ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಭಾರತದ ಹಬ್ಬಗಳು

ವಿಕಿಸೋರ್ಸ್ದಿಂದ

ಭಾರತದ ಹಬ್ಬಗಳು

ಹಲವಾರು ಜಾತಿ, ಧರ್ಮ, ಪಂಥ, ಸಂಪ್ರದಾಯ, ಆಚಾರ, ಭಾಷೆಗಳಿಂದ ವೈವಿಧ್ಯಗೊಂಡಿರುವ ಭಾರತದಲ್ಲಿ ಹಬ್ಬಗಳೂ ವೈವಿಧ್ಯಮಯವಾಗಿವೆ. ಪ್ರತಿಯೊಂದು ಧರ್ಮದವರೂ ಅನೂಚಾನವಾಗಿ ಬಂದಿರುವ ಹಬ್ಬಗಳನ್ನು ಶ್ರದ್ಧಾಭಕ್ತಿಯಿಂದ ನಿಷ್ಠೆಯಿಂದ ಆಚರಿಸುವ ವಾಡಿಕೆಯಿದೆ. ಕೆಲವಕ್ಕೆ ಧಾರ್ಮಿಕ ಹಿನ್ನೆಲೆಯಿದ್ದರೆ ಮತ್ತೆ ಕೆಲವಕ್ಕೆ ಸಾಂಸ್ಕøತಿಕ ಹಿನ್ನೆಲೆಯುಂಟು. ಭಾರತದ ಪ್ರತಿಯೊಂದು ಭಾಗದಲ್ಲೂ ಒಂದೊಂದು ತೆರನಾದ ಹಬ್ಬಗಳು ಆಚರಣೆಯಲ್ಲಿದೆ. ದೈವಿಕ ಹಾಗೂ ಆಧ್ಯಾತ್ಮಿಕ ಭಾವನೆಯೇ ಈ ಹಬ್ಬಗಳ ಜೀವಾಳ. ಮೂಲತಃ ಈ ಹಬ್ಬಗಳು ವಿಜಯೋತ್ಸವಗಳಾಗಿರಬೇಕು. ದುಷ್ಟಶಕ್ತಿಯನ್ನು ದಮನಮಾಡಿದುದರ ಜ್ಞಾಪಕಾರ್ಥವಾಗಿ ಇವು ಆಚರಣೆಯಲ್ಲಿ ಬಂದಿರಬೇಕು. ಕೆಲವು ಹಬ್ಬಗಳನ್ನು ಸಾಮೂಹಿಕವಾಗಿ ಆಚರಿಸಿದರೆ ಇನ್ನು ಕೆಲವು ಹಬ್ಬಗಳನ್ನು ಕೆಲವೇ ವ್ಯಕ್ತಿಗಳು ಆಚರಿಸುವುದಿದೆ. ಭಾರತದಲ್ಲಿ ನಾನಾ ಧರ್ಮಕ್ಕೆ ಸೇರಿದ ಜನವರ್ಗ ಶತಮಾನಗಳಿಂದ ಬಾಳುವೆ ಮಾಡುತ್ತ ಬಂದಿರುವುದರಿಂದ ಅದರ ಸಾಮಾಜಿಕ ಬದುಕು ವೈವಿಧ್ಯಮಯವಾಗಿರುವಂತೆಯೇ ಅವರ ಸಾಂಸ್ಕøತಿಕ ಜೀವನಕೂಡ ವರ್ಣರಂಜಿತವಾಗಿದೆ. ಮುಖ್ಯವಾಗಿ ಹಿಂದೂ, ಜೈನ, ಬೌದ್ಧ, ಇಸ್ಲಾಂ, ಕ್ರಿಶ್ಚಿಯನ್, ಸಿಖ್, ಜರತುಷ್ಟ್ರ ಧರ್ಮಗಳನ್ನು ಅನುಸರಿಸುವ ಭಾರತದಲ್ಲಿ ಆಯಾ ಧರ್ಮಗಳಿಗೇ ಮೀಸಲಾದ ಹಬ್ಬ ಹರಿದಿನಗಳಿವೆ. ಈ ಹಬ್ಬಗಳನ್ನು ಹಿಂದೂ ಹಬ್ಬಗಳು, ಜೈನ ಹಬ್ಬಗಳು, ಬೌದ್ಧ ಹಬ್ಬಗಳು, ಮುಸ್ಲಿಂ ಹಬ್ಬಗಳು, ಕ್ರೈಸ್ತ ಹಬ್ಬಗಳು ಇತ್ಯಾದಿಯಾಗಿ ಹೆಸರಿಸಬಹುದು. ಇನ್ನು ಕೆಲವು ಹಬ್ಬಗಳು ರಾಷ್ಟ್ರೀಯ ಮಟ್ಟದಲ್ಲಿ ಆಚರಿಸುವಂಥವು. ಅವುಗಳಿಗೆ ಯಾವುದೇ ಧರ್ಮಮತದ ನಂಬಿಕೆಯೂ ಮೂಲವಲ್ಲ. ಇಂಥ ಹಬ್ಬಗಳಲ್ಲಿ ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವ ಸೇರುತ್ತವೆ. ಇನ್ನು ಕೆಲವು ಮಹಾಪುರುಷರ ಜಯಂತಿಗಳು. ಇವು ಕೂಡ ಒಂದು ಬಗೆಯಲ್ಲಿ ರಾಷ್ಟ್ರೀಯ ಹಬ್ಬಗಳೆ. ಇಂಥವುಗಳಲ್ಲಿ ಗಾಂಧಿ ಜಯಂತಿ, ಅಂಬೇಡಕರ್ ಜಯಂತಿ, ಬಸವಜಯಂತಿ, ಮಹಾವೀರ ಜಯಂತಿ, ಶಂಕರ ಜಯಂತಿ ಇತ್ಯಾದಿಗಳನ್ನು ಹೆಸರಿಸಬಹುದು. ಕೆಲವು ಪ್ರದೇಶಕ್ಕೆ ಸೀಮಿತವಾದಂಥ ಹಬ್ಬಗಳು ಕೂಡ ಇವೆ. ಇವನ್ನು ಸ್ಥಳೀಯ ಹಬ್ಬಗಳು ಎಂದು ಕರೆಯಬಹುದು.

ಹಿಂದೂ ಹಬ್ಬಗಳು: ಯುಗಾದಿ, ಸಾಮಾನ್ಯವಾಗಿ ಹಿಂದೂ ಸಮಾಜದ ಎಲ್ಲ ವರ್ಗದವರಿಗೂ ಅನ್ವಯಿಸುವ ದೊಡ್ಡ ಹಬ್ಬವೆನ್ನಬಹುದು. ದಕ್ಷಿಣ ಭಾರತದಲ್ಲಿ ಚಾಂದ್ರಮಾನ ಮತ್ತು ಸೌರಮಾನ ಪದ್ಧತಿಯಂತೆ ನೂತನ ವರ್ಷದ ಆಚರಣೆಯನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಕರ್ನಾಟಕದಲ್ಲಿ ಮತ್ತು ಆಂಧ್ರದಲ್ಲಿ ಚಾಂದ್ರಮಾನ ರೀತ್ಯ ಯುಗಾದಿ ಹಬ್ಬವೆಂಬ ಹೆಸರಿನಲ್ಲಿ ನಡೆಯುತ್ತದೆ. ತಮಿಳುನಾಡಿನಲ್ಲಿ ಸೌರಮಾನ ರೀತ್ಯ ಹದಿನೈದು ದಿವಸಗಳ ವ್ಯತ್ಯಾಸದಲ್ಲಿ ಆಚರಿಸಲಾಗುವುದು. ಮುಸಲ್ಮಾನರು ಮೊಹರಮ್ ದಿನದಂದು ಚಾಂದ್ರಮಾನ ರೀತ್ಯ ಹಿಜರಿಯನ್ನು ಯುಗಾದಿಯಾಗಿ ಆಚರಿಸಿದ ಕ್ರಿಶ್ಚಿಯನ್ನರು ಜನವರಿ ಮೊದಲನೆಯ ತಾರೀಖಿನಂದು ಯುಗಾದಿಯನ್ನು (ನ್ಯೂ ಇಯರ್ಸ್‍ಡೆ.) ಆಚರಿಸುವರು. ಕರ್ನಾಟಕದಲ್ಲಿರುವ ಮಾರವಾಡಿಗಳು ದೀಪಾವಳಿಯ ದಿನ ಯುಗಾದಿಯನ್ನು ಆಚರಿಸುವರು. ಕೇರಳದ ಹಿಂದೂ ಸಂಪ್ರದಾಯದವರು ಓಣಮ್ ಎಂಬ ಹೆಸರಿನಲ್ಲಿ ನೂತನವರ್ಷದ ಹಬ್ಬವನ್ನಾಚರಿಸುವರು. ಸಂತಸದಿಂದ ಆಚರಿಸುವ ಈ ಹಬ್ಬದ ದಿನದಂದು ಪಂಚಾಂಗ ಶ್ರವಣ ಮತ್ತು ಬೇವು-ಬೆಲ್ಲ ತಿನ್ನುವುದು ವಿಶೇಷ ಆಚರಣೆ. ಕರ್ನಾಟಕದ ಕೆಲವು ಸ್ಥಳಗಳಲ್ಲಿ ಯುಗಾದಿಯ ದಿನದಂದು ರೈತರು ಹೊಸದಾಗಿ ಸಿದ್ಧಪಡಿಸಿರುವ ಮರದ ನೇಗಿಲುಗಳನ್ನು ಪೂಜಿಸಿ, ಬಿತ್ತನೆ ಮಾಡುವ ಎಲ್ಲ ಧಾನ್ಯಗಳನ್ನು ಮಾದರಿ ಬೆಳೆಯನ್ನು ಬಿತ್ತಿ ಪೂಜಿಸುತ್ತಾರೆ. ಈ ಮಾದರಿ ಬೆಳೆ ಹುಲುಸಾಗಿ ಬಂದರೆ ಈ ವರ್ಷದ ಬೆಳೆಯೂ ಸಮೃದ್ಧಿ ಎಂಬ ನಂಬಿಕೆಯಿದೆ. ಈ ಸಂಪ್ರದಾಯವನ್ನು ಹೊನ್ನಾರು ಎಂಬ ಹೆಸರಿನಿಂದ ಗುರುತಿಸಲಾಗುತ್ತದೆ.

ರಾಮನವಮಿ: ರಾಮನ ಜನನದ ಮಹಾದಿನವಿದು. ರಾವಣನ ಸಂಹಾರಕ್ಕಾಗಿ ಪರಬ್ರಹ್ಮ ದಾಶರಥಿ ರಾಮನಾಗಿ ಅವತರಿಸಿದನೆಂದು ಈ ದಿನವನ್ನು ಇಂದಿಗೂ ವೈಭವದಿಂದ ಆಚರಿಸುತ್ತಾರೆ. ಪಾನಕ, ಕೋಸಂಬರಿ ಈ ದಿನದ ಪ್ರಾಶಸ್ತ್ಯ. ಒಂದು ವಾರವೋ ಹತ್ತು ದಿನಗಳ ತನಕವೋ ಈ ಹಬ್ಬ ಸತತವಾಗಿ ನಡೆಯುವುದು. ಈ ದಿನಗಳಲ್ಲಿ ರಾಮಾಯಣ ಪಾರಾಯಣ, ಸಂಗೀತ ಸಮಾರಾಧನೆ ನಡೆಯುತ್ತವೆ. ಉತ್ತರ ಪ್ರದೇಶದ ಆಯೋಧ್ಯೆಯಲ್ಲಿ (ರಾಮನ ಜನ್ಮಸ್ಥಳ ಫಿಯಜಾಬಾದ್‍ನಲ್ಲಿದೆ) ಈ ದಿನವನ್ನು ಬಹು ವಿಜೃಂಭಣೆಯಿಂದ ಆಚರಿಸುವರು. ಅಲ್ಲಿಯ ಸರಯೂ ನದಿಯಲ್ಲಿ ಸಾವಿರಾರು ಜನ ಅಂದು ತೀರ್ಥಸ್ನಾನಮಾಡುವರು.

ವರಮಹಾಲಕ್ಷ್ಮಿ ವ್ರತ: ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿಯನ್ನು ಶಾಸ್ತ್ರೋಕ್ತವಾಗಿ ಪೂಜಿಸಲಾಗುವ ಹಬ್ಬ; ಮುಖ್ಯವಾಗಿ ಕರ್ನಾಟಕ ರಾಜ್ಯದಲ್ಲಿ ಪ್ರಚಲಿತವಿದೆ. ಕೃಷ್ಣಜಯಂತಿ: ಇದು ಕೃಷ್ಣನ ಜನ್ಮದಿನವೆಂದು ನಂಬಿಕೆ. ಗೋಕುಲಾಷ್ಟಮಿ ಎಂದೂ ಕರೆಯುತ್ತಾರೆ. ವಿಷ್ಣುವಿನ ಅವತಾರಗಳಲ್ಲೊಂದಾದ ಕೃಷ್ಣ ದುಷ್ಟಶಿಕ್ಷಣ, ಶಿಷ್ಟ ಪರಿಪಾಲನೆಗೋಸ್ಕರ ಜನ್ಮಧಾರಣ ಮಾಡಿದ ಈ ದಿನವನ್ನು ವಿಜೃಂಭಣೆಯಿಂದ ಆಚರಿಸಿ, ಭಕ್ತಿಯಿಂದ ಪೂಜಿಸುವುದುಂಟು. ಅಂದು ಶ್ರೀಕೃಷ್ಣ ಮತ್ತು ಗೋಕುಲದ ಪ್ರತಿಮೆಗಳನ್ನು ಮಣ್ಣಿನಲ್ಲಿ ಮಾಡಿಟ್ಟು, ಷೋಡಶೋಪಚಾರ ಪೂಜೆಯನ್ನು ಮಾಡಿ, ಬಗೆಬಗೆಯ ತಿಂಡಿತಿನಿಸುಗಳನ್ನು ಕೃಷ್ಣನಿಗೆ ನಿವೇದಿಸುತ್ತಾರೆ.

ಗೌರಿಹಬ್ಬ: ಭಾದ್ರಪದ ಶುಕ್ಲ ತದಿಗೆ ಹೆಣ್ಣುಮಕ್ಕಳಿಗೆ ಸಂಭ್ರಮದ ಹಬ್ಬ. ದೊಡ್ಡಗೌರಿ, ಸ್ವರ್ಣಗೌರಿ ಮುಂತಾದ ಹೆಸರಿನಲ್ಲಿ ಪ್ರಸಿದ್ಧವಿದೆ. ಅಂದು ಗೌರಿಯ ಪ್ರತಿಮೆಯನ್ನೊ ಪ್ರತಿಕೃತಿಯನ್ನೊ ಷೋಡಶೋಪಚಾರಗಳಿಂದ ಪೂಜಿಸಿ ವ್ರತಕಥೆಯನ್ನು ಕೇಳುತ್ತಾರೆ ಮತ್ತು ಮೊರದ ಬಾಗಿನ ಕೊಡುತ್ತಾರೆ. ಈ ಹಬ್ಬ ಕರ್ನಾಟಕದಲ್ಲಿ ಹೆಚ್ಚು ಪ್ರಚಲಿತವಿದೆ.

ಗಣೇಶ ಚರ್ತುರ್ಥಿ: ವಿಘ್ನನಿವಾರಕ ವಿನಾಯಕನ ಹಬ್ಬ. ವಿಧಾನೋಕ್ತವಾಗಿ ಭಾದ್ರಪದ ಚೌತಿಯಂದು ಗಣೇಶನನ್ನು ಪೂಜಿಸಲಾಗುವುದು. ಅಂದೇ ಅಥವಾ ಒಂದೆರಡು ದಿನಗಳ ತರುವಾಯ ಶುಭ ದಿನದಂದು ಬಾವಿಯಲ್ಲೋ ಕೆರೆಕೊಳದಲ್ಲೋ ಗಣೇಶನ ವಿಗ್ರಹವನ್ನು ವಿಸರ್ಜಿಸಲಾಗುವುದು. ಈ ಹಬ್ಬದಂದು ಕಡುಬು ವಿಶೇಷ ಭಕ್ಷ್ಯ. ಈ ಹಬ್ಬದ ದಿನ ಜೌತಿ ಚಂದ್ರನನ್ನು ನೋಡಬಾರದೆಂದೂ ನೋಡಿದರೆ ಯಾವುದಾದರೂ ಅಪರಾಧದಲ್ಲಿ ಸಿಲುಕಬೇಕಾಗಬಹುದೆಂದೂ ನಂಬಿಕೆಯಿದೆ. ಅಕಸ್ಮಾತ್ ನೋಡಿದರೆ ಶಮಂತಕೋಪಾಖ್ಯಾನ ಕೇಳಬೇಕೆಂದು ವಿಧಿ. ಈ ಹಬ್ಬದ ಅಂಗವಾಗಿ ಈಚೀಚೆಗೆ ಸಂಗೀತ ನಾಟಕ ಇತ್ಯಾದಿ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನಡೆಸುವ ಪರಿಪಾಟ ನಡೆದುಬಂದಿದೆ. ಮಹಾರಾಷ್ಟ್ರ ರಾಜ್ಯದಲ್ಲಿ ಕೂಡ ಈ ಹಬ್ಬಕ್ಕೆ ಅಗ್ರಸ್ಥಾನ ದೊರಕಿದೆ. ಹಿಂದೂ ಸಮಾಜದ ಸಂಘಟನೆಯೇ ಮುಖ್ಯ ಗುರಿಯಾಗಿದ್ದು ಈ ಹಬ್ಬಕ್ಕೆ ಹೊಸ ರೂಪವನ್ನೇ ಅಲ್ಲಿ ಕೊಡಲಾಗಿದೆ. ಮಹಾರಾಷ್ಟ್ರದ ಅದ್ವಿತೀಯ ನಾಯಕರಾಗಿದ್ದ ಲೋಕಮಾನ್ಯ ಟಿಳಕರು ಈ ನವೀನ ವಿಧಾನವನ್ನು ಹುಟ್ಟುಹಾಕಿದ ನೇತಾರರು.

ದಸರಾ: ದುಷ್ಟಶಕ್ತಿಯ ಮೇಲೆ ಶಿಷ್ಟಶಕ್ತಿಯ ವಿಜಯದ ಸಂಕೇತವಾಗಿ ಈ ಹಬ್ಬವನ್ನು ಆಚರಿಸಲಾಗುವುದು. ಕರ್ನಾಟಕದಲ್ಲಿ ಇದನ್ನು ನವರಾತ್ರಿ, ನಾಡಹಬ್ಬ ಎಂದು ಕರೆದರೆ ಉತ್ತರ ಭಾರತದಲ್ಲಿ ರಾಮಲೀಲಾ, ಬಂಗಾಲದಲ್ಲಿ ದುರ್ಗಾಪೂಜೆ ಎನ್ನುವರು. ಆಶ್ವಯುಜ ಪಾಡ್ಯದಿಂದ ದಶಮಿ ತನಕ ಹತ್ತುದಿನಗಳ ಕಾಲ ಆಚರಿಸಲಾಗುವ ಈ ಹಬ್ಬಕ್ಕೆ ಪುರಾಣದ ಹಿನ್ನೆಲೆಯಿದೆ. ಮಹಾಭಾರತದ ಪಾಂಡವರ ವನವಾಸ ಹಾಗೂ ದಿಗ್ವಿಜಯದ ಸಂಕೇತವಾಗಿ ದಕ್ಷಿಣದಲ್ಲಿ ಗಮನಿಸಿದರೆ, ಉತ್ತರದಲ್ಲಿ ರಾಮನ ಕಥೆಗೆ ಅನ್ವಯಿಸಿ, ರಾಕ್ಷಸರನ್ನು ಸಂಹಾರ ಮಾಡಿ, ರಾವಣನ ಮೇಲೆ ವಿಜಯ ಸಾಧಿಸಿದ ಪ್ರಸಂಗಕ್ಕೆ ಹೊಂದಿಸಿಕೊಂಡು ಕೆಲವು ದಿವಸಗಳ ತನಕ ಸಂಭ್ರಮದಿಂದ ಆಚರಿಸುವ ಪರಿಪಾಟವಿದೆ. ಬಂಗಾಲದಲ್ಲಿ ಶಕ್ತಿಪೂಜೆ ಪ್ರಧಾನವಾಗಿದ್ದು, ಈ ದಿನಗಳನ್ನು ಬಲು ಕಳಕಳಿಯಿಂದ ಅಲ್ಲಿಯ ಜನ ಆಚರಿಸುವರು. ದಕ್ಷಿಣದಲ್ಲಿಯೂ ಈ ದಿನಗಳಲ್ಲಿ ದುರ್ಗಾಪೂಜೆ ಉಂಟು. ಬೊಂಬೆಗಳನ್ನು ಕೂರಿಸುವುದು, ಹೆಣ್ಣುಮಕ್ಕಳು ಕೋಲಾಟ, ಕುಣಿತ ಮುಂತಾದವುಗಳಿಂದ ಸಂತೋಷ ಪ್ರದರ್ಶಿಸುವುದು ನಡೆದುಬಂದಿರುವ ಪದ್ಧತಿ. ಬಂಗಾಳದಲ್ಲಿರುವಂತೆ ನೆಂಟರಿಷ್ಟರ ಸಮಾಗಮ. ಬಂಧುತ್ವದ ಬಲಪಡುವಿಕೆ ಸಹ ಈ ಹಬ್ಬದ ಒಂದು ಮುಖ್ಯ ಆಚರಣೆ. ದಕ್ಷಿಣದಲ್ಲಿ ಅನೂಚಾನವಾಗಿ ಬಂದಿರುವ ಸಂಪ್ರದಾಯದಂತೆ ಹಬ್ಬಕ್ಕೆ ಮಹಾಭಾರತದ ಹಿನ್ನೆಲೆಯನ್ನು ಕೊಡಲಾಗಿದೆ. ಪಾಂಡವರು ಅಜ್ಞಾತವಾಸದಲ್ಲಿದ್ದಾಗ ತಮ್ಮ ಶಸ್ತ್ರಾಸ್ತ್ರಗಳನ್ನು ಶಮೀವೃಕ್ಷದಲ್ಲಿ ಬಚ್ಚಿಟ್ಟು ಅಜ್ಞಾತವಾಸ ಮುಗಿದ ಮೇಲೆ ಶಸ್ತ್ರಾಸ್ತ್ರಗಳನ್ನು ಹೊಂದಿ ಕೌರವರನ್ನು ನಾಶಗೊಳಿಸಿ ಮಹಾವಿಜಯ ಸಾಧಿಸಿದ ಸ್ವರೂಪವನ್ನು ಈ ಹಬ್ಬದಲ್ಲಿ ಚಿತ್ರಿಸಲಾಗಿದೆ. ವಿಜಯದ ಸುದಿನವೇ ವಿಜಯ ದಶಮಿ. ಶಸ್ತ್ರಾಸ್ತ್ರಗಳಿಗೆ ಆಶ್ರಯವಿತ್ತಿದ್ದ ಶಮಿ ವೃಕ್ಷಕ್ಕೆ ಅಂದು ಪೂಜೆ ಸಲ್ಲಿಸುವುದು ಪವಿತ್ರ ಭಾವನೆಯ ಸಂಕೇತ. ದಸರಾ ಹಬ್ಬಕ್ಕೆ ಮೈಸೂರು ಖ್ಯಾತಿವೆತ್ತ ನಾಡಾಗಿದೆ. ಇಲ್ಲಿಯ ಹಬ್ಬದ ವೈಖರಿ ಪ್ರಪಂಚ ವಿಖ್ಯಾತವಾದುದು.

(ನೋಡಿ- ದಸರಾ) ದೀಪಾವಳಿ: ಇದನ್ನು ದೀಪಾವಳಿ ಹಬ್ಬವೆಂದೂ ಕರೆಯಲಾಗುತ್ತಿದ್ದ. ನರಕ ಚತುರ್ದುಶಿ ಬೆಳಕಿನ ಹಬ್ಬ. ಭಾರತಾದ್ಯಂತ ಆಚರಿಸಲ್ಪಡುತ್ತದೆ. ಕೃಷ್ಣ ನರಕಾಸುರನನ್ನು ಕೊಂದ ಲೋಕಕ್ಕೆ ಕಲ್ಯಾಣ ಉಂಟುಮಾಡಿದುದರ ಮುನ್ನಲೆಯಲ್ಲಿ ಈ ಹಬ್ಬದ ಆಚರಣೆ ಜರುಗುತ್ತದೆ. ಅಂದು ಮನೆಗಳನ್ನು ದೀಪಗಳಿಂದ ಅಲಂಕರಿಸುವರು. ಪಟಾಕಿ, ಬಾಣಬಿರುಸು ಸುಡುವುದು ಈ ಹಬ್ಬದ ಪ್ರಧಾನ ಆಕರ್ಷಣೆ. ಜೈನರು ಕೂಡ ಇದೇ ಸಂದರ್ಭದಲ್ಲಿ ಲಕ್ಷೀ ಪೂಜೆಯೊಂದಿಗೆ ದೀಪಾವಳಿ ಆಚರಿಸುವ ವಾಡಿಕೆಯಿದೆ.

ಹೋಳಿ: ವಸಂತಮಾಸದ ಒಂದು ಹಬ್ಬ. ಫೆಬ್ರುವರಿ-ಮಾರ್ಚ್ ತಿಂಗಳಲ್ಲಿ ನಡೆಯುತ್ತದೆ. ದಕ್ಷಿಣದಲ್ಲಿ ಇದನ್ನು ಕಾಮನಹಬ್ಬ, ಕಾಮದಹನ ಎಂದು ಕರೆಯುವುದುಂಟು. ಬಡವರು ಬಲ್ಲಿದವರು ಎಂಬ ಭೇದಭಾವವಿಲ್ಲದೆ ಎಲ್ಲರೂ ಏಕತ್ರರಾಗಿ ಆಚರಿಸುವ ಸಂಭ್ರಮದ ಹಬ್ಬವಿದು. ಅಂದು ರಂಗುರಂಗಿನ ನೀರನ್ನು ಪಿಚಕಾರಿಗಳ ಮೂಲಕ ಪರಸ್ಪರ ಎರಚಾಡುವುದು, ಕುಂಕುಮ ಧೂಳನ್ನು ತೂರಾಡುವುದು ಮೊದಲಾದ ವಿನೋದಮಯ ಆಚರಣೆಗಳಿರುತ್ತವೆ.

ಶಿವರಾತ್ರಿ: ಶಿವನನ್ನು ಆರಾಧಿಸುವ ಹಬ್ಬ. ಫೆಬ್ರುವರಿ-ಮಾರ್ಚ್ ತಿಂಗಳಲ್ಲಿ ನಡೆಯುತ್ತದೆ. ಭಕ್ತಾದಿಗಳು ಇಡೀ ದಿನ ಉಪವಾಸದಿಂದಿದ್ದು, ಶಿವ ದೇವಾಲಯಗಳನ್ನು ಸಂದರ್ಶಿಸಿ, ಪೂಜಿಸಿ, ರಾತ್ರಿಯನ್ನು ಜಾಗರಣೆಯಲ್ಲಿ ಶಿವ ಧ್ಯಾನ ಮಾಡಿ ಕಳೆಯುವರು. ಮರುದಿನ ಹಬ್ಬ ಮಾಡುವರು. ಶಿವಪುಣ್ಯ ಕ್ಷೇತ್ರಗಳಲ್ಲಿ ಇದರ ಆಚರಣೆ ವೈಶಿಷ್ಟ್ಯಪೂರ್ಣವಾಗಿರುತ್ತದೆ. ಮುಖ್ಯವಾಗಿ ವಾರಣಾಸಿಯಲ್ಲಿ (ಕಾಶಿ) ಇದರ ಸಂಭ್ರಮ ಹೆಚ್ಚು. ಶಿವರಾತ್ರಿ ಹಬ್ಬ ಆಚರಿಸಲು ಅನೇಕರು ಇಲ್ಲಿಗೆ ಪ್ರಯಾಣಮಾಡುವರು. ಇದೇ ಬಗೆಯಲ್ಲಿ ಆಂಧ್ರದಲ್ಲಿರುವ ಶ್ರೀಶೈಲವೂ ಶೈವ ಮಹಾಕ್ಷೇತ್ರ. ಇದೇ ಶಿವರಾತ್ರಿಯಂದು ವಿಶೇಷ ಪೂಜೆ ಪುನಸ್ಕಾರಗಳು ನಡೆಯುತ್ತವೆ. ಇನ್ನು ಕೆಲವು ಸ್ಥಳಗಳಲ್ಲಿ ಜಾತ್ರೆ, ರಥೋತ್ಸವಗಳೂ ನಡೆಯುವುದುಂಟು. ಕರ್ನಾಟಕದಲ್ಲಿ ವೀರಶೈವರಿಗೆ ಇದು ವಿಶಿಷ್ಟವಾದ ಹಬ್ಬ.

ಸಂಕ್ರಾಂತಿ: ಜನವರಿ ತಿಂಗಳಿನಲ್ಲಿ ಆಚರಿಸಲಾಗುವ ಒಂದು ಸುಗ್ಗಿ ಹಬ್ಬ. ತಮಿಳುನಾಡಿನಲ್ಲಿ ಇದಕ್ಕೆ ಪೊಂಗಲ್ ಎಂದು ಕರೆಯುವರು. ಅಸ್ಸಾಮ್ ಪ್ರಾಂತದಲ್ಲಿಯೂ ಈ ಹಬ್ಬವನ್ನು ಆಚರಿಸುವರು. ಒರಿಸ್ಸಾದಲ್ಲಿ ಅಂದು ರಥೋತ್ಸವ ನಡೆಯುತ್ತದೆ. ದಕ್ಷಿಣದಲ್ಲಿ ಈ ಹಬ್ಬವನ್ನು ಮೂರು ದಿನ ಪರ್ಯಂತ ಆಚರಿಸುವರು. ವಿಶೇಷವಾಗಿ ಗ್ರಾಮವಾಸಿಗಳು, ರೈತಾಪಿವರ್ಗದವರು ಬಲು ಉತ್ಸಾಹದಿಂದ ದನಕರುಗಳನ್ನು ತೊಳೆದು ಪೂಜಿಸಿ, ಒಳ್ಳೆ ಗ್ರಾಸವಿಟ್ಟು, ಸಿಂಗರಿಸಿ ಮೆರೆಸುವ ಪದ್ಧತಿಯಿದೆ. ದೃಷ್ಟಿಪರಿಹಾರಕ್ಕೋಸ್ಕರ ಕಿಚ್ಚು ಹಾಯಿಸುವುದು ಹಿಂದಿನ ಕಾಲದಿಂದ ಬಂದ ನಡವಳಿಕೆ. ನೂತನ ವಸ್ತ್ರಗಳನ್ನು ಧರಿಸಿ, ಸುಖ ಭೋಜನ ಮಾಡಿ ಅಂದು ಕಾಲ ಕಳೆಯುವುದುಂಟು. ಈ ಹಬ್ಬದ ಅಂಗವಾಗಿ ಕರ್ನಾಟಕ, ತಮಿಳುನಾಡು ಮತ್ತು ಮಹಾರಾಷ್ಟ್ರಗಳಲ್ಲಿ ಎಳ್ಳು ಬೀರುವ ಸಂಪ್ರದಾಯ ಕೂಡ ರೂಢಿಯಲ್ಲಿದೆ.

ಮುಸ್ಲಿಮ್ ಹಬ್ಬಗಳು: ಇವು ವಿಶೇಷವಾಗಿ ಚಾಂದ್ರಮಾನ ವರ್ಷಕ್ಕನುಗುಣವಾಗಿ ಆಚರಿಸಲ್ಪಡುತ್ತದೆ. ಪ್ರವಾದಿ ಮುಹಮದ್ ಕ್ರಿ. ಪೂ. 622ರಲ್ಲಿ ತನ್ನ ವಾಸಸ್ಥಾನವನ್ನು ಮೆಕ್ಕದಿಂದ ಮದೀನಾಕ್ಕೆ ವರ್ಗಾಯಿಸಿದ. ಹೀಗೆ ವರ್ಗಾಯಿಸಲು ತೆಗೆದುಕೊಂಡ ಕಾಲವನ್ನು ಹಿಜಿರಾ ಎಂಬುದಾಗಿ ಕರೆಯುತ್ತಾರೆ. ಮೊಹರಮ್, ಈದ್ ಎ ಮಿಲಾದ್, ಗೆಹೆರೆ ಹುನ್ ಶರೀಫ್, ಶಬ್ ಎ ಮಿರಾಜ್, ಶಬ್ ಎ ಬರಾತ್, ಶಬ್ ಎ ಕುದರ್, ಈದ್ ಎ ರಂಜಾನ್, ಬಕರೀದ್-ಈ ಎಂಟು ಹಬ್ಬಗಳನ್ನು ವರ್ಷದಲ್ಲಿ ಕಾಲಾನುಸಾರವಾಗಿ ಎಲ್ಲ ವರ್ಗದ ಮುಸ್ಲಿಮರೂ ಆಚರಿಸುತ್ತಾರೆ. ಮೊಹರಮ್: ಈ ಹಬ್ಬದ ನಿಜವಾದ ಹೆಸರು ಹಷಾರಾ ಎಂದು. ಈ ದಿನ ಮೊಹರಮ್ ತಿಂಗಳಿನ ಹತ್ತನೆಯ ದಿನವಾಗಿದ್ದು ಹಿಜಿರಾ ತಿಂಗಳ ಮೊದಲು ಶುಭ ದಿನವಾಗಿರುತ್ತದೆ. ಇದು ಪುಣ್ಯದಿನವೇಂಬುದಾಗಿ ಮುಸ್ಲಿಮರಿಂದ ಭಾವಿಸಲ್ಪಡುತ್ತದೆ. ಪ್ರಪಂಚದ ಧರ್ಮಕಾರ್ಯ ಮಹಿಮಾವಂತ ಮುಸ್ಲಿಮ್ ಗುರುಗಳಿಂದ ಪ್ರಾರಂಭಿಸಲ್ಪಟ್ಟ ದಿನವಿದು. ಗುರುಗಳು ಹಾಕಿದ ಸನ್ಮಾರ್ಗದಲ್ಲಿ ನಡೆಯುವ ಕಾರ್ಯಕ್ರಮಗಳು (ಅವುಗಳಲ್ಲಿ ಉಪವಾಸವ್ರತ ಹೆಚ್ಚುಮಹತ್ತ್ವದ ಉಳ್ಳದ್ದು) ಕಡ್ಡಾಯ. ಎಲ್ಲ ವರ್ಗದ ಮುಸ್ಲಿಮರು ಇದನ್ನು ಶ್ರದ್ಧೆಯಿಂದ ಪರಿಪಾಲಿಸುತ್ತಾರೆ. ಈ ಹಬ್ಬವನ್ನು ಪ್ರವಾದಿ ಮುಹಮದ್ ಸಹ ಆಚರಿಸುತ್ತಿದ್ದನೆಂದು ಪ್ರತೀತಿ. ದುರ್ದೈವದಿಂದ ಮುಹಮದ್‍ನ ಮಗಳ ಮಗನಾದ ಹುಸೇನ್ ಆತನ ಮಕ್ಕಳೂ ಆಪ್ತವರ್ಗವೂ ಕರ್ಬಲಾ ಎಂಬ ಜಾಗದಲ್ಲಿ ತಮ್ಮ ವಿರೋಧಿ ಗುಂಪಾದ ಯಾಜೀದ್ ತಂಡದವರಿಂದ ಅಮಾನುಷವಾಗಿ ಕೊಲ್ಲಲ್ಪಟ್ಟರು. ಈ ಪುಣ್ಯದಿನವನ್ನು ಹುತಾತ್ಮ ಹುಸೇನ್‍ನ ಆತ್ಮಶಾಂತಿಗಾಗಿ ಉಪವಾಸ ದಿನವಾಗಿ ಆಚರಿಸುತ್ತಾರೆ. ಈದ್ ಎ ಮಿಲಾದ್ ಅಥವಾ ಬರಹನ್ ಶರೀಫ್: ಗುರು ಮುಹಮದ್ ಜನ್ಮ ದಿನವಾದ ಮೂರನೆಯ ಚಾಂದ್ರಮಾನ ವರ್ಷದ ರಾಭಿ ಅಲ್ ಅವಾಲ್ ತಿಂಗಳಿನ ಹನ್ನೆರಡನೆಯ ದಿನದಂದು ಈ ಹಬ್ಬವನ್ನು ಆಚರಿಸುತ್ತಾರೆ. ಹಬ್ಬದ ಹಿಂದಿನ ರಾತ್ರಿ ಮುಸ್ಲಿಮರು ತಂಡತಂಡವಾಗಿ ಮಸೀದಿಗಳಲ್ಲಿ ಸೇರಿ ಸಂತಸದಿಂದ ಮುಹಮದ್‍ನ ಧರ್ಮಕಾರ್ಯಗಳನ್ನು ಶ್ಲಾಘಿಸುತ್ತ ಆತ ನೀಡಿದ ಸಂದೇಶಗಳನ್ನು ಸ್ಮರಿಸಿ ಹಾಡಿ ಭಜಿಸುತ್ತಾರೆ.

ಗೆಹೆರೆ ಹುನ್ ಶರೀಫ್: ಈ ಹಬ್ಬವನ್ನು ಚಾಂದ್ರಮಾನವರ್ಷದ ರಾಭಿ ಅಲ್‍ನಾನಿ ತಿಂಗಳ ಹನ್ನೊಂದನೆಯ ದಿನದಂದು ಆಚರಿಸುತ್ತಾರೆ. ಈ ದಿನ ಮೇಧಾವಿ ಕವಿ, ಸುಜ್ಞಾನಿ ಹಾಗೂ ಪಾಮರನಾದ ಸೈಯದ್ ಅಬ್ದುಲ್ ಕದೀರ್ ಅವರ ವಾರ್ಷಿಕ ಸಮಾರಂಭದ ದಿನವಾಗಿದೆ.

ಶಬ್ ಎ ಮಿರಾಜ್: ಈ ಹಬ್ಬ ಚಾದ್ರಮಾನ ವರ್ಷದ ಏಳನೆಯ ತಿಂಗಳ ಇಪ್ಪತ್ತೇಳನೆಯ ರಾತ್ರಿ ಆಚರಿಸಲ್ಪಡುತ್ತದೆ. ಪ್ರವಾದಿ ಮುಹಮದ್ ಸ್ವರ್ಗ ಹಾಗೂ ನರಕವನ್ನು ದೇವದೂತನೊಂದಿಗೆ (ಗೇಬ್ರಿಯಲ್) ಸಂದರ್ಶಿಸಿ ಪರಮಾತ್ಮನ ದಿವ್ಯಜ್ಯೋತಿಯ ಸಾಕ್ಷಾತ್ಕಾರ ಮಾಡಿಕೊಂಡು ಅಪೌರುಷೇಯ ಪವಾಡವನ್ನು ಮಾಡಿದನೆಂದು ನಂಬುವ ಮುಸ್ಲಿಮರು ಈ ದಿನ ರಾತ್ರಿ ಮುಹಮದ್‍ನನ್ನು ಪ್ರಾರ್ಥಿಸುತ್ತಾರೆ.

ಶಬ್ ಎ ಬರಾತ್: ಈ ಹಬ್ಬ ಚಾಂದ್ರಮಾನ ವರ್ಷದ ಎಂಟನೆಯ ತಿಂಗಳ ಹದಿನೈದನೆಯ ರಾತ್ರಿ ಆಚರಿಸಲ್ಪಡುತ್ತದೆ. ಈ ದಿನದಂದು ಮುಸ್ಲಿಮರು ತಮ್ಮ ಬಂಧುಗಳ ಮನೆಗೆ ಭೇಟಿ ನೀಡಿ ಒಬ್ಬರನ್ನೊಬ್ಬರು ಆಲಂಗಿಸಿ, ಹಿಂದಿನ ಸತ್ಯಸಂಗತಿ ಹಾಗೂ ಧರ್ಮಗಳನ್ನು ನೆನೆಸಿಕೊಂಡು ಹಿರಿಯರಿಗೆ ತಮ್ಮ ಗೌರವ ಸಲ್ಲಿಸುತ್ತಾರೆ. ತಮ್ಮ ಪಾಪವನ್ನು ಹೋಗಲಾಡಿಸಿಕೊಳ್ಳಲು ಮತ್ತು ಉತ್ತಮ ಮಾರ್ಗದರ್ಶನಕ್ಕಾಗಿ, ಶಾರೀರಿಕ ಚೇತನಕ್ಕಾಗಿ ಖಬರಸ್ಥಾನಕ್ಕೆ (ಶ್ಮಶಾನ) ಹೋಗಿ ದಿವಂಗತರಾದ ಸಂತ ಹಾಗೂ ಸಾಮಾನ್ಯ ವ್ಯಕ್ತಿಗಳ ಮೋಕ್ಷಕ್ಕಾಗಿ ಪ್ರಾರ್ಥಿಸುತ್ತಾರೆ. ಶಬ್ ಎ ಕುದರ್: ಈ ಹಬ್ಬ ರಂಜಾನ್ ಉಪವಾಸ ದಿನಗಳಲ್ಲಿ ಅತಿ ಮುಖ್ಯವಾದ ರಾತ್ರಿ ಎಂಬುದಾಗಿ ಮುಸ್ಲಿಮರು ಪರಿಗಣಿಸಿದ್ದಾರೆ. ಇದನ್ನು ಚಾಂದ್ರಮಾನ ವರ್ಷದ 9ನೆಯ ತಿಂಗಳ 27ನೆಯ ರಾತ್ರಿ ಆಚರಿಸುತ್ತಾರೆ. ದೇವದೂತನಿಂದ ಮುಹಮದ್‍ನಿಗೆ ಕೊರಾನ್ ಪುಣ್ಯಗ್ರಂಥ ಪ್ರಸಾದಿಸಲ್ಪಟ್ಟು ಮುಹಮದ್‍ನನ್ನು ಪ್ರವಾದಿ ಪುರುಷನೆಂದು ಸಾರಲ್ಪಟ್ಟಿತು. ಆಗ ಮುಹಮದ್‍ನಿಗೆ 40 ವರ್ಷ. ಈತನ ಮೂಲಕವೇ ಕೊರಾನ್ ಅವತರಿಸಿ ಜನರಿಗೆ ಮುಟ್ಟಿತು. ಈ ಶಾಂತ ರಾತ್ರಿಯಲ್ಲಿ ವರ್ಷದಲ್ಲಿ ನಡೆದ ಸಿಹಿಕಹಿ ಘಟನೆಗಳು ದೇವರಿಂದಲೇ ತೀರ್ಮಾನಿಸಲ್ಪಡುತ್ತವೆ ಎಂದು ನಂಬಿ ಇಡೀ ರಾತ್ರಿ ಪ್ರಾರ್ಥನೆ ಸಲ್ಲಿಸಲಾಗುತ್ತದೆ.

ಈದ್ ಎ ರಂಜಾನ್: ಮೊಹರಮ್ ಹಬ್ಬವನ್ನು ಬಿಟ್ಟರೆ ಇದು ಅತಿ ಮುಖ್ಯವಾದದ್ದು. ಈ ಹಬ್ಬ ರಂಜಾನ್ ತಿಂಗಳ ಮುಕ್ತಾಯದೊಡನೆ ಬರುವ ಶವ್ವಲ್ ತಿಂಗಳ ಮೊದಲ ದಿನವಾಗಿರುತ್ತದೆ. ರಂಜಾನ್ ತಿಂಗಳಲ್ಲಿ ದಿನಕ್ಕೊಮ್ಮೆ ಕೊರಾನ್ ಪಠಿಸುವುದು ಮುಸ್ಲಿಮ್ ಸಂಪ್ರದಾಯದಲ್ಲಿ ಕಡ್ಡಾಯ. ಉಪವಾಸವಿರುವುದು ಕ್ರಮ. ಈ ತಿಂಗಳಲ್ಲಿ ಕೊರಾನಿನ ಮಹತ್ತ್ವವನ್ನು ಪ್ರಚಾರಪಡಿಸುವುದು, ಪೂಜಿಸುವುದು ಮುಂತಾದ ಕಾರ್ಯಕ್ರಮಗಳು ಮುಗಿದ ಅನಂತರ ಮುಸ್ಲಿಮರು ನಿರ್ದಿಷ್ಟ ಜಾಗದಲ್ಲಿ ಒಂದಾಗಿ ಸೇರುತ್ತಾರೆ. ಈ ಜಾಗಕ್ಕೆ ಈದ್-ಎ-ಗಾಹ್ ಎಂಬುದಾಗಿ ಕರೆಯುತ್ತಾರೆ. ಈ ಹಬ್ಬದ ದಿನ ದೇವರನ್ನು ಒಳಿತಿಗಾಗಿ ಪ್ರಾರ್ಥಿಸುತ್ತಾರೆ.

ಬಕ್ರೀದ್: ಮುಸ್ಲಿಮರ ಇನ್ನೊಂದು ಪ್ರಮುಖ ಹಬ್ಬ. ಈದ್ ಅಲ್ ಆವಾ ಅಥವಾ ಈದ್ ಎ ಖುರ್ಬಾನ್ ಎಂಬುದು ಈ ಹಬ್ಬದ ನಿಜವಾದ ಹೆಸರು. ಪ್ರವಾದಿ ಇಬ್ರಾಹಿಮ್ ದೇವರಿಂದ ಸತ್ತ್ವಪರೀಕ್ಷೆಗೆ ಗುರಿಯಾಗುತ್ತಾನೆ. ಅವನ ಸ್ವಂತ ಮಗ ಇಸ್ಮಾಯಿಲ್‍ನನ್ನು ಬಲಿಕೊಡುವ ಪ್ರಸಂಗ ಒದಗಿದಾಗ ಅಳುಕದೆ ಬಲಿದಾನಕ್ಕೆ ಸಿದ್ಧನಾಗುತ್ತಾನೆ. ಈ ಘೋರ ಪರಿಸ್ಥಿತಿಯನ್ನು ಸಹಿಸಲಾರದೆ ದೇವರು ತಡೆದು ಉಪಾಯ ಸೂಚಿಸುತ್ತಾನೆ. ಮಗನಿಗೆ ಬದಲಾಗಿ ಕುರಿಮರಿಯನ್ನು ಕಳುಹಿಸುತ್ತಾನೆ. ಈ ಕಾರಣಕ್ಕಾಗಿ ಮುಸ್ಲಿಮರು ಈದ್-ಎ-ಗಾಹ್ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸಿ ಬಲಿಯನ್ನು ಅರ್ಪಿಸಿ ಅದರ ಮಾಂಸವನ್ನು ತಮ್ಮ ಬಂಧುಗಳಿಗೆ ಹಾಗೂ ಬಡಬಗ್ಗರಿಗೆ ನೀಡುತ್ತಾರೆ. ಆ ಮೂಲಕ ತಾವು ಧರ್ಮಕ್ಕಾಗಿ ಯಾವುದೇ ತರಹದ ತ್ಯಾಗಕ್ಕೂ ಸಿದ್ಧ ಎಂಬುದನ್ನು ವ್ಯಕ್ತಪಡಿಸುತ್ತಾರೆ. ಹಾಗೂ ಪಣತೊಡುತ್ತಾರೆ.

ಜೈನ ಹಬ್ಬಗಳು: ಜೈನಧರ್ಮಪಂಥದಲ್ಲಿ, ಇತರ ಧರ್ಮ ಪಂಥಗಳಂತೆಯೇ ಸಾಧಾರಣವಾಗಿ ಪರ್ವಗಳು (ಹಬ್ಬಗಳು) ಧಾರ್ಮಿಕ ಆಚರಣೆಯ ಹಿನ್ನೆಲೆಯುಳ್ಳವಾಗಿವೆ; ಸಾಮಾಜಿಕ ಅಥವಾ ಸಾಮೂಹಿಕ ಕ್ರಿಯಾಕಲಾಪಗಳಲ್ಲಿಯೂ ಹಬ್ಬಗಳ ಅಂಗವಿದೆ. ಪರ್ವದಿನಗಳಲ್ಲಿ ನಿತ್ಯ, ನೈಮಿತ್ತಿಕ ಎಂದು ಎರಡು ವಿಧ. ಪ್ರತಿಯೊಂದು ಮಾಸದ ಬಿದಿಗೆ, ಪಂಚಮಿ, ಅಷ್ಟಮಿ, ಏಕಾದಶಿ ಮತ್ತು ಚತುರ್ದಶಿ ತಿಥಿಗಳು ಪಂಚಪರ್ವಗಳು; ಇವು ನಿತ್ಯಪರ್ವಗಳು. ಈ ತಿಥಿಗಳಲ್ಲಿ ಏಕಭುಕ್ತವೇ ಮುಂತಾದ ವ್ರತಗಳನ್ನು ಕೈಗೊಳ್ಳಲಾಗುವುದು ಅಷ್ಟಮಿ ಮತ್ತು ಚತುರ್ದಶಿ ತಿಥಿಗಳಂದು ಈ ವ್ರತಗಳನ್ನು ಕೈಗೊಳ್ಳುವುದು ವಿಶೇಷವಾಗಿ ರೂಢಿಯಲ್ಲಿದೆ. ಆದರೆ ಈ ಪರ್ವದಿನಗಳನ್ನು ಹಬ್ಬ ಎಂದು ಕರೆಯುವ ರೂಢಿ ಇದ್ದಂತಿಲ್ಲ. ನೈಮಿತ್ತಿಕ ಪರ್ವ ದಿನಗಳನ್ನು ಪ್ರಾಯಿಕವಾಗಿ ಹಬ್ಬವೆಂದು ಆಚರಿಸುವ ರೂಢಿಯಿದೆ. ಇಂಥ ಪರ್ವದಿನಗಳಲ್ಲಿ ಕೆಲವು ಸಾರ್ವತ್ರಿಕ ವ್ಯಾಪ್ತಿಯುಳ್ಳವಾಗಿದ್ದು ಮತ್ತೆ ಕೆಲವು ಪ್ರಾದೇಶಿಕ ವ್ಯಾಪ್ತಿಯುಳ್ಳವಾಗಿವೆ.

ಯುಗಾದಿ: ಈ ಹಬ್ಬ ಜೈನಧರ್ಮ ಸಂಬಂಧಿಯಾದ ನಿಮಿತ್ತವುಳ್ಳ ಹಬ್ಬವೇನಲ್ಲ. ಆದರೆ ಪ್ರದೇಶವೊಂದರ ಜನತೆಯಲ್ಲಿ ಬಾಹುಳ್ಯ ರೂಪದಿಂದ ಆಚರಣೆಯಲ್ಲಿರುವ ಈ ಹಬ್ಬದ ದಿನಕ್ಕೆ ಧಾರ್ಮಿಕ ಆಚಾರವನ್ನು ರೂಢಿಸಿ ಆಚರಣೆಯಲ್ಲಿ ತಂದುಕೊಳ್ಳಲಾಗಿದೆ. ಹಬ್ಬದ ಹಿಂದಿನ ರಾತ್ರಿಯಲ್ಲಿ ಗೃಹಸ್ಥ ಶುಚಿರ್ಭೂತನಾಗಿ ತನ್ನ ಮನೆಯಲ್ಲಿ ಆದಿಜಿನನಾದ ವೃಷಭತೀರ್ಥಂಕರನ ಪ್ರತಿಕೃತಿಯಾಗಿ ಕಲಶ ಸ್ಥಾಪನೆ ಮಾಡುತ್ತಾನೆ. ಹಬ್ಬದಂದು ಸೂರ್ಯೋದಯವಾಗುವ ಮುನ್ನವೇ ಎದ್ದು ಆ ಕಲಶದ ಬಳಿ ದೀಪ ದರ್ಶನಮಾಡಿ ಫಲ ಅರ್ಪಿಸುತ್ತಾನೆ. ಇದಕ್ಕೆ ಶ್ರೀಮುಖದರ್ಶನವೆನ್ನುವರು. ಅನಂತರ ಸ್ನಾನ, ಜಿನದರ್ಶನ ಮತ್ತು ಸುಕೃತ ಕಾರ್ಯಾಚರಣೆ ಇರುತ್ತವೆ.

ಮಹಾವೀರ ಜಯಂತಿ: ಮಹಾವೀರನ ಹುಟ್ಟುದಿನವಾದ ಚೈತ್ರ ಶುಕ್ಲ ತ್ರಯೋದಶಿಯಂದು ಪ್ರತಿವರ್ಷ ಆಚರಿಸುವ ಹಬ್ಬ. ಅಂದು ಬಸದಿಗಳಲ್ಲೂ ಮನೆಗಳಲ್ಲೂ ಮಹಾವೀರನಿಗೆ ವಿಶೇಷ ಪೂಜೆ ನಡೆಯುತ್ತದೆ. ದಾನ ಧರ್ಮ, ಮಹಾವೀರ ಚರಿತೆಯ ಸಂಕೀರ್ತನ, ಉತ್ಸವಗಳೂ ನಡೆಯುತ್ತವೆ.

ಅಕ್ಷಯ ತದಿಗೆ: ಇದು ಆದಿತೀರ್ಥಂಕರನಾದ ವೃಷಭನಾಥ ತಪಸ್ವಿಯಾಗಿದ್ದ ಸಮಯದಲ್ಲಿ ಮೊದಲನೆಯ ಆಹಾರದಾನ ಪಡೆದ ನಿಮಿತ್ತದ ಪರ್ವದಿನ. ಮಹಾರಾಜ ಶ್ರೇಯಾಂಸ ತನ್ನ ಅಣ್ಣನೊಡನೆ ಬಂದು ವೃಷಭನಿಗೆ ಕಬ್ಬಿನ ಹಾಲಿನ ರೂಪದಲ್ಲಿ ಆಹಾರ ಕೊಟ್ಟನೆಂದೂ ಆದರಿಂದ ಅವನ ದೇಶದಲ್ಲಿ ಆಹಾರ ಅಕ್ಷಯವಾಯಿತೆಂದೂ ಪ್ರತೀತಿ. ವೃಷಭ ತೀರ್ಥಂಕರನಿಗೆ ಅಂದು ನಡೆದ ಅಭಿಷೇಕದಲ್ಲಿ ಕಬ್ಬಿನ ಹಾಲು ವಿಶೇಷವಸ್ತು. ಮಿಕ್ಕಂತೆ ಗೃಹಸ್ಥತರ ಮನೆಗಳಲ್ಲಿ ದಾನಧರ್ಮ, ವೃಷಭ ಚರಿತೆಯ ಪಠಣ, ಉತ್ಸವ ನಡೆಯುತ್ತವೆ.

ಶ್ರುತ ಪಂಚಮಿ: ನಶಿಸಿ ಹೋಗುತ್ತಿದ್ದ ಷಟ್‍ಖಂಡಾಗಮ ಶ್ರುತವನ್ನು ಪುಷ್ಪದಂತ ಮತ್ತು ಭೂತಬಲಿ ಮುನಿಗಳು ಬರೆಹಕ್ಕೆ ಇಳಿಸಿ ಅದನ್ನು ಪೂಜಿಸಿದ ದಿನವಿದು. ಅಂದು ತಾಡಪತ್ರ ಗ್ರಂಥಗಳನ್ನು ಪೀಠಗಳ ಮೇಲಿರಿಸಿ ಪೂಜಿಸುತ್ತಾರೆ. ನೋಂಪಿವ್ರತದ ಆಚರಣೆಯೂ ರೂಢಿಯಲ್ಲಿದೆ. ಅಧ್ಯಾಪನೆಯ ಅನಂತರ ಅನೇಕರು ವ್ರತವಿಧಿಯನುಸಾರ ಆಗಮಗ್ರಂಥಗಳ ಅನೇಕ ಪ್ರತಿಗಳನ್ನು ಬರೆಯಿಸಿ ಶಾಸ್ತ್ರ ದಾನಮಾಡಿರುವುದುಂಟು. ಏಕಭಕ್ತಾದಿ ವ್ರತಪಾಲನೆ ಶ್ರುತಾರಾಧನೆ ಉಂಟು. ಶ್ವೇತಾಂಬರರರಿಗೆ ಕಾರ್ತಿಕ ಶುದ್ಧ ಪಂಚಮಿ (ಜ್ಞಾನಪಂಚಮಿ) ಹಬ್ಬ.

ಉಪಾಕರ್ಮ: ಶ್ರಾವಣಮಾಸದ ಪೂರ್ಣಿಮೆಯಂದು ಶ್ರವಣ ನಕ್ಷತ್ರವಿರುವಾಗ ರತ್ನತ್ರಯರ ಪ್ರತೀಕವಾಗಿ ಮೂರು ಎಳೆಗಳುಳ್ಳ ಹೊಸ ಜನಿವಾರವನ್ನು ಧರಿಸುವ ಹಬ್ಬವಿದು. ಇದರಿಂದ ಈ ಹಬ್ಬಕ್ಕೆ ಜನಿವಾರದಹಬ್ಬ ಎಂಬ ಹೆಸರೂ ಇದೆ. ಣಮೋಕಾರ ಮಂತ್ರೋಚ್ಚಾರಣೆಯೊಡನೆ ಜಪ ಮಾಡುವುದಿದೆ. ಉತ್ತರ ಭಾರತದಲ್ಲಿ ಈ ಹಬ್ಬದಲ್ಲಿ ರಾಖೀ ಬಂಧನ (ಕೈಗೆ ರಕ್ಷಾಬಂಧನ ಕಟ್ಟುವುದು) ವಾಡಿಕೆಯಲ್ಲಿದೆ.

ವೀರಶಾಸನ ಜಯಂತಿ: ಶ್ರಾವಣ ಬಹುಳ ಪಾಡ್ಯದಲ್ಲಿ ಬರುವ ಈ ಹಬ್ಬ ಮಹಾವೀರನ ಧರ್ಮತೀರ್ಥದ ಉಪದೇಶ ಆರಂಭವಾದುದನ್ನು ನೆನೆವಂಥದ್ದು. ಈ ಕಾರಣದಿಂದ ಇದನ್ನು ಯುಗಾದಿ ಎಂದೂ ಕರೆಯುವುದಿದೆ. ಅಂದು ವಿಶೇಷ ಪೂಜೆ, ಉಪದೇಶ ಪಠಣ ಉಂಟು.

ಗೌರಿಹಬ್ಬ: ಈ ಹಬ್ಬದಲ್ಲಿ ಶ್ರೇಯಾಂಸ ತೀರ್ಥಂಕರನಿಗೆ ಅಭಿಷೇಕ ಪೂಜೆ ಅರ್ಚನಗಳುಂಟು. ಬಳಿಕ ಈ ತೀರ್ಥಂಕರನ ಯಕ್ಷಿಯಾದ ಗೌರಿದೇವಿಗೆ ಷೋಡಷೋಪಚಾರದ ಅರ್ಚನೆ, ಸುಮಂಗಲಿಯರಿಗೆ ಬಾಗಿನ ವಿತರಣೆ, ಗೌರಿ ನೋಂಪಿ ಹೊತ್ತವರಿಗೆ ಏಕ ಭುಕ್ತಾದಿ ನೇಮಗಳುಂಟು.

ನವರಾತ್ರಿ: ಆಶ್ವಯುಜಮಾಸದ ಶುಕ್ಲಪಾಡ್ಯದಿಂದ ದಶಮೀ ತಿಥಿ ತನಕದ ಈ ಹಬ್ಬ ಭರತಚಕ್ರವರ್ತಿಯ ದಿಗ್ವಿಜಯ ಯಾತ್ರೆಯನ್ನು ನೆನಪಿಸುವಂಥದು. ಈ ದಿನಗಳಲ್ಲಿ ದಿನಪೂಜೆಯ ಜೊತೆಗೆ ವಿಶೇಷ ರೀತಿಯಿಂದ ಕುಲದೇವತೆಗಳಾದ ಬ್ರಹ್ಮ, ಯಕ್ಷ, ಜ್ವಾಲಾಮಾಲಿನೀ, ಪದ್ಮಾವತೀ, ಕೂಷ್ಮಾಂಡಿನಿಯೇ ಮುಂತಾದ ಯಕ್ಷ ದೇವತೆಗಳ ಅರ್ಚನೆ, ಉತ್ಸವಗಳು ನಡೆಯುತ್ತವೆ. ಅಷ್ಟಮಿ ಜೈನರಿಗೆ ಜೀವ ದಯಾಷ್ಟಮಿ. ಸೋಂಪಿವ್ರತದ ಆಚರಣೆಯೂ ಇದೆ. ಯಶೋಧರಚರಿತೆಯ ಕಥಾಶ್ರವಣ ಉಂಟು. ನವಮಿಯಂದು ಜಿನಶಾಸನದ ಸಂರಕ್ಷಕರೆಂದು ಮಾನ್ಯತೆ ಪಡೆದಿರುವ ಯಕ್ಷ. ಯಕ್ಷಿ ದೇವತೆಯರ ಆಯುಧಗಳ ಪೂಜೆ, ದಶಮಿಯಂದು ವಿಶೇಷ ಜಿನಪ್ರಜೆ ನಡೆಯುತ್ತದೆ.

ದೀಪಾವಳಿ: ಕಾರ್ತೀಕ ಬಹುಳ ಚತುರ್ದಶಿ ರಾತ್ರಿ ಕೊನೆಯಾಗುತ್ತಿರುವಲ್ಲಿ ಸ್ವಾತಿ ನಕ್ಷತ್ರದಲ್ಲಿ ಮಹಾವೀರ ನಿರ್ವಾಣ ಹೊಂದಿದ. ಶಾಲಿವಾಹನ ಶಕೆಯ ಮಾಸಗಳ ಗಣನೆಯ ಆಧಾರದಂತೆ ಈ ಸಮಯ ಆಶ್ವೀಜ ಬಹುಳ ಚತುರ್ದಶಿ ತಿಥಿ ಕಳೆದ ಬೆಳಗಿನ ಜಾವದೊಡನೆ ಕೂಡಿಬರುತ್ತದೆ. ಸುಮಾರು ಮೂವತ್ತು ವರ್ಷಗಳ ಕಾಲ ತನ್ನ ಜ್ಞಾನಜ್ಯೋತಿಯಿಂದ ಲೋಕದ ಅಜ್ಞಾನವೆಂಬ ಕತ್ತಲೆಯನ್ನು ನಿವಾರಣೆ ಮಾಡಿದ ಈ ತೀರ್ಥಂಕರನ ಸ್ಮರಣೆಯ ನಿಮಿತ್ತವಾಗಿ ಈ ದಿನ ದೀಪಗಳನ್ನು ಹತ್ತಿಸಿಡುವ ರೂಢಿಯುಂಟು. ಮಿಕ್ಕಂತೆ ವಿಶೇಷ ಪೂಜೆ, ದಾನಧರ್ಮ ಕಾರ್ಯಗಳು ನಡೆಯುತ್ತವೆ.

ಸಂಕ್ರಾಂತಿ: ಇತರ ಹಿಂದೂ ಜನರಂತೆ ಎಳ್ಳುಬೆಲ್ಲ ಬೀರುವುದನ್ನು ಬಿಟ್ಟರ ಈ ಹಬ್ಬದಲ್ಲಿ ಜೈನ ಧಾರ್ಮಿಕ ಆಚರಣೆಗಳು ಏನೂ ಇಲ್ಲ. ಸಮ್ಯಕ್ತ್ವಕ್ಕೆ ಹಾನಿಯಾಗದಿರುವ ಯಾವುದೇ ಲೌಕಿಕ ವಿಧಿಯನ್ನಾಗಲಿ ಶ್ರಾವಕರು ಆಚರಿಸಬಹುದೆಂಬ ಅನುಶಾಸನಕ್ಕೆ ಇದು ಒಂದು ನಿದರ್ಶನ.

ಜಿನರಾಶಿ: ವೃಷಭತೀರ್ಥಂಕರ ಮಾಘಮಾಸ ಬಹುಳ ಚತುರ್ದಶಿಯಂದು ಸೂರ್ಯೋದಯ ಸಮಯದಲ್ಲಿ ನಿರ್ವಾಣ ಹೊಂದಿದ ದಿನ. ಇದನ್ನು ಶಿವರಾತ್ರಿ ಎಂದು ಹೇಳುವುದೂ ಉಂಟು. ಇಲ್ಲಿ ಶಿವ ಎಂದರೆ ಪರಮಮಂಗಲಮುಕ್ತಿ. ಇಂಥ ಶಿವಪದವಿಯನ್ನು ಆದಿಜಿನೇಶ್ವರ ಪಡೆದ ನಿಮಿತ್ತದಿಂದ ಇದು ಶಿವರಾತ್ರಿ ಪರ್ವವೆನ್ನಿಸಿಕೊಂಡಿದೆ. ನಿರ್ವಾಣ ಹೊಂದಿದ ವೃಷಭನಾಥನ ಶರೀರದ ಅವಶೇಷಗಳನ್ನು ದಹನ ಮಾಡಿದುದರ ಪ್ರತೀಕವಾಗಿ ಹೋಮಕಾರ್ಯ ನಡೆಸಿ ವೃಷಭ ಜಿನನ ಬಿಂಬಕ್ಕೆ ಅಭಿಷೇಕಾದಿ ಪೂಜೆ, ಉತ್ಸವ, ಪುರಾಣಶ್ರವಣ, ಸ್ವಾಧ್ಯಾಯ, ಸ್ತೋತ್ರ ಪಠನಾದಿಗಳು ನಡೆಯುತ್ತವೆ.

ಇತರ ಪರ್ವದಿನಗಳು ಮತ್ತು ಸ್ಥಳೀಯ ಹಬ್ಬಗಳು: ಸಾಧಾರಣವಾಗಿ ಜೈನಗೃಹಸ್ಥರು ನೋಂಪಿಗಳನ್ನು ಕೈಗೊಂಡು ವ್ರತಾಚರಣೆ ನಡೆಸುವ ರೂಢಿಯಿದೆ. ಅನೇಕ ವೇಳೆ ನೋಂಪಿ ವಿಧಿವಿಧಾನಗಳನ್ನು ಹಬ್ಬದಂಥ ಸಂಭ್ರಮ ಹಾಗೂ ವಿಜೃಂಭಣೆಯಿಂದ ನಡೆಸುತ್ತಾರೆ. ಅಷಾಢಶುಕ್ಲಪಕ್ಷದಾರಭ್ಯ ಕಾರ್ತೀಕ ಮಾಸದ ತನಕ ಈ ನೋಂಪಿಗಳು ಸಾಲಾಗಿ ಬರುತ್ತವೆ. ಇಂಥ ನೋಂಪಿಗಳಲ್ಲಿ ದಶಲಕ್ಷಣ ಅಥವಾ ಪರ್ಯೂಷಣ, ಅನಂತಚತುರ್ದಶಿ, ಷೋಡಶ ಭಾವನಾ ಪರ್ವಗಳ ನೋಂಪಿಗಳನ್ನು ಮುಖ್ಯವಾಗಿ ಉದಾರಿಸಬಹುದು. ಜೈನಧರ್ಮ ಪಂಥದಲ್ಲಿ ತೀರ್ಥಂಕರರ ಪಂಚಕಲ್ಯಾಣಗಳು ಧಾರ್ಮಿಕ ಆಚರಣೆಯ ಮುಖ್ಯ ನಿಮಿತ್ತಗಳಾಗಿವೆ. ಜೈನವಸತಿ ಬಾಹುಲ್ಯವಿರುವ ಕೆಲವು ಪ್ರಮುಖ ಕ್ಷೇತ್ರಗಳಲ್ಲಿ ವಾರ್ಷಿಕ ಪಂಚಕಲ್ಯಾಣ ಮಹೋತ್ಸವಗಳನ್ನು ನಡೆಸುವ ಪದ್ಧತಿಯಿದೆ. ಈ ಮಹೋತ್ಸವಗಳ ಅಂಗವಾಗಿ ರಥಯಾತ್ರೆ ನಡೆಯುವುದುಂಟು. ಕೆಲವು ಕ್ಷೇತ್ರಗಳಲ್ಲಿ ಅದೇ ವೇಳೆಗೆ ಯಕ್ಷ ಯಕ್ಷಿ ದೇವತೆಗಳ ಆರಾಧನೆಗಳೂ ನಡೆಯುತ್ತವೆ.

ಕ್ರೈಸ್ತಹಬ್ಬಗಳು: ಕ್ರಿಸ್ಮಸ್: ಕ್ರಿಸ್ಮಸ್ ಎಂದರೆ ಯೇಸುಕ್ರಿಸ್ತ ಹುಟ್ಟಿದದಿನ. ಪ್ರತಿವರ್ಷ ಡಿಸೆಂಬರ್ 25ರಂದು ಕ್ರೈಸ್ತರು ಈ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ. ಇದರ ಆಚರಣೆಗಳು ವಿಧರ್ಮೀಯ ಮೂಲಗಳಿಂದ ಪ್ರಭಾವಿತವಾಗಿವೆ. ಅಜೇಯನಾಗಿರುವ ಸೂರ್ಯದೇವನ ಹುಟ್ಟುಹಬ್ಬವನ್ನು ಡಿಸೆಂಬರ್ 25ರಂದು ರೋಮ್‍ನಲ್ಲಿ ಆಚರಿಸುತ್ತಿದ್ದರು. ಅಲ್ಲಿ ಕ್ರೈಸ್ತಧರ್ಮ ಪ್ರತಿಷ್ಠಾಪಿತವಾದ ಮೇಲೆ ಇದೇ ಉತ್ಸವವನ್ನು ಯೇಸುವಿನ ಹುಟ್ಟುಹಬ್ಬವಾಗಿ ಮಾರ್ಪಡಿಸಲಾಯಿತು. ಕ್ರಿಸ್ಮಸ್ ಗಿಡವನ್ನು ಅಲಂಕರಿಸುವ ಪದ್ಧತಿ ಟ್ಯುಟೋನಿಕ್ ಜನಾಂಗದವರ ಮೂಲ್ ಹಬ್ಬ, ಮೂಲ್ ಮರದ ಪದ್ಧತಿಯಿಂದ ಬಂದದ್ದೆನ್ನಲಾಗಿದೆ. ಯೇಸು, ಅವನ ತಾಯಿ ಮರಿಯಾ, ಸಾಕು ತಂದೆ ಜೋಸೆಫ್_ಇವರ ಪುಟ್ಟ ವಿಗ್ರಹಗಳನ್ನು ಜೋಡಿಸಿ ಕ್ರಿಸ್ತ ಜಯಂತಿಯ ದೃಶ್ಯ ಏರ್ಪಡಿಸುವ ಪದ್ಧತಿಯನ್ನು (ಕ್ರಿಸ್ಮಸ್ ಕ್ರಿಬ್; ಗೋದಲಿ ಕೊಟ್ಟಿಗೆ) 13ನೆಯ ಶತಮಾನದಲ್ಲಿ ಅಸಿಸಿಯ ಫ್ರಾನ್ಸಿಸ್ ಎಂಬ ಭಕ್ತ ಇಟಲಿಯಲ್ಲಿ ಜನಪ್ರಿಯಗೊಳಿಸಿದ. ಸಚಿತ ನಿಕಲಸ್ (ಕ್ರಿಸ್ಮಸ್ ತಾತ) ಉಡುಗೊರೆ ಹಂಚುವ ಪದ್ಧತಿ ಅಮೆರಿಕದಲ್ಲಿ ಪ್ರಚಲಿತವಿದೆ. ಇಗರ್ಜಿಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸುವುದು, ಕ್ರಿಸ್ಮಸ್ ಹಾಡುಗಳನ್ನು ಗುಂಪಾಗಿ ಹಾಡುವುದು ಎಲ್ಲ ಕಡೆಯೂ ಉಂಟು.

ಈಸ್ಟರ್ (ಪುನರುತ್ಥಾನದ ಹಬ್ಬ): ಯೇಸುಕ್ರಿಸ್ತ ಶಿಲುಬೆಗೇರಿದ ಮಹಾ ಘಟನೆಯನ್ನು ನೆನಪು ಮಾಡುವ ಈ ಹಬ್ಬ 40 ದಿನಗಳ ಅವಧಿಯದು. ಕ್ರಿಸ್ತನ ಕೊನೆಯ ದಿನಗಳನ್ನು ಧ್ಯಾನಿಸಿ ಜಪಮಾಡುವ ಅವಧಿಯೇ ಪವಿತ್ರವಾರ (ಹೋಲಿ ವಿ ಕ್). ಇದರಲ್ಲಿ ಪವಿತ್ರ ಗುರುವಾರ, ಪವಿತ್ರ ಶುಕ್ರವಾರ, ಪವಿತ್ರ ಶನಿವಾರ ಮಧ್ಯರಾತ್ರಿಯ ಪೂಜೆ ಇದೆ. ಅಂದು ಆಚರಿಸುವ ಕೆಲವು ಆರಾಧನಾಸಾಂಗ್ಯಗಳು ಅರ್ಥಭರಿತವಾದಂಥವು. ಕ್ರಿಸ್ತ ಬೆಳಕು ಎಂಬದನ್ನು ಸೂಚಿಸಲು ಬೆಂಕಿಯನ್ನು ಆಶೀರ್ವದಿಸಲಾಗುತ್ತದೆ. ಆ ಬೆಂಕಿಯಿಂದ ಈಸ್ಟರ್ ಮೇಣದ ಬತ್ತಿಯನ್ನು ಉರಿಸಿ ಪವಿತ್ರಾತ್ಮರ ಹಬ್ಬದ ತನಕ ದೇವಾಲಯದಲ್ಲಿ ಇಡಲಾಗುವುದು. ಇನ್ನೊಂದು ಸಾಂಗ್ಯದಲ್ಲಿ ನೀರನ್ನು ಆಶೀರ್ವದಿಸಲಾಗುತ್ತದೆ. ಈ ನೀರು ಆಧ್ಯಾತ್ಮಿಕ ಜೀವನದ ಬುಗ್ಗೆ ಎಂಬುದನ್ನು ತೋರಿಸುತ್ತದೆ. ಪುನರುತ್ಥಾನ ಎಂದರೆ ಹೊಸ ಬಾಳನ್ನು ಪ್ರಾರಂಭಿಸುವುದು ಎಂದರ್ಥವಿದೆ. ಯೇಸು ಸತ್ತು ಮೂರನೆಯ ದಿನ ಪುನಃ ಜೀವವನ್ನು ಪಡೆದಂತೆ ಪ್ರತಿಯೊಬ್ಬ ಮನುಷ್ಯನೂ ಪುನರುತ್ಥಾನ ಹೊಂದುತ್ತಾನೆಂದು ಕ್ರೈಸ್ತರು ದೃಢವಾಗಿ ನಂಬುತ್ತಾರೆ.

ಕ್ರೈಸ್ತರು, ಹೆಚ್ಚಾಗಿ ರೋಮನ್ ಕ್ಯಾತೊಲಿಕರು, ಕೆಲವು ಸಂತರ ಹಬ್ಬಗಳನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ಪ್ರತಿವರ್ಷ ಸೆಪ್ಟಂಬರ್ 8ರಂದು ಮೇರಿಯ ಜಯಂತಿಯನ್ನು ಆಚರಿಸುತ್ತಾರೆ. ಗೋವ ಮತ್ತು ಮಂಗಳೂರು ಕಡೆ ಇದು ಬಹಳ ಪ್ರಸಿದ್ಧ. ಮಂಗಳೂರಿನ ಕ್ರಿಸ್ತರಿಗೆ ಇದು ಸುಗ್ಗಿಯ ಹಬ್ಬವೂ ಹೌದು. ಆಗಸ್ಟ್ 15ರಂದು ಮೇರಿಯನ್ನು ಮೋಕ್ಷಕ್ಕೆ ಎತ್ತಲ್ಪಟ್ಟ ಹಬ್ಬ ಆಚರಿಸುತ್ತಾರೆ. ಯೇಸುವಿನ ಸಾಕುತಂದೆಯಾದ ಸಚಿತ ಜೋಸೆಫನ ಎರಡು ಹಬ್ಬಗಳನ್ನು ಆಚರಿಸುವ ರೂಢಿ ಇದೆ. ಮಾರ್ಜ್ ತಿಂಗಳ 19ರಿಂದ ಜಾಗತಿಕ ಪಾಲಕ ಎಂದೂ ಮೇ ತಿಂಗಳ 1ರಂದು ಕಾರ್ಮಿಕರ ಪಾಲಕ ಎಂದೂ ಅವನನ್ನು ಗೌರವಿಸಲಾಗುತ್ತದೆ.

ಇನ್ನು ಕೆಲವು ಸಂತರ ಹಬ್ಬಗಳು ಸ್ಥಳೀಯ ಆಚರಣೆಗಷ್ಟೆ ಸೀಮಿತವಾದವು. ಹಿಂದೆ ಮೈಸೂರಿನಲ್ಲಿ ನಡೆಯುತ್ತಿದ್ದ ಸಂತ ಫಿಲೋಮಿನಾ ಅವರ ಹಬ್ಬ ಸಾವಿರಾರು ಯಾತ್ರಾರ್ಥಿಗಳನ್ನು ಆಕರ್ಷಿಸುತ್ತಿತ್ತು. ಆದರೆ 1960ರಲ್ಲ ವ್ಯಾಟಿಕನ್ನಿನಲ್ಲಿ ಆರಾಧನಾ ವಿಧಿಯಲ್ಲಿ ಆದ ಮಾರ್ಪಾಟಿನಿಂದಾಗಿ ಈ ಹಬ್ಬದ ಆಚರಣೆ ನಿಂತುಹೋಯಿತು. 1977ರಿಂದ ಪುನಃ ಆಗಸ್ಟ್ 11ರಂದು ಈ ಹಬ್ಬವನ್ನು ಆಚರಿಸಲಾಗುತ್ತಿದೆ. ಮೈಸೂರು ಜಿಲ್ಲೆಯ ಕೃಷ್ಣರಾಜನಗರದ ಪಕ್ಕದಲ್ಲಿರುವ ಡೋರ್ನಹಳ್ಳಿ ಸಂತ ಆಂತೋಣಿಯ ಪುಣ್ಯಕ್ಷೇತ್ರ. ಇಲ್ಲಿ ಪ್ರತಿವರ್ಷ ಜೂನ್ 13ರಂದು ಹಬ್ಬ ಆಚರಿಸುತ್ತಾರೆ. ಈ ಸಂದರ್ಭದಲ್ಲಿ ಜಾತ್ರೆ ಸೇರುತ್ತದೆ. ಬೆಂಗಳೂರಿನ ಶಿವಾಜಿನಗರದಲ್ಲಿ ಆರೋಗ್ಯಮಾತೆಯ ಹಬ್ಬವನ್ನು ಸೆಪ್ಟಂಬರ್ 8ರಂದು ಆಚರಿಸಲಾಗುತ್ತದೆ. ಅಂತೆಯೇ ಕಾರ್ಕಳದಲ್ಲಿ ಸಂತ ಲಾರೆನ್ಸ್, ದಕ್ಷಿಣ ಕನ್ನಡ ಜಿಲ್ಲೆಯ ಪಕ್ಷಿಕೆರೆಯಲ್ಲಿ ಸಂತ ಚೂದನ ಹಬ್ಬವನ್ನು ಆಚರಿಸುತ್ತಾರೆ. ತಮಿಳುನಾಡಿನಲ್ಲಿ ವೆಲಾಂಗಣಿ ಮಾತೆಯ ಹಬ್ಬ ಲಕ್ಷಾಂತರ ಜನರನ್ನು ಆಕರ್ಷಿಸುತ್ತದೆ. ಅಲ್ಲಿಯ ಪೂಂಡಿಯ ಪುಣ್ಯಕ್ಷೇತ್ರವೂ ಪ್ರಸಿದ್ಧವಾದದು. ಗೋವಾದಲ್ಲಿ ಡಿಸೆಂಬರ್ 3ರಂದು ಸಂತ ಫ್ರಾನ್ಸಿಸ್ ಜೇವಿಯರನ ಹಬ್ಬವನ್ನು ಬಹು ವಿಜೃಂಭಣೆಯಿಂದ ಆಚರಿಸುತ್ತಾರೆ.

ಸ್ಥಳೀಯ ಹಬ್ಬಗಳು. ನವ್‍ರೋಜ್: ಇದು ಕಾಶ್ಮೀರಿ ಹೊಸ ವರ್ಷಾರಂಭದ ದಿನ. ಇಡೀ ಕಾಶ್ಮೀರಾದ್ಯಂತ ಇದನ್ನು ಸಂಭ್ರಮದಿಂದ ಆಚರಿಸುವರು.

ಹೆಮಿಸ್ ಗೋಂಪ ಮೇಳ: ಕಾಶ್ಮೀರದ ಬಾದ್ಧರ ಒಂದು ಹಬ್ಬ. ಜೂನ್ ತಿಂಗಳಿನಲ್ಲಿ ನಡೆಯುತ್ತದೆ. ಲಡಕ್‍ನ ಆತ್ಯಂತ ಪ್ರಾಚಿನ, ಸಂಪದ್ಭರಿತ, ಬೃಹತ್ ಬೌದ್ಧ ಮಠವೊಂದು (ಹೆಮಿಸ್ ಗೋಪ) ಲೇಹ್ ಎಂಬ ಸ್ಥಳದಿಂದ 40 ಕಿಮೀ ದೂರದಲ್ಲಿದೆ. ಇಲ್ಲಿ ಐದನೆಯ ಬೌದ್ಧಮಾಸದ 10ನೆಯ ದಿನ ಮೇಳವೊಂದು ಜರುಗುತ್ತದೆ. ಮೂರು ದಿನಗಳ ಕಾಲ ನಡೆಯುವ ಈ ಮೇಳದಲ್ಲಿ ಬೌದ್ಧಲಾಮಾಗಳು (ಸಂನ್ಯಾಸಿಗಳು) ಮುಖವಾಡಗಳನ್ನು ಧರಿಸಿ ಕುಣಿಯುತ್ತಾರೆ. ಲಾಮಾಮತ ಸ್ಥಾಪಕನಾದ ಪದ್ಮಸಂಭವನ ಜನ್ಮದಿನವಾಗಿ ಈ ದಿನವನ್ನು ಆಚರಿಸುತ್ತಾರೆ.

ಷಾ ಹಮದನ್ ಉರ್ಸ್: ಕಾಶ್ಮೀರದಲ್ಲಿ ಷಾ ಹಮದನ್ ಎಂಬ ಮುಸ್ಲಿಮ್ ಸಂತನ ಹೆಸರಿನಲ್ಲಿ ನಡೆಸುವ ಉತ್ಸವ. ಈತ ಪರ್ಷಿಯದಿಂದ ಸುಮಾರು 14ನೆಯ ಶತಮಾನದಲ್ಲಿ ಕಾಶ್ಮೀರಕ್ಕೆ ಬಂದಿದ್ದನಂತೆ. ಶ್ರೀನಗರದಲ್ಲಿ ಇವನ ಹೆಸರಿನ ದರ್ಗಾ ಇದೆ.

ಕಿಚಿಡಿ ಅಮಾವಾಸ್ಯೆ: ಹಿಂದೂ ಪುರಾಣದ ಪ್ರಕಾರ ಕಾಶ್ಮೀರ ದೇಶ ಯಕ್ಷರ ಆವಾಸಸ್ಥಾನ. ಯಕ್ಷದೇವನನ್ನು ಆ ದಿನ ಆಹ್ವಾನಿಸಿ ತುಪ್ಪ, ಬೇಳೆ ಹಾಗೂ ಅಕ್ಕಿಯಿಂದ ತಯಾರಿಸಿದ `ಕಿಚಿಡಿಯನ್ನು ಸಂತರ್ಪಣೆಮಾಡಿ ಈ ಹಬ್ಬವನ್ನು ಉತ್ತರಭಾರತದಲ್ಲಿ ಆಚರಿಸುತ್ತಾರೆ.

ಲೋಹರಿ: ಹರಿಯಾಣ, ಪಂಜಾಬ್‍ಗಳಲ್ಲಿ ಜನವರಿ ತಿಂಗಳಿನಲ್ಲಿ ಆಚರಿಸಲಾಗುವ ಹಿಂದು ಹಬ್ಬ. ಅಂದು ಮಕ್ಕಳೆಲ್ಲರೂ ಮನೆಮನೆಗೆ ಹೋಗಿ ವಂತಿಗೆ ಸಂಗ್ರಹಿಸಿ ಸಂಜೆಯ ಹೊತ್ತು ಬೆಂಕಿಯ ರಾಶಿಯನ್ನು ಹಾಕುತ್ತಾರೆ. ಜನರೆಲ್ಲ ಸೇರಿ ಜನಪದಗೀತಗಳನ್ನು ಹಾಡುತ್ತ, ವಾದ್ಯಗಳನ್ನು ನುಡಿಸುತ್ತ ಬೆಂಕಿಯ ಸುತ್ತ ಕುಣಿದು ಆನಂದಿಸುತ್ತಾರೆ.

ಜ್ವಾಲಾಮುಖಿ ಜಾತ್ರೆ: ಹಿಮಾಚಲಪ್ರದೇಶದ ಕಾಂಗ್ರಾ ಕಣಿವೆಗಳ ಗುಡ್ಡಗಾಡಿನ ಜನ ಜ್ವಾಲಾಮುಖಿ ದೇವಿಯನ್ನು ಆರಾಧಿಸುವ ಒಂದು ಜಾತ್ರೆ. ಆಕೆಯ ಬಾಯಿಂದ ಚಿಮ್ಮುವ ಜ್ವಾಲೆಯನ್ನು ಈ ಜನ ಭೂದೇವಿಯ ಬಾಯಿಂದ ಚಿಮ್ಮುವ ಪವಿತ್ರಾಗ್ನಿ ಎಂಬ ನಂಬಿಕೆಯಿಂದ ಪೂಜಿಸುತ್ತಾರೆ.

ಕಂಸಮೇಳ: ಕೃಷ್ಣನು ಕಂಸನನ್ನು ಸಂಹರಿಸಿದ ಸಂತೋಷಕ್ಕಾಗಿ ಉತ್ತರಪ್ರದೇಶದ ಮಥುರಾ ಮತ್ತು ಫತೆ ಪುರ್ ಸಿಕ್ರಿಯಲ್ಲಿ ನಡೆಸಲಾಗುವ ಒಂದು ಮೇಳ. ರಾಕ್ಷಸನ ಬೃಹತ್ ಪ್ರತಿಕೃತಿಯನ್ನು ಮಾಡಿ ಮೇಳ ನಡೆಯುವ ಜಾಗದಲ್ಲಿ ನಿಲ್ಲಿಸುವರು. ಕೃಷ್ಣ ಮತ್ತು ಬಲರಾಮನ ವೇಷಹಾಕಿರುವ ಇಬ್ಬರು ಹುಡುಗರನ್ನು ರಥ ಅಥವಾ ಕುದುರೆಯ ಮೇಲೆ ಮೆರವಣಿಗೆಯಲ್ಲಿ ಆ ಸ್ಥಳಕ್ಕೆ ಕರೆತರುವರು. ಅವರಿಬ್ಬರು ಹೂಬಾಣಗಳನ್ನು ಆ ರಾಕ್ಷಸನ ಪ್ರತಿಕೃತಿಯ ಮೇಲೆ ಪ್ರಯೋಗಿಸುವರು. ಕಂಸವಧೆಯಾಯಿತೆಂದು ನಂಬಿ ಜನ ಬಹು ಉತ್ಸಾಹದಲ್ಲಿ ಹಬ್ಬ ಆಚರಿಸುವರು.

ಚಹತ್: ಸೂರ್ಯದೇವನನ್ನು ಪೂಜಿಸುವ ಒಂದು ಹಬ್ಬ. ಇಡೀ ಬಿಹಾರಿನಾದ್ಯಂತ ಈ ಹಬ್ಬವನ್ನು ಅತಿವಿಜೃಂಭಣೆಯಿಂದ ಆಚರಿಸುವರು. ಆರು ದಿನಗಳ ಕಾಲ ಉಪವಾಸಮಾಡಿದ ಅನಂತರ ಸನಿಹದ ನದಿಗೋ ಕೆರೆಗೋ ಹೋಗಿ ಸೂರ್ಯನಿಗೆ ಅಘ್ರ್ಯ ನೀಡಿ ಪ್ರಸಾದ ಸ್ವೀಕರಿಸುವಲ್ಲಿಗೆ ಈ ಹಬ್ಬದ ಆಚರಣೆ ಮುಗಿಯುತ್ತದೆ.

ಭೋಗಲಿ ಬಿಹು: ಅಸ್ಸಾಮಿನ ಒಂದು ಸುಗ್ಗಿ ಹಬ್ಬ. ಜನಪದರು ಬತ್ತದ ಕೊಯ್ಲಿ ಹಾಗೂ ಒಕ್ಕಣೆ ಮುಗಿದ ಅನಂತರ ಕಣಗಳಲ್ಲಿ ರಾತ್ರಿಯ ಹೊತ್ತು ಬೆಂಕಿಹಾಕಿ ಸುತ್ತನೆರೆದು ಕುಣಿದು ಆನಂದಿಸುವರು. ಹಬ್ಬದ ಆಕರ್ಷಣೆಯಾಗಿ ಕೋಣಗಳ ಕಾಳಗವನ್ನು ನಡೆಸುವರು.

ರಾಸಲೀಲೆ: ಅಕ್ಟೋಬರ್-ನವೆಂಬರ್ ತಿಂಗಳಿನಲ್ಲಿ ಕೃಷ್ಣನ ಹೆಸರಿನಲ್ಲಿ ನಡೆಯುವ ಮಣಿಪುರದ ಒಂದು ಹಬ್ಬ. ಮಣಿಪುರಿ ನೃತ್ಯಗಾರರು ಹಬ್ಬದದಿನ ಕೃಷ್ಣನ ಜೀವಿತದ ಅನೇಕ ಸಂದರ್ಭಗಳನ್ನು ನೃತ್ಯದಲ್ಲಿ ಅಭಿನಯಿಸುವರು. ಅಸ್ಸಾಮೀಗಳಿಗೂ ಇದೊಂದು ದೊಡ್ಡಹಬ್ಬ.

ಕರ್ಚಿಪೂಜೆ: ತ್ರಿಪುರದ ರಾಜಧಾನಿ ಅಗರ್ತಲಾದಲ್ಲಿ ಜುಲೈತಿಂಗಳಲ್ಲಿ ನಡೆಯುವ ಒಂದು ಹಬ್ಬ. ಚತುರ್ದಶ ದೇವತೆಯ ದೇವಸ್ಥಾನದಲ್ಲಿ ಹದಿನಾಲ್ಕು ಜನ ದೇವತೆಗಳನ್ನು ಪೂಜಿಸಿ ಹಬ್ಬವನ್ನು ಆಚರಿಸಲಾಗುವುದು. ಇಡೀ ರಾಜ್ಯಾದಂತ ಪ್ರತಿಯೊಂದು ಕುಟುಂಬವೂ ಈ ಹಬ್ಬದಲ್ಲಿ ಪಾಲುಗೊಳ್ಳುತ್ತದೆ.

ರಾಮಕೃಷ್ಣ ಉತ್ಸವ: ಬಂಗಾಳದಲ್ಲಿ ಫೆಬ್ರುವರಿ-ಮಾರ್ಚ್ ತಿಂಗಳಿನಲ್ಲಿ ನಡೆಯುವ ಶ್ರೀರಾಮಕೃಷ್ಣ ಪರಮಹಂಸರ ಜನ್ಮದಿನಾಚರಣೆ. ಶ್ರೀರಾಮ ಕೃಷ್ಣಾಶ್ರಮದವರು ಈ ಉತ್ಸವವನ್ನು ಸಂಭ್ರಮದಿಂದ ಆಚರಿಸುತ್ತಾರೆ.

ದೋಲ್ ಪೂರ್ಣಿಮಾ: ಬಂಗಾಳದಲ್ಲಿ ಮಾರ್ಜ್-ಏಪ್ರಿಲ್ ತಿಂಗಳಲ್ಲಿ ಆಚರಿಸಲಾಗುವ ಹೋಳಿ ಹಬ್ಬದಂಥ ಒಂದು ಹಬ್ಬ. ಕೃಷ್ಣನ ವಿಗ್ರಹವನ್ನು ತೊಟ್ಟಿಲಲ್ಲಿಟ್ಟು ಮೆರವಣಿಗೆ ನಡೆಸುವರು. ಆ ಸಂದರ್ಭಕ್ಕೆಂದೇ ರಚಿತವಾದ ಹಾಡುಗಳನ್ನು ಹಾಡುವರು.

ಪುರಿಯ ರಥೋತ್ಸವ: ಒರಿಸ್ಸದ ಪುರಿ ಎಂಬ ಸ್ಥಳದಲ್ಲಿ ನಡೆಯುವ ಒಂದು ದೊಡ್ಡ ಉತ್ಸವ. ಜಗನ್ನಾಥ ದೇವರ ಹೆಸರಿನಲ್ಲಿ ನಡೆಯುತ್ತದೆ. ಇದರಲ್ಲಿ ದೇಶದ ನಾನಾ ಭಾಗಗಳಿಂದ ಬಂದ ಭಕ್ತಾದಿಗಳು ಪಾಲುಗೊಳ್ಳವರು. ಈ ಸಂದರ್ಭದಲ್ಲಿ ಜಗನ್ನಾಥ, ಅವನ ಸಹೋದರ ಬಲಭದ್ರ, ತಂಗಿ ಸುಭದ್ರ-ಈ ಮೂವರ ಮೂರ್ತಿಗಳನ್ನಿರಿಸಿದ ಬೃಹತ್ ರಥಗಳನ್ನು ಪುರಿಯಿಂದ ಅನತಿದೂರದಲ್ಲಿರುವ ಗುಂಡಿಚಬರಿ ಎಂಬ ಸ್ಥಳಕ್ಕೆ ಎಳೆದೊಯ್ಯಲಾಗುವುದು. ಒಂದು ವಾರದ ಅನಂತರ ದೇವರುಗಳನ್ನು ಪುನಃ ಮೂಲದೇವಸ್ಥಾನಕ್ಕೆ ತರಲಾಗುವುದು.

ತೇಜ್ ಹಬ್ಬ: ರಾಜಸ್ಥಾನ್ ಮತ್ತು ಮಧ್ಯಪ್ರದೇಶಗಳಲ್ಲಿ ಜೂನ್-ಜುಲೈ ತಿಂಗಳಿನಲ್ಲಿ ಪಾರ್ವತಿಯ ಹೆಸರಿನಲ್ಲಿ ಹೆಂಗಸರು ಮಾತ್ರ ಆಚರಿಸುವ ಒಂದು ಹಬ್ಬ. ಮನೆಯಲ್ಲಿ ಎರಡು ದಿನಗಳ ಕಾಲ ಪೂಜಿಸಿ ಅನಂತರ ಸಕಲ ಗೌರವಗಳಿಂದ ಆಕೆಯನ್ನು ಗಂಡನ ಮನೆಗೆ ಕಳುಹಿಸಿಕೊಡಲಾಗುವುದು. ಈ ಸಂದರ್ಭದಲ್ಲಿ ದೊಡ್ಡ ಮೆರವಣಿಗೆ ನಡೆಸಲಾಗುವುದು. ಇದೇ ಹಬ್ಬದಲ್ಲಿ ರೈತರು ಮುಂಗಾರು ಮಳೆಯ ಬರುವಿಗಾಗಿ ಪೂಜೆಯನ್ನು ಕೈಗೊಳ್ಳುವರು.

ಪೊಂಗಲ್: ಆಂಧ್ರ ತಮಿಳುನಾಡಿನಲ್ಲಿ ಜನವರಿ ತಿಂಗಳಲ್ಲಿ ಆಚರಿಸಲಾಗುವ ಬಹು ಸಂಭ್ರಮದ ದೊಡ್ಡ ಹಬ್ಬ. ಭೋಗಿಪೊಂಗಲ್, ಸೂರ್ಯ ಪೊಂಗಲ್, ಮಾಟ್ಟುಪೊಂಗಲ್-ಎಂಬ ಹೆಸರಿನಲ್ಲಿ ಮೂರು ದಿನಗಳ ಕಾಲ ವಿಜೃಂಭಣೆಯಿಂದ ನಡೆಯುತ್ತದೆ. ಬೆಲ್ಲ ಹಾಗೂ ಹಾಲಿನಲ್ಲಿ ಬೇಯಿಸಿದ ಅನ್ನದೇ ಪೊಂಗಲ್. ಇದನ್ನು ಹಸುಗಳಿಗೆ, ಪಕ್ಷಿಗಳಿಗೆ ಅರ್ಪಿಸಲಾಗುವುದು. ಈ ಹಬ್ಬದ ಪ್ರಯುಕ್ತ ತಮಿಳುನಾಡಿನ ಮಧುರೈ, ತಿರುಚಿರಾಪಳ್ಳಿ, ತಂಜಾವೂರುಗಳಲ್ಲಿ, ಆಂಧ್ರಪ್ರದೇಶದ ಕೆಲವೆಡೆಗಳಲ್ಲಿ `ಜೆಲ್ಲಿಕಟ್ಟು ಎಂಬ ಹೆಸರಿನ ಗೂಳಿಕಾಳಗವನ್ನು ನಡೆಸಲಾಗುತ್ತದೆ. ಎತ್ತಿನ ಬಂಡಿ ಓಟಸ್ಪರ್ಧೆ, ಕೋಳಿ ಅಂಕ ಕೂಡ ಇರುತ್ತವೆ. ಹಬ್ಬ ನಡೆಯುವ ಮೂರು ದಿನ ಮನೆಮನೆಗಳಲ್ಲಿ ಚಂದದ ಬೊಂಬೆಗಳನ್ನು ಪ್ರದರ್ಶಿಸಲಾಗುತ್ತದೆ. ಬಡವ ಬಲ್ಲಿದ ಎಂಬ ಭೇದಭಾವವಿಲ್ಲದೆ ಸಾಮೂಹಿಕ ಭೋಜನದ ವ್ಯವಸ್ಥೆ ಇರುತ್ತದೆ. ಈ ಹಬ್ಬದ ಪ್ರಯುಕ್ತ ಎಳ್ಳುಬೀರುವ ಸಂಪ್ರದಾಯ ಕೂಡ ರೂಢಿಯಲ್ಲಿದೆ.

ತ್ಯಾಗರಾಜ ಉತ್ಸವ: ಪ್ರಸಿದ್ಧ ಸಂಗೀತ ವಿದ್ವಾಂಸರಾದ ತ್ಯಾಗರಾಜರ ಹೆಸರಿನಲ್ಲಿ ತಮಿಳುನಾಡಿನ ತಿರುವಾಯೂರಿನಲ್ಲಿ ನಡೆಯುವ ಸಂಗೀತೋತ್ಸವ. ದಕ್ಷಿಣ ಭಾರತದ ಸಂಗೀತ ವಿದ್ವಾಂಸರೆಲ್ಲ ಈ ಸಂದರ್ಭದಲ್ಲಿ ತ್ಯಾಗರಾಜರ ಗೌರವಾರ್ಥ ಸಂಗೀತ ಕಚೇರಿಗಳನ್ನು ನಡೆಸಿಕೊಡುತ್ತಾರೆ. ಯುವ ಸಂಗೀತಗಾರರಿಗೆ ಇದೊಂದು ಪವಿತ್ರ ಸಂದರ್ಭ.

ಕರಗ: ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಏಪ್ರಿಲ್ ತಿಂಗಳಿನಲ್ಲಿ ನಡೆಯುವ ಒಂದು ಉತ್ಸವ, ಪಾಂಡವರ ಪತ್ನಿ ದ್ರೌಪದಿಯ ಹೆಸರಿನಲ್ಲಿ ಇದು ಪ್ರಸಿದ್ಧವಾಗಿದೆ. ಹಿತ್ತಾಳೆಯ ಕೊಡವನ್ನು ಸುಂದರವಾಗಿ ಕಿರೀಟದಂತೆ ಅಲಂಕರಿಸಿ ತಲೆಯ ಮೇಲೆ ಹೊತ್ತು ಕೈಬಿಟ್ಟು ಮಾಡುವ ನೃತ್ಯವಿದು. ಸುಮಾರು ಒಂಬತ್ತು ದಿನ ಪರ್ಯಂತ ಕರಗ ಮಹೊತ್ಸವ ನಡೆಯುತ್ತದೆ. ವೀರ ಕುಮಾರರೆಂದು ಕರೆಯಲಾಗುವ ಭಕ್ತರು ಕತ್ತಿಹಿಡಿದು ಅಲಗುಸೇವೆ ನಡೆಸುತ್ತಾರೆ. ಕರಗದ ಮೆರವಣಿಗೆ ಇಡೀ ರಾತ್ರಿ ನಡೆಯುತ್ತದೆ. ಬೆಳಿಗ್ಗೆ ಪೂಜೆಯೊಂದಿಗೆ ಕರಗವನ್ನು ಜಲದಲ್ಲಿ ವಿಸರ್ಜಿಸಲಾಗುವುದು. (ನೋಡಿ- ಕರಗ)


ಹುತ್ತರಿ ಹಬ್ಬ: ಕರ್ನಾಟಕದ ಕೊಡಗಿನ ಕೊಡನ ಜನರ ದೊಡ್ಡ ಹಬ್ಬ. ನವೆಂಬರ್-ಡಿಸೆಂಬರ್ ತಿಂಗಳಿನಲ್ಲಿ ನಡೆಯುತ್ತದೆ. ಹುತ್ತರಿ ಎಂದರೆ ಹೊಸ ಅಕ್ಕಿ ಎಂದರ್ಥ. ಗದ್ದೆಯಲ್ಲಿ ಹುಲುಸಾಗಿ ಬೆಳೆದು ನಿಂತಿರುವ ಬತ್ತದ ಪೈರನ್ನು ಆರಾಧಿಸಿ, ಕುಯಿಲುಮಾಡಿ ವಿಧ್ಯುಕ್ತವಾಗಿ ಮನೆತುಂಬಿಕೊಳ್ಳುವ ಸುಮುಹೂರ್ತವೇ ಹುತ್ತರಿ. ಈ ಹಬ್ಬ ಹಿಂದೆ ಮೂರು ದಿನ ದೇವಪೊಳ್ದು, ಅರಸರ ಗದ್ದೆಯ ಕುಯಲಿನ ಸಮಾರಂಭ ಅರಮನೆ ಪೊಳ್ದು, ತಮ್ಮ ತಮ್ಮ ಊರಿನ ಗದ್ದೆಯ ಕುಯಿಲಿನ ಸಮಾರಂಭ ನಾಡ್‍ಪೊಳ್ದು ಮಾತ್ರ ವಿಜೃಂಭಣೆಯಿಂದ ನಡೆಯುತ್ತದೆ. ಹಬ್ಬದ ಸಂದರ್ಭದಲ್ಲಿ ಹುತ್ತರಿ ಕುಣಿತ ಎಂಬ ಜನಪದ ನೃತ್ಯಕೂಡ ನಡೆಯುತ್ತದೆ. ಅನೇಕ ಬಗೆಯ ಕೋಲಾಟ, ಬೊಳಕಾಟ, ಪಡೆಕಳಿ ಇತ್ಯಾದಿ ನೃತ್ಯಗಳು ಈ ಹಬ್ಬಕ್ಕೆ ಮೆರುಗುನೀಡುತ್ತವೆ. ಹುತ್ತರಿ:

ಓಣಮ್: ಕೇರಳದ ಪ್ರಸಿದ್ಧ ಹಬ್ಬ. ಆಗಸ್ಟ್-ಸೆಪ್ಟೆಂಬರ್ ತಿಂಗಳಿನಲ್ಲಿ ನಾಲ್ಕು ದಿನಗಳ ಕಾಲ ನಡೆಯುತ್ತದೆ. ಈ ಸುಗ್ಗಿ ಹಬ್ಬದ ಪ್ರಯಕ್ತ ದೋಣಿ ಯೋಟ. ನರ್ತನ, ಗಾಯನ ಇತ್ಯಾದಿ ಮನರಂಜನ ಕಾರ್ಯಕ್ರಮಗಳಿರುತ್ತವೆ. ಕೊಟ್ಟಾಯಮ್ ಮತ್ತು ಅರಣ್ಮಲೈ ಎಂಬ ಸ್ಥಳಗಳಲ್ಲಿ ನಡೆಯುವ ವಲ್ಲುಂಕಳಿ (ದೋಣಿಯಾಟ) ವರ್ಣರಂಜಿತವಾಗಿರುತ್ತದೆ. ಸಂಜೆಯ ಹೊತ್ತು ಸುಂದರ ತರುಣಿಯರು ಕಲೆತು ಹಾಡಿನೊಡನೆ ಚಪ್ಪಾಳೆ ತಟ್ಟುತ್ತ ದೀಪದ ಸುತ್ತ ನರ್ತಿಸುವ ಚಪ್ಪಾಳೆನೃತ್ಯ ಕೂಡ (ಕೈಕೊಟ್ಟಿಕ್ಕಳಿ) ಸೊಗಸಾಗಿರುತ್ತದೆ.

ಮಹಾಮಸ್ತಕಾಭಿಷೇಕ: ಕರ್ನಾಟಕ ರಾಜ್ಯದ ಶ್ರವಣಬೆಳಗೊಳದಲ್ಲಿರುವ ಬಾಹುಬಲಿ ಮೂರ್ತಿಗೆ ಹನ್ನೆರಡು ವರ್ಷಕ್ಕೊಮ್ಮೆ ನಡೆಸುವ ಅಭಿಷೇಕ. ಜೈನ ಧರ್ಮೀಯರಿಗೆ ಇದೊಂದು ಪವಿತ್ರ ಸಂದರ್ಭ. ದೇಶದ ಮೂಲೆಮೂಲೆಗಳಿಂದ ಜೈನಧರ್ಮಿಗಳು ಬಂದು ಈ ಮಹೋತ್ಸವದಲ್ಲಿ ಭಾಗವಹಿಸುವರು. 57 ಅಡಿ ಎತ್ತರವಿರುವ ಬಾಹುಬಲಿ ಮೂರ್ತಿಗೆ ಪಂಜಾಮೃತದಿಂದ ಅಭಿಷೇಕ ಮಾಡಿಸುವ ದೃಶ್ಯ ವರ್ಣರಂಜಿತವಾಗಿರುತ್ತದೆ. *