ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮತ್ತಿ
ಮತ್ತಿ - ಕಾಂಬ್ರಿಟೇಸೀ ಕುಟುಂಬಕ್ಕೆ ಸೇರಿದ ಕಾಡುಮರ. ಇದರಲ್ಲಿ ಬಿಳಿ ಮತ್ತಿ (ಹೊಳೆಮತ್ತಿ, ತೊರಮತ್ತಿ) ಮತ್ತು ಕರಿಮತ್ತಿ ಎಂಬ ಎರಡು ಬಗೆಗಳುಂಟು. ಇವೆರಡೂ ಟರ್ಮಿನೇಲಿಯ ಎಂಬ ಜಾತಿಯ ಎರಡು ಪ್ರಭೇದಗಳಾಗಿದ್ದು ಮೊದಲನೆಯದು ಅರ್ಜುನ ಎಂಬ ಪ್ರಭೇದವೂ ಎರಡನೆಯದು ಏಲೇಟ ಅಥವಾ ಟೊಮೆಂಟೋಸ ಎಂಬುದೂ ಆಗಿವೆ. ಕಾಡುಬಾದಾಮಿ ಮರಗಳ ಹತ್ತಿರ ಸಂಬಂಧಿಗಳಿವು.
ಬಿಳಿಮತ್ತಿ ; ಇದು ದೊಡ್ಡಗಾತ್ರದ ಅಗಲಹಂದರದ ನಿತ್ಯಹಸುರಿನ ಮರ. ನದೀದಡಗಳಲ್ಲಿ ಹಳ್ಳತೊರೆಗಳ ಅಂಚುಗಳಲ್ಲಿ, ಸಡಿಲಬಗೆಯ ಗೋಡು ಮೆಕ್ಕಲು ಮಣ್ಣುಗಳಿರುವ ತಾಣಗಳಲ್ಲಿ ಸ್ವಾಭಾವಿಕವಾಗಿ ಹುಲುಸಾಗಿ ಬೆಳೆಯುತ್ತದೆ. ನೆರಳಿಗಾಗಿ, ಅಲಂಕಾರಕ್ಕಾಗಿ ಇದನ್ನು ಬೆಳೆಸುವುದೂ ಉಂಟು. ಭಾರತಾದ್ಯಂತ ಕಾಣದೊರೆಯುತ್ತದಾದರೂ ತಮಿಳುನಾಡು, ಪಶ್ಚಿಮ ಕರಾವಳಿ, ಒರಿಸ್ಸ, ಪಂಜಾಬ್, ಉಪಹಿಮಾಲಯ ಪ್ರದೇಶಗಳಲ್ಲಿ ಇದರ ಬೆಳವಣಿಗೆ ಹೆಚ್ಚು.
ಇದರ ಕಾಂಡದ ಬುಡಭಾಗ ಅಗಲವಾದ ಏಣುಗಳಾಗಿ ಹರಡಿರುತ್ತದೆ. ತೊಗಟೆ ಮಂದವಾಗಿದೆ; ಇದರ ಬಣ್ಣ ಬೂದು ಇಲ್ಲವೆ ನಸುಗೆಂಪು ಮಿಶ್ರಿತವಾದ ಹಸುರು. ತೆಳುಸಿಪ್ಪೆಗಳ ರೂಪದಲ್ಲಿ ಸುಲಿದು ಕೊಳ್ಳುತ್ತದೆ. ಎಲೆಗಳು ಸರಳ, ದೀರ್ಘವೃತ್ತಾಕಾರದವು. ಹೆಚ್ಚು ಕಡಿಮೆ ಅಭಿಮುಖ ಮಾದರಿಯಲ್ಲಿ ಜೋಡಣೆಗೊಂಡಿವೆ. ಹೂಗಳು ಸಣ್ಣವು, ಪ್ಯಾನಿಕಲ್ ಮಾದರಿಯ ಹೂ ಗೊಂಚಲುಗಳಲ್ಲಿ ಸಮಾವೇಶಗೊಂಡಿವೆ. ಫಲಗಳ ಮೈ 5-7 ರೆಕ್ಕೆ ರಚನೆಗಳಿಂದ ಕೂಡಿದೆ.
ಇದು ಸ್ವಾಭಾವಿಕವಾಗಿ ಬೀಜಗಳ ಮೂಲಕ ವೃದ್ಧಿಯಾಗುತ್ತದೆ. ಕೃತಕವಾಗಿ ಬೆಳೆಸುವುದು ಗೆಲ್ಲುಗಳ ಸಹಾಯದಿಂದ. ಇದರ ಚೌಬೀನೆ ಅಲ್ಪಬಾಳಿಕೆಯದು ಮತ್ತು ಸಂಸ್ಕರಿಸಲು ಕಷ್ಟಸಾಧ್ಯವಾದ್ದು. ಆದರೂ ಗಾಡಿ ಕೃಷಿ ಉಪಕರಣ, ನೀರಿನಬಾನಿ, ಗಣಿ ಆಸರೆಕಂಬ ಮುಂತಾದವುಗಳ ತಯಾರಿಕೆಗೆ ಬಳಕೆಯಾಗುತ್ತದೆ. ಇದರಿಂದ ಪ್ಲೈವುಡ್, ಆಲಂಕಾರಿಕ ಹಲಗೆಗಳನ್ನೂ ತಯಾರಿಸುವುದುಂಟು. ಬಿಳಿ ಮತ್ತಿಯ ತೊಗಟೆಯನ್ನು ಧರ್ಮ ಹದಗಾರಿಕೆಯಲ್ಲಿ ಉಪಯೋಗಿಸಲಾಗುತ್ತದೆ. ಇದರ ಎಲೆಗಳು ಟಸಾರ್ ರೇಷ್ಮೆ ಹುಳುಗಳಿಗೆ ಒಳ್ಳೆಯ ತಿನಿಸು.
ಕರಿಮತ್ತಿ ; ಇದು ಕೂಡ ಸುಮಾರು 35ಮೀ ಎತ್ತಕ್ಕೆ ಬೆಳೆಯುವ ದೊಡ್ಡ ಗಾತ್ರದ ಮರ. ಮಣ್ಣು, ಹವೆ ಚೆನ್ನಾಗಿರುವಂಥ ನೆಲೆಗಳಲ್ಲಿ 50ಮೀ ಎತ್ತರಕ್ಕೆ ಬೆಳೆಯುವುದೂ ಉಂಟು. ರಾಜಸ್ಥಾನ, ಪಂಜಾಬುಗಳ ಮರು ಪ್ರದೇಶಗಳನ್ನು ಬಿಟ್ಟು ಭಾರತದ ಉಳಿದೆಲ್ಲ ಕಡೆಗೂ ಇದು ಬೆಳೆಯುತ್ತದೆ. ನೂರಾರು ವರ್ಷಗಳಿಂದ ಇದೊಂದು ಸಾರ್ವತ್ರಿಕ ಬಳಕೆಯ ಚೌಬೀನೆಯಾಗಿ ಪ್ರಸಿದ್ಧವಾಗಿದೆ. ಇದಕ್ಕೆ ಲಾರಲ್ ಎಂಬ ವಾಣಿಜ್ಯ ನಾಮವುಂಟು. ದೃಢತೆಯಲ್ಲಿ ಉಪಯುಕ್ತತೆಯಲ್ಲಿ ಬಿಳೇಭೋಗಿ (ಸಾಲ್ ಮರ) ಮತ್ತು ಸಾಗುವಾನಿಗಳನ್ನು ಬಿಟ್ಟರೆ ಇದಕ್ಕೇ ಮುಖ್ಯ ಸ್ಥಾನ. ಕಟ್ಟಡಗಳ ಮರಮುಟ್ಟು, ಗಾಡಿ, ಬೊಂಬೆ, ಪೀಠೋಪಕರಣಗಳು, ಗಾಣ, ಅಕ್ಕಿ ಕೊಟ್ಟಣ, ವಿದ್ಯುತ್ ತಂತಿಯ ಹೊದಿಕೆ ಪಟ್ಟಿ, ರೈಲ್ವೇ ಸ್ಲೀಪರುಗಳು, ಕೃಷಿ ಹತ್ಯಾರುಗಳು, ಕೈಪಿಡಿ, ಪ್ಲೈವುಡ್ ಇತ್ಯಾದಿಗಳಲ್ಲಿ ಇದರ ವಿಪುಲ ಬಳಕೆಯುಂಟು. ಕರಿಮತ್ತಿಯ ಚೌಬೀನೆಯನ್ನು ಯುಕ್ತವಾಗಿ ಸಂಸ್ಕರಿಸಿ ಶಾಶ್ವತ ಕಟ್ಟಡಗಳಲ್ಲಿ ಬಳಸಬಹುದಲ್ಲದೆ ವಿದ್ಯುತ್ ಕಂಬಗಳಾಗಿ ಸಹ ಉಪಯೋಗಿಸಬಹುದು. ರೇಯಾನ್, ಹೊದಿಕೆಕಾಗದ, ಬರೆವಣಿಗೆ ಹಾಗೂ ಮುದ್ರಣ ಕಾಗದಗಳ ತಯಾರಿಕೆಗೂ ಇದು ಉಪಯುಕ್ತವೆನಿಸಿದೆ. ಅಲ್ಲದೆ ಇದು ಬೆಂಕಿಗೆ ಸುಲಭವಾಗಿ ಬಲಿಯಾಗದು. ಆದ್ದರಿಂದ ಅಗ್ನಿನಿರೋಧಿ ಕಟ್ಟಡಗಳಿಗೂ ಒದಗುತ್ತದೆ. ಟಸಾರ್ ರೇಷ್ಮೆಹುಳುಗಳಿಗೂ ದನಗಳಿಗೂ ಇದರ ಸೆಣಬಿನ ಬಟ್ಟೆಗಳಿಗೆ ಬಣ್ಣ ಕಟ್ಟಲೂ ಇದರ ತೊಗಟೆಯನ್ನು ಬಳಸುವುದಿದೆ. ಕರಿಮತ್ತಿಯ ಗೋಂದು ಉತ್ತಮ ಅಂಟು ಹಾಗೂ ವಿರೇಚಕ. ಇದರ ತೊಗಟೆಯ ಕಷಾಯವನ್ನು ಅತಿಸಾರ. ಕರುಳಿನ ವ್ರಣಗಳ ನಿವಾರಣೆಗೆ ಬಳಸಲಾಗುತ್ತದೆ. (ವಿ. ಎಸ್. ವೈ)