ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬ್ರಾಡ್ಲೆ, ಆಂಡ್ರ್ಯೂ ಸೆಸಿಲ್

ವಿಕಿಸೋರ್ಸ್ದಿಂದ

ಆಂಡ್ರ್ಯೂ ಸೆಸಿಲ್ ಬ್ರಾಡ್ಲೆ : - 1851-1935. ಪ್ರಸಿದ್ಧ ಇಂಗ್ಲಿಷ್ ವಿದ್ವಾಂಸ, ವಿಮರ್ಶಕ, ಪ್ರಾಧ್ಯಾಪಕ. ತಂದೆ ರೆವರೆಂಡ್ ಚಾಲ್ರ್ಸ್ ಬ್ರಾಡ್ಲಿ. ಸ್ಥಳೀಯ ಸೇಂಟ್ ಜೇಮ್ಸ್ ಚರ್ಚಿನ ಪಾದ್ರಿಯಾಗಿದ್ದ. ತಾಯಿ ಎಮ್ಮಾ ಲಿಂಟನ್. ಬ್ರಾಡ್ಲಿ ಚೆಲ್ಟನ್‍ಹ್ಯಾಮ್ ಕಾಲೇಜಿನಲ್ಲಿ ಅನಂತರ ಅಕ್ಸ್‍ಫರ್ಡಿನ ಬೆಲಿಯೊಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿ 1873ರಲ್ಲಿ ಪ್ರಥಮ ದರ್ಜೆಯಲ್ಲಿ ಅನರ್ಸ್ ಪದವಿ ಪಡೆದ. ಈತನ ಇಂಗ್ಲಿಷ್ ಪ್ರಬಂಧಕ್ಕೆ ಚಾನ್ಸ್‍ಲರ್ ಬಹುಮಾನ ದೊರೆಕಿತು. ತಾನು ಓದಿದ ಕಾಲೇಜಿನಲ್ಲೇ ಫೆಲೊ ಆಗಿ ನೇಮಕಗೊಂಡ (1874). ಎರಡು ವರ್ಷಗಳ ಬಳಿಕ 1881ರ ತನಕ ತತ್ತ್ವಶಾಸ್ತ್ರದ ಅಧ್ಯಾಪಕನಾಗಿ ಕೆಲಸಮಾಡಿದ 1882ರಲ್ಲಿ ಲಿವರ್‍ಪೊಲಿನಲ್ಲಿ ಹೊಸದಾಗಿ ಅರಂಭವಾದ ವಿಶ್ವವಿದ್ಯಾಲಯದ ಕಾಲೇಜಿನಲ್ಲಿ ಇತಿಹಾಸ ಮತ್ತು ಸಾಹಿತ್ಯ ವಿಷಯಗಳ ಪ್ರಾಧ್ಯಾಪಕನಾಗಿ ನೇಮಕಗೊಂಡ. 1890ರಿಂದ ಗ್ಲಾಸ್ಗೊ ವಿಶ್ವವಿದ್ಯಾಲಯದ ಇಂಗ್ಲಿಷ್ ಪ್ರಾಧ್ಯಾಪಕನಾಗಿ ಸೇವೆ ಸಲ್ಲಿಸದ.

ಈತ ಬರೆದುದು ಕೆಲವೇ ಪುಸ್ತಕಗಳಾದರೂ ಅವು ಶ್ರೇಷ್ಠ ಕೃತಿಗಳು ಎನಿಸಿವೆ. 1901ರಲ್ಲಿ ಬರೆದ ಮೊದಲ ವಿಮರ್ಶಾ ಪ್ರಬಂಧ" ಎ ಕಾಮೆಂಟರಿ ಅನ್ ಟೆನಿಸನ್ಸ್ ಇನ್ ಮೆಮೋರಿಯಮ್" ಹಲವರ ಗಮನ ಸೆಳೆಯಿತು. "ಷೇಕ್‍ಸ್ಫಿಯರಿಯನ್ ಟ್ರ್ಯಾಜಿಡಿ" (1904) ವಿಮರ್ಶಾಸಾಹಿತ್ಯಕ್ಕೊಂದು ಅಮೂಲ್ಯ ಕೊಡಗೆ. ಷೇಕ್‍ಸ್ಫಿಯರ್‍ನ ಮಹಾ ರುದ್ರನಾಟಕಗಳ ವಸ್ತುನಿಷ್ಠ ಹಾಗೂ ತರ್ಕಸಮ್ಮತ ಅಧ್ಯಯನ ಇಲ್ಲಿ ಕಾಣಬಹುದು. ಪಾತ್ರಗಳ ವಿಶ್ಲೇಷಣೆ, ಕಥಾವಸ್ತುವಿನ ಗುರಿ, ಕಾವ್ಯಾಂಶಗಳ ಪರಿಶೀಲನೆ ಅನ್ಯಾದೃಶವಾಗಿವೆ. ಈತನ ಸೂಕ್ಷ್ಮ ಸಂವೇದನೆ, ಸುಂದರ ವಿಶ್ಲೇಷಣೆ, ಕಾವ್ಯಾಂತರಂಗ ತೆರೆದು ತೋರಿಸುವ ಸಾಮಥ್ರ್ಯ ಮೆಚ್ಚುವಂಥವು.

1909ರಲ್ಲಿ ಪ್ರಕಟವಾದ "ಆಕ್ಸ್‍ಫರ್ಡ್ ಲೆಕ್ಚರ್ಸ್ ಅನ್ ಪೊಯಟ್ರಿ" ಕಾವ್ಯಾಭ್ಯಾಸಿಗಳಿಗೆ ಉಪಯುಕ್ತವಾದ ಮತ್ತೊಂದು ವಿಮರ್ಶಾಗ್ರಂಥ ಎನಿಸಿತು. ಬ್ರಾಡ್ಲಿ ರಸಗ್ರಾಹಿ ಸಹೃದಯ ವಿಮರ್ಶಕ. ಈತನ ಎಲ್ಲ ಬಿಡಿ ಲೇಖನಗಳನ್ನು ಸಂಗ್ರಹಿಸಿ 1929ರಲ್ಲಿ "ಎ ಮಿಸೆಲೆನಿ" ಎಂಬ ಹೆಸರಿನಲ್ಲಿ ಪ್ರಕಟಗೊಂಡಿತು.

ಬ್ರಾಡ್ಲಿ ತನ್ನ ಕಾಲದ ಅತ್ಯಂತ ಪ್ರಭಾವಶಾಲಿ ವಿಮರ್ಶಕ. ಈತ ಬ್ರಹ್ಮಚಾರಿ. ಕ್ರಿಕೆಟ್ ಪಟು, ಪರ್ವತಾರೋಹಿ, ಮಹಾಯುದ್ಧದಿಂದಾದ ಮಾನಸಿಕ ಆಘಾತದಿಂದಾಗಿ ಈತನ ಅರೋಗ್ಯ ಕೆಡುತ್ತ ಬಂದು 1935ರಲ್ಲಿ ಗತಿಸಿದ. (ಕೆ.ಬಿ.ಪಿ.)

ಹತ್ತೊಂಬತ್ತನೆಯ ಶತಮಾನದ ಉತ್ತರಾರ್ಧದಲ್ಲಿ ಇಂಗ್ಲಿಷ್ ವಿಮರ್ಶೆಯಲ್ಲಿ ಪ್ರಥಮ ಬಾರಿಗೆ ಕಾಲೇಜ್ -ವಿಶ್ವವಿದ್ಯಾನಿಲಯಗಳ ಪ್ರೊಫೆಸರರು ವಿಮರ್ಶಕರಾಗಿ ಖ್ಯಾತಿ ಪಡೆದರು. ಇವರಲ್ಲಿ ಎ.ಸಿ.ಬ್ರ್ಯಾಡ್ಲಿ ದೊಡ್ಡ ಹೆಸರು.

ಹತ್ತೊಂಬತ್ತನೆಯ ಶತಮಾನದ ಕಾಲ್‍ಂಜೆ ಹ್ಜಾಸ್‍ಲಿಟ್ ಮೊದಲಾದ ವಿಮರ್ಶಕರು ಷೇಕ್ಸ್‍ಪಿಯರನ ನಾಟಕಗಳ ಪಾತ್ರಗಳನ್ನು ನಿಜಜೀವನದ ವ್ಯಕ್ತಿಗಳಂತೆಯೇ ವಿಶ್ಲೇಷಿಸಿದರು. ಈ ಮನೋಧರ್ಮದ ಪರಾಕಾಷ್ಠೆಯನ್ನು ಬ್ರ್ಯಾಡ್ಲಿಯಲ್ಲಿ ಕಾಣಬಹುದು. ಇಪ್ಪತ್ತನೆಯ ಶತಮಾನದ ಎಲ್.ಸಿ. ನೈಟ್ಸ್ ಮೊದಲಾದ ವಿಮರ್ಶಕರು ಈ ವಿಧಾನವನ್ನು ತಿರಸ್ಕಿರಿಸಿದರು, ಇಡೀ ಕೃತಿ ಸಾವಯವ ಸೃಷ್ಟಿ, ಪಾತ್ರಗಳನ್ನು ಕೃತಿಯು ನೀಡುವ ಒಟ್ಟು ಅನುಭವದ ಚೌಕಟ್ಟಿನಲ್ಲಿ ಕಾಣಬೇಕು ಎಂಬುದು ಹೊಸ ಪೀಳಗೆಯ ವಿಮರ್ಶಕರ ನಿಲುವು. ಈಚೆಗಿನ ವಿಮರ್ಶಕರು ಇವನನ್ನು ಟೀಕಿಸುವುದೇ ಹೆಚ್ಚು.

ಬ್ರ್ಯಾಡ್ಲಿಯ ವಿಮರ್ಶೆಯನ್ನು ಅರ್ಥಮಾಡಿಕೊಳ್ಳಲು ಅವನು ಕಾಂಟ್, ಷಿಲರ್ ಮತ್ತು ಹಾರ್ಟ್‍ಮನ್‍ರ ತತ್ವಶಾಸ್ತ್ರವನ್ನು ಜರ್ಮನ್ ತತ್ವಶಾಸ್ತ್ರವನ್ನು ಅಭ್ಯಾಸ ಮಾಡಿದ್ದ ಎನ್ನುವುದನ್ನು ನೆನಪಿನಲ್ಲಿಡಬೇಕು. ಅರಿಸ್ಟಾಟಲ್ ನಿರೂಪಿಸಿದ ಟ್ರ್ಯಾಜಿಡಿ ಕಲ್ಪನೆಯೇ ಸರ್ವಮಾನ್ಯವಾಗಿದ್ದ ಕಾಲದಲ್ಲಿ ಬ್ರ್ಯಾಡ್ಲಿಯು ಷೇಕ್ಸ್‍ಫಿಯರನ ಟ್ರ್ಯಾಜಿಡಿಗಳ ಅಧ್ಯಯನದಿಂದ ಹೊಸ ಪರಿಕಲ್ಪನೆಯನ್ನು ಮುಂದಿಟ್ಟ. ದುಷ್ಟತನವು ವಿಷದಂತೆ; ಅದನ್ನು ಹೊರಕ್ಕೆ ಹಾಕುವ ಪ್ರಯತ್ನದಲ್ಲಿ ಬದುಕು ತತ್ತರಿಸುತ್ತದೆ. ತಾನು ಒಂದಿಷ್ಟು ಕಳೆದುಕೊಂಡರೂ ದುಷ್ಟವಾದುದನ್ನು ಹೊರಕ್ಕೆ ನೂಕುತ್ತದೆ, ತಾನು ಉಳಿದುಕೊಳ್ಳುತ್ತದೆ. ದುಷ್ಟತನ ಏಕೆ ಹಾಗೆ ನಡೆದುಕೊಳ್ಳುತ್ತದೆ ಎನ್ನುವ ಪ್ರಶ್ನೆಗೆ ಉತ್ತರವಿಲ್ಲ, ಇದು ಬದುಕಿನ ನಿಗೂಢತೆಯ ಅಂಶ ಎಂಬುದು (ಸಂಗ್ರಹವಾಗಿ) ಇವನ ವ್ಯಾಖ್ಯಾನ. ಷೇಕ್ಸ್‍ಪಿಯರನ ಟ್ರ್ಯಾಜೆಡಿಗಳನ್ನು ಪ್ರತ್ಯೇಕ ಪ್ರತ್ಯೇಕವಾಗಿನೋಡದೆ ಒಂದು ಸಮಗ್ರ ಜೀವನ ದರ್ಶನಕ್ಕಾಗಿ ಅಭ್ಯಾಸ ಮಾಡಿದುದು, ಪ್ರತಿಮೆಗಳ ಬಳಕೆಗೆ ಗಮನವನ್ನು ನೀಡಿದ್ದು ಇವನ ಸಾಧನೆ. ಪರಿಷ್ಕರಣೆ : - ಎಲ್. ಎಸ್. ಶೇಷಗಿರಿರಾವ್