ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮಾಗೋಡು ಜಲಪಾತ

ವಿಕಿಸೋರ್ಸ್ದಿಂದ
Jump to navigation Jump to search

ಮಾಗೋಡು ಜಲಪಾತ - ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರಕ್ಕೆ ನೈಋತ್ಯದಲ್ಲಿ ಸುಮಾರು 19 ಕಿ.ಮೀ. ದೂರದಲ್ಲಿರುವ ಬೇಡ್ತಿ ನದಿಯ (ಗಂಗಾವಳಿ) ಒಂದು ಜಲಪಾತ.

ಕಾರವಾರ-ಹುಬ್ಬಳ್ಳಿ ಮಾರ್ಗದಲ್ಲಿ ಯಲ್ಲಾಪುರಕ್ಕೆ ಪಶ್ಚಿಮದಲ್ಲಿ ಸುಮಾರು 3 ಕಿ.ಮೀ. ದೂರದಲ್ಲಿ ಕವಲೊಡೆಯುವುದು. ಈ ಕವಲಿನ ಎಡಮಾರ್ಗದಲ್ಲಿ ಸುಮಾರು 13ಕಿಮೀ ದೂರದಲ್ಲಿ ಮಾಗೋಡು ಗ್ರಾಮವಿದೆ. ಇದರ ಬಳಿಯೇ ಜಲಪಾತವಿದೆ. ಹಚ್ಚ ಹಸುರಿನ ಕಾಡಿನ ಮಧ್ಯೆ ಸುಮಾರು ಒಂದೂವರೆ ಕಿ.ಮೀ. ನಡೆದು ದಟ್ಟವಾಗಿ ಬೊಂಬುಗಳು ಬೆಳೆದಿರುವ ಬೆಟ್ಟವನ್ನು ಹತ್ತಿ ಮೇಲೆ ಪೂರ್ವಾಭಿಮುಖವಾಗಿ ನಿಂತರೆ ಬೇಡ್ತಿ ನದಿಯ ಮೇಲಿನ ಕಣಿವೆಯ ದೃಶ್ಯ ಕಾಣಬಹುದು. ಇಲ್ಲಿಂದ ನದಿ ಬೆಟ್ಟದ ಇಳಿಜಾರಿನಲ್ಲಿ ಮುಂದುವರಿದು ಸುಮಾರು 60 ಮೀ. ಕೆಳಕ್ಕೆ ಹಂತ ಹಂತವಾಗಿ ದುಮುಕಿ ಕೊಳದಂತೆ ಸೇರಿ ಮತ್ತೆ ಅಲ್ಲಿಂದ ಮುಂದೆ 184 ಮೀ. ದುಮುಕುವುದು. ಇತ್ತೀಚೆಗೆ ಜಲಪಾತದ ವೀಕ್ಷಣೆಗೆ ಅನುಕೂಲಿಸಲು ದುರ್ಗಮದಾರಿ ಸರಿಪಡಿಸಿ, ಪ್ರವಾಸಿಮಂದಿರ ಕಟ್ಟಿಸಿದ್ದಾರೆ. ಹಾಲಿನ ನೊರೆಯಂತೆ ನಯವಾಗಿ ಹರಿದಿಳಿವ ಈ ಜಲಪಾತದ ಸೌಂದರ್ಯ ಬೆರಗುಗೊಳಿಸುವಂಥದು.

ಶಿರಸಿ-ಯಲ್ಲಾಪುರ ಮಾರ್ಗದಲ್ಲಿರುವ ಮಂಚಿಕೇರಿ ಗ್ರಾಮದಿಂದ 8 ಕಿ.ಮೀ. ದೂರ ಕಾಲುನಡಿಗೆಯಿಂದ ಸಾಗಿ ಮಾಗೋಡು ಜಲಪಾತದೆ ತಳಕ್ಕೆ ಹೋಗಬಹುದು. ಈ ಜಲಪಾತದ ಸಮೀಪದಲ್ಲಿರುವ ಗುಡ್ಡದಲ್ಲಿ ಚಕ್ರವ್ಯೂಹಾಕಾರದ ಒಂದು ಪುರಾತನ ಕೋಟೆ ಇದೆ. ಸ್ವಾದಿ ಅರಸ ತನ್ನ ಪ್ರೇಯಸಿಯ ರಕ್ಷಣೆಗಾಗಿ ಇದನ್ನು ಕಟ್ಟಿಸಿದ್ಧನೆನ್ನಲಾಗಿದೆ. ಈ ಕೋಟೆಗೆ ಹೊಲತಿ ಕೋಟೆ ಎಂಬ ಹೆಸರು ಈಗಲೂ ಇದೆ. ಈ ಕಾರಣಕ್ಕಾಗಿಯೇ ಮಾಗೋಡು ಜಲಪಾತಕ್ಕೆ ಹೊಲತಿ ಜೋಗ ಎಂದೂ ಹೆಸರಿದೆ. ಕೋಟೆಗೆ ಒಂದೇ ಪ್ರವೇಶದ್ವಾರವಿದ್ದು ಬೇಡ್ತಿ ಮತ್ತು ಶಾಲ್ಮಲಾ ಹೊಳೆಗಳು ಈ ಕೋಟೆಯನ್ನು ಮೂರು ಕಡೆಗಳಿಂದ ಸುತ್ತುವರಿದಿವೆ.