ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮನಸಂದ ಮಾರಿತಂದೆ

ವಿಕಿಸೋರ್ಸ್ದಿಂದ

ಮನಸಂದ ಮಾರಿತಂದೆ 12ನೆಯ ಶತಮಾನದ ಶಿವಶರಣ ಹಾಗೂ ವಚನಕಾರ ಬಸವಣ್ಣನವರ ಹಿರಿಯ ಸಮಕಾಲೀನ. ಭಕ್ತಿ ವಿಶೇಷವು ಮಾಡುವರೆ ಹತ್ತು ಬೆರೆಳುಗಳುಂಟು. ಹಾಸಿದುಡಿದರೆ ತನಗುಂಟು, ತನ್ನ ಪ್ರವಥಂಗುಂಟು, ಮಾರಿತಂದೆಗಳಂತೆ ಎನಗೇಕಹುದಯ್ಯ? ರತ್ನದ ಸಂಕಲೆಯನ್ನಿಕ್ಕಿ ಕಾಡಿಹೆ ಕೂಡಲ ಸಂಗಮದೇವ ಶಿವಧೋ ಶಿವಧೋ ಎಂಬ ಬಸವಣ್ಣನವರ ವಚನದಲ್ಲಿ ಮಾರಿತಂದೆ ಎಂಬ ಹೆಸರಿನ ಉಲ್ಲೇಖ ಕಂಡುಬರುತ್ತದೆ. ಇದು ವಂಶದ ಹೆಸರು ಅಥವಾ ಗೌರವಸೂಚಕ ಪದ ಆಗಿರುವಂತೆ ತೋರುತ್ತದೆ.

ಇಲ್ಲಿಯ ತನಕ ಈತನ ಒಂದು ನೂರು ವಚನಗಳು ದೊರೆತಿವೆ. ಮನಸಂದಿತ್ತು ಮಾರೇಶ್ವರ ಎಂಬುದು ಈ ವಚನಗಳ ಅಂಕಿತ. ವಚನಗಳು ಸುಲಭವಾಗಿ ಅರ್ಥವಾಗುವಂತಿವೆ. ಈತ ಉತ್ತಮ ಶಿವಾನುಭವಿಯಿದ್ದಂತೆ ಶ್ರೇಷ್ಠ ವಚನಕಾರನೂ ಹೌದು.

ಕನ್ನಡದಲ್ಲಿ ಈತನಲ್ಲದೆ ಮಾರಿತಂದೆ ಎಂಬ ಹೆಸರಿನ ಹಲವಾರು ವಚನಕಾರರು ಕಂಡುಬರುತ್ತಾರೆ. ಕೆಲವು ವಚನಗಳು ಮನಸಂದ ಮಾರೇಶ್ವರ ಎಂಬ ಅಂಕಿತದಲ್ಲಿಯೂ ರಚಿತವಾಗಿವೆ. ಈ ವಚನಗಳ ಕರ್ತೃ ಯಾರು ಎಂಬುದು ತಿಳಿದು ಬರುವುದಿಲ್ಲ.