ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬ್ರೂನೆಲ್, ಇಜಂಬಾರ್ಡ್ ಕಿಂಗ್ಡಮ್

ವಿಕಿಸೋರ್ಸ್ದಿಂದ

ಬ್ರೂನೆಲ್, ಇಜಂಬಾರ್ಡ್ ಕಿಂಗ್‍ಡಮ್ 1806-59. ರೈಲು, ಹಡಗು ಸಂಪರ್ಕಗಳ ವಿಸ್ತರಣೆಗೆ ಕಾರಣನಾದ ಎಂಜಿನಿಯರ್, ಮೊತ್ತಮೊದಲು ಅಟ್ಲಾಂಟಿಕ್ ಸಾಗರ ದಾಟಿದ ಉಗಿಹಡಗಿನ ವಿನ್ಯಾಸಕಾರ. ಖ್ಯಾತ ಎಂಜಿನಿಯರ್ ಮಾರ್ಕ್ ಇಜಂಬಾರ್ಡ್ ಬ್ರೂನೆಲ್ಲನ ಮಗ. ತಂದೆ ಕೈಗೊಂಡ ಥೇಮ್ಸ್ ಸುರಂಗ ಯೋಜನೆಯಲ್ಲಿ ಈತ ಎಂಜಿನಿಯರನಾಗಿದ್ದಾಗ (1825-28) ಒಮ್ಮೆ ನೀರು ಉಕ್ಕಿ ಬಂದುದರಿಂದ ತೀವ್ರ ಅಪಘಾತಕ್ಕೆ ಒಳಗಾದ. ಬ್ರಿಸ್ಟಲ್ ಧಕ್ಕೆಗಳಲ್ಲಿ ಎಂಜಿನಿಯರನಾಗಿದ್ದಾಗ ಬ್ರಿಂಟ್‍ಫರ್ಡ್ ಹೇವನ್, ಪ್ಲಿಮತ್ ಮೊದಲಾದೆಡೆ ಧಕ್ಕೆಗಳ ವಿನ್ಯಾಸ ಕೈಗೊಂಡ.

ಗ್ರೇಡ್ ವೆಸ್ಟರ್ನ್ ರೈಲ್ವೆಯ ಮುಖ್ಯ ಎಂಜಿನಿಯರನಾಗಿ ಬ್ರಾಡ್‍ಗೇಜ್ ಹಳಿ ಹಾದಿಗಳನ್ನು ರೂಢಿಗೆ ತಂದ. ಇದರಿಂದ ರೈಲು ಬಂಡಿಗಳು ಅಧಿಕ ವೇಗದಲ್ಲಿ ಓಡುವಂತಾದುವು. ಮಿಡ್‍ಲೆಂಡ್ಸ್, ಸೌತ್‍ವೇಲ್ಸ್, ಐರ್ಲೆಂಡುಗಳಲ್ಲಿ ಒಂದೂವರೆ ಸಾವಿರ ಕಿಲೊಮೀಟರಿಗಿಂತಲೂ ಹೆಚ್ಚು ಉದ್ದ ರೈಲು ಹಾದಿಗಳನ್ನು ನಿರ್ಮಿಸಿದ. ಆಸ್ಟ್ರೇಲಿಯದ ವಿಕ್ಟೋರಿಯನ್ ರೈಲ್ವೆ ಮತ್ತು ಭಾರತದ ಈಸ್ಟರ್ನ್ ಬೆಂಗಾಲ್ ರೈಲ್ವೆಗಳಿಗೆ ಸಲಹೆಗಾರನಾಗಿದ್ದ.

ಇಜಂಬಾರ್ಡ್ ಕಿಂಗ್‍ಡಮ್ ವಿನ್ಯಾಸ ಮಾಡಿದ ಹಡಗುಗಳು: ಮರದ ಹುಟ್ಟುಗಳಿಂದ ದೂಡಲ್ಪಟ್ಟು ಅಟ್ಲಾಂಟಿಕ್ ಸಾಗರ ಪ್ರಯಾಣ ನಡೆಸುತ್ತಿದ್ದ ಗ್ರೇಟ್ ವೆಸ್ಟರ್ನ್ (1837); ಸ್ಕ್ರೂಪ್ರೊಪೆಲರಿನಿಂದ ಮೊತ್ತಮೊದಲಿಗೆ ನಡೆಸಲ್ಪಟ್ಟ ಮತ್ತು ಕಬ್ಬಿಣದ ಎರಡು ಅಟ್ಟೆ (ಹಲ್) ಇದ್ದ ಗ್ರೇಟ್ ಬ್ರಿಟನ್ (1843); ಕಬ್ಬಿಣದ ಎರಡು ಅಟ್ಟೆಗಳಿದ್ದು ಹುಟ್ಟು ಮತ್ತು ಸ್ಕ್ರೂಗಳಿಂದ ನಡೆಸಲ್ಪಡುತ್ತಿದ್ದು ಅಟ್ಲಾಂಟಿಕ್ ಸಾಗರದುದ್ದಕ್ಕೆ ಮೊತ್ತಮೊದಲು ಕೇಬಲ್ ಹಾಕಿದ ಗ್ರೇಟ್ ಈಸ್ಟರ್ನ್ (1858).

ಹಂಗರ್‍ಪೋರ್ಡ್ ಮತ್ತು ಕ್ಲಿಫ್ಟನುಗಳಲ್ಲಿ ಇಜಂಬಾರ್ಡ್ ತೂಗು ಸೇತುವೆಗಳನ್ನು ಯೋಜಿಸಿದ. ಏವನ್ ಜಾರ್ಜ್ ತೂಗು ಸೇತುವೆಯ ವಿನ್ಯಾಸವೂ ಇವನದೇ. ಸೇತುವೆಗಳಿಗಾಗಿ ಗಟ್ಡಿ ತಳಪಾಯಗಳನ್ನು ಇಳಿಸಲು ಅಡಕವಾದ ವಾಯುವಿಕ ಕೇಸನುಗಳನ್ನು (ಕಂಪ್ರೆಸ್ಡ್ ಏರ್‍ಕೇಸನ್ಸ್) ಉಪಯೋಗಿಸಿದ. ಕ್ರಿಮಿಯನ್ ಯುದ್ಧದಲ್ಲಿ (1854) ಬಳಕೆಗೆ ಬಂದ ತುಫಾಕಿ (ಗನ್) ಶಸ್ತ್ರಭರಿತ ಮಂಜಿಗಳ ಸುಧಾರಣೆ. ಪೂರ್ವಭಾವಿಯಾಗಿ ತಯಾರಿಸಿದ ಭಾಗಗಳಿಂದ ಇಡೀ ಆಸ್ಪತ್ರೆ ಕಟ್ಟಡದ ರಚನೆ ಇವುಗಳಿಗೆಲ್ಲ ಇಜಂಬಾರ್ಡನೇ ಕಾರಣ. (ಎ.ಕೆ.ಬಿ.)