ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬ್ರಾಹ್ಮಣಗಳು

ವಿಕಿಸೋರ್ಸ್ದಿಂದ

ಬ್ರಾಹ್ಮಣಗಳು ಯಜ್ಞದ ಸೂಕ್ಷ್ಮಾತಿಸೂಕ್ಷ್ಮ ಕ್ರಿಯೆಗಳ ಅರ್ಥ ಸಾದನ ಮತ್ತು ಅಲ್ಲಿ ಬಳಸುವ ವಿಧಾನ ಇವನ್ನು ವಿವರವಾಗಿ ವರ್ಣೆಸುವ ಯಜುರ್ವೇದದ ಭಾಗಗಳು ಆರ್ಯರ ಜೀವನದಲ್ಲಿ ಯಜ್ಞಗಳು ವಹಿಸಿದ ಪಾತ್ರವನ್ನು ಯಜುರ್ವೇದದ ಭಾಗಗಳು. ಆರ್ಯರ ಜೀವನದಲ್ಲಿ ಯಜ್ಞಗಳು ವಹಿಸಿದ ಪಾತ್ರವನ್ನು ಯಜುರ್ವೇದ ನಿರೂಪಿಸುತ್ತದೆ. ಇದರಲ್ಲಿ ಕೃಷ್ಣಯಜುರ್ವೇದ ಗದ್ಯಾತ್ಮಕವಾಗಿದ್ದು ಯಜ್ಞದಲ್ಲಿ ಹವಿಸ್ಸು ಕೊಡುವಾಗ ಉಚ್ಚರಿಸುವ ಮಂತ್ರಗಳನ್ನು ಒಳಗೊಂಡಿದೆ. ಇವುಗಳ ರಚನೆಯ ಕಾಲ ಕ್ರಿ. ಪೂ. ಸುಮಾರು 1000 ಎನ್ನಲಾಗಿದೆ.

ಬ್ರಾಹ್ಮಣಗಳು ಗಾತ್ರದಲ್ಲಿಯೂ ಪ್ರತಿಪಾದಿಸುವ ವಿಷಯದಲ್ಲಿಯೂ ಗಮನೀಯವಾದವು. ಸ್ಥೂಲವಾಗಿ ಇವು ಯಜ್ಞವನ್ನು ವಿವರಿಸುವ ಗ್ರಂಥಗಳು. ಯಜ್ಞವೆಂದರೇನು? ಎಂದು ತಿಳಿಯದ, ಯಜ್ಞವೊಂದನ್ನು ಕಾಣದ ಈ ಕಾಲದಲ್ಲಿ ಬ್ರಾಹಣಗಳನ್ನು ಅರ್ಥ ಮಾಡಿಕೊಳ್ಳುವುದು ಸ್ವಲ್ಪ ಕಷ್ಟ. ಅಲ್ಲದೆ ಬ್ರಾಹ್ಮಣಗಳು ಗದ್ಯರೂಪದಲ್ಲಿದ್ದು ಸಾಹಿತ್ಯದ ಸೊಗಸಿನಿಂದ ಕೂಡಿರದೆ ಶಾಸ್ತ್ರ ವಿಷಯವನ್ನು ಚರ್ಚಿಸುವುದರಿಂದ ಸಾಮಾನ್ಯ ಜನರಿಗೆ ಹಿಡಿಸಲಾರವು.

ಬ್ರಾಹ್ಮಣವೆಂದರೆ ಜ್ಞಾನಿಯಾದ ಶ್ರೋತ್ರಿಯ ಬ್ರಾಹ್ಮಣನ ಅಧಿಕೃತಮಾತು ಎಂದು ಅರ್ಥಮಾಡುತ್ತಾರೆ. ಅಂಥ ಮಾತುಗಳ ಸಮುದಾಯವಿರುವ ಗ್ರಂಥ ಬ್ರಾಹ್ಮಣವೆನಿಸುತ್ತದೆ. ವ್ಯಾಖ್ಯಾನರೂಪವಾಗಿ ಹೇಳುವುದಾದರೆ ಬ್ರಹ್ಮಕ್ಕೆ ಅಂದರೆ ಮಂತ್ರ ಅಥವಾ ಯಜ್ಞಕ್ಕೆ ಸಂಬಂಧಿಸಿದುದು ಎಂಬುದು ಹೆಚ್ಚು ಸಮಂಜಸವಾಗುತ್ತದೆ.

ಯಜ್ಞದ ವಿವರಣೆ ನೀಡುವ ಹಲವು ಮಂತ್ರಗಳಿಗೂ ಇವುಗಳಲ್ಲಿ ವ್ಯಾಖ್ಯಾನ ದೊರೆಯುತ್ತದೆ. ಯಜ್ಞಗಳ ಕ್ರಮಗಳನ್ನು ತಿಳಿಸುವುದರ ಜೊತೆಗೆ, ಅದನ್ನು ನಡೆಸುವ ಕಾಲ, ನಡೆಸುಬಹುದಾದ ಪ್ರದೇಶ, ಮಾಡಿಕೊಳ್ಳಬೇಕಾದ ಸಿದ್ದತೆಗಳು. ಯಾರು ಯಾರು ಯಾವ ಯಾವ ಯಜ್ಞಗಳನ್ನು ನಡೆಸಬಹುದು, ಯಾವುದನ್ನು ಬಿಡಬಹುದು. ಹೇಳಬೇಕಾದ ಮಂತ್ರಗಳು, ನಾಮಗಳು ಇವೇ ಮೊದಲಾದವು ಮತ್ತು ವಿಧಿ ನಿಷೇಧಗಳ ಔಚಿತ್ಯವನ್ನು ತೋರಿಸಲು ಉತ್ಪತ್ತಿ ಅಥವಾ ಕಥೆಗಳನ್ನು ಕೇಳುವುದು, ಶ್ರದ್ಧೆ ಹುಟ್ಟಿಸಲು ಅರ್ಥವಾದ ಹೊಗಳಿಕೆ ಹಾಗೂ ತೆಗಳಿಕೆಗಳ ಜೋಡಣೆ- ಇವು ಸ್ಥೂಲವಾಗಿ ಬ್ರಾಹ್ಮಣಗಳ ವಿಷಯಗಳು. ಅರ್ಥವಾದವುಗಳಲ್ಲಿ ಪದಗಳ ಉತ್ಪತ್ತಿ ಅಥವಾ ಕಥೆಗಳನ್ನು ಹೇಳುವ ಬದಲು ಅನೇಕ ಸಂದರ್ಭಗಳಲ್ಲಿ ವೈಜ್ಞಾನಿಕ ಕಾರಣಗಳೂ ಕೊಡಲ್ಪಟ್ಟವೆ. ಉದಾಹರಣೆಗೆ ತೈತ್ತಿರೀಯ ಬ್ರಾಹ್ಮಣದಲ್ಲಿ ಒಂದು ಮಾತು ಬರುತ್ತದೆ. ಪ್ರದರದ (ಕೊಳ) ನೀರಿನಲ್ಲಿ ಆಚಮನ ಮಾಡಬಾರದು, ಏಕೆಂದರೆ ಅದು ಅಸುರ್ಯ (ಹಾನಿಕರ). ಬ್ರಾಹ್ಮಣಗಳಲ್ಲಿ ಅಲ್ಲಲ್ಲಿ ಅತ್ಯುತ್ತಮ ಉಪಮೆಗಳೂ ಪ್ರತಿಭಾಪೂರ್ಣಮಾತುಗಳೂ ಕಂಡು ಬರುವುವು. ಇಲ್ಲಿ ಬರುವ ಕಥಾನಕಗಳು ಅರ್ಥವಾದಗಳೆನಿಕೊಂಡರೂ ಇವು ಅನೇಕ ನಯ ನೀತಿಗಳನ್ನು ಬೋಧಿಸುವುವು. ಅಲ್ಲದೆ, ಸಾಹಿತ್ಯ ದೃಷ್ಟಿಯಿಂದಲೂ ಇವು ಉತ್ತಮವಾಗಿರುವುವು. ಐತರೇಯ ಬ್ರಾಹ್ಮಣದ 22ನೆಯ ಅಧ್ಯಾಯದಲ್ಲಿ ಬರುವ ಶುನಃಶೇಘಾಖ್ಯಾನವೊಂದನ್ನು ಬಿಟ್ಟರೆ ಮತ್ತಾವುದೂ ದೀರ್ಘವಾಗಿಲ್ಲ. ಐಲೂಷ ಕವಷನ ಕಥೆ, ಮನು ಮತ್ತು ಮತ್ಸ್ಯ, ಸ್ವರ್ಗದಿಂದ ಸೋಮಲತೆ ತರುವಿಕೆ-ಇವೇ ಮೊದಲಾದವನ್ನು ಉದಾಹರಿಸಬಹುದು. ಈ ಕಥಾನಕಗಳೇ ಮುಂದಿನ ಪುರಾಣೇತಿಹಾಸಗಳಲ್ಲಿ ವಿಸ್ತರಿಸಲ್ಪಟ್ಟಿದೆ. ಬ್ರಾಹ್ಮಣಗಳಲ್ಲಿ ಬರುವ ದೇವಾಸುರ ಯುದ್ಧದ ಕಥೆಗಳು ಪುರಾಣಗಳಿಗೆ ಬಲುಪಾಲು ಆಧಾರಗಳಾಗಿವೆ ವಿಷ್ಣುವಿನ ಕೆಲವು ಅವತಾರಗಳ ಕಥೆಗಳ ಮೂಲವನ್ನು ಇಲ್ಲಿ ಕಾಣಬಹುದು (ಉದಾಹರಣೆಗೆ: ವಾಮನ, ತ್ರಿವಿಕ್ರಮ). ಇಂಥ ಕೆಲವು ಭಾಗಗಳನ್ನು ಬಿಟ್ಟರೆ ಶಾಸ್ತ್ರಶೈಲಿಯಲ್ಲಿ ಯಜ್ಞವೊಂದನ್ನೇ ವಿವರಿಸುವುದಾದ್ದರಿಂದ ಸಾಮಾನ್ಯ ಓದುಗರಿಗೆ ಬ್ರಾಹ್ಮಣಗಳು ರುಚಿಸಲಾರವು. ಇವುಗಳಲ್ಲಿ ಪುನರುಕ್ತಿಗಳೂ ವಿಶೇಷ.

ಯಜ್ಞವೇ ಮುಖ್ಯ ವಿಚಾರವಾದುದರಿಂದ ಯಜ್ಞವೇ ಮೊದಲು, ಅದೇ ಕಡೆ: ಯಜ್ಞವೇ ಜೀವನ, ಜೀವನವೇ ಯಜ್ಞವೆಂಬ ಸಿದ್ದಾಂತಕ್ಕೆ ಕೊಂಡೊಯ್ಯುವ ಬ್ರಾಹ್ಮಣ ವಿಚಾರಧಾರೆಯಲ್ಲಿ ದೇವತೆಗಳನ್ನು ಋಗ್ವೇದದಲ್ಲಿ ವರ್ಣಿಸಿರುವಂತೆ ವರ್ಣಿಸಲು ಅವಕಾಶವಿಲ್ಲ. ಆದರೂ ಋಗ್ವೇದಕ್ಕಿಂತ ಬ್ರಾಹ್ಮಣಗಳ ಆಧಾರದ ಮೇಲೆ ವೈದಿಕ ದೇವತೆಗಳ ಸ್ವರೂಪ ಪ್ರಭಾವಗಳನ್ನು ತಿಳಿಯಲು ಹೆಚ್ಚು ಅವಕಾಶವಿದೆ ಎಂದು ಹೇಳಬಹುದು. ಋಗ್ವೇದದಲ್ಲಿ ಕಾಣುವ ಎಲ್ಲ ದೇವತೆಗಳನ್ನು ಇಲ್ಲೂ ಕಾಣಬಹುದು. ಬ್ರಾಹ್ಮಣಗಳಲ್ಲಿ ವಿಶಿಷ್ಟಸ್ಥಾನವನ್ನು ಪಡೆದ ದೇವತೆ ಎಂದರೆ ಪ್ರಜಾಪತಿ.

ಸಂಸ್ಕøತ ವಾಙ್ಞಯದಲ್ಲಿ ಮುಂದೆ ಬೆಳೆದ ಎಲ್ಲ ಸಾಹಿತ್ಯಗಳ ಮೂಲವನ್ನೂ ಬ್ರಾಹ್ಮಣಗಳಲ್ಲಿ ಕಾಣಬಹುದು. ವೇದಾಂಗಗಳಂತೂ ಬ್ರಾಹ್ಮಣಗಳ ನೆಲಗಟ್ಟಿನಲ್ಲಿಯೇ ಬೆಳೆದವು. ಇತರ ವಿಷಯದಲ್ಲಿ ಆಯುರ್ವೇದವನ್ನು ವಿಶೇಷಿಸಿ ಹೇಳಬಹುದು. ಸಂಹಿತೆಗಳ ಅನಂತರ ಬಂದವು ಬ್ರಾಹ್ಮಣಗಳು, ಆಯಾ ವೇದಗಳಿಗೆ ಸಂಬಂಧ ಪಟ್ಟ ಋತ್ವಿಜರ ಭಾಗಗಳನ್ನು ಗಮನದಲ್ಲಿಟ್ಟುಕೊಂಡು ಆಯಾ ಬ್ರಾಹ್ಮಣಗಳು ಯಜ್ಞವನ್ನು ವಿವರಿಸುವುವು. ಋಗ್ವೇದ ಹೋತೃವಿಗೂ ಯಜುರ್ವೇದ ಅಧ್ವರ್ಯುವಿಗೂ ಸಾಮವೇದ ಉದ್ಗಾತೃವಿಗೂ ಅಥರ್ವಣವೇದ ಬ್ರಹ್ಮನಿಗೂ ಸಂಬಂಧಪಟ್ಟಿವೆ. ಋಗ್ವೇದಕ್ಕೇ ಸೇರಿದ ಎರಡು ಬ್ರಾಹ್ಮಣಗಳಲ್ಲಿ ಐತರೇಯ ಬ್ರಾಹ್ಮಣ ಮುಖ್ಯವಾದುದು. ಇದರಲ್ಲಿ 40 ಅಧ್ಯಾಯಗಳಿವೆ. ಇವು ಐದೈದು ಅಧ್ಯಾಯಗಳ ಸಂಚಿಕೆಗಳಾಗಿ ವಿಭಾಗವಾಗಿವೆ. ಈ ವಿಧದಲ್ಲಿ ಎಂಟು ಸಂಚಿಕೆಗಳಿವೆ. ಇದು ಮುಖ್ಯವಾಗಿ ಸೋಮಯಾಗದ ವಿವರಗಳನ್ನು ಕೊಡುತ್ತದೆ. ಅಗ್ನಿಷ್ಟೋಮ, ಗವಾಮಯನ, ದ್ವಾದಶಾಹ, ಅಗ್ನಿಹೋತ್ರ, ರಾಜಾಭಿಷೇಕ. -ಇವು ಇದರ ಪ್ರಮುಖ ವಿಷಯಗಳು. ಕೌಷೀತಕೀ ಅಥವಾ ಸಾಂಖ್ಯಾಯನ ಬ್ರಾಹ್ಮಣ ಋಗ್ವೇದಕ್ಕೆ ಸೇರಿದ ಮತ್ತೊಂದು ಬ್ರಾಹ್ಮಣ. ಇದರ ವಿಷಯಗಳು ಐತೆರೇಯದಲ್ಲಿರುವುದೇ ಆಗಿದೆ. ಕೃಷ್ಣಯರ್ಜುವೇದದ ಸಂಹಿತೆಗಳಿಲ್ಲ. ತೈತ್ತೀರಿಯ ಬ್ರಾಹ್ಮಣ ಸಂಹಿತೆ ಮುಂದುವರಿದ ಗ್ರಂಥದಂತಯೇ ಇದೆ. ಸಂಹಿತೆಯಲ್ಲಿ ಹೇಳಿಬರುವ ಹಲವು ಯಜ್ಞಗಳನ್ನು ಇಲ್ಲಿ ವಿಸ್ತಾರವಾಗಿ ಹೇಳಿದೆ. ಶುಕ್ಲ ಯಜುರ್ವೇದದ ವಾಜಸನೇಯಿ ಸಂಹಿತೆಗೆ ಸೇರಿದ ಶತಪಥ ಬ್ರಾಹ್ಮಣ ವೈದಿಕ ವಾಙಯದಲ್ಲಿಯ ಮುಖ್ಯ ಗ್ರಂಥಗಳ ಪೈಕಿ ಒಂದು. ಇದರಲ್ಲಿ 100 ಅಧ್ಯಾಯಗಳಿರುವುದರಿಂದ ಶತಪಥ ಬ್ರಾಹ್ಮಣ ಎಂದು ಪ್ರಸಿದ್ದಿವಾಗಿದೆ. ಇದೂ ಸಂಹಿತೆಯೇ. ಮಾಧ್ಯಂದಿನ (14 ಕಾಂಡಗಳು) ಮತ್ತು ಕಾಣ್ವ (17 ಕಾಂಡಗಳು) ಎಂಬೆರಡು ಶಾಖೆಗಳಿವೆ. ಇವೆರಡಕ್ಕೂ ಅಲ್ಲಲ್ಲಿ ವಿಷಯಗಳಲ್ಲಿ ಭೇಧವಿದೆ. ಮಾಧ್ಯಂದಿನ ಶಾಖೆಯೇ ಹೆಚ್ಚು ಪ್ರಚಲಿವಾಗಿರುವುದನ್ನು. ಈ ಬ್ರಾಹ್ಮಣ ಬ್ರಾಹ್ಮಣದಲ್ಲಿರಬಹುದಾದ ಎಲ್ಲ ವಿಷಯಗಳನ್ನು ಒಳಗೊಂಡಿದೆ ಎನ್ನಬಹುದು. ಸಾಮವೇದದ ತಾಂಡ್ಯಶಾಖೆಗೆ 25 ಅಧ್ಯಾಯಗಳುಳ್ಳ ಪಂಚವಿಂಶ ಅಥವಾ ತಾಂಡ್ಯಮಹಾಬ್ರಾಹ್ಮಣವೂ ತಲವಕಾರ ಅಥವಾ ಜೈಮಿನೀಯ ಶಾಖೆಗೆ ಜೈಮಿನೀಯ ಬ್ರಾಹ್ಮಣವೂ ಸೇರಿವೆ. ಇವು ಸೋಮುಯಾಗಗಳಲ್ಲಿ ಬರುವ ಸಾಮಗಳನ್ನೂ ತತ್ಸಂಬಧ್ದ ವಿಷಯಗಳನ್ನೂ ವಿವರಿಸುತ್ತವೆ. ಈ ಬ್ರಾಹ್ಮಣಗಳಲ್ಲಿ ಐತಿಹಾಸಿಕ ದೃಷ್ಟಿಯಿಂದ ಉಪಯುಕ್ತವಾದ ಅನೇಕ ವಿಷಯಗಳಿವೆ. ಇವಲ್ಲದೆ ಷಡ್ವಿಂಶ ಬ್ರಾಹ್ಮಣ, ಮಂತ್ರ ಬ್ರಾಹ್ಮಣ, ದೈವತ ಬ್ರಾಹ್ಮಣ, ಆರ್ಷೇಯ ಬ್ರಾಹ್ಮಣ, ಸಾಮ ವಿಧಾನ ಬ್ರಾಹ್ಮಣ, ಉಪನಿಷದ್ ಬ್ರಾಹ್ಮಣ, ವಂಶಬ್ರಾಹ್ಮಣ- ಇವು ಸಾಮವೇದೀಯ ಬ್ರಾಹ್ಮಣಗಳು. ಷಡ್ವಿಂಶ ಮುಂದುವರಿದ ಗ್ರಂಥವಾಗಿದೆ. ಇತರ ಬ್ರಾಹ್ಮಣಗಳು ಯಜ್ಞಕ್ಕೆ ಸಂಬಂಧಿಸಿದವಾಗಿದ್ದರೂ ಅವು ಸಾಧಾರಣ ಬ್ರಾಹ್ಮಣ ವಿಷಯಗಳ ಎಲ್ಲೆಯನ್ನು ಮೀರಿದ ಹಲವು ವಿಷಯಗಳನ್ನು ಚರ್ಚಿಸುತ್ತವೆ. ಅಥರ್ವಣ ವೇದಕ್ಕೆ ಸೇರಿದುದು ಗೋಪಥ ಬ್ರಾಹ್ಮಣವೊಂದೇ. ಇದು ಪೂರ್ವ ಬ್ರಾಹ್ಮಣ ಮತ್ತು ಉತ್ತರ ಬ್ರಾಹ್ಮಣ ಎಂಬ ಎರಡು ಭಾಗಗಳಿಂದ ಕೂಡಿದೆ. ಮೊದಲಿನದರಲ್ಲಿ ಐದು ಪ್ರಪಾಠಕಗಳಿವೆ. ಇದರಲ್ಲಿ ಬರುವ ವಿಷಯಗಳು ಸ್ಥೂಲವಾಗಿ-ಸೃಷ್ಟಿಕ್ರಮ ನಿರೂಪಣ, ಪ್ರಣವೋಪನಿಷತ್, ಗಾಯತ್ರೀ, ಉಪನಿಷತ್, ಅಚಮನಕ್ರಿಯೆ, ಉತ್ತರ ಬ್ರಾಹ್ಮಣದಲ್ಲಿ ಆರು ಪ್ರಪಾಠಕಗಳಿವೆ. ಯಜ್ಞಕರ್ಮ ನಿರೂಪಣೆ ದರ್ಶಪೂರ್ಣ ಮಾಸ, ಕಾವ್ಯೇಷ್ಟಿಗಳು, ಚಾತುರ್ಮಾಸ್ಯಗಳು ಇವು ಸ್ಥೂಲವಾಗಿ ಇದರಲ್ಲಿ ಪ್ರತಿವಾದಿತ ವಿಷಯಗಳು. ಈ ಬ್ರಾಹ್ಮಣದ ಬಲುಭಾಗ ಇತರ ಬ್ರಾಹ್ಮಣಗಳ ಮುಖ್ಯವಾಗಿ ಐತರೇಯ ಕೌಷೀತಕೀ ಮತ್ತು ಶತಪಥಗಳಲ್ಲಿಯ ವಿಷಯಗಳ ವಿಸ್ತರಣೆಯಾಗಿದೆ. ಬ್ರಾಹ್ಮಣಸಾಹಿತ್ಯದಲ್ಲಿ ಗೋಪಥ ಬ್ರಾಹ್ಮಣವನ್ನು ಅರ್ವಾಚೀನವೆಂದು ಪರಿಗಣಿಸಲಾಗಿದೆ. (ಎಸ್.ಆರ್.ಎ.)