್ಮಪುತ್ರ ಎಂಟು ಕಿಮೀ ಅಗಲ 12-19ರಿಂದ 9-14ಮೀಟರ್ ಆಳದ ಪ್ರವಾಹವಾಗುತ್ತದೆ. ನದಿಯ ಟಿಬೆಟಿನ ಭಾಗದ ಚಳಿಗಾಲದ ಉಷ್ಣತೆ 00 ಸೆ. ನಷ್ಟು ಕೆಳಗಿದ್ದರೆ. ಬೇಸಗೆಯಲ್ಲಿ 280 ಸೆ. ನಷ್ಟು ಹೆಚ್ಚಾಗಿರುತ್ತದೆ. ನದಿಯ ಕೂಳ್ಳ ಅಸ್ಸಾಮಿನಲ್ಲಿ ಸಾಲ ವೃಕ್ಷಗಳ ದಟ್ಟಡವಿಗಳಿಂದಲೂ ಜವುಳು ಪ್ರದೇಶಗಳು ಬೆಂಡಿನ ವೃಕ್ಷಗಳ ವನಗಳಿಂದಲೂ ತುಂಬಿದೆ. ಏಕಶೃಂಗ ಖಡ್ಗಮೃಗಗಳು ಈ ಪರಿಸರದಲ್ಲಿ ಮಾತ್ತ ಉಳಿದಿವೆ. ಹುಲಿ, ಚಿರತೆ, ಆನೆ, ಮಿಥುನ ಮತ್ತು ಕೃಷ್ಣಸರ್ಪ ಮೊದಲಾದವುಗಳಿಗೆ ಈ ಅರಣ್ಯಗಳು ಆಶ್ರಯವಾಗಿವೆ.

ಬ್ರಹ್ಮಪುತ್ರ ನದಿಗೆ ಅಸ್ಸಾಮ್ ಕೊಳ್ಳವೇ ಅದರ ನಿರ್ಮಿತಿಯಾಗಿದೆ. ಅದು ವರ್ಷೇ ವರ್ಷೇ ತಂದೊಡ್ಡುವ ರೇವೆ ಮಣ್ಣು ಅದರ ಬಯಲನ್ನು ಹುಲುಸಾಗಿ ಮಾಡಿ ಬತ್ತ, ಬಾಳೆ, ಪಪಾಯಿ, ಮಾವು, ಹಲಸು, ಬಿದಿರು, ಸೆಣಬು, ಕಬ್ಬು ಮೊದಲಾದವುಗಳ ಕೃಷಿಗೆ ಪೋಷಣೆ. ನೀಡಿದೆ. ಈ ನದಿಯ ಮತ್ತು ಉಪನದಿಗಳ ದಡಗಳಲ್ಲೇ ಪಟ್ಟಣಗಳು ಇವೆ. ಟಿಬೆಟಿನ ರಾಜಧಾನಿ ಲ್ಹಾಸಾ ಇದರ ಉಪನದಿಯ ದಂಡೆಯಲ್ಲಿದೆ. ಮಹಾಭಾರತ ಪ್ರಸಿದ್ಧಿಯ ಪ್ರಾಗ್ಜೋತಿಷಪುರ (ಈಗಿನ ಗೌಹಾಟಿ), ದಿನಪುರ, ದಿಬ್ರುಗಡ, ಸಿಂಗ್ರಿ, ಧುಬ್ರಿ ಮೊದಲಾದವು ಬ್ರಹ್ಮಪುತ್ರ ತೀರದಲ್ಲೇ ಇದ್ದು ನದಿ ಅಸ್ಸಾಮ್ ರಾಜ್ಯದ ಪ್ರತಿಯೊಂದು ಜಿಲ್ಲೆಯ ಮೂಲಕವೂ ಹರಿಯುತ್ತದೆ ಎನ್ನಬಹುದು. ಭಾರತ, ಬಾಂಗ್ಲಾ ದೇಶಗಳಲ್ಲಿ ದಿಬ್ರೂಗಡದಿಂದ ಬಂಗಾಳ ಕೊಲ್ಲಿಯವರೆಗಿನ 1,400 ಕಿಮೀ ಉದ್ದಕ್ಕೂ ದೊಡ್ಡನಾವೆಗಳು ಸಂಚರಿಸುವಂತಿದ್ದು ಅರಣ್ಯ ಉತ್ಪತ್ತಿಗಳಿಂದ ಹಿಡಿದು ಖನಿಜ ತ್ಯೆಲದವರೆಗಿನ ಬಗೆಬಗೆಯ ಸರಕುಗಳ ಸೌಗಣೆಗೆ ರಸ್ತೆಗಿಂತಲೂ ಈ ನದಿಯೇ ಮುಖ್ಯ ಸಾಧನೆವಾಗಿದೆ. ಅದರ ವಿಶೇಷವಾಗಿ ದಕ್ಷಿಣದಿಂದ ಬರುವ ಉಪನದಿಗಳ ವಿದ್ಯುದುತ್ಪಾದನಾ ಸಂಭಾವ್ಯತೆ ಅಸ್ಸಾಮಿನಲ್ಲಿ 120 ಲಕ್ಷ ಕಿಲೊವಾಟ್ ಎಂದು ಅಂದಾಜು ಇದೆ. ಇದು ಭಾರತದ ಜಲವಿದ್ಯುತ್ ಸಾಮಥ್ರ್ಯದ ಮೂರರಲ್ಲೊಂದಂಶವಾಗಿದೆ.

ಭಾರತದಲ್ಲಿ ಈ ನದಿ ಅಸ್ಥಿರ ಭೂಸ್ತರದ ಮೇಲೆ ಹರಿಯುತ್ತದೆ ಭೂಕಂಪನ, ಭೂಕುಸಿತಗಳು ಇಲ್ಲಿ ನಿರಂತರೆ ಉಪದ್ರವಗಳು. ಇಕ್ಕೆಲಗಳ ಪರ್ವತದ ಪೀಠ ಭೂಪ್ರದೇಶಗಳಿಂದ ಹರಿದು ಬರುವ ಉಪನದಿಗಳು ಮಳೆಗಾಲದಲ್ಲಿ ಅಪಾರ ಜಲ ರಾಶಿಯನ್ನು ಬ್ರಹ್ಮಪುತ್ರ ನದಿಗೆ ಸೇರಿಸುವುದರಿಂದ ಪ್ರತಿವರ್ಷ ಈ ನದಿಯ ಸುತ್ತಮುತ್ತಲ ಪ್ರದೇಶಗಳು ನೆರೆಹಾವಳಿಗೆ ತುತ್ತಾಗುತ್ತವೆ. 1950ರ ಅಸ್ಸಾಮ್ ಭೂಕಂಪನಾನಂತರ ಅಲ್ಲಿ ನೆರೆಹಾವಳಿ ವಿಪರೀತವಾಗಿದೆ. 1972-73, 77ರ ನೆರೆಹಾವಳಿ ಹಿಂದಿನ ದಾಖಲೆಗಳನ್ನೆಲ್ಲ ಮುರಿದದ್ದಲ್ಲದೆ 1977ರ ನೆರೆ ಐದು ತಿಂಗಳ ಪರ್ಯಂತವಿತ್ತು. ಈ ನದಿ ಪ್ರತಿವರ್ಷ ತನ್ನ ಮಾರ್ಗವನ್ನು ಬದಲಿಸುವುದು ಇನ್ನೊಂದು ಕುತ್ತು.

ಟಿಬೆಟಿನಲ್ಲಿ ಬ್ರಹ್ಮಪುತ್ರದಿಂದ ನೀರಾವರಿ ಆಗುತ್ತಿದ್ದರೂ ಭಾರತ ಬಾಂಗ್ಲಾ ದೇಶಗಳಲ್ಲಿ ನೀರಾವರಿಗಿಂತ ಸಾರಿಗೆಯ ಮಾರ್ಗವಾಗಿಯೇ ಇದರ ಮುಖ್ಯ ಉಪಯೋಗವಾಗುತ್ತಿದೆ. ಅಸ್ಸಾಮಿನಲ್ಲಿ ಇದರ ಉಪನದಿಯೊಂದಿಗೆ 1969ರಲ್ಲಿ (ಯಮುನಾ) ನೀರಾವರಿ ಅಣೆಕಟ್ಟು ಕಟ್ಟಲಾಗಿದೆ. ಶುಕ್ಲಾ ಅಣೆಕಟ್ಟು 4ನೆಯ ಪಂಚವಾರ್ಷಿಕ ಯೋಜನೆಯಲ್ಲಿ ಸೇರ್ಪಡೆಯಾಗಿದೆ. ಬಾಂಗ್ಲಾದೇಶದಲ್ಲಿ ತೀಸ್ತಾ ನದಿಗೆ ಗಡಮಾರಿ ಬಳಿ ಅಣೆಕಟ್ಟು ಹಾಕಿ ನೀರಾವರಿ ಹಾಗೂ 10,000 ಕಿಲೊವಾಟ್ ವಿದ್ಯುತ್ತು ಉತ್ಪಾದಿಸುವ ಯೋಜನೆ ಕಾರ್ಯಗತವಾಗುತ್ತಿದೆ. ಅದು ನೆರೆ ನಿಯಂತ್ರಣಕ್ಕೂ ತೆರವಾಗಲಿದೆ.

ಅಸ್ಸಾಮ್ ಮತ್ತು ಅರುಣಾಚಲ ಪ್ರದೇಶಗಳಲ್ಲಿ ಬ್ರಹ್ಮಪುತ್ರ ಸಂಕೀರ್ಣದ ಜಲವಿದ್ಯುತ್ ಸಾಧ್ಯತೆ ಅಪಾರವಾಗಿದ್ದರೂ ಈ ತನಕ ಕಾರ್ಯಗತವಾಗಿರುವುದು ಬರಪಾನಿ ಮತ್ತು ಉಮಿಯಮ್ ವಿದ್ಯುದ್ಯೋಜನೆಗಳು ಮಾತ್ರ. ಉಮಿಯಮ್ ಯೋಜನೆಯ ಎರಡು ಹಂತಗಳು ಮುಗಿದಿದ್ದು ಅವು 18,000 ಕಿಲೊವಾಟ್ ಸಾಮಥ್ರ್ಯ ಹೊಂದಿದೆ. ನೆರೆ ನಿಯಂತ್ರಣ ಯೋಜನೆಗಳಲ್ಲಿ ಬಾಂಗ್ಲಾ ದೇಶದ ದಂಡೆಯ 216 ಕಿಮೀ ಉದ್ದದ ಕಟ್ಟೆಯ ಯೋಜನೆ ಮುಖ್ಯವಾಗಿದೆ.

ಬ್ರಹ್ಮಪುತ್ರ ಪ್ರದೇಶ ಭಾರತ ಉಪಖಂಡದಲ್ಲಿ ತೈಲ, ನ್ಯೆಸರ್ಗಿಕ ಅನಿಲ ಮತ್ತು ಕಲ್ಲಿದ್ದಲ ನಿಕ್ಷೇಪಗಳಿಂದಲೂ ಕೂಡಿದೆ. ಈ ನದೀ ಮಾರ್ಗದ ಅಭಿವೃದ್ದಿ ಸರಿಯಾಗಿ ಅದರೆ ಈ ಪ್ರದೇಶದ ನ್ಯೆಸರ್ಗಿಕ ಸಂಪತ್ತಿನ ಸಫಲ ಉಪಯೋಗವೂ ಆದೀತು. (ಪಿ.ವಿ.ಎ.)