ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬ್ರಾಂಕಿ ಎಕ್ಟೇಸಿಸ್

ವಿಕಿಸೋರ್ಸ್ದಿಂದ

ಬ್ರಾಂಕಿ ಎಕ್ಟೇಸಿಸ್

	ಶ್ವಾಸಮಾರ್ಗದಲ್ಲಿ ಡೊಗರು. ಇದೊಂದು ರೋಗ. ಶ್ವಾಸನಾಳಗಳ ಆಜನ್ಮ ದುರ್ಬಲತೆಯಿಂದಾಗಲಿ ಅವಕ್ಕೆ ಆಗುವ ಅಡೆ ತಡೆಯಿಂದಾಗಲಿ ಈ ರೋಗ ಬರುವುದು. ಶ್ಲೇಷ್ಮ ಗಟ್ಟಿಯಾಗಿ ಕೆರಳಿ. ದುರ್ಮಾಂಸ ಗಡ್ಡೆ ಕಟ್ಟಿ ದುಗ್ಧರಸಗ್ರಂಥಿ ದೊಡ್ಡದಾಗಿ ಅಥವಾ ಯಾವುದಾದರೂ ಬಾಹ್ಯವಸ್ತು ಸಿಕ್ಕಿಕೊಂಡು ಈ ಅಡ್ಡಿ ಆಗಬಹುದು. ಇದರಿಂದಾಗಿ ಅಲ್ಲಿ ರೋಗ ಅಂಟಿ ಶ್ವಾಸನಾಳಗಳು ಅಗಲವಾಗಿರುತ್ತವೆ. ಹೀಗೆ ಅಗಲವಾದವು ಕ್ರಮೇಣ ತಮ್ಮ ಸ್ಥಿತಿಸ್ಥಾಪಕತೆ ಕಳೆದುಕೊಳ್ಳುವುದರಿಂದ ಹರಿಯದೆ ನಿಂತ ಕಫದಲ್ಲಿ ಸೋಂಕು ವೃದ್ಧಿಯಾಗಲು ಅನುಕೂಲವಾಗುತ್ತದೆ. ದೀರ್ಘಾವಧಿಯ ಅನಾರೋಗ್ಯ, ದುರ್ವಾಸನೆಯುಳ್ಳ ಹಸುರು, ಹಳದಿಕಫ ಮತ್ತು ಉಸಿರಿನಲ್ಲಿ ದುರ್ಗಂಧ, ಕಫದಲ್ಲಿ ರಕ್ತ ಬೀಳುವುದು, ಅನಿಯಮಿತ ಜ್ವರ, ತುದಿ ಬೆರಳು ದಪ್ಪಗಾಗುವುದು ಈ ರೋಗದ ಲಕ್ಷಣಗಳು. ಈ ಕಾಯಿಲೆಯುಳ್ಳ ಜನರಲ್ಲಿ ಸೈನು ಸೈಟಿಸ್ ಎಂಬ ಸೋಂಕು ಇರಬಹುದು. ಕಫ ಸುಲಭವಾಗಿ ಹೊರಬರುವಂತೆ ಬೇಕಾದ ರೀತಿಯಲ್ಲಿ ಬಗ್ಗಿ ಮಲಗಿಸಿ ಕೆಮ್ಮಿಸಿ ಕಫ ಹೊರತೆಗೆಯುವುದು ಜೀವಾಣುರೋಧಕ ಔಷಧಿಗಳನ್ನು ಕೊಡುವುದು ಮತ್ತು ಕೆಲವೇ ನಾಳಗಳಿಗೆ ರೋಗ ತಗಲಿದ್ದರೆ ಶಸ್ತ್ರಕ್ರಿಯೆ ಮಾಡುವುದು ಈ ರೋಗಕ್ಕೆ ಚಿಕಿತ್ಸಾಕ್ರಮ. 						(ಎನ್.ಕೆ.ಸಿ.)