ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮಾದರ ಚೆನ್ನಯ್ಯ

ವಿಕಿಸೋರ್ಸ್ದಿಂದ

ಮಾದರ ಚೆನ್ನಯ್ಯ - 12ನೆಯ ಶತಮಾನದ ಶಿವಶರಣ ಹಾಗೂ ವಚನಕಾರ. ಬಸವಣ್ಣನವರ ಸಮಕಾಲೀನ. ಬಸವಣ್ಣ, ಚೆನ್ನಬಸವಣ್ಣ ಮೊದಲಾದ ವಚನಕಾರರು ಈತನನ್ನು ಸ್ಮರಿಸಿದ್ದಾರೆ. ಬಸವಣ್ಣ ಈತನನ್ನು ತಮ್ಮ ವಚನಗಳಲ್ಲಿ ಅತಿ ಪೂಜ್ಯಭಾವದಿಂದ ಕೊಂಡಾಡಿದ್ದಾರೆ.

ಜಾತಿಯಿಂದ ಮಾದರನಾದ ಚೆನ್ನಯ್ಯ ತಮಿಳುನಾಡಿನ ಕರಿಕಾಲ ಚೋಳರಾಜನ ಕುದುರೆಲಾಯದಲ್ಲಿ ಕೆಲಸಕ್ಕಿದ್ದ. ಹುಲ್ಲು ಕೊಯ್ಯುವುದು ಇವನ ಕಾಯಕ. ಅರಣ್ಯದಲ್ಲಿ ಈ ಕಾಯಕದಲ್ಲಿ ಮಗ್ನನಾದಾಗ ಏಕಾಂತ ಸ್ಥಳವೊಂದರಲ್ಲಿ ಹೋಗಿ ತನ್ನ ಇಷ್ಟಲಿಂಗದಲ್ಲಿ ಧ್ಯಾನಮಗ್ನನಾಗಿದ್ದು ಶಿವನನ್ನು ಪ್ರತ್ಯಕ್ಷ ಒಲಿಸಿಕೊಂಡು ತನ್ನ ಹೆಂಡತಿ ತಯಾರಿಸಿದ ಅಂಬಲಿಯನ್ನು ಶಿವನಿಗರ್ಪಿಸಿ ಅದರ ಸವಿಯನ್ನು ಶಿವನ ಜತೆ ಕುಳಿತು ಸವಿದ. ಈ ವಿಷಯ ತಿಳಿದ ರಾಜ ಆನಂದಪಟ್ಟು ತಾನೂ ಮೃಷ್ಟಾನ್ನ ಮಾಡಿಸಿ ಶಿವನಿಗೆ ನೈವೇದ್ಯ ನೀಡಿದ. ಶಿವ ಊಟಮಾಡದಿರಲು ಆತ ತನ್ನ ರುಂಡವನ್ನೇ ಕತ್ತರಿಸಿಕೊಳ್ಳಲು ಅಣಿಯಾದ. ಆಗ ಶಿವ ಚೆನ್ನಯ್ಯನ ಅಂಬಲಿ ನನಗೆ ಸವಿಯಾದದ್ದು; ಅದನ್ನು ನಾನು ದಿನಾಲು ಅವನೊಡನೆ ಉಣ್ಣುತ್ತೇನೆಂದು ತಿಳಿಸಲು ರಾಜ ಇಂಥ ಭಕ್ತನನ್ನು ಕಾಣಲು ಬಂದ. ಹೊಲಗೇರಿಯಿಂದ ಚೆನ್ನಯ್ಯನನ್ನು ದೊಡ್ಡ ಮೆರವಣಿಗೆಯೊಂದಿಗೆ ಶಿವಾಲಯಕ್ಕೆ ಕರೆದುಕೊಂಡು ಬಂದ, ಶಿವ ತನ್ನ ಗುಪ್ತಭಕ್ತಿಯನ್ನು ಹೀಗೆ ಪ್ರಕಟಗೊಳಿಸಿದ್ದನ್ನು ಕಂಡು ಬೇಸರಗೊಂಡ ಚೆನ್ನಯ್ಯ ತನ್ನ ಕೊರಳನ್ನು ಕತ್ತರಿಸಿಕೊಳ್ಳಲು ಅನುವಾದ. ಆಗ ಶಿವ ಪ್ರತ್ಯಕ್ಷನಾಗಿ ಆತನನ್ನು ಸಮಾಧಾನ ಪಡಿಸಿದ. ಅನಂತರ ಚೆನ್ನಯ್ಯ ಕಾಂಚೀಪಟ್ಟಣದಲ್ಲಿ ಸಮಾಧಿಸ್ಥನಾದ. ಈ ವಿಷಯಗಳು ಹರೀಶ್ವರನ ರಗಳೆಯಿಂದ ತಿಳಿದು ಬರುತ್ತದೆ.

ಮಾದರ ಚೆನ್ನಯ್ಯ ಉತ್ತಮ ವಚನಕಾರನೂ ಆಗಿದ್ದು ಕಯ್ಯುಳಿಕತ್ತಿ ಅಡಿಗೂಂಟಕ್ಕಡಿಯಾಗ ಬೇಡ ಅ¾õÉ ನಿಜಾತ್ಮರಾಮರಾಮನ ಎಂಬ ಅಂಕಿತ ಇಟ್ಟುಕೊಂಡು ವಚನಗಳನ್ನು ಬರೆದಿದ್ದಾನೆ. ಈ ತನಕ ಈತನ 10 ವಚನಗಳು ದೊರಕಿವೆ. ಇವುಗಳಲ್ಲಿ ವೀರಶೈವ ತತ್ತ್ವಬೋಧನೆ ಕಂಡುಬರುತ್ತದೆ. ಮಲ್ಲಿಕಾರ್ಜುನ ಪಂಡಿತಾರಾಧ್ಯ ಮತ್ತು ಪಾಲ್ಕುರಿಕೆ ಸೋಮನಾಥ ಇವರ ಗಣಸಹಸ್ರನಾಮದಲ್ಲಿ ಇವನ ಹೆಸರಿದೆ. ಅಬ್ಬಲೂರು, ಜಗಳೂರು ಶಿಲಾಶಾಸನಗಳಲ್ಲಿ ಈತನ ಹೆಸರಿನ ಉಲ್ಲೇಖ ಕಂಡುಬರುತ್ತದೆ. *