ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮಡ್ಡಿಮರ
ಮಡ್ಡಿಮರ - ಬರ್ಸರೇಸೀ ಕುಟುಂಬಕ್ಕೆ ಸೇರಿದ ವನ್ಯವೃಕ್ಷ. ಇದರಿಂದ ಪಡೆಯಲಾಗುವ ಸುವಾಸನಾಯುಕ್ತ ರಾಳವಸ್ತುವಿನಿಂದಾಗಿ ಇದು ಪ್ರಸಿದ್ಧವಾಗಿದೆ. ಈ ವಸ್ತುವೇ ಮಡ್ಡಿಧೂಪ ಅಥವಾ ಹಾಲುಮಡ್ಡಿ (ಇಂಡಿಯನ್ ಓಲಿಬ್ಯಾನಮ್). ಕೆಲವೊಮ್ಮೆ ಇದನ್ನು ಸಾಂಬ್ರಾಣಿ, ಧೂಪ, ಗುಗ್ಗುಳ ಮುಂತಾದ ಹೆಸರುಗಳಿಂದ ಕರೆಯುವುದು ಉಂಟು. ಚೌಬೀನೆಗಾಗಿಯೂ ಮಡ್ಡಿಮರ ಸಾಕಷ್ಟು ಬೇಡಿಕೆಯಲ್ಲಿದೆ. ಸಸ್ಯವೈಜ್ಞಾನಿಕವಾಗಿ ಇದರ ಹೆಸರು ಬಾಸ್‍ವೆಲಿಯ ಸರ್ರೇಟ.
ಸುಮಾರು 10 ಮೀಟರಿಗೂ ಹೆಚ್ಚು ಎತ್ತರ ಬೆಳೆಯುವ ಮರ ಇದು. ಶುಷ್ಕ ಹವೆಯಿರುವ ಬೆಟ್ಟಸೀಮೆಗಳಲ್ಲಿ ಸ್ವಾಭಾವಿಕವಾಗಿ ಬೆಳೆಯುತ್ತದೆ. ಮಧ್ಯಪ್ರದೇಶ, ಬಿಹಾರ, ಒರಿಸ್ಸ, ರಾಜಸ್ಥಾನ, ಉತ್ತರ ಗುಜರಾತ್ ಹಾಗೂ ದಕ್ಷಿಣ ಭಾರತದ ಕೆಲವೆಡೆಗಳಲ್ಲಿ ಸಾಮಾನ್ಯವಾಗಿ ಕಾಣಸಿಕ್ಕುತ್ತದೆ.
ಈ ಮರದಿಂದ ಒದಗುವ ಮಡ್ಡಿ ತೈಲ ಗೋಂದು ಮತ್ತು ರಾಳ ವಸ್ತುಗಳ ಮಿಶ್ರಣ. ಇದು ಬಂಗಾರದ ಬಣ್ಣದ ಸ್ನಿಗ್ಧ ದ್ರವ. ಕೊಂಚ ಪಾರದರ್ಶಕವಾಗಿಯೂ ಇದೆ. ಗಾಳಿಗೆ ತೆರೆದಿಟ್ಟಲ್ಲಿ ನಿಧಾನವಾಗಿ ಗಟ್ಟಿಯಾಗುತ್ತದೆ. ಬೆಂಕಿಗೆ ಒಡ್ಡಿದಲ್ಲಿ ಸುಲಭವಾಗಿ ಉರಿಯುವ ಇದು ಪರಿಮಳಯುಕ್ತ ಧೂಮವನ್ನು ಹೊರಸೂಸುತ್ತದೆ. ಎಂದೇ ಇದು ಧೂಪವಾಗಿ ಉಪಯುಕ್ತ. ಮರದ ಬುಡದಿಂದ ಸುಮಾರು 0.75 ಮೀ ಎತ್ತರದಲ್ಲಿ 10 ಸೆಂಮೀ ಅಗಲ ತೊಗಟೆಯನ್ನು ಕತ್ತರಿಸಿ ತೆಗೆದು ಗಾಯ ಮಾಡಿದರೆ ಮಡ್ಡಿ ಒಸರುತ್ತದೆ. ಮಡ್ಡಿ ತೆಗೆಯಲು ಯುಕ್ತ ಕಾಲ ನವೆಂಬರಿನಿಂದ-ಜೂನ್. ಈ ಮಡ್ಡಿಯಿಂದ ಅದರ ಘಟಕ ಸಾಮಗ್ರಿಗಳಾದ ಎಣ್ಣೆ, ಗೋಂದು, ಶುದ್ಧರಾಳಗಳನ್ನು ಬೇರ್ಪಡಿಸಬಹುದು. ಎಣ್ಣೆ ಟರ್ಪೆಂಟೈನ್ ಎಣ್ಣೆಯನ್ನು ಹೋಲುತ್ತದೆ. ಎಣ್ಣೆಯನ್ನೂ ಶುದ್ಧರಾಳವನ್ನೂ ಮೆರುಗೆಣ್ಣೆ ಮತ್ತು ಬಣ್ಣಗಳ ತಯಾರಿಕೆಯಲ್ಲಿ ಬಳಸಬಹುದಾದರೂ ದೊಡ್ಡ ಪ್ರಮಾಣದಲ್ಲಿ ಈ ಕಾರ್ಯ ನಡೆಯುತ್ತಿಲ್ಲ.
ಮಡ್ಡಿಧೂಪಕ್ಕೆ ಔಷಧೀಯ ಗುಣಗಳೂ ಉಂಟು. ಉತ್ತೇಜಕ, ಕಫಹಾರಿ ಮೂತ್ರೋತ್ತೇಜಕ. ಬಂಧಕ ಮುಂತಾಗಿ ಇದು ಪ್ರಸಿದ್ಧವಾಗಿದೆ. ಪುಪ್ಪುಸ ಬೇನೆಗಳು, ಅತಿಸಾರ, ಆಮಶಂಕೆ, ಅಜೀರ್ಣ, ಮೇಹರೋಗಗಳು, ಯಕೃತ್ ಕಾಯಿಲೆಗಳು, ಮೂಲವ್ಯಾಧಿ ಇತ್ಯಾದಿಗಳ ಚಿಕಿತ್ಸೆಯಲ್ಲಿ ಇದನ್ನು ಬಳಸುವುದಿದೆ. ಗಜಕರ್ಣ, ಕುರು, ಹುಣ್ಣು, ಉಳುಕು ಮುಂತಾದ ಬೇನೆಗಳಿಗೆ ಮಡ್ಡಿಯನ್ನು ಕೊಬ್ಬರಿಎಣ್ಣೆ ಅಥವಾ ನಿಂಬೆಯ ರಸದೊಂದಿಗೆ ಸೇರಿಸಿ ಲೇಪಿಸಲಾಗುತ್ತದೆ. ಗಂಟಲು ರೋಗ, ಜ್ವರಗಳಲ್ಲಿ ಇದರ ಧೂಪವನ್ನು ಊಡುವುದುಂಟು.
ಮಡ್ಡಿಮರದ ಚೌಬೀನೆಯಿಂದ ಹಲಗೆ, ಅಗ್ಗದ ಪೀಠೋಪಕರಣ, ಪೆಟ್ಟಿಗೆ ಹಾಗೂ ಸುದ್ಧಿಪತ್ರಿಕೆ ಮುದ್ರಣ ಕಾಗದಗಳನ್ನು ತಯಾರಿಸಬಹುದು. ಕಟ್ಟಿಗೆ ಉರುವಲಾಗಿಯೂ ಬಳಕೆಯಾಗುತ್ತದೆ. (ಎಂ.ಎಸ್.ಎಸ್.ಆರ್.)