ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮಹಾಲಿಂಗದೇವ

ವಿಕಿಸೋರ್ಸ್ದಿಂದ


ಮಹಾಲಿಂಗದೇವ : - 1425. ವಿಜಯನಗರದ ಪ್ರೌಢದೇವರಾಯನ ಕಾಲದಲ್ಲಿದ್ದ ನೂರೊಂದು ಜನ ವಿರಕ್ತರಲ್ಲಿ ಮುಖ್ಯನಾದವ. ಈತ ಬಸವಣ್ಣನವರ ಮತ್ತು ಇತರರ ವಚನಗಳನ್ನು ಅಚ್ಚುಕಟ್ಟಾಗಿ ಜೋಡಿಸಿದ್ದಾನೆ. ಈತನ ಗುರು ಪರಂಪರೆಯಲ್ಲಿ ಉರಿಲಿಂಗಪೆದ್ದಿ, ವಿಶ್ವೇಶ್ವರಲಿಂಗಪೆದ್ದಿ ಎಂಬುವರು ಮುಖ್ಯರು. ಇವರು ವಚನಕಾರರೂ ಆಗಿದ್ದರು. ಮಹಾಲಿಂಗದೇವ ಪುಲಿಗೆರೆಯವ ಪುರಾಣದ ಮಾಯಿದೇವ ಪಂಡಿತರ ಶಿಷ್ಯರಾದ ಬಂಕಯ್ಯ ದೇವರ ಶಿಷ್ಯ,

ಈತ ರಚಿಸಿರುವ ಕೃತಿಗಳು ಎರಡು. ೧.ಪ್ರಭುದೇವರ ಷಟ್ಸ್ಥಲಜ್ಞಾನಚಾರಿತ್ರ ವಚನದ ಟೀಕೆ ಅಥವಾ ಷಟ್ಸ್ಥಲ ವಿವೇಕ ಮತ್ತು ೨.ಏಕೋತ್ತರ ಶತಸ್ಥಲ. ಮಹಾಲಿಂಗದೇವ ತನ್ನ ಶಿಷ್ಯನಾದ ಭಕ್ತಿಭಂಡಾರಿ ಜಕ್ಕಣಾರ್ಯನಿಗೆ, ಸತ್ಪ್ರೇಮ ಮಹಾಭಾವ ಸಂಬೋಧೆಯ ಸಂಬಂಧ ನಿರೂಪಣಾರ್ಥವಾಗಿ ಪ್ರಭುದೇವರ ಷಟ್ಸ್ಥಲದ ಟೀಕೆಯನ್ನು ರಚಿಸಿದನೆಂದು ಹೇಳಿಕೊಂಡಿದ್ದಾನೆ. ತಮ್ಮ ಪರಮ ಜ್ಞಾನಾನುಭವ ಪ್ರಸನ್ನ ಪ್ರಕಾಶದಿಂದ ಪ್ರಭುದೇವರ ವಚನಗಳನ್ನು ಸಂಗ್ರಹಿಸಿ ಅವನ್ನು ಷಟ್ಸ್ಥಲಾನುಕ್ರಮದಲ್ಲಿ ವಿಂಗಡಿಸಿ ಸುಲಲಿತವಾಕ್ಯಾಮೃತವಾಗಿ ಆ ವಚನಗಳನ್ನು ಟೀಕಿಸಿ ಪರಮಾತ್ಮ ತತ್ತ್ವ ಬೋಧೆಯನ್ನು ನಿರೂಪಿಸಿದ್ದಾನೆ. ಮಹಾಲಿಂಗದೇವ ಪ್ರಭುದೇವರ ವಚನಗಳಿಗೆ ಅರ್ಥವಿವರಣೆ ಕೊಟ್ಟು ಉಪಕಾರಮಾಡಿದ್ದಾನೆ. ಬಸವಣ್ಣ, ಚೆನ್ನಬಸವಣ್ಣ, ಅಲ್ಲಮಪ್ರಭು ಮೊದಲಾದ ಶರಣರ ವಚನಗಳನ್ನು ನೂರೊಂದು ಸ್ಥಲಗಳಾಗಿ ವಿಂಗಡಿಸಿ ವಿವರಿಸಿರುವ ಗಂಥ ಏಕೋತ್ತರ ಶತಸ್ಥಲ. (ಕೆ.ಎಸ್.ಕೆ.ಎಂ.)