ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮಧುವಯ್ಯ - ಹರಳಯ್ಯ

ವಿಕಿಸೋರ್ಸ್ದಿಂದ

ಮಧುವಯ್ಯ - ಹರಳಯ್ಯ 12ನೆಯ ಶತಮಾನದಲ್ಲಿದ್ದ ಶಿವಶರಣರು. ಬಸವಣ್ಣನವರ ಸಾಮಾಜಿಕ ಕ್ರಾಂತಿಯಲ್ಲಿ ಕ್ರಿಯಾತ್ಮಕವಾಗಿ ಭಾಗವಹಿಸಿದ ಪ್ರಮುಖರು. ಮಧುವಯ್ಯ ಅಥವಾ ಮಧುವರಸ ಬ್ರಾಹ್ಮಣ ಕುಲದಲ್ಲಿ ಹುಟ್ಟಿ ಕಲ್ಯಾಣದ ಬಿಜ್ಜಳನಲ್ಲಿ ಒಬ್ಬ ಶ್ರೇಷ್ಠ ಅಧಿಕಾರಿ ಎನಿಸಿದ್ದ. ಕ್ರಮೇಣ ಬಸವಣ್ಣನವರ ಪ್ರಭಾವಕ್ಕೆ-ಸಿಕ್ಕು ಶರಣನಾಗಿ ಅವರ ಸರ್ವಸಮಾನತೆಯ ತತ್ತ್ವಗಳನ್ನು ಒಪ್ಪಿಕೊಂಡಂತೆ ತೋರುತ್ತದೆ. ಹರಳಯ್ಯ, ಪಾದರಕ್ಷೆ ಹೊಲಿದು ಜೀವಿಸುವ ಕುಲದವ. ಹೆಂಡತಿ ಕಲ್ಯಾಣಿ. ಮಗ ಶೀಲವಂತಯ್ಯ; ಇವನೂ ಬಸವಣ್ಣನವರ ಪ್ರಭಾವಕ್ಕೊಳ್ಳಗಾಗಿ ಶರಣನಾದ ಅನಂತರ ಯಾವುದೋ ಒಂದು ಸಂದರ್ಭದಲ್ಲಿ ಮಧುವಯ್ಯನ ಮಗಳು ಮತ್ತು ಹರಳಯ್ಯನ ಮಗ ಇವರಲ್ಲಿ ವಿವಾಹವೇರ್ಪಟ್ಟಿತು. ವರ್ಣಸಂಕರವಾಯಿತೆಂದು ಸಂಪ್ರದಾಯವಾದಿಗಳು ಬಿಜ್ಜಳನ ಬಳಿ ದೂರೊಯ್ದರು. ಹರಳಯ್ಯ ಮಧುವರಸರಿಗೆ ಬಿಜ್ಜಳ ಉಗ್ರ ಶಿಕ್ಷೆ ವಿಧಿಸಿದ. ಇದು ಕಲ್ಯಾಣದ ಕ್ರಾಂತಿಗೆ ಕಾರಣವಾಯಿತು. ರಾಜಕೀಯ ಘಟನೆಗಳೂ ಇದರ ಜೊತೆ ಸೇರಿ ಕ್ರಾಂತಿ ಬಿಜ್ಜಳನ ಕೊಲೆಯಲ್ಲಿ ಪರ್ಯವಸಾನವಾಯಿತು. ಬಸವಣ್ಣನವರ ಕಾರ್ಯಕ್ಷೇತ್ರ ಕುಸಿಯಿತು. ಶರಣರು ಕಲ್ಯಾಣ ಬಿಟ್ಟರು. ಪಾಲ್ಕುರಿಕೆ ಸೋಮನಾಥ ಮತ್ತು ಭೀಮಕವಿ ಬರೆದಿರುವ ಬಸವಪುರಾಣಗಳಲ್ಲಿ ಮಧುವಯ್ಯ ಮತ್ತು ಹರಳಯ್ಯ ಇಬ್ಬರೂ ಶಿಕ್ಷೆಗೆ ಒಳಗಾದುದರ ಉಲ್ಲೇಖ ಕಂಡುಬರುತ್ತದೆ. ಉತ್ತರದೇಶದ ಬಸವಲಿಂಗದೇವನ ಭೈರವೇಶ್ವರಕಾವ್ಯದ ಕಥಾಸಾಗರದಲ್ಲಿ ಮತ್ತು ಶರಣಲೀಲಾಮೃತದಲ್ಲಿ (ಚೆನ್ನಪ್ಪ ಕವಿ) ಇವರಿಬ್ಬರ ಕಥೆ ನಿರೂಪಿತವಾಗಿದೆ. ಮಧುವಯ್ಯ ವಚನಕಾರನೂ ಆಗಿದ್ದಾನೆ. ಅರ್ಕೇಶ್ವರಲಿಂಗ ಎಂಬ ಅಂಕಿತವುಳ್ಳ ಈತನ ಅನೇಕ ವಚನಗಳು ದೊರೆತಿವೆ.

ಹರಳಯ್ಯನ ವಚನಗಳು ದೊರೆತಿಲ್ಲ. ಆದರೆ ಬಸವಣ್ಣನ ಪರುಷ ಸ್ಪರ್ಶಕ್ಕೆ ಸಿಕ್ಕು ಪರಿವರ್ತಿತರಾದ ದೀನದಲಿತ ವರ್ಗಗಳ ಉಜ್ಜಲ ಪ್ರತಿನಿಧಿಯಾಗಿ ಈತ ಕಂಡುಬರುತ್ತಾನೆ.